ಈಚೆಗಷ್ಟೇ ಅಡಿಕೆ ಆಮದು-ರಫ್ತು ಬಗ್ಗೆ ಚರ್ಚೆಯಾಯಿತು. ಅಡಿಕೆ ಆಮದು ಆಗುತ್ತದೆ ಎನ್ನುವುದಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಉತ್ತರಿಸಿದ್ದಾರೆ, ಅಂತಹ ಯಾವುದೇ ಬೆಳವಣಿಗೆ ಇಲ್ಲ ಎಂದು ಅಡಿಕೆ ಬೆಳೆಗಾರರಿಗೆ ಭರವಸೆ ತುಂಬಿದ್ದಾರೆ. ಭಾರತಕ್ಕೆ ಅಡಿಕೆ ಆಮದು ಆಗುತ್ತಿಲ್ಲ, ಆಗುವುದೂ ಇಲ್ಲ ಎನ್ನುವ ಭರವಸೆ ಸಿಕ್ಕಿದೆ. ಸದ್ಯ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಮುಂದಿನ ಕೆಲವು ಸಮಯದವರೆಗೆ ಯಾವ ಆತಂಕವೂ ಇಲ್ಲ. ಈ ನಡುವೆಯೇ ಶ್ರೀಲಂಕಾದಲ್ಲಿ ಅಡಿಕೆಯನ್ನು ರಫ್ತು ಬೆಳೆಯಾಗಿಸಲು ನಿರ್ಧರಿಸಲಾಗುತ್ತಿದೆ, ಈ ಬಗ್ಗೆ ಅಲ್ಲಿನ ಸಚಿವರು ಹೇಳಿದ್ದಾರೆ.
ಅಡಿಕೆ ಬಳಕೆ ಯಾವುದೆಲ್ಲಾ ರೀತಿಯಲ್ಲಿ ಆಗುತ್ತಿದೆ ಎನ್ನುವ ಬಗ್ಗೆ ಗಂಭೀರವಾದ ಮುಂದೆ ಅಧ್ಯಯನ ಅಗತ್ಯವಿದೆ. ಅಡಿಕೆ ಬಳಕೆ ಹಾಗೂ ಬೇಡಿಕೆಯ ಬಗ್ಗೆ ಸರಿಯಾದ ಸರ್ವೆ ನಡೆಯಬೇಕಿದೆ. ಏಕೆಂದರೆ ಅಡಿಕೆ ಧಾರಣೆ ಸದ್ಯ ಏರಿಕೆಯ ಹಾದಿಯಲ್ಲಿದೆ, ಬೆಳೆಗಾರರಿಗೆ ಈಗ ನೆಮ್ಮದಿ. ಆದರೆ ಭವಿಷ್ಯದಲ್ಲೂ ಈ ಧಾರಣೆ ಉಳಿಯಬಹುದೇ ? ಉಳಿಯಬೇಡವೇ ? ಇದೂ ಒಂದು ಸವಾಲು. ಏಕೆಂದರೆ ಅಡಿಕೆ ಬೆಳೆ ವಿಸ್ತರಣೆ ವೇಗವಾಗಿ ನಡೆಯುತ್ತಿದೆ. ಅದರ ಜೊತೆಗೇ ಅಕ್ರಮವಾಗಿ ಅಡಿಕೆ ಆಮದೂ ನಡೆಯುತ್ತಿದೆ. ಬೃಹತ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಭವಿಷ್ಯದಲ್ಲಿ ಅಡಿಕೆ ಆಮದು ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿವೆ. ಈ ನಡುವೆಯೇ ಶ್ರೀಲಂಕಾದಲ್ಲಿ ಅಡಿಕೆಯನ್ನು ರಫ್ತು ಬೆಳೆಯಾಗಿಸಲು ಸಿದ್ಧತೆ ನಡೆಸಬೇಕು ಎಂದು ಶ್ರೀಲಂಕಾ ಕೃಷಿ ಮತ್ತು ತೋಟಗಾರಿಕೆ ಸಚಿವ ಮಹಿಂದ ಅಮರವೀರ ಅವರು ಹೇಳಿದ್ದಾರೆ.
ಶ್ರೀಲಂಕಾದ ಡೈಲಿನ್ಯೂಸ್ ಪ್ರಕಾರ, ಕೃಷಿ ಮತ್ತು ಪ್ಲಾಂಟೇಶನ್ ಕೈಗಾರಿಕೆಗಳ ಸಚಿವಾಲಯವು ಅಡಿಕೆ ಕೃಷಿಯನ್ನು ರಫ್ತು ಬೆಳೆಯಾಗಿ ಜನಪ್ರಿಯಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಸಚಿವ ಮಹಿಂದ ಅಮರವೀರ ಅವರು ರಫ್ತು ಕೃಷಿ ಇಲಾಖೆಗೆ ಸಲಹೆ ನೀಡಿದ್ದಾರೆ. ಅಡಿಕೆ ಕೃಷಿಯನ್ನು ರಫ್ತು ಬೆಳೆಯಾಗಿ ಜನಪ್ರಿಯಗೊಳಿಸಲು ಕಾರ್ಯಕ್ರಮವನ್ನು ಪ್ರಾರಂಭಿಸಲು ಸಲಹೆ ನೀಡಿದ್ದಾರೆ. ಅದರಂತೆ ಈ ವರ್ಷ 1.7 ಮಿಲಿಯನ್ ಅಡಿಕೆ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಈ ಉದ್ದೇಶಕ್ಕಾಗಿ, ಕೃಷಿ ಮತ್ತು ಪ್ಲಾಂಟೇಶನ್ ಕೈಗಾರಿಕೆಗಳ ಸಚಿವಾಲಯವು 37.5 ಮಿಲಿಯನ್ ರೂಪಾಯಿಗಳನ್ನು ಖರ್ಚು ಮಾಡುವ ನಿರೀಕ್ಷೆಯಿದೆ.ಪ್ರಸ್ತುತ, ಈ ಶ್ರೀಲಂಕಾ ದೇಶದಲ್ಲಿ ಅಡಿಕೆ ಕೃಷಿಯು 13,000 ಹೆಕ್ಟೇರ್‌ಗಳಲ್ಲಿದೆ. ಆದರೆ ಎಲ್ಲಿಯೂ ತೋಟದ ಬೆಳೆಯಾಗಿ ವ್ಯಾಪಕವಾಗಿ ಬೆಳೆಯದೆ ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ.
ಅಡಿಕೆಯನ್ನು ರಫ್ತು ಮಾಡುವ ಮೂಲಕ ಶ್ರೀಲಂಕಾ ದೇಶವು ತಿಂಗಳಿಗೆ 50 ಮಿಲಿಯನ್ US ಡಾಲರ್ ಆದಾಯವನ್ನು ಪಡೆಯುತ್ತದೆ ಮತ್ತು ಪ್ರಸ್ತುತ ವಾರ್ಷಿಕವಾಗಿ 500 ಮಿಲಿಯನ್ US ಡಾಲರ್ ಆದಾಯವನ್ನು ಪಡೆಯುತ್ತಿದೆ. 2021 ರಲ್ಲಿ, ಶ್ರೀಲಂಕಾದಲ್ಲಿ 23,890 ಮೆಟ್ರಿಕ್ ಟನ್ ಅಡಿಕೆ ರಫ್ತು ಮಾಡಿದೆ.2022 ರಲ್ಲಿ 24,323 ಮೆಟ್ರಿಕ್ ಟನ್ ರಫ್ತು ಮಾಡಿದೆ. ಇಷ್ಟು ದೊಡ್ಡ ಪ್ರಮಾಣದ ವಿದೇಶಿ ವಿನಿಮಯವನ್ನು ಗಳಿಸಬಹುದಾದ ಅಡಿಕೆ ಕೃಷಿಗೆ ಸರಿಯಾದ ಗಮನ ನೀಡದ ಕಾರಣದ ಬಗ್ಗೆ ಸಚಿವರು ಪ್ರಶ್ನಿಸಿದ್ದಾರೆ. ಹೀಗಾಗಿ ಕೃಷಿಗೆ ಯೋಗ್ಯವಲ್ಲದ ಭತ್ತದ ಭೂಮಿಯನ್ನು ಅಡಿಕೆ ಕೃಷಿಗೆ ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆ ರೈತರಿಗೆ ತಿಳಿಸಲು ಮತ್ತು ವಿಶೇಷವಾಗಿ ಕೃಷಿ ಮಾಡಬಹುದಾದ ಪ್ರತಿಯೊಂದು ಸ್ಥಳದಲ್ಲಿ ಅಡಿಕೆ ಕೃಷಿ ಕೈಗೊಳ್ಳಲು ಕೃಷಿ ಸಚಿವರು ರಫ್ತು ಕೃಷಿ ಇಲಾಖೆಗೆ ಸೂಚನೆ ನೀಡಿದರು.
ಈ ನಡುವೆ ಭಾರತದ ಈಶಾನ್ಯ ರಾಜ್ಯದಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟದ ಪ್ರಕರಣ ಪತ್ತೆಯಾಗುತ್ತಲೇ ಇದೆ. ಈ ಬಾರಿ ಅಸ್ಸಾಂ ರಾಜ್ಯದ ಕಾಮ್‌ಜಾಂಗ್ ಜಿಲ್ಲೆಯ ಕಾಂಗ್‌ಪತ್ ಖುನೌ ಪ್ರದೇಶದಲ್ಲಿ ಅಡಿಕೆ ಅಕ್ರಮ ಸಾಗಣೆಯ ಟ್ರಕ್‌ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಅಕ್ರಮ ಸಾಗಣೆಯಲ್ಲಿ ತೊಡಗಿದ್ದ ಒಟ್ಟು 190 ಕ್ಕೂ ಹೆಚ್ಚು ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಸುಮಾರು 15230 ಚೀಲ ಅಡಿಕೆ ವಶಕ್ಕೆ ಪಡೆಯಲಾಗಿದೆ.
ಹೀಗಾಗಿ ಅಡಿಕೆ ಕಳ್ಳಸಾಗಾಣಿಕೆ, ಅಡಿಕೆ ಆಮದು ಚಟುವಟಿಕೆಯ ಬಗ್ಗೆ ಈಗಲೇ ಸೂಕ್ತವಾದ ಕ್ರಮಗಳು ಅಗತ್ಯವಾಗಿ ಬೇಕಿದೆ. ಇದರ ಜೊತೆಗೇ ಅಡಿಕೆ ಬೇಡಿಕೆ ಹಾಗೂ ಪೂರೈಕೆಯ ವ್ಯತ್ಯಾಸದ ಬಗ್ಗೆಯೂ ಸರಿಯಾದ ಮಾಹಿತಿ ಅಗತ್ಯ ಇದೆ. ವಿಪರೀತವಾದ ಅಡಿಕೆ ಬೆಳೆ ವಿಸ್ತರಣೆ , ಅಡಿಕೆ ಆಮದು ಭಾರತದ ಅದರಲ್ಲೂ ಕರ್ನಾಟಕದ ಬಹುಪಾಲು ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರುವ ಮುನ್ನ ಸರ್ಕಾರ, ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಬೇಕಿದೆ.
Adequate measures are needed now to deal with Arecanut smuggling and Arecanut import activities. Along with this, proper information about the difference in demand and supply of Arecanut is also required. The government and representatives should take action before the excessive expansion of Arecanut crop and import of Arecanut affect the majority of Arecanut growers in India especially in Karnataka.