ಕೆಲವು ವರ್ಷಗಳ ಹಿಂದೆ…, ಸರ್ಕಾರ ಜಿಎಸ್ ಟಿ ಜಾರಿ ಮಾಡಿದ ತಕ್ಷಣ ಜಿಲ್ಲಾ ಕೇಂದ್ರವೊಂದರ ಎಪಿಎಂಸಿ ಯ “ಅಡಿಕೆ ಮಂಡಿ” ಗಳಿಂದ ಒಂದೇ ರಾತ್ರಿ ಸುಮಾರು ಎಂಟನೂರು ಲಾರಿ ಅಡಿಕೆ ಉತ್ಪನ್ನ ಗಳು ಉತ್ತರ ಭಾರತದ ಗುಟ್ಕಾ ವ್ಯಾಪಾರಿಗಳ ತಯಾರಿಕಾ ಘಟಕಕ್ಕೆ ರವಾನೆಯಾಯಿತು.
ಕರ್ನಾಟಕದಿಂದ ಉತ್ತರ ರಾಜ್ಯದ ಆ ನಿರ್ದಿಷ್ಟ ಕಾರ್ಖಾನೆಗೆ ತಲುಪುವ ಮಾರ್ಗ ಮದ್ಯೆ ಅದೆಷ್ಟು ಚೆಕ್ ಪೋಸ್ಟ್ ಇರಬಹುದು…?
ಎಲ್ಲೂ ತಡೆಯಿಲ್ಲದೇ ಯಾವುದೇ ಚೆಕ್ ಪೋಸ್ಟ್ ನಲ್ಲೂ ಲಾರಿ ಮಾಲು ಚೆಕ್ ಆಗದೇ ಆ ಗಮ್ಯ ತಲುಪುವುದು… ಅಚ್ಚರಿಯಲ್ವ…?
ಇವರ ಜಾಲ ಅಷ್ಟರಮಟ್ಟಿಗೆ ಇದೆ.
ನಾವು ಅಂದರೆ, ಅಡಿಕೆ ಬೆಳೆಗಾರರ ಪುಣ್ಯಕ್ಕೆ ನಮಗೆ ಸಶಕ್ತವಾಗಿ ಅಡಿಕೆ ಮಾರಾಟ ಸಹಕಾರಿ ಸಂಘಗಳು ಮತ್ತು ಕ್ಯಾಂಪ್ಕೋಗಳಿವೆ.
ಆಕಸ್ಮಾತ್ತಾಗಿ ಈ ಸಹಕಾರಿ ವ್ಯಾಪಾರಿ ಸಂಸ್ಥೆಗಳಿರದೇ ಇದ್ದಿದ್ದರೆ ಈ “ಮುಕ್ತ ವ್ಯಾಪಾರಿ ಮಾಯಾ ಜಾಲಗಳು ” ಅಡಿಕೆ ಬೆಳೆಗಾರರಿಗೆ ಬ್ಲಾಕ್ ಮೇಲ್ ಮಾಡಿ ಶೋಷಣೆ ನೆಡೆಸುತ್ತಿದ್ದವು. ಇವತ್ತಿಗೂ ಮುಕ್ತ ಮಾರುಕಟ್ಟೆಯವರು ಎಪಿಎಂಸಿ ಯೊಳಗಿನ ಕ್ಯಾಂಪ್ಕೋ , ಮ್ಯಾಮ್ಕೋಸ್ ಮುಂತಾದ ಸಹಕಾರಿ ವ್ಯಾಪಾರಿ ಸಂಸ್ಥೆಗಳು ಮತ್ತು ನೊಂದಾಯಿತ ಮಂಡಿಗಳಿಗಿಂತ ಕೃಷಿ ಉತ್ಪನ್ನ ಗಳಿಗೆ ಹೆಚ್ಚಿನ ಬೆಲೆ ಕೊಡುತ್ತವೆ.
ಆದರೆ “ಭದ್ರತೆ”… !?. ಹೆಚ್ಚು ಬೆಲೆ ಕೊಡುತ್ತಾನೆ ಎಂದಾದರೆ ಮುಂದೆ ಅಪಾಯ ಇದೇ ಎಂದರ್ಥ. ಬಹಳಷ್ಟು ಸರ್ತಿ ಅತಿ ಬುದ್ದಿವಂತ ವ್ಯಾಪಾರಿ ಖರೀದಿದಾರ ರೈತರಿಗೆ ಒಂದು ಕಡೆ ಬೆಲೆ ಕೊಟ್ಟು ಇನ್ನೊಂದು ಕಡೆ ತೂಕದಲ್ಲೋ ಇನ್ಯಾವುದೋ ರೂಪದಲ್ಲಿ ರೈತನಿಗೆ ಟೋಪಿ ಹಾಕಿರುತ್ತಾರೆ. ಯಾರೂ ಸುಮ್ಮನೆ ಮಾರುಕಟ್ಟೆ ಚಾಲ್ತಿ ಬೆಲೆಗಿಂತ ಹೆಚ್ಚು ಹಣ ಕೊಟ್ಟು ಖರೀದಿಸೋಲ್ಲ.
ಮುಕ್ತ ಮಾರುಕಟ್ಟೆಯಲ್ಲೊಂದು ಅತಿ ದೊಡ್ಡ ಅಪಾಯವೇನೆಂದರೆ, ಈ “ಮುಕ್ತ” ದವರಿಂದ ದೊಡ್ಡ ಮೊತ್ತದ ಹಣ ಪಡೆಯುವುದು ಬಹಳ ಅಪಾಯಕಾರಿ. ಇವರು ಕೊಡುವ ಹಣ ಕೆಲವೊಮ್ಮೆ ನಕಲಿಯಾಗಿರಲೂ ಸಾಕು.ಕೆಲವು ಕಡೆಗಳಲ್ಲಿ ಹಾಗಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ರೈತರು ಮನೆಯಲ್ಲಿ ಇಟ್ಟುಕೊಳ್ಳುವುದು ಬಲು ದೊಡ್ಡ ಅಪಾಯವಾಗಿರುತ್ತದೆ. ಮುಕ್ತವೇ ಮುಂದುವರಿದಲ್ಲಿ ಮುಕ್ತ ವ್ಯಾಪಾರಿ ನಗದು ವ್ಯವಹಾರವನ್ನೇ ಮಾಡಿದಲ್ಲಿ ರೈತರು ತಕ್ಷಣ ಆ ನಗದನ್ನ ಬ್ಯಾಂಕ್ ಗೆ ಹಾಕದಿದ್ದಲ್ಲಿ ಖಂಡಿತವಾಗಿಯೂ ಅಪಾಯವಿದೆ.
ಮುಕ್ತ ವ್ಯಾಪಾರಿಗಳು ರೈತ ಉತ್ಪಾದಕನ ಮನೆಗೇ ಬಂದು ಖರೀದಿಸುತ್ತಾರೆ (ದೊಡ್ಡ ಪ್ರಮಾಣದ ಬೆಳಗಾರರಿಗೆ ಹೆಚ್ಚು ಆದ್ಯತೆ )
ಇವರು ಖರೀದಿಗೆ ಗುಂಪು ಗುಂಪಾಗಿ ಬಂದು ಮಾರಾಟಗಾರ ರೈತನಿಗೆ ಗೊಂದಲವುಂಟು ಮಾಡಿ “ತೂಕದಲ್ಲಿ” ಮೋಸ , ಕೆಲವೊಮ್ಮೆ ಕೃಷಿ ಉತ್ಪನ್ನದ ಮೂಟೆಯನ್ನೇ ಎಗುರಿಸಿ ಬಿಡುತ್ತಾರೆ. ಹಾಗಂತ ಎಲ್ಲಾ ರೈತರಿಗೂ ಹೀಗಾಗುತ್ತದೆ ಅಂತಲ್ಲ. ಆದರೆ ಬಹುತೇಕ ರಿಗೆ ಈ ವ್ಯವಸ್ಥೆ ಯಲ್ಲಿ ಒಂದಲ್ಲ ಒಂದು ಹಂತದಲ್ಲಿ ಮೋಸವಾಗೇ ತೀರುತ್ತದೆ.ಆದರೆ ಈ ಯಾವುದೇ ರಿಸ್ಕ್ ಏಪಿಎಂಸಿ ಯ ಮಂಡಿಗಳಲ್ಲಿ ಆಗದು.
ನಾನು ಇಲ್ಲಿ ಅಡಿಕೆ ಬೆಳೆಯ ದೃಷ್ಟಿಯಿಂದ ಮುಕ್ತ ಮಾರುಕಟ್ಟೆಯ ಬಗ್ಗೆ ಚೆರ್ಚೆ ಮಾಡುತ್ತಿದ್ದೇನಾದರೂ ರೈತರ ಎಲ್ಲಾ ಕೃಷಿ ಉತ್ಪನ್ನದ ಮಾರುಕಟ್ಟೆ ಗೂ ಇದು ಅನ್ವಯಿಸುತ್ತದೆ. ಅಡಿಕೆ ಈ ಪರಿ ವಿಸ್ತರಣೆಯಾಗಲು ಬಲುಮುಖ್ಯ ಕಾರಣವೇ ಅಡಿಕೆಗಿರುವ
“ರೈತರದ್ದೇ ಮಾಲೀಕತ್ವದ ನಂಬಿಕಾರ್ಹ ಸಹಕಾರಿ ಮಾರಾಟ ಸಂಘಗಳ ಪಾರದರ್ಶಕ ಮಾರಾಟ ವ್ಯವಸ್ಥೆ.”
ಕೃಷಿಯಲ್ಲಿ ಎಕರೆವಾರು ಲಾಭ ನೀಡುವುದರಲ್ಲಿ ಇನ್ನೂ ಅನೇಕ ಕೃಷಿ ಬೆಳೆಗಳಿವೆ. ಆದರೆ ಅವ್ಯಾವ ಬೆಳೆಗಳೂ ಅಡಿಕೆಯಂತಹ ಮಾರುಕಟ್ಟೆ ವ್ಯವಸ್ಥೆ ಹೊಂದಿಲ್ಲ.ಬಹು ಉಪಯೋಗಿ ತೆಂಗಿನ ಬೆಳೆ ಇದಕ್ಕೆ ಉದಾಹರಣೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಬೆಲೆ ಬೇಡಿಕೆ ಹೊಂದಿರುವ ” ಶುಂಠಿ, ಕಾಳುಮೆಣಸು, ಏಲಕ್ಕಿ ಅರಿಶಿನ ಮುಂತಾದ ಸಾಂಬಾರ ಪದಾರ್ಥಗಳ ಮಾರುಕಟ್ಟೆ, ದೊಡ್ಡ ಬೆಳೆಗಾರರೇ ಹೊಂದಿರುವ “ಕಾಫಿ” ಬೆಳೆ ‘;ಹೀಗೆ ಹಲವಾರು ಕೃಷಿ ಬೆಳೆಗಳು ನಮ್ಮ ಅಡಿಕೆಯಂತಹ ವ್ಯವಸ್ಥಿತ ಮಾರುಕಟ್ಟೆ ಹೊಂದಿಲ್ಲದ ಕಾರಣಕ್ಕೆ ಸದಾ ಮಾರುಕಟ್ಟೆ ಹಿತಾಸಕ್ತಿಗಳು ರೈತರನ್ನು ಶೋಷಣೆ ಮಾಡುತ್ತಿದೆ.
ಯಾವುದೇ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ಬೇಡಿಕೆ ನಿಖರವಾಗಿ ಗೊತ್ತಿದ್ದರೆ ರೈತ ಮಾರುಕಟ್ಟೆ ಬೇಡಿಕೆಗನುಗುಣವಾಗಿ ಬೆಳೆಯುವಂತೆ ಕೃಷಿ ಇಲಾಖೆ ಮಾರ್ಗದರ್ಶನ ಮಾಡಬಹುದು.ಭಾರತಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ದಾಟಿದರೂ , ಈಸ್ಟ್ ಇಂಡಿಯಾ ಕಂಪನಿಯ ಮೊಮ್ಮಕ್ಕಳು ಈ ಮಾರುಕಟ್ಟೆ ಹಿಡಿತ ಬಿಟ್ಟಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸಿದ ಕೃಷಿ ಉತ್ಪನ್ನವನ್ನು ಒಂದೆಡೆ ಖರೀದಿಸಿ ಅದನ್ನು ಮಾರುಕಟ್ಟೆಗೆ ಬಿಡದೆ ಕೃತಕ ಅಭಾವ ಸೃಷ್ಟಿಸಿ ಉತ್ಪನ್ನ ದ ಬೆಲೆ ಹೆಚ್ಚಿಸಿ ವ್ಯಾಪಾರಿ ದಲ್ಲಾಳಿಗಳು ಹಲವಾರು ಪಟ್ಟು ಲಾಭ ಮಾಡಿಕೊಳ್ತಾರೆ.
ಯಾವುದೇ ಕೃಷಿ ಉತ್ಪನ್ನವನ್ನು ರೈತರು ಬೆಳೆದು ಉತ್ಪಾದಿಸಲು ಅಂದಾಜಿಸುವಾಗ ಎಕರೆಗೆ ಇಷ್ಟು ಇಳುವರಿ ಬರುತ್ತದೆ , ಮಾರುಕಟ್ಟೆ ಯಲ್ಲಿ ಆ ಕೃಷಿ ಉತ್ಪನ್ನ ಕ್ಕೆ ಇಷ್ಟು ಬೇಡಿಕೆ ಇರುತ್ತದೆ, ಇಷ್ಟು ಬೆಲೆ ಸಿಗುತ್ತದೆ , ಇಷ್ಟು ಲಾಭ ದೊರೆಯುತ್ತದೆ ಎಂಬ ನಿಖರ ಅಂದಾಜು ಇರಬೇಕು.
ಹೀಗೆ ಕರಾರುವಾಕ್ಕಾದ ಲೆಕ್ಕಾಚಾರ ರೈತರಿಗೆ ಬರಬೇಕು ಎಂದಾದರೆ ವಾಸ್ತವ ಮಾರುಕಟ್ಟೆ “ಅವಕ” ಮತ್ತು ವ್ಯಾಪಾರ ದ ಲೆಕ್ಕಾಚಾರ ಇರಬೇಕು. ಹೀಗೆ ಮಾರುಕಟ್ಟೆ ಗೆ ಅವಕವಾಗುವ ಕೃಷಿ ಉತ್ಪನ್ನ ಗಳು ಮತ್ತು ಖರೀದಿ ಲೆಕ್ಕಾಚಾರ ಖಂಡಿತವಾಗಿಯೂ ಯಾವುದೇ ರೀತಿಯಲ್ಲೂ “ಮುಕ್ತ ಮಾರುಕಟ್ಟೆ ವ್ಯವಸ್ಥೆ ಯಲ್ಲಿ ಸಿಗಲು ಸಾದ್ಯವಿಲ್ಲ. ಮುಕ್ತ ಮಾರುಕಟ್ಟೆಯ ವ್ಯಾಪಾರಿ ಯಾವತ್ತೂ ರೈತರಿಗೆ ಮಾರುಕಟ್ಟೆ ” ಬೇಡಿಕೆ” ಮತ್ತು ತನ್ನಿಮಿತ್ತ ಆ ಕೃಷಿ ಉತ್ಪನ್ನಕ್ಕಿರುವ ನಿಜವಾದ “ಬೆಲೆ” ಯನ್ನು ರೈತರಿಗೆ ಅರಿವಾಗುವುದಿರುವಂತೆ ಮರೆ ಮಾಚುತ್ತಾನೆ. ಅದಕ್ಕೆ ಅವಕ ಮತ್ತು ಖರೀದಿ ಲೆಕ್ಕಾಚಾರ ಪಕ್ಕಾ ಇರುವ ಎಪಿಎಂಸಿ ಯಂತಹ ಮಾರುಕಟ್ಟೆ ವ್ಯವಸ್ಥೆ ಯಲ್ಲಿರಬೇಕು ಎನ್ನುವುದು.
ಮುಕ್ತ ವ್ಯಾಪಾರ ಖಂಡಿತವಾಗಿಯೂ ಕೃಷಿಗೆ ಬಲು ದೊಡ್ಡ ಅಪಾಯ. ರೈತನ ಕಣ್ಣು ಕಟ್ಟಿದಂತಾಗುತ್ತದೆ, ರೈತ ಒಟ್ಟು ಅಂದಾಜಿಲ್ಲದೇ ಲೆಕ್ಕವಿಲ್ಲದೇ ಬೆಳೆಯಬೇಕು, ಮಾರುಕಟ್ಟೆಯಲ್ಲಿ ಬೇಡಿಕೆ ಬಂದರೂ ಬರಬಹುದು ಇಲ್ಲ ಬರದೇಯೂ ಇರಬಹುದು. ರೈತನಿಗೆ ಮಾರುಕಟ್ಟೆ ಬೇಡಿಕೆಯ ಅಂದಾಜು ಗೊತ್ತಾಗುವುದಿಲ್ಲ.ಇದಕ್ಕೆ ಇವತ್ತಿನ ತರಕಾರಿ ಬೆಳೆಗಳ ಮಾರುಕಟ್ಟೆ ವ್ಯವಸ್ಥೆ ಹೀಗಿದೆ. ಮುಕ್ತ ವ್ಯಾಪಾರ ಹೇಗಿರುತ್ತದೆ ಎಂಬುದನ್ನು “ತರಕಾರಿ” ಕೃಷಿ ಮಾರುಕಟ್ಟೆ ಹೇಳುತ್ತದೆ.
ಸರ್ಕಾರದ ಸಂಬಂಧಿಸಿದ ಇಲಾಖೆ ಗಳು ಒಟ್ಟಾರೆ ಯಾಗಿ ಮೆಟ್ರಿಕ್ ಟನ್ ಲೆಕ್ಕಾಚಾರ ಕೊಡುತ್ತವೆ. ಆದರೆ ಇದು ನಿಖರವಲ್ಲ.ಹಾಗಾಗಿ ಮುಕ್ತ ಮಾರುಕಟ್ಟೆ ಕೃಷಿ ಗೇ ಮಾರಕ. ಇದು ರೈತನಿಗೆ ತಾತ್ಕಾಲಿಕ ಲಾಭ ಮಾತ್ರ ತಂದುಕೊಡಬಲ್ಲದು.
ಇದರ ಜೊತೆಯಲ್ಲಿ, ಇನ್ನೊಂದು ದೊಡ್ಡ ಅಪಾಯವೇನೆಂದರೆ. ಈ ಅಸ್ಪಷ್ಟ ಕೃಷಿ ಉತ್ಪನ್ನ ದಾಸ್ತಾನಿನ ಗೊಂದಲದಿಂದ ಸರ್ಕಾರ ವಿದೇಶದಿಂದ ಕೃಷಿ ಉತ್ಪನ್ನ ಗಳ ಆಮದಿಗೆ ಮುಂದಾಗಬಹುದು. ಇದು ತೀರಾ ಅಪಾಯಕಾರಿ ಬೆಳವಣಿಗೆಯಾಗುತ್ತದೆ. ಈ ವಿದೇಶಿ ಕೃಷಿ ಉತ್ಪನ್ನಗಳ ಆಮದು ದೇಶದ ರೈತರ ಕೃಷಿ ಮಾಡುವ ಒತ್ತಾಸೆಗೆ ಕೊಳ್ಳಿಯಿಡಬಹುದು. ಒಂದು ಸಲ ಈ ದೇಶದ ರೈತ ಕೃಷಿ ಯಿಂದ ಹೊರ ಬಂದರೆ ದೇಶದ ನಲವತ್ತು ಪ್ರತಿಶತ ರೈತರು ಮತ್ತು ಕೃಷಿ ನಂಬಿಕೊಂಡ ಜನರ ಲೆಕ್ಕಾಚಾರ ಹಾಕಿದರೆ ಒಟ್ಟು ಅರವತ್ತು ಪ್ರತಿಶತ ಜನತೆಯ ಜೀವನ ಬೀದಿಗೆ ಬರುತ್ತದೆ. ಈ ದೇಶದ ಕೃಷಿ ಬಿಟ್ಟು ಬೇರೇನು ಗೊತ್ತಿಲ್ಲದ “ಅಕುಶಲಿ” ಅವಿದ್ಯಾವಂತ ಜನಗಳ ಜೀವನ “ಕೃಷಿ” ಇಲ್ಲದೇ ಮುಂದೆ ಹೇಗೆ ನಡೆಯಬೇಕು…?
ಚರ್ಚೆ ಮುಂದುವರಿಸೋಣ….
(ಭಾಗ-1)
ಮುಕ್ತ ಮುಕ್ತ…. ಭಾಗ-1 | ಸಾಧಕ-ಬಾಧಕ | ಅಡಿಕೆಯಲ್ಲಿ ಮುಕ್ತ ವ್ಯಾಪಾರ ಎಂಬ ಮಾರುಕಟ್ಟೆ…! |
Advertisement
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…