ಇಂಡೋನೇಷಿಯಾದಿಂದ ಭಾರತಕ್ಕೆ ಆಮದು ಮಾಡಲಾದ ಕಳಪೆ ಗುಣಮಟ್ಟದ ಅಡಿಕೆಯನ್ನು ನಿಯಮ ಉಲ್ಲಂಘನೆ ಮಾಡಿ ಹಾಗೂ ಕಳಪೆ ಗುಣಮಟ್ಟದ ಶಂಕೆಯ ಹಿನ್ನೆಲೆಯಲ್ಲಿ ನಾಗಪುರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಭಾರತದ ಕಂದಾಯ ಗುಪ್ತಚರ ನಿರ್ದೇಶಾಲಯ (DRI) ಮತ್ತು ಆದಾಯ ತೆರಿಗೆ ಇಲಾಖೆಯ ತನಿಖೆಯ ಮುಂದುವರಿದ ಭಾಗವಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಆಡಳಿತ (FDA) ತಂಡವು ನಾಗಪುರದ ವಿವಿಧ ಪ್ರದೇಶಗಳಲ್ಲಿ 10 ಅಡಿಕೆ ವ್ಯಾಪಾರಿಗಳ ಗೋದಾಮು ಮೇಲೆ ದಾಳಿ ನಡೆಸಿದ್ದು, ಸುಮಾರು ₹4 ಕೋಟಿ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆದಿದೆ.
ಕೆಲವು ದಿನಗಳ ಹಿಂದೆ ಇಂಡೋನೇಷಿಯಾದಿಂದ ನಿಯಮ ಉಲ್ಲಂಘಿಸಿ ಅಡಿಕೆ ಆಮದು ಮಾಡಲಾಗಿದೆ ಎಂಬ ಮಾಹಿತಿ ಆಧರಿಸಿ DRI ತನಿಖೆ ಆರಂಭಿಸಿತ್ತು. ತನಿಖೆ ವೇಳೆ ತೆರಿಗೆ ತಪ್ಪಿಸುವಿಕೆ, ನಕಲಿ ದಾಖಲೆಗಳ ಬಳಕೆ ಹಾಗೂ ಮೌಲ್ಯ ಕಡಿಮೆ ತೋರಿಸಿ ಅಡಿಕೆ ಸಾಗಾಟ ಸೇರಿದಂತೆ ಹಲವು ಅಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ನಂತರ ಆದಾಯ ತೆರಿಗೆ ಇಲಾಖೆ ಕೂಡ ಸಂಬಂಧಿತ ವ್ಯಾಪಾರಿಗಳ ಲೆಕ್ಕಪತ್ರಗಳ ಪರಿಶೀಲನೆ ಕೈಗೊಂಡಿತ್ತು. ಇದರ ಮುಂದುವರಿದ ಭಾಗವಾಗಿ FDA ಆಹಾರ ಸುರಕ್ಷತೆ ದೃಷ್ಟಿಯಿಂದ ದಾಳಿ ಆರಂಭಿಸಿದೆ. ಅಡಿಕೆ ಕೂಡಾ ಕಳಪೆ ಎಂದು ವರದಿಯಾಗಿತ್ತು.
ಜನವರಿ 19ರಂದು ನಾಗಪುರದ ಕಲ್ಮನಾ ಪ್ರದೇಶದಲ್ಲಿರುವ ಎರಡು ಗೋದಾಮುಗಳಿಂದ ಸುಮಾರು 2 ಕೋಟಿ ಮೌಲ್ಯದ ಅಡಿಕೆ ವಶಕ್ಕೆ ಪಡೆದರೆ, ಜನವರಿ 20 ಹಾಗೂ 21ರಂದು ಕೂಡಾ ದಾಳಿ ನಡೆಸಲಾಗಿತ್ತು. ಈ ಸಂದರ್ಭ ಸುಮಾರು 2 ಕೋಟಿ ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿತ್ತು ಎಂದು ವರದಿಯಾಗಿದೆ. ಈ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
FDA ನಾಗಪುರ ವಿಭಾಗದ ಸಹ ಆಯುಕ್ತ ಕೆ.ಆರ್. ಜಯ್‌ಪುರ್ಕರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, “ಮುಂಬೈ ಹಾಗೂ ನಾಗಪುರ ಪ್ರದೇಶಗಳಿಗೆ ಕಳಪೆ ಗುಣಮಟ್ಟದ ಅಡಿಕೆ ಬಂದಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಲಾಗಿದೆ. ವಶಪಡಿಸಿಕೊಂಡ ಅಡಿಕೆಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸಲಾಗುವುದು. ಆಹಾರ ಗುಣಮಟ್ಟಕ್ಕೆ ಸೂಕ್ತವಲ್ಲ ಅಥವಾ ಮಾನವ ಸೇವನೆಗೆ ಯೋಗ್ಯವಲ್ಲ ಎಂದು ದೃಢಪಟ್ಟರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.



