ಕಳೆದ ವರ್ಷ ಆತ್ಮೀಯರೊಬ್ಬರು ತಮ್ಮ ಅಡಿಕೆ ಹಾಳೆ ತಟ್ಟೆ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದನೆಯಾದ ಭಿಕರಿಯಾಗದ ಹಾಳೆ ತಟ್ಟೆಗಳಿಗೆ ಮಾರುಕಟ್ಟೆ ಹುಡುಕಿಕೊಡಲು ಸಹಾಯ ಮಾಡಿ ಎಂದು ಕೋರಿದ್ದರು.
ನಾನು ನನ್ನ ಪರಿಚಯ ಮಿತಿಯ ಎಲ್ಲಾ ಅಡಿಕೆ ಹಾಳೆ ಉದ್ಯಮಿಗಳ ಸಂಪರ್ಕಿಸಿದರೂ ಯಾರೂ ಆ ಉದ್ಯಮಿಯ ಹಾಳೆ ತಟ್ಟೆ ಖರೀದಿಯಾಗಿರಲಿಲ್ಲ.
ಕಳೆದ ವರ್ಷ ತಮಿಳಿನಾಡಿನಲ್ಲಿ ಸಿಂಗಲ್ ಯೂಸ್ ಪೇಪರ್ ಪ್ಲೇಟ್ ಬಳಕೆಗೆ ಅನುಮತಿ ನೀಡಿದ ಕಾರಣ ಅಡಿಕೆ ಹಾಳೆ ಪ್ಲೇಟ್ ಗೆ ಬೇಡಿಕೆ ಕುಸಿದಿದ್ದಂತೆ.
ನಮ್ಮ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಾಳೆ ತಟ್ಟೆಯನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡಿ ಬದುಕು ಭವಿಷ್ಯ ರೂಪಿಸಿಕೊಂಡವರು ಇದ್ದಾರೆ. ಶಿವಮೊಗ್ಗದ ಒಬ್ಬ ಅಡಿಕೆ ಹಾಳೆ ಉತ್ಪನ್ನದ ಉದ್ಯಮಿಯೊಬ್ಬರನ್ನ ಮಾನ್ಯ ಪ್ರಧಾನ ಮಂತ್ರಿಗಳೇ ಕರೆ ಮಾಡಿ ಅಭಿನಂದಿಸಿದ ವಿಚಾರವೂ ಗಮನಾರ್ಹ.
ಅಡಿಕೆಗೆ ಈ ವರ್ಷ ಬಂಪರ್ ಬೆಲೆಯಿದೆ. ಅಡಿಕೆ ಬೆಳೆಯನ್ನು ಕರ್ನಾಟಕದಲ್ಲಿ ಅತಿ ಎನಿಸುವಷ್ಟು ಬೆಳಿತಿದಾರೆ. ಒಂದು ಕಡೆ ಅಡಿಕೆ ಬೆಳೆ ವಿಪರೀತ ವಿಸ್ತರಣೆ ಆಗ್ತಿದೆ. ಇದರ ಮದ್ಯ ಸಾಂಪ್ರದಾಯಿಕ ಅಡಿಕೆ ಬೆಳೆ ಕ್ಷೇತ್ರದಲ್ಲಿ ಅಡಿಕೆ ಗೆ ಎಲೆಚುಕ್ಕಿ ಶಿಲೀಂಧ್ರ ಬಾಧೆ ಕಾಡಿ ಅಡಿಕೆ ಬೆಳೆಗಾರರ ಭವಿಷ್ಯ ಏನು…? ಎಂಬಂತಾಗಿದೆ. ಇದೆಲ್ಲದರ ಮದ್ಯೆ ಅಡಿಕೆ ಕ್ಯಾನ್ಸರ್ ಕಾರಕ ಎಂಬ ಕಳಂಕ ಜೊತೆಯಲ್ಲಿ ಅಡಿಕೆ ಬ್ಯಾನ್ ಮಾಡಿ ಎಂಬ ಒತ್ತಡ. ಅಡಿಕೆ ಬೆಳೆಯಲ್ಲಿ ಕೋಟ್ಯಾಂತರ ಜನ ಬದುಕು ಕಟ್ಟಿಕೊಂಡಿದ್ದಾರೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎನ್ನುವ ವೈಜ್ಞಾನಿಕ ಸಂಶೋಧನಾ ಸಾಕ್ಷಿ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಪ್ರಚಾರಕ್ಕೆ ಬರಬೇಕಿದೆ. ಅಡಿಕೆ ಕ್ಯಾನ್ಸರ್ ಕಾರಕ ಎಂಬುದು ಗಟ್ಟಿಯಾಗುತ್ತಾ ಹೋಗುವುದು ಅಡಿಕೆಯನ್ನೇ ನೇರವಾಗಿ ನಂಬಿಕೊಂಡು ಹೋಗುತ್ತಿರುವ ನಮ್ಮ ನಾಡಿನ ಅಡಿಕೆ ಬೆಳೆಗಾರರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಿದೆ.
ಇದರ ಮಧ್ಯ ನಮ್ಮ ಉದ್ಯಮದ ಸೂಕ್ಷ್ಮಾಣು ಜೀವಿಗಳ ಸಿಂಪಡಣೆ ಮಾಡುವ ಯಂತ್ರ ನಾದುರಸ್ತಾಗಿತ್ತು. ಸಿಂಪಡಣಾ ಯಂತ್ರ ರಿಪೇರಿ ಕೇಂದ್ರ ಕ್ಕೆ ನಮ್ಮ ಯಂತ್ರ ವನ್ನು ಕೊಂಡೊಯ್ದಾಗ ಅಲ್ಲಿ ತಂತ್ರಜ್ಞರು ಫುಲ್ ಬ್ಯಿಸಿ. ಏಕೆಂದರೆ ಅಡಿಕೆ ಬೆಳೆಗಾರರು ಅಡಿಕೆ ಹರಳು ಉದುರುವ ಸಮಸ್ಯೆಗೆ ಔಷಧ ಸಿಂಪಡಣೆಯಂತೆ. ಅದಕ್ಕಾಗಿ ರೈತರು ರಿಪೇರಿ ಕೇಂದ್ರ ಕ್ಕೆ ತಮ್ಮ ಯಂತ್ರ ವನ್ನು ಸರ್ವೀಸು ಮಾಡಿಸಿಕೊಂಡು ಹೋಗಲು ತಂದಿದ್ದರು. ಈ ಔಷಧ ಸಿಂಪಡಣೆ ಮಾಡಿ ಎಂದು ಮಾರ್ಗದರ್ಶನ ಮಾಡಿದವರಾರು..? ಔಷಧದ ಅಂಗಡಿಯವನು ಕೊಟ್ಟ ಭಯಂಕರ ವಿಷವನ್ನು ಅಡಿಕೆ ಬೆಳೆಗಾರರು ತಂದು ಸಿಂಪಡಣೆ ಮಾಡುತ್ತಿದ್ದಾರೆ…!. ಅಡಿಕೆ ತೋಟವೆಲ್ಲಾ ವಿಷಮಯ ಆಗ್ತಿದೆ…! ಈ ಅಪಾಯಕಾರಿ ರಾಸಾಯನಿಕ ವಿಷ ಬೇಕಾ…? ಯಾವ ಸಂಶೋಧನಾ ಕೇಂದ್ರಗಳು ಈ ಔಷಧವನ್ನು ಈ ಕಾಲದಲ್ಲಿ ಸಿಂಪಡಣೆ ಮಾಡಿ ಎಂದಿದ್ದಾರೆ…? ಅಡಿಕೆ ಗೆ ಭಂಪರ್ ಬೆಲೆ ಇದೆ ಎಂದು ಅನೇಕ ಅಡಿಕೆ ಬೆಳೆಗಾರರು ಸಿಕ್ಕ ಸಿಕ್ಕ ಔಷಧ ಸಿಂಪಡಣೆ ಮಾಡುತ್ತಿದ್ದಾರೆ…!
ಇದೆಲ್ಲಾ ಬೇಕಾ..? ಬಹುತೇಕ ಈ ಯಾವುದೇ ರಾಸಾಯನಿಕ ಔಷಧದಿಂದ ಹರಳು ಉದುರುವ ಸಮಸ್ಯೆ ಬಗೆ ಹರಿಯುತ್ತಿಲ್ಲ.ಈ ಹರಳು ಉದುರುವ ಸಮಸ್ಯೆ ಗೆ ಮೂಲ ಕಾರಣವೇ ಬೇರೆ…! ಈ ಔಷಧ ಸಿಂಪಡಣೆ ಮಾಡುವ ಹೊತ್ತಿಗೆ ಆ ಕೀಟಾಣು ತನ್ನ ಕೆಲಸ ಮುಗಿಸಿ ಹೋಗಿಯಾಗಿರುತ್ತದೆ. ಬಹಳಷ್ಟು ಅಡಿಕೆ ಹರಳು ಚಿಕ್ಕ ಕಾಯಿ ಉದುರಲು ಅತಿಯಾಗಿ ಏರಿದ ವಾತಾವರಣದ ಉಷ್ಣಾಂಶ ವೂ ಕಾರಣ ವಾಗಿರುತ್ತದೆ. ಅಡಿಕೆ ಹರಳು ಉದುರುವುದನ್ನ ನಿಯಂತ್ರಿಸುವ ಮಾಡಲು ವಿಷ. ಅಡಿಕೆ ಕೊಳೆ ರೋಗ ಅಡ್ವಾನ್ಸ್ಡ್ ಆಗಿ ನಿಯಂತ್ರಿಸಲು ವಿಷ… ಅಡಿಕೆ ಎಲೆಚುಕ್ಕಿ ನಿಯಂತ್ರಿಸಲು ಅಡ್ವಾನ್ಸ್ಡ್ ವಿಷ….
ಅಡಿಕೆ ಬೆಳೆಗಾರರು ಈಗ ಫುಲ್ ಬ್ಯಿಸಿ ಯಾಗಿದ್ದಾರೆ… ಪಟ್ಟಣದ ರಾಸಾಯನಿಕ ಔಷಧ ಅಂಗಡಿಯವನು ಕೊಟ್ಟ ಔಷಧ ವನ್ನು ತೋಟಕ್ಕೆ ತಂದು ಡ್ರಮ್ ಗೆ ಕದಡಿ ಔಷಧ ಸಿಂಪಡಣೆ ಮಾಡುವುದರಲ್ಲಿ ಬ್ಯುಸಿ. ಇದರಿಂದಾಗಿ ಅಡಿಕೆ ಹಾಳೆ, ಸೋಗೆ , ಅಡಿಕೆ ಹಿಂಗಾರ , ಹೊಂಬಾಳೆ , ಕಾಳುಮೆಣಸು , ಏಲಕ್ಕಿ , ಕಾಫಿ , ಜಾಯಿಕಾಯಿ ಜಾಪತ್ರೆ , ವೀಳ್ಯದೆಲೆ… ಬಾಳೆ ಕಾಯಿ , ಬಾಳೆ ಎಲೆ… ಅಂತರ್ಜಲ.. ಔಷಧ ಸಿಂಪಡಣೆಗಾರ.. ಕೊನೆಯಲ್ಲಿ “ಅಡಿಕೆ ಬೆಳೆಗಾರನೇ ವಿಷ” ಆಗುವತ್ತಾ ಸಾಗುತ್ತಿದೆ ಸದ್ಯದ ಪರಿಸ್ಥಿತಿಯಲ್ಲಿ.
ಅಮೆರಿಕದಲ್ಲಿ ಈಗ ಅಡಿಕೆ ಹಾಳೆ ತಟ್ಟೆ ನಿಷೇಧ, ಅಡಿಕೆ ಹಾಳೆ ತಟ್ಟೆಯನ್ನು ಮನುಷ್ಯರು ಅಡಿಕೆಯಂತೆ ತಿನ್ನುವುದಿಲ್ಲ. ಆದರೆ ಅಂತಹ ಅಡಿಕೆ ಹಾಳೆ ತಟ್ಟೆಯನ್ನೇ ಅಡಿಕೆ ತಿನ್ನುವ ಕಾಯಿಗಿರುವ ಅಪವಾದವನ್ನ ಅಡಿಕೆ ಹಾಳೆಗೂ ಹೊರಿಸುವ ಮಟ್ಟದಲ್ಲಿ ಅಮೆರಿಕದಂತಹ ಮುಂದುವರಿದ ದೇಶಗಳಿವೆ. ಅವರ ಜಾಗೃತಿ ನಿಷೇಧ ಮುಂದಿನ ದಿನಗಳಲ್ಲಿ ಭಾರತದ ಅಡಿಕೆ ಹಾಳೆ ಮಾರುಕಟ್ಟೆಗೂ ವ್ಯಾಪ್ತಿಸಬಹುದು. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಅರ್ಜೆಂಟು ಅಡಿಕೆಯ ಬಗ್ಗೆ ಸಂಪೂರ್ಣ ಸಂಶೋಧನೆ ಮಾಡಿಸಿ “ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ” ಎಂದು ಸಾಬೀತು ಮಾಡಿಸಬೇಕಿದೆ ಮತ್ತು ಹುಚ್ಚಾಪಟ್ಟೆ ಅಪಾಯಕಾರಿ ರಾಸಾಯನಿಕ ಔಷಧ ವನ್ನು ಅಡಿಕೆ ಬೆಳೆಗಾರರು ತಮ್ಮ ಅಡಿಕೆ ತೊಟಕ್ಕೆ ಸಿಂಪಡಣೆ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡದೇ ಇದ್ದ ಪಕ್ಷದಲ್ಲಿ ಮುಂದೆ ಮಲೆನಾಡು ಕರಾವಳಿಯ ಅಡಿಕೆ ಹಾಳೆ ಅಲ್ಲ ಯಾವುದೇ ಕೃಷಿ ಉತ್ಪನ್ನ ಗಳಿಗೂ ಬೇಡಿಕೆ ಇರದಂತಾಗುತ್ತದೆ. ಅಮೇರಿಕಾದ ಅಡಿಕೆ ಹಾಳೆ ಬಳಕೆ ನಿಷೇಧ ಕರ್ನಾಟಕದ ಅಡಿಕೆ ಬೆಳೆಗಾರರಿಗೊಂದು ಎಚ್ಚರಿಕೆಯ ಗಂಟೆಯಾಗಿದೆ. ಇಲ್ಲದಿದ್ದರೆ ಅಡಿಕೆ ಬೆಳೆಗಾರರ ಭವಿಷ್ಯ ಬಹಳ ಕಷ್ಟ ಇದೆ.
ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?