“ದ ರೂರಲ್ ಮಿರರ್.ಕಾಂ” ಜಾಲತಾಣದಲ್ಲಿ ಇತ್ತೀಚಿನ ಸಂಶೋಧನಾ ವರದಿಯೊಂದು, ಅಡಿಕೆ ತೋಟಗಳ ಅತಿಯಾದ ಹಾಗೂ ಅಸಮತೋಲನ ವಿಸ್ತರಣೆ ಮಣ್ಣಿನ ಫಲವತ್ತತೆ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಸಮಗ್ರ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ವಿಚಾರವನ್ನು ಸ್ಪಷ್ಟವಾಗಿ ಹೊರಹಾಕಿದೆ. ಈ ಸಂಶೋಧನೆ ನೂರಕ್ಕೆ ನೂರು ಸತ್ಯ ಎಂದು ಒಪ್ಪಿಕೊಳ್ಳಬಹುದಾದಷ್ಟೇ ಅಲ್ಲ, ಪರಿಸರದ ಬಗ್ಗೆ ಕಾಳಜಿ ಹೊಂದಿರುವವರು ಹಲವು ವರ್ಷಗಳಿಂದ ಹೇಳುತ್ತ ಬಂದ ಮಾತುಗಳಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಶಂಖದಿಂದ ಬಂದಾಗ ತೀರ್ಥ ಆದಂತೆ!
ಪಾರಂಪರಿಕ ಅಡಿಕೆ ಕೃಷಿಯನ್ನು ಅದರ ಸ್ವಭಾವಕ್ಕೆ ಹೊಂದದ ಭೂಭಾಗಗಳಿಗೆ ವಿಸ್ತರಿಸಿದಾಗಲೇ ಅನೇಕರು ಈ ಅಪಾಯಗಳ ಬಗ್ಗೆ ಎಚ್ಚರಿಸಿದ್ದರು. ಎತ್ತರದ ಗುಡ್ಡಗಳು, ಅಲ್ಲಿ ಸಹಜವಾಗಿ ಬೆಳೆಯುವ ಕಾಡು ಸಸ್ಯಗಳು — ಇವುಗಳ ಉದ್ದೇಶವೇ ಪರಿಸರ ಸಮೃದ್ಧಿ. ಒಂದೇ ಮಣ್ಣು, ಒಂದೇ ನೀರು ಇದ್ದರೂ ಸಾವಿರಾರು ಸಸ್ಯಗಳು ಬೆಳೆಯುವ ವೈವಿಧ್ಯ, ರುಚಿ, ಗುಣ, ಪರಿಮಳ ಮತ್ತು ಬೆಳವಣಿಗೆಯ ಏರಿಳಿತಗಳಲ್ಲಿ ಪರಸ್ಪರ ಸಾಮ್ಯವಿಲ್ಲ. ಈ ವೈವಿಧ್ಯವೇ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಶಕ್ತಿ. ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುವ ಶಕ್ತಿ. ಕೋಟ್ಯಾಂತರ ಸೂಕ್ಷ್ಮ ಜೀವಿಗಳಿಗೆ ಆಹಾರವಾಗುವ ವ್ಯವಸ್ಥೆ.
ಮನುಷ್ಯನ ಆರೋಗ್ಯಕ್ಕೆ ಷಡ್ರಸಗಳು ಎಷ್ಟು ಅಗತ್ಯವೋ, ಅಷ್ಟೇ ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನವೂ ಅಗತ್ಯ. ಆ ಷಡ್ರಸ ಭೋಜನದ ವ್ಯವಸ್ಥೆಯೇ ಸಸ್ಯ ವೈವಿಧ್ಯದಿಂದ ಉತ್ಪನ್ನವಾಗುವ ಜೈವಿಕ ತ್ಯಾಜ್ಯಗಳು.
ಆದರೆ ನಾವು ಈ ಎಲ್ಲವನ್ನು ಕಡೆಗಣಿಸಿ, ಏಕಬೆಳೆ ಅಡಿಕೆ ಕಾಡುಗಳನ್ನು ನಿರ್ಮಿಸಿದಾಗ, ಅಡಿಕೆ ಸಂಗ್ರಹಕ್ಕೆ ಅಡ್ಡಿಯೆಂದು ಅಲ್ಲೇ ಬೆಳೆಯುವ ಹುಲ್ಲು–ಸಸ್ಯಗಳನ್ನೂ ವಿಷವಿಕ್ಕಿ ನಾಶಪಡಿಸಿದಾಗ, ಅಂತರ್ಜಲಕ್ಕೆ ಜೀವ ತುಂಬುವ ಕಾಡುಗಳನ್ನು ಕತ್ತರಿಸಿದಾಗ, ಮಳೆಗಾಲದ ಕೊನೆಯವರೆಗೂ ನೀರನ್ನು ಹೀರುವ ಅಡಿಕೆ ಕೃಷಿಯನ್ನು ಮತ್ತಷ್ಟು ಉತ್ತೇಜಿಸಿದಾಗ — ಪ್ರಕೃತಿಯನ್ನು ಸುಭಿಕ್ಷವಾಗಿ ಉಳಿಸಬಹುದು ಎನ್ನುವುದು ಭ್ರಮೆಯಲ್ಲದೇ ಇನ್ನೇನು?
ಇದಕ್ಕೂ ಮೀರಿಸಿ, ಅಧಿಕ ಇಳುವರಿಯ ಆಸೆಯಲ್ಲಿ ಮಣ್ಣಿನ ಸಹಜ ಸತ್ವವನ್ನು ಜೇಡ ಹೀರಿದಂತೆ ಹೀರಿಕೊಂಡು ಸಸ್ಯಕ್ಕೆ ಉಣಿಸುವ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮಾಡಿದರೆ, ಮಣ್ಣು ಮತ್ತು ನೀರು ನಾಶವಾಗದೆ ಉಳಿಯುತ್ತವೆ ಎಂಬ ನಿರೀಕ್ಷೆಯೇ ಅಸಂಭವ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಡಿಕೆ ತೋಟದ ವಿಸ್ತರಣೆ | ಎರಡನೇ ಕಾಡಾಗಿ ಪರಿವರ್ತನೆ – ಮಣ್ಣು ನೀರಿನ ಹಿಡಿತವನ್ನು ಹಾಳು ಮಾಡುತ್ತದೆ…!
ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕೃಷಿಯಲ್ಲಿ ಹೆಚ್ಚುತ್ತಿರುವ ಎಲೆಚುಕ್ಕಿ, ಹಳದಿ ರೋಗ, ಮಹಾಳಿ ಮುಂತಾದ ಮಾರಕ ರೋಗಗಳು — ಪ್ರಕೃತಿ ತನ್ನ ಹಿತವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳುತ್ತಿರುವ ಪ್ರತಿರೋಧದ ದಾರಿಯೇ ಆಗಿರಬಹುದೆಂಬ ಅನುಮಾನ ಸಹಜ.
ಅಡಿಕೆಗೆ ಪರ್ಯಾಯವಾಗಿ ಅನೇಕ ಕೃಷಿಗಳನ್ನು ನಾವು ಆರಂಭಿಸುತ್ತಿದ್ದೇವೆ. ಮೇಲುನೋಟಕ್ಕೆ ಇದು ಪರಿಹಾರವೆನಿಸಬಹುದು. ಆದರೆ ಅಡಿಕೆಗೆ ಅನುಸರಿಸಿದ ಅದೇ ಏಕಬೆಳೆ, ರಾಸಾಯನಿಕಾಧಾರಿತ ಕೃಷಿ ತತ್ವವನ್ನು ಈ ಹೊಸ ಕೃಷಿಗಳಲ್ಲೂ ಮುಂದುವರಿಸಿದರೆ, ಇಂದು ಅಡಿಕೆಗೆ ಎದುರಾಗಿರುವ ಸಮಸ್ಯೆಗಳು ನಾಳೆ ಎಲ್ಲ ಬೆಳೆಗಳನ್ನೂ ಕಾಡುತ್ತವೆ ಎಂಬ ಎಚ್ಚರ ನಮಗಿರಬೇಕು. ಯಾವುದೇ ಕೃಷಿಯೂ ಪರಿಸರವನ್ನು ಹಾಳು ಮಾಡುವ ಸಾಧನವಾಗಬಹುದು.
“ಎವೆಯಿಡದೇ ನೋಡು, ಮರ ಮರವು ಕರೆವುದು ನಿನ್ನ,
ಕಿವಿಯನಾನೀಸು, ಕಲ್ಲು ಕಲ್ಲೊಳಂ ಸೊಲ್ಲು…”
ಎಂದು ಮರುಳಮುನಿಯು ಹೇಳಿದಂತೆ, ಪ್ರಕೃತಿ ಪ್ರತಿಕ್ಷಣ ನಮ್ಮೊಂದಿಗೆ ಮಾತನಾಡುತ್ತಿದೆ. ಕಿವಿಗೊಟ್ಟು ಕೇಳುವ ಮನಸ್ಸು ಮಾತ್ರ ನಮಗಿರಬೇಕು. ಪ್ರಕೃತಿ ಮಹಾದೇವನ ಅಂಶ. ಅದನ್ನು ನಿರ್ಲಕ್ಷಿಸುವುದು ನಮ್ಮದೇ ಅಸ್ತಿತ್ವವನ್ನು ನಿರ್ಲಕ್ಷಿಸುವಂತೇ.
ಮುಂದಿನ ಪೀಳಿಗೆಗೆ ಸತ್ವ ರಹಿತ, ನೀರಿಲ್ಲದ, ಜೀವವಿಲ್ಲದ ಭೂಮಿಯನ್ನು ಹಸ್ತಾಂತರಿಸುವ ಕೃಷಿಕ್ರಮವನ್ನು ನಾವು ಮಾಡಬಾರದು. ಪರಂಪರೆಯಿಂದ ಅನುಭವಿಸಿದ, ಪ್ರಕೃತಿಗೆ ಹೊಂದಿಕೊಂಡ ಪಾರಂಪರಿಕ ಕೃಷಿಯನ್ನೇ ನವ ವಿಜ್ಞಾನದೊಂದಿಗೆ ಸಂಯೋಜಿಸಿ ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಅಡಿಕೆ ತೋಟದ ವಿಸ್ತರಣೆ | ಎರಡನೇ ಕಾಡಾಗಿ ಪರಿವರ್ತನೆ – ಮಣ್ಣು ನೀರಿನ ಹಿಡಿತವನ್ನು ಹಾಳು ಮಾಡುತ್ತದೆ…!



