ಅಡಿಕೆ ಧಾರಣೆ ಏರಿಕೆ,ಅಡಿಕೆ ಬೆಳೆ ವಿಸ್ತಾರವಾಗುತ್ತಿರುವ ನಡುವೆಯೇ ಅಡಿಕೆ ಬೆಳೆಯ ಮೇಲಿನ ಕಾಳಜಿಯೂ ಹೆಚ್ಚಾಗುತ್ತಿದೆ. ಇದೀಗ ಅಡಿಕೆಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಕಾರ್ಯಾಗಾರ, ಸಂವಾದ ಕಾರ್ಯಕ್ರಮ ಮಾ.7 ರಂದು ಪುತ್ತೂರಿನ ಬಲ್ನಾಡಿನಲ್ಲಿ ಹಮ್ಮಿಕೊಳ್ಳಲಾಗಿದೆ. ಅಡಿಕೆಯ ಬಗ್ಗೆ ಸಮಗ್ರ ಮಾಹಿತಿ ಕಾರ್ಯಕ್ರಮವೂ ನಡೆಯಲಿದೆ.
ಮಾ.7 ರಂದು ಪುತ್ತೂರಿನ ಬಲ್ನಾಡಿನ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಅವರ ಕೃಷಿ ತೋಟದಲ್ಲಿ ನಡೆಯುವ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಪಿಂಗಾರ ಸಂಸ್ಥೆ ಅಧ್ಯಕ್ಷ ರಾಮ ಕಿಶೋರ್ ಮಂಚಿ ಕಾರ್ಯಕ್ರಮ ಉದ್ಘಾಟಿಸುವರು. ಸಭಾಧ್ಯಕ್ಷತೆಯನ್ನು ಸಿಪಿಸಿಆರ್‌ಐ ಕಾಸರಗೋಡು ಇಲ್ಲಿನ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಹೆಗಡೆ ಸಭಾಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಬಲ್ನಾಡು ಗ್ರಾಪಂ ಅಧ್ಯಕ್ಷೆ ಇಂದಿರಾ ಎಸ್ ರೈ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ ಕಿನಿಲ ಭಾಗವಹಿಸುವರು. ಕೃಷಿಕ ಸುರೇಶ್ ಬಲ್ನಾಡು ಉಪಸ್ಥಿತರಿರುವರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಅಡಿಕೆ ಕೃಷಿಯಲ್ಲಿ ಪೋಷಕಾಂಶ ನಿರ್ವಹಣೆ, ಎಲೆಚುಕ್ಕಿ ರೋಗ, ಹಿಂಗಾರ ಒಣಗುವ ರೋಗ ಮತ್ತಿತರ ರೋಗ ಪತ್ತೆ ಹಾಗೂ ನಿರ್ವಹಣೆ, ಕೀಟಗಳ ನಿರ್ವಹಣೆ, ರೈತ ಉತ್ಪಾದಕ ಸಂಸ್ಥೆಯ ಸಾಧ್ಯತೆ, ಕೃಷಿಕಾನುಭವ ಸೇರಿದಂತೆ ವಿವಿಧ ಮಾಹಿತಿ ಇರಲಿದೆ. ಆ ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದೆ.
ವಿಟ್ಲ ಸಿಪಿಸಿಆರ್‌ಐ ಹಾಗೂ ಅಡಿಕೆ ಮತ್ತು ಸಾಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.