ಭಾರತದಲ್ಲಿ ಅಡಿಕೆ ಬೆಳೆ ವಿಸ್ತರಣೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ ವಿಪರೀತವಾಗಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಕರ್ನಾಟಕದ ಕರಾವಳಿ, ಮಲೆನಾಡು ಭಾಗ, ಕೇರಳದ ಕೆಲವು ಭಾಗ ಮಾತ್ರವಲ್ಲ ಈಗ ಬಯಲುಸೀಮೆಯಲ್ಲೂ ಅಡಿಕೆ ಬೆಳೆ ವಿಸ್ತರಣೆಯಾಗಿದೆ. ಸದ್ಯ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಅಡಿಕೆ ಬೆಳೆ ಬೆಳೆಯುತ್ತಿದೆ. ಅಂದಾಜಿನ ಪ್ರಕಾರ ಸುಮಾರು 9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಈಗ ಬೆಳೆಯಲಾಗುತ್ತಿದ್ದು , ಸುಮಾರು 18 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಇನ್ನಷ್ಟು ಉತ್ಪಾದನೆಯ ನಿರೀಕ್ಷೆ ಇದೆ. ಆದರೆ ಇಷ್ಟೆಲ್ಲಾ ಅಡಿಕೆ ಮಾರುಕಟ್ಟೆ ಎಲ್ಲಿ ..?…..ಮುಂದೆ ಓದಿ….
ಸುಮಾರು 5 ವರ್ಷಗಳ ಹಿಂದೆ ಅಡಿಕೆ ಬೇಡಿಕೆ ಹಾಗೂ ಪೂರೈಕೆಯ ವ್ಯತ್ಯಾಸವನ್ನು ಅಂದಾಜಿಸಲಾಗಿತ್ತು. ಆಗ ಸುಮಾರು 2 ಲಕ್ಷ ಟನ್ ಪೂರೈಕೆಯ ಕೊರತೆ ಇತ್ತು. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಪೂರೈಕೆ ಸಾಧ್ಯವಾಗಿರಲಿಲ್ಲ. ಅಡಿಕೆಯನ್ನು ಬಹುಪಾಲು ಜಗಿದು ಉಗಿಯಲು ಉಪಯೋಗಿಸುತ್ತಾರೆ. ಪಾನ್ ಬೀಡಾಗಳಲ್ಲಿ ಅಡಿಕೆಯ ಹೆಚ್ಚು ಬಳಕೆ. ಇತ್ತೀಚೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ ಅಧಿಕೃತವಾಗಿ ಸುಮಾರು 7000 ಪಾನ್ ಅಂಗಡಿಗಳು ಇವೆ.ಕಳೆದ ವರ್ಷದಿಂದ ಈ ವರ್ಷಕ್ಕೆ ಶೇ.7 ರಷ್ಟು ಪಾನ್ ಅಂಗಡಿಗಳು ಹೆಚ್ಚಾಗಿದೆ. ಇದೆಲ್ಲಾ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಮುಂದೆ ಬೆಳೆಯಬಹುದಾದ ಅಡಿಕೆ ಹಾಗೂ ಬೇಡಿಕೆಯನ್ನು ಗಮನಿಸಿದಾಗ ಅಡಿಕೆ ಪರ್ಯಾಯ ಮಾರುಕಟ್ಟೆ ವ್ಯವಸ್ಥೆಯನ್ನು ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಜಗಿಯಲೇ ಹೆಚ್ಚು ಬಳಕೆಯಾಗುವ ಕಾರಣದಿಂದ ಇಂತಹ ಮಾರುಕಟ್ಟೆಗೇ ಗಮನ ನೀಡಲೇಬೇಕಿದೆ.ದಕ್ಷಿಣ ಏಷ್ಯಾದಲ್ಲಿ 600 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಡಿಕೆ ಸೇವಿಸುತ್ತಾರೆ ಎಂದು ವರದಿಗಳು ಹೇಳುತ್ತದೆ.
ಇಂದು ಭಾರತದಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗುವ ವೇಗದಲ್ಲಿ ಅಡಿಕೆ ಬೆಳೆಗಳು ವಿವಿಧ ರೋಗದಿಂದ ನಾಶವಾಗುತ್ತಿಲ್ಲ. ಸುಳ್ಯದ ಸಂಪಾಜೆ ಹಾಗೂ ಆಸುಪಾಸಿನ ಕೆಲವು ಕಡೆ, ಶೃಂಗೇರಿ ಕೆಲವು ಕಡೆ ಹಾಗೂ ಇನ್ನೊಂದಿಷ್ಟು ಕಡೆ ಅಡಿಕೆ ಹಳದಿ ಎಲೆರೋಗದಿಂದ ನಾಶವಾಗುವುದು ಬಿಟ್ಟರೆ ಇತರ ಹಾನಿಗಳು ಕಡಿಮೆ. ಈಚೆಗೆ ಎಲೆಚುಕ್ಕಿ ರೋಗ ಸೇರಿದಂತೆ ಹೊಸ ಹೊಸ ರೋಗಗಳ ಕಾರಣದಿಂದ ಅಡಿಕೆ ತೋಟಗಳು ನಾಶವಾಗಿರುವುದು ಕಡಿಮೆ. ಅದೇ ವೇಳೆ ಹೆಚ್ಚು ಇಳುವರಿ ತೆಗೆಯುವ ವಿಧಾನಗಳ ಅಳವಡಿಕೆ ನಡೆಯುತ್ತಿದೆ. ವಾತಾವರಣದ ಉಷ್ಣತೆ ಏರಿಕೆ ಕಾರಣದಿಂದ ಇಳುವರಿ ಮೇಲೆ ಸ್ವಲ್ಪ ಪರಿಣಾಮ ಬೀರಿರುವುದು ನಿಜ. ಆದರೆ ಇದಕ್ಕಿಂತಲೂ ಮಿಗಿಲಾದ ಅಡಿಕೆ ಉತ್ಪಾದನೆ ಕೆಲವು ಸಮಯಗಳಲ್ಲಿ ಆಗಲಿದೆ. ಹೀಗಾಗಿ ಪರ್ಯಾಯ ದಾರಿಗಳ ಕಡೆಗೆ ಆಡಳಿತವೂ ಗಮನ ಹರಿಸಬೇಕಿದೆ.
ಈಚೆಗಿನ ಅಧ್ಯಯನದ ಪ್ರಕಾರ ಚೀನಾವು ಹೆಚ್ಚು ಅಡಿಕೆ ಬಳಕೆ ಮಾಡುತ್ತಿದೆ. ಅಡಿಕೆ ಹಾನಿಕಾರಕ ಎನ್ನುವುದಕ್ಕಿಂತಲೂ ಚೀನಾದಲ್ಲಿ ಅಡಿಕೆಯ ಆರೋಗ್ಯಕ್ಕೆ ಪೂರಕವಾದ ಅಂಶಗಳ ಕಡೆಗೆ ಗಮನಹರಿಸಲಾಗಿದೆ. ಮಿತವಾಗಿ ಅಡಿಕೆ ಸೇವನೆ ಆರೋಗ್ಯಕ್ಕೂ ಉತ್ತಮ ಎನ್ನುವ ಅಧ್ಯಯನಗಳಿಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಸದ್ಯ ಚೀನಾ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡುತ್ತಿದೆ. ಚೀನಾವು ಆಗ್ನೇಯ ಏಷ್ಯಾದ ಮಾರುಕಟ್ಟೆಗೆ ಚೀನಾ ಗಮನಹರಿಸಿದ್ದು ಅಡಿಕೆ ಆಮದು ಹೆಚ್ಚಿಸಿಕೊಂಡಿದೆ. ಚೀನಾ ಆಮದು ಕಾರಣದಿಂದ ವಿಯೆಟ್ನಾಂನಲ್ಲಿ, ಹಸಿ ಅಡಿಕೆಗಳ ಬೆಲೆ ಗರಿಷ್ಠ ಮಟ್ಟವನ್ನು ತಲುಪಿದೆ. ಕೇವಲ ಒಂದು ವರ್ಷದಲ್ಲಿ ಅಡಿಕೆ ಧಾರಣೆ ಹತ್ತು ಪಟ್ಟು ಹೆಚ್ಚಳವಾಗಿರುವುದರಿಂದ ಅನಿರೀಕ್ಷಿತವಾಗಿ ವಿಯೆಟ್ನಾಂ ರೈತರನ್ನು ಖುಷಿಯಾಗಿಸಿದೆ.
ಅಡಿಕೆ ಮಾರುಕಟ್ಟೆಯು ಈಗಿನ ಅಧ್ಯಯನದ ಪ್ರಕಾರ ಇನ್ನಷ್ಟು ವಿಸ್ತಾರವಾಗುತ್ತದೆ. ಬೆಲೆ ಕುಸಿತ, ಬೆಳೆ ವಿಸ್ತರಣೆ ಇದೆಲ್ಲಾ ಅಪವಾದಗಳ ನಡುವೆಯೂ ಜಾಗತಿಕವಾಗಿ ಅಡಿಕೆ ಮಾರುಕಟ್ಟೆಯ 2029 ರ ವೇಳೆ ಇನ್ನಷ್ಟು ವಿಸ್ತಾರವಾಗಲಿದ್ದು, ಇದರ ಆಧಾರದಲ್ಲಿಯೇ ಭಾರತದ ಹೊರತಾಗಿ ಇತರ ಕಡೆಗಳಲ್ಲಿ ಎಕರೆಗಟ್ಟಲೆ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ, ದೊಡ್ಡ ದೊಡ್ಡ ಕಂಪನಿಗಳು ಅಡಿಕೆ ಬೆಳೆ ವಿಸ್ತರಣೆಗೆ ಮುಂದಾಗಿವೆ. ಏಷ್ಯಾ-ಪೆಸಿಫಿಕ್ ಮತ್ತು ಆಫ್ರಿಕಾದಂತಹ ಉಷ್ಣವಲಯದ ಪ್ರದೇಶಗಳಲ್ಲಿ ಅಡಿಕೆ ವ್ಯಾಪಕವಾಗಿ ಬೆಳೆಸಲಾಗುತ್ತದೆ.
ಮ್ಯಾನ್ಮಾರ್‌ನಿಂದಲೂ ಚೀನಾ ಅಡಿಕೆ ಖರೀದಿಗೆ ಮುಂದಾಗಿದೆ. ಹೀಗಾಗಿ ಅಲ್ಲೂ ಅಡಿಕೆ ಧಾರಣೆ ಏರಿಕೆ ಕಾಣುತ್ತಿದೆ. ಚೀನಾದಿಂದ ಖರೀದಿದಾರರು ಸಾಮಾನ್ಯವಾಗಿ ಮಾರ್ಚ್‌ನಿಂದ ಆಗಸ್ಟ್‌ವರೆಗೆ ಅಡಿಕೆ ಖರೀದಿಸಲು ನೇರವಾಗಿ ಮ್ಯಾನ್ಮಾರ್ =ಗೆ ತೆರಳುತ್ತಾರೆ. ಮ್ಯಾನ್ಮಾರ್‌ನಲ್ಲಿ ಅಡಿಕೆ ಬೆಲೆಗಳು ಕಳೆದ ಎರಡು ವರ್ಷಗಳಲ್ಲಿ 8-10 ಪಟ್ಟು ಹೆಚ್ಚಾಗಿದೆ, ರಫ್ತುಗಳು ಪ್ರಾಥಮಿಕವಾಗಿ ಹಿಂದಿನ ವರ್ಷಗಳಲ್ಲಿ ಬಾಂಗ್ಲಾದೇಶ, ಭಾರತ ಮತ್ತು ವಿಯೆಟ್ನಾಂಗೆ ಹೋಗುತ್ತವೆ. ಆದರೆ 2024 ರಲ್ಲಿ ಚೀನಾಕ್ಕೆ ಗಮನಾರ್ಹವಾಗಿ ಸಾಗಾಟವಾಗುತ್ತಿವೆ.
ಚೀನಾ ತನ್ನ ಅಡಿಕೆ ಆಮದುಗಳನ್ನು ಹೆಚ್ಚಿಸಿಕೊಳ್ಳಲು ಕಾರಣವಿದೆ. ಚೀನಾದ ಹೈನಾನ್ ಪ್ರದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಅಲ್ಲಿ ಹಳದಿ ಎಲೆರೋಗ ಹಾಗೂ ಇತರ ವೈರಸ್ ಬಾಧಿಸಿರುವ ಕಾರಣದಿಂದ ಅಡಿಕೆ ಇಳುವರಿ ಗಣನೀಯವಾಗಿ ಇಳಿಕೆಯಾಗಿದೆ. ಚೀನಾದ ಅಡಿಕೆಯಲ್ಲಿ 90% ಕ್ಕಿಂತ ಹೆಚ್ಚು ಹೈನಾನ್‌ನಿಂದ ಬರುತ್ತದೆ, ವಾನ್ನಿಂಗ್ ಕೂಡಾ ಅಡಿಕೆಯ ಪ್ರಮುಖ ಉತ್ಪಾದನಾ ಪ್ರದೇಶ. ಅಲ್ಲಿ ಹಳದಿ ಎಲೆರೋಗದಿಂದ ಅಡಿಕೆ ನಾಶವಾಗುತ್ತಿದೆ.ಹೈನಾನ್‌ನಲ್ಲಿರುವ ಸುಮಾರು 80% ಅಡಿಕೆ ಮರಗಳು ಸೋಂಕಿತವಾಗಿವೆ. ಚೀನಾ ದೇಶದಾದ್ಯಂತ ತಜ್ಞರು ಹಳದಿ ಎಲೆರೋಗ ನಿಯಂತ್ರಣಕ್ಕೆ ಹಾಗೂ ಔಷಧಿಗೆ ಅಡಿಕೆ ತೋಟಗಳಿಗೆ ಪದೇ ಪದೇ ಭೇಟಿ ನೀಡಿದ್ದಾರೆ, ಆದರೆ ಎಲ್ಲಾ ಪ್ರಯತ್ನಗಳು ಕನಿಷ್ಠ ಫಲಿತಾಂಶಗಳನ್ನು ನೀಡಿವೆ. ಹೀಗಾಗಿ ಹೆಚ್ಚಿನ ರೈತರು ನಿರಾಶೆಗೊಂಡಿದ್ದಾರೆ ಹಾಗೂ ಅಡಿಕೆಯ ಪರ್ಯಾಯದ ಬಗ್ಗೆ ಹೆಜ್ಜೆ ಹಾಕಿದ್ದಾರೆ. ಅನೇಕರು ಈಗಾಗಲೇ ಲಿಚಿ ಮತ್ತು ಪ್ಯಾಶನ್ ಫ್ರುಟ್ ಸೇರಿದಂತೆ ಇತರ ಬೆಳೆಗಳಿಗೆ ಬದಲಾಯಿಸಲು ಪ್ರಾರಂಭಿಸಿದ್ದಾರೆ.
ಆದರೆ ಚೀನಾದಲ್ಲಿ ಅಡಿಕೆಗೆ ಸಂಬಂಧಿಸಿದ ಹಲವು ಉದ್ಯಮಗಳು ಗಟ್ಟಿಯಾಗಿ ಬೆಳೆದಿವೆ. ಅವರಿಗೆ ಅಡಿಕೆಯ ಆವಶ್ಯಕತೆ ಇದೆ. ಚೀನಾದಲ್ಲಿ,ಅಡಿಕೆ ಕ್ಯಾಂಡಿಯನ್ನು ಉತ್ಪಾದಿಸಲು ಆರಂಭಿಸಲಾಗಿದೆ, ಅದಕ್ಕೆ ಬೇಡಿಕೆಯೂ ಇದೆ. ಈ ಕ್ಯಾಂಡಿ ದೇಹವನ್ನು ಬೆಚ್ಚಗಿಡಲು ಸೇವಿಸಲಾಗುತ್ತದೆ. ಔಷಧೀಯ ಗುಣಗಳ ಬಗ್ಗೆಯೂ ಹೇಳಲಾಗಿದೆ.
ಚೀನಾದ ಹೈನಾನ್‌ನ ಅಡಿಕೆ ಉತ್ಪಾದನೆಯು ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಕಾರಣ, ಹುನಾನ್‌ನಲ್ಲಿನ ತಯಾರಕರು ಕಚ್ಚಾ ಸಾಮಗ್ರಿಗಳಿಗಾಗಿ ಮುಗಿಬಿದ್ದಿದ್ದಾರೆ. ಹೀಗಾಗಿ ಇತರ ದೇಶಗಳ ಮಾರುಕಟ್ಟೆ ಕಡೆಗೆ ಗಮನಹರಿಸಿದ್ದಾರೆ. ಚೀನಾ ಈಗಾಗಲೇ ವಿಯೆಟ್ನಾಂ, ಮ್ಯಾನ್ಮಾರ್ ಕಡೆಗೆ ಗಮನಹರಿಸಿದೆ.
ಅಡಿಕೆ ಬೆಳೆಯುವ ಪ್ರಮುಖ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸಾಲಿನಲ್ಲಿದೆ. ಉಳಿದಂತೆ ಬಾಂಗ್ಲಾದೇಶ, ಮ್ಯಾನ್ಮಾರ್, ಇಂಡೋನೇಷ್ಯಾ, ಚೀನಾ, ತೈವಾನ್, ಶ್ರೀಲಂಕಾ, ಥೈಲ್ಯಾಂಡ್ ಮತ್ತು ನೇಪಾಳವನ್ನು ಕೂಡಾ ಅಡಿಕೆ-ಉತ್ಪಾದನಾ ದೇಶಗಳು ಎಂದು ಹೇಳಲಾಗುತ್ತದೆ.ಆದರೆ ಚೀನಾವು ಭಾರತವನ್ನು ಹೊರತುಪಡಿಸಿ ಇತರ ಕಡೆಗಳಿಂದ ಆಮದು ಬಗ್ಗೆ ಪ್ರಯತ್ನ ಮಾಡಿದೆ.
ಭಾರತದೊಂದಿಗೆ ಕಡಿಮೆ ಅನುಕೂಲಕರ ಸಂಬಂಧಗಳ ಕಾರಣ, ಬೆಲೆ ಮತ್ತು ಸಾಗಾಟದ ಕಾರಣದಿಂದ ಚೀನಾದ ವ್ಯಾಪಾರಿಗಳು ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಆಗ್ನೇಯ ಏಷ್ಯಾಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸದ್ಯ ವಿಯೆಟ್ನಾಂ ಕೂಡಾ ಅಡಿಕೆ ಬೆಳೆಯುವ ದೊಡ್ಡ ಪ್ರದೇಶಗಳಲ್ಲಿ ಒಂದಾಗಿದೆ. ಹೀಗಾಗಿ ಚೀನಾ ಆ ಕಡೆಗೆ ದೃಷ್ಟಿ ಇರಿಸಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಅಡಿಕೆಗಳನ್ನು ಎಂದಿಗೂ ಅಭಿವೃದ್ಧಿಯ ಪ್ರಮುಖ ಬೆಳೆ ಎಂದು ಪರಿಗಣಿಸಲಾಗಿಲ್ಲ.
ಚೀನಾದಲ್ಲಿ ಅಡಿಕೆ ಈ ಬಾರಿ ಇನ್ನಷ್ಟು ಕಡಿಮೆ ಪೂರೈಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಅಲ್ಲಿನ ಉದ್ಯಮಗಳು ಆಮದು ಕಡೆಗೆ ಹೆಚ್ಚಿನ ಗಮನಹರಿಸುತ್ತಾರೆ. ಚೀನೀ ವ್ಯಾಪಾರಿಗಳು ವಿದೇಶದಿಂದ ಆಮದು ಮಾಡಿದ ಸರಕುಗಳನ್ನು ಪಡೆಯಲು ಮುಂದೆ ಬರುವ ನಿರೀಕ್ಷೆ ಇದೆ. ವಿಶೇಷವಾಗಿ ಮುಂಬರುವ ಚಳಿಗಾಲದಲ್ಲಿ ಬೇಡಿಕೆ ನಿರೀಕ್ಷೆ ಇದೆ.
ಸದ್ಯ ಭಾರತವು ಈ ಅವಕಾಶಗಳನ್ನು ಬಳಸಿಕೊಳ್ಳಲು ಶಕ್ತವಾಗಿದೆಯೇ ಎನ್ನುವುದು ಅಡಿಕೆ ಬೆಳೆಗಾರರ ಮುಂದಿರುವ ದೊಡ್ಡ ಪ್ರಶ್ನೆ. ಚೀನಾಕ್ಕೆ ಭಾರತದಿಂದ ಅಡಿಕೆ ರಫ್ತು ಮಾಡಲು ಅವಕಾಶಗಳು ಇದೆಯೇ, ಸೃಷ್ಟಿ ಮಾಡಲು ಸಾಧ್ಯ ಇದೆಯೇ ಎನ್ನುವ ಪ್ರಶ್ನೆ ಇದೆ. ಒಂದು ವೇಳೆ ಈ ಅವಕಾಶಗಳು ಲಭ್ಯವಾದರೆ ಭಾರತದಲ್ಲಿ ಅಡಿಕೆ ಬೆಳೆಗಾರರಿಗೆ ಸದ್ಯದ ಕೆಲವು ವರ್ಷಗಳ ಮಟ್ಟಿಗೆ ಧಾರಣೆ ಇಳಿಕೆಯ ಆತಂಕವಿಲ್ಲ.
ಅಡಿಕೆ ಕೃಷಿ ವಿಸ್ತರಣೆಯಲ್ಲಿ ವಿಯೆಟ್ನಾಂ ಮತ್ತು ಮ್ಯಾನ್ಮಾರ್‌ನ ರೈತರು ತೊಡಗಿದರೂ ಮುಂದಿನ ಐದು ವರ್ಷದವರೆಗೆ ಆತಂಕವಿಲ್ಲ. ಒಂದು ವೇಳೆ ಚೀನಾ ಅಡಿಕೆ ಹಳದಿ ಎಲೆರೋಗ ನಿವಾರಣೆಯಲ್ಲಿ ಯಶಸ್ಸು ಸಾಧಿಸಿದರೆ ಮಾತ್ರಾ ಅಡಿಕೆ ಆಮದು ಸ್ಥಗಿತಗೊಳಿಸಬಹುದೇ ಹೊರತು ಇಲ್ಲದಿದ್ದರೆ ಅಡಿಕೆ ಬೇಡಿಕೆ ನಿರಂತರವಾಗಲಿದೆ.
The cultivation of arecanut in India has seen a significant increase in recent years. Over the past two years, there has been a surplus in arecanut production, with expansion not only in the coastal regions of Karnataka, hilly areas, and some parts of Kerala, but also in the plains. Additionally, cultivation of arecanut has expanded to include regions in Tamil Nadu and Andhra Pradesh. The question now arises, where are all these arecanut markets located?
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…