“ಆಳು ಸಂಬಳ ಜಾಸ್ತಿಯಾಗಿದೆ…”
ಇದು ಮೊನ್ನೆಯಿಂದ ಕೇಳಿಸುತ್ತಿರುವ ಮಾತು.
ಹಿಂದಿನ ದಿನವಷ್ಟೇ ಎರಡು ತಿಂಗಳ ಹಿಂದೆ ₹54 ಸಾವಿರ ಇದ್ದ ಅಡಿಕೆಯನ್ನು ಸಹಕಾರಿ ಮಾರಾಟ ಸಂಸ್ಥೆಯಲ್ಲಿ ₹46 ಸಾವಿರಕ್ಕೆ ಮಾರಾಟ ಮಾಡಿ ಬಂದಿದ್ದೆ. ಮಾರನೇ ದಿನ ನಮ್ಮ ಮಾಮೂಲಿನ ಕೃಷಿ ಕಾರ್ಮಿಕ, “ಸಂಬಳ ಜಾಸ್ತಿಯಾಗಿದೆ” ಎಂದು ಘೋಷಣೆ ಮಾಡಿದ.
ನಾವು ಅಡಿಕೆ ಬೆಳೆಗಾರರು. ನಾವೂ ಇದೇ ಸಮಾಜದಲ್ಲಿ ಬದುಕುತ್ತಿದ್ದೇವೆ. ನಮಗೂ ದಿನನಿತ್ಯ ಬೇಕಾಗುವ ಬಹುತೇಕ ಎಲ್ಲ ವಸ್ತುಗಳನ್ನು ಅಂಗಡಿಯಿಂದಲೇ ಖರೀದಿಸಬೇಕು. ಬೆಲೆ ಏರಿಕೆಯ ಬಿಸಿ ನಮಗೂ ತಟ್ಟುತ್ತದೆ. ಆದರೆ ನಮ್ಮ ಆದಾಯದ ಮೂಲವಾದ ಅಡಿಕೆಯ ಮಾರುಕಟ್ಟೆ ಖರೀದಿ ದರ ಮಾತ್ರ ಕಡಿಮೆಯಾಗುತ್ತಲೇ ಹೋಗುತ್ತದೆ.
ಹಾಗಾದರೆ ಸಾಮಾಜಿಕ ನ್ಯಾಯ ನಮಗೆ ನೀಡುವವರು ಯಾರು?
ಅಡಿಕೆ ದರ ಕಡಿಮೆಯಾಗುತ್ತಿರುವುದೇಕೆ? ಅಡಿಕೆಗೆ ಬೇಡಿಕೆ ಕಡಿಮೆಯಾಗಿದೆಯೇ? ಅಕ್ರಮವಾಗಿ ಅಡಿಕೆ ಆಮದಾಗುತ್ತಿದೆಯೇ? ಮಾರುಕಟ್ಟೆಯಲ್ಲಿ ಬೇರೆ ಯಾವುದಾದರೂ ಕಾರಣಗಳಿವೆಯೇ? ಗೊತ್ತಿಲ್ಲ.
ಇತ್ತೀಚೆಗೆ ನಾನು ಮಾರಾಟ ಮಾಡಿದ ಅಡಿಕೆಯನ್ನು ಮೊದಲ ಬಾರಿಗೆ ಹರಾಜಿಗೆ ಇಟ್ಟಾಗ ₹41 ಸಾವಿರಕ್ಕೆ ಟೆಂಡರ್ ಆಗಿತ್ತು. ಎರಡನೇ ವಾರ ಮತ್ತೆ ಮಾರಾಟಕ್ಕೆ ಇಟ್ಟಾಗ ₹46,500ಕ್ಕೆ ಟೆಂಡರ್ ಆಯಿತು. ಅದೇ ಸಂದರ್ಭದಲ್ಲಿ ಗರಿಷ್ಠ ದರ ₹50 ಸಾವಿರದಷ್ಟಿತ್ತು.
ಇದೆಲ್ಲಾ ಏನು?
ನಂಬಿಕಸ್ಥ ಎಂದು ರೈತರು ನಂಬಿರುವ ಸಹಕಾರಿ ಮಾರಾಟ ಸಂಸ್ಥೆಯಲ್ಲಿಯೇ ಇಂತಹ ದರ ವ್ಯತ್ಯಾಸ ಏಕೆ?
ಅನುಮಾನ ಮೂಡುವುದು ಸಹಜವಲ್ಲವೇ?
ಇರಲಿ, ಅದೊಂದು ಬೇರೆ ವಿಚಾರ.
ರೈತ ವ್ಯಾಪಾರಿ ಸಂಸ್ಥೆಗಳು ನಿಗದಿಪಡಿಸಿದ ದರಕ್ಕೆ ತನ್ನ ಉತ್ಪನ್ನವನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ರೈತನದ್ದು. ಇದು ಒಂದು ರೀತಿಯ ಶೋಷಣೆ.
ಇನ್ನೊಂದು ಕಡೆ ಕೃಷಿ ಕಾರ್ಮಿಕರ ವೇತನದ ವಿಚಾರ.
ಕಳೆದ 25–30 ವರ್ಷಗಳಿಂದ ಕೃಷಿ ಕೂಲಿ ದರದ ಗ್ರಾಫ್ ಏರುತ್ತಲೇ ಇದೆ. ಅದರಲ್ಲಿ ತಪ್ಪೇನಿಲ್ಲ. ದುಡಿಯುವ ಕಾರ್ಮಿಕರಿಗೆ ಉತ್ತಮ ಸಂಬಳ ಸಿಗಬೇಕು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು.
ಆದರೆ ಅದೇ ಸಮಯದಲ್ಲಿ ಕೆಲಸದ ಅವಧಿ, ಕೆಲಸದ ಪ್ರಮಾಣ ಮತ್ತು ಕಾರ್ಯಕ್ಷಮತೆಯಲ್ಲೂ ಬದಲಾವಣೆ ಆಗಿದೆಯೇ? ಎಂಬ ಪ್ರಶ್ನೆಯನ್ನೂ ಕೇಳಬೇಕಾಗಿದೆ.
ಮಲೆನಾಡಿನ ಬಹುತೇಕ ಪ್ರದೇಶಗಳಲ್ಲಿ ಇಂದು ವಿವಿಧ ಕೃಷಿ ಕೆಲಸಗಳಿಗೆ ಬಯಲುಸೀಮೆ ಹಾಗೂ ಹೊರ ರಾಜ್ಯಗಳಿಂದ ಬರುವ ಕೂಲಿ ಕಾರ್ಮಿಕರನ್ನೇ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಕಾರ್ಮಿಕರು ಲಭ್ಯವಿರುವ ಕಡೆಗಳಲ್ಲಿ ಕೆಲವೊಮ್ಮೆ ಆರು ತಿಂಗಳಿಗೊಮ್ಮೆ ಕೂಲಿ ದರ ಹೆಚ್ಚಾಗುತ್ತಿರುವ ಅನುಭವ ರೈತರದ್ದು.
ಕೆಲವು ಊರುಗಳಲ್ಲಿ ಒಬ್ಬ ಕೃಷಿ ಕಾರ್ಮಿಕನ ದಿನದ ಕೂಲಿ ಈಗ ₹1,000 ದಾಟಿದೆ.
ಮಣ್ಣಿನ ಕೆಲಸಕ್ಕೆ ಒಂದು ದರ, ಗೊಬ್ಬರದ ಕೆಲಸಕ್ಕೆ ಮತ್ತೊಂದು ದರ, ಗದ್ದೆ ಕೆಲಸಕ್ಕೆ ಮತ್ತೊಂದು ದರ, ಅಡಿಕೆ ಕೊಯ್ಲು ಮತ್ತು ಸಂಸ್ಕರಣೆಗೆ ಮತ್ತೊಂದು ದರ.
ಸಾಮಾನ್ಯ ಕೃಷಿ ಕೂಲಿ ದರವೇ ₹600ರಿಂದ ಆರಂಭವಾಗುವ ಪರಿಸ್ಥಿತಿ ಇದೆ.
ಸಣ್ಣಪುಟ್ಟ ಕೃಷಿ ಹಿಡುವಳಿದಾರರಿಗೆ ಇದು ದೊಡ್ಡ ಸವಾಲಾಗಿದೆ.
ಸ್ವತಃ ಕೃಷಿ ಕೆಲಸ ಮಾಡಲು ಸಾಧ್ಯವಾಗದವರು ಕೂಲಿ ಕಾರ್ಮಿಕರನ್ನು ಅವಲಂಬಿಸಲೇಬೇಕು. ಆದರೆ ಎಷ್ಟೇ ಹಣ ನೀಡಲು ಸಿದ್ಧರಿದ್ದರೂ, ಕೃಷಿಗೆ ಅಗತ್ಯವಿರುವ ಸಮಯದಲ್ಲಿ ಕಾರ್ಮಿಕರು ಸಿಗುವುದಿಲ್ಲ.
ದೊಡ್ಡ ಜಮೀನ್ದಾರರು ಕಾರ್ಮಿಕರಿಗೆ ಮುಂಗಡ ಹಣ ಅಥವಾ ಇತರ ರೀತಿಯ ವ್ಯವಸ್ಥೆ ಮಾಡಿ ವರ್ಷಪೂರ್ತಿ ಕೆಲಸ ನೀಡುವ ಮೂಲಕ ಕಾರ್ಮಿಕರನ್ನು ತಮ್ಮಲ್ಲಿ ಉಳಿಸಿಕೊಳ್ಳುತ್ತಾರೆ.
ಹಾಗಾದರೆ ಸಣ್ಣ ರೈತರು ಕೃಷಿ ಕೆಲಸ ಮಾಡಿಸುವುದು ಹೇಗೆ?
ಕೃಷಿ ಕಾರ್ಮಿಕರು ನಮ್ಮ ಕೃಷಿಗೆ ಬೆನ್ನೆಲುಬು. ಅವರು ದುಡಿಯುತ್ತಾರೆ; ಅವರ ಕುಟುಂಬದ ಬದುಕಿಗೆ ಸಂಬಳವೇ ಆಧಾರ. ಅವರಿಗೆ ಉತ್ತಮ ವೇತನ ದೊರೆಯಬೇಕು. ಇದರಲ್ಲಿ ಎರಡು ಮಾತಿಲ್ಲ.
ಆದರೆ ರೈತನ ಪರಿಸ್ಥಿತಿಯನ್ನೂ ಯಾರು ಕೇಳಬೇಕು?
ಬೆಳೆ ಹಾನಿಯಾದಾಗ ರೈತನನ್ನು ಕೇಳುವವರು ಯಾರು?
ಮಳೆ ಕೈಕೊಟ್ಟಾಗ?
ಅತಿಮಳೆಯಿಂದ ಬೆಳೆ ಕೊಳೆತಾಗ?
ರೋಗ–ಕೀಟಗಳಿಂದ ನಷ್ಟವಾದಾಗ?
ಮಾರುಕಟ್ಟೆ ದರ ಕುಸಿದಾಗ?
ಸಂಬಳ ನಿಗದಿ ಮಾಡುವಾಗ ಕಾರ್ಮಿಕನ ಮಾತು ಮುಖ್ಯ. ಆದರೆ ಸಂಬಳ ಕೊಡುವ ರೈತನ ಸಾಮರ್ಥ್ಯಕ್ಕೆ ಪಾತ್ರವೇ ಇಲ್ಲವೇ?
“ಸಂಬಳ ಇಷ್ಟು” ಎಂದು ಒಂದು ಕಡೆಯಿಂದ ನಿರ್ಧರಿಸುವುದು ಮಾತ್ರವೇ ನ್ಯಾಯವೇ?
ಈ ಪ್ರಶ್ನೆ ಕೃಷಿ ಕಾರ್ಮಿಕರ ವಿರುದ್ಧವಲ್ಲ. ಕೃಷಿ ವ್ಯವಸ್ಥೆಯಲ್ಲಿ ರೈತ ಮತ್ತು ಕಾರ್ಮಿಕ ಇಬ್ಬರ ಹಿತವನ್ನೂ ಸಮತೋಲನಗೊಳಿಸುವ ವ್ಯವಸ್ಥೆ ಬೇಕು ಎಂಬುದಷ್ಟೇ.
ಇಂದು ಮಲೆನಾಡಿನಲ್ಲಿ ಬಯಲುಸೀಮೆ ಮಾತ್ರವಲ್ಲದೆ ಉತ್ತರ ಮತ್ತು ಈಶಾನ್ಯ ರಾಜ್ಯಗಳಿಂದಲೂ ಕೃಷಿ ಕೂಲಿ ಕಾರ್ಮಿಕರು ಲಭ್ಯರಾಗುತ್ತಿದ್ದಾರೆ. ಈ ಹೊರಗಿನ ಕಾರ್ಮಿಕರ ಲಭ್ಯತೆಯೂ ಮಲೆನಾಡಿನ ಕೃಷಿ ಕೂಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
ಒಂದು ವೇಳೆ ಅಕಸ್ಮಾತ್ತಾಗಿ ಹೊರಗಿನಿಂದ ಮಲೆನಾಡಿಗೆ ಕೃಷಿ ಕೂಲಿ ಕಾರ್ಮಿಕರು ಬರುವುದೇ ನಿಂತುಹೋದರೆ, ಇಂದಿನ ಕೂಲಿ ದರ ಎಷ್ಟಾಗಬಹುದು?
ಐದು ಸಾವಿರ ರೂಪಾಯಿಯನ್ನೂ ದಾಟುತ್ತಿತ್ತೇ?
ಬಹುಶಃ ಆಗ ಮಲೆನಾಡಿನ ರೈತರು ಕೃಷಿ ಕೂಲಿ ಕಾರ್ಮಿಕರನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿ, ಸರದಿ ಬರುವವರೆಗೆ ಕಾಯಬೇಕಾದ ಪರಿಸ್ಥಿತಿಯೂ ಬಂದರೂ ಆಶ್ಚರ್ಯವಿಲ್ಲ!
ವಿಷಯ ಹಾಸ್ಯವಲ್ಲ.
ಒಂದು ಕಡೆ ಉತ್ಪನ್ನದ ಬೆಲೆ ರೈತನ ಕೈಯಲ್ಲಿಲ್ಲ. ಇನ್ನೊಂದು ಕಡೆ ಉತ್ಪಾದನಾ ವೆಚ್ಚವೂ ರೈತನ ಕೈಯಲ್ಲಿಲ್ಲ. ಗೊಬ್ಬರ, ಔಷಧಿ, ವಿದ್ಯುತ್, ಯಂತ್ರೋಪಕರಣ, ಕಾರ್ಮಿಕರ ಕೂಲಿ—ಎಲ್ಲವೂ ಹೆಚ್ಚುತ್ತಿವೆ.
ಆದರೆ ರೈತ ಬೆಳೆದ ಉತ್ಪನ್ನದ ಬೆಲೆ?
ಅದು ಮಾರುಕಟ್ಟೆ ನಿರ್ಧರಿಸುತ್ತದೆ.
ಹೀಗಿರುವಾಗ ರೈತನ ಕೃಷಿ ಉಳಿಯಬೇಕಾದರೆ, ರೈತನ ಆದಾಯ ಮತ್ತು ಉತ್ಪಾದನಾ ವೆಚ್ಚದ ನಡುವಿನ ಸಮತೋಲನವನ್ನು ಯಾರು ಕಾಪಾಡಬೇಕು?
ಕೃಷಿ ಕಾರ್ಮಿಕರ ಹಿತ ಕಾಯುವುದು ಎಷ್ಟು ಮುಖ್ಯವೋ, ಕೃಷಿ ಮಾಡುವ ರೈತನ ಹಿತ ಕಾಯುವುದೂ ಅಷ್ಟೇ ಮುಖ್ಯ.
ಕಾರ್ಮಿಕನಿಗೆ ನ್ಯಾಯಯುತ ಕೂಲಿ ಬೇಕು. ರೈತನಿಗೆ ನ್ಯಾಯಯುತ ಬೆಲೆ ಬೇಕು.
ಈ ಎರಡನ್ನೂ ಸಮತೋಲನಗೊಳಿಸುವ ವ್ಯವಸ್ಥೆಯೇ ಕೃಷಿಯ ಭವಿಷ್ಯವನ್ನು ಉಳಿಸಬಲ್ಲದು.
ಇಲ್ಲದಿದ್ದರೆ ಒಂದು ದಿನ ಕೃಷಿ ಉಳಿಯಬಹುದು, ಬೆಳೆ ಉಳಿಯಬಹುದು; ಆದರೆ ಕೃಷಿ ಮಾಡುವ ರೈತನೇ ಉಳಿಯದ ಪರಿಸ್ಥಿತಿ ಬಂದರೆ?
ಇದು ಕೇವಲ ಅಡಿಕೆ ಬೆಳೆಗಾರನ ಪ್ರಶ್ನೆಯಲ್ಲ.
ಇದು ಕೃಷಿ ವ್ಯವಸ್ಥೆಯನ್ನೇ ಕಾಡುತ್ತಿರುವ ಪ್ರಶ್ನೆ.


