ಅಡಿಕೆ ಮಾರುಕಟ್ಟೆ ಸ್ಥಿರೀಕರಣ ಹಾಗೂ ಬೆಳೆಗಾರರ ಹಿತದೃಷ್ಟಿಯಿಂದ ಕ್ಯಾಂಪ್ಕೋ ಸ್ಥಾಪನೆಯಾಗುವ ಸಂದರ್ಭ ಮಾಡಿದ ಸರ್ವೆ ಪ್ರಕಾರ 1.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 1.5 ಲಕ್ಷ ಟನ್ ಅಡಿಕೆ 1972 ರಲ್ಲಿ ಉತ್ಪಾದನೆಯಾಗುತ್ತಿತ್ತು. ಆ ಕಾಲದಲ್ಲಿ ಅಡಿಕೆ ಧಾರಣೆಯು 1974 ರಲ್ಲಿ ಬಿಳಿ ಅಡಿಕೆಗೆ 3-4 ರೂಪಾಯಿ, ಕೆಂಪಡಿಕೆಗೆ 3 -4 ರೂಪಾಯಿ ಹಾಗೂ ಶಿವಮೊಗ್ಗದ ಹಸಕ್ಕೆ ಮಾತ್ರಾ 5-6 ರೂಪಾಯಿ ಇತ್ತು. 1964 ರಿಂದ ಅಡಿಕೆ ಆಮದು ಕೂಡಾ ಇರಲಿಲ್ಲ.

ಕ್ಯಾಂಪ್ಕೋ ಸ್ಥಾಪನೆ ಬಳಿಕ ಧಾರಣೆ ಏರಿಕೆಯಾಯಿತು, ಬಳಿಕ ಅಡಿಕೆ ಬೆಳೆ ವಿಸ್ತರಣೆಯೂ ಆಯಿತು. 1990 ರಲ್ಲಿ ಹೊತ್ತಿಗೆ ಅಡಿಕೆ ಧಾರಣೆ 45 ರೂಪಾಯಿ ಆಸುಪಾಸಿಗೆ ಬಂದಿತು. ಆ ಬಳಿಕವೂ ಅಡಿಕೆ ವಿಸ್ತರಣೆ ಮುಂದುವರಿಯಿತು. ಇದೇ ವೇಳೆ ಅಡಿಕೆ ಬಳಕೆಯೂ ದೇಶದಲ್ಲಿ ಹೆಚ್ಚಾಯಿತು. ಇಲ್ಲಿಯ ಉತ್ಪಾದನೆ ಸಾಕಾಗದೆ ಆಮದು ಕೂಡಾ ನಡೆಯುತ್ತಿತ್ತು. ಈಚೆಗೂ ಅಡಿಕೆ ಆಮದು ನಡೆಯುತ್ತಿತ್ತು. ಅಂದರೆ ಅಡಿಕೆ ಮಾರುಕಟ್ಟೆ ಇದೆ, ಬೇಡಿಕೆಯೂ ಇದೆ. ಅಂದರೆ ಕಳೆದ ಎರಡು ವರ್ಷದವರೆಗೆ ಇಲ್ಲಿನ ಅಡಿಕೆಯ ಉತ್ಪಾದನೆ ಬಳಕೆ ಆಗುತ್ತಿದೆ. ಆದರೆ ಈಗ ಅಡಿಕೆ ಧಾರಣೆ ವಿಪರೀತ ಏರಿಕೆಯ ಬಳಿಕ ಆತಂಕ ಇದೆ. ಈ ಎಲ್ಲಾ ಬೇಡಿಕೆ ಪೂರೈಕೆಯಾದರೆ ಏನು ಎಂಬ ಚಿಂತನೆ ನಡೆಸಬೇಕಿದೆ. ಹೀಗಾಗಿ ಅಡಿಕೆ ಬೆಳೆ ವಿಸ್ತರಣೆಯಲ್ಲಿ ಎಚ್ಚರಿಕೆ ಇರಲೇಬೇಕು. ಈ ಬಗ್ಗೆ ಬೆಳೆಗಾರರಿಗೆ ಜಾಗೃತೆ ಬೇಕು, ಬೆಳೆಗಾರನೇ ಈ ಬಗ್ಗೆ ಯೋಚಿಸಬೇಕು. ಯಾವತ್ತೂ ಬೆಳೆ ವಿಸ್ತರಣೆ, ಬೆಳೆ ಬೆಳೆದರೆ ಸಾಲದು ಮಾರುಕಟ್ಟೆಯನ್ನೂ ಗಮನಿಸಬೇಕು. ಬೇಕಾಬಿಟ್ಟಿಯಾಗಿ ಈ ಧಾರಣೆ ಇದೆ ಎಂದು ಬೆಳೆದರೆ ಸಂಕಷ್ಟ ನಿಶ್ಚಿತವೇ ಆಗಿದೆ. ಇದಕ್ಕಾಗಿ ಅಡಿಕೆ ಬೆಳೆಯ ಸರ್ವೆ ಹಾಗೂ ಬಳಕೆಯ ಬಗ್ಗೆ ಸರ್ವೆ ಆಗಬೇಕು. ಈ ಮೂಲಕ ಬೆಳೆಯ ಬಗ್ಗೆ ನಿಯಂತ್ರಣವೂ ಇರಬೇಕು.
ಅಡಿಕೆ ಸದ್ಯ ಬ್ಯಾನ್ ಆಗಲು ಸಾಧ್ಯವಿಲ್ಲ. ಈ ಆತಂಕ ಇರಬೇಕಾಗಿಲ್ಲ. ಹೀಗಾಗಿ ಅಡಿಕೆ ಭವಿಷ್ಯವೇ ಇಲ್ಲ ಎಂದು ಯಾವ ಬೆಳೆಗಾರರೂ ಚಿಂತಿಸಬೇಕಿಲ್ಲ. ಅಡಿಕೆ ಬ್ಯಾನ್ ಆಗದೇ ಇರಲು ಹಲವು ಕಾರಣಗಳು ಇವೆ. ದೇಶಗಳ ನಡುವೆ ಒಪ್ಪಂದ ಸೇರಿದಂತೆ ವಿವಿಧ ಕಾರಣಗಳು ಇರುತ್ತವೆ. ಹೀಗಾಗಿ ಏಕಾಏಕಿ ನಿಷೇಧ ಸಾಧ್ಯವಿಲ್ಲ. ಆದರೆ ಬೆಳೆ ವಿಸ್ತರಣೆ, ಧಾರಣೆ ಸ್ಥಿರತೆ, ಭವಿಷ್ಯದ ಕೃಷಿ ಇತ್ಯಾದಿಗಳ ಬಗ್ಗೆ ಬೆಳೆಗಾರ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಈ ನಡುವೆಯೇ ಪರ್ಯಾಯ ಬೆಳೆ, ಮಿಶ್ರ ಬೆಳೆಗಳ ಕಡೆಗೂ ಕೃಷಿಕ ಯೋಚಿಸಬೇಕು. ಸರ್ಕಾರ ಪರ್ಯಾಯ ಬೆಳೆಯ ಬಗ್ಗೆ ಸರಿಯಾದ ಮಾಹಿತಿಯನ್ನೂ ನೀಡಬೇಕು.