ಮತ್ತೆ ಅಡಿಕೆ ಆಮದು ತಡೆಗೆ ಪೊಲೀಸರು ಸಜ್ಜಾಗಿದ್ದಾರೆ.ಅಕ್ರಮವಾಗಿ ಅಡಿಕೆ ಮಾಡುವುದನ್ನು ಮಿಜೋರಾಂ ಹಾಗೂ ಗುವಾಹಟಿ ರೈಲು ನಿಲ್ದಾಣದಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಎರಡೂ ಕಡೆ ಸೇರಿ ಸುಮಾರು 220 ಚೀಲ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಿಜೋರಾಂ ಪೊಲೀಸರು ಲಾರಿಗಳಲ್ಲಿ ಅಕ್ರಮ ಬರ್ಮಾ ಅಡಿಕೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಮಾಡಿ ವಾಹನ ಸಹಿತ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.ಮಿಜೋರಾಂನ ಮಮಿತ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 32 ಲಕ್ಷ ರೂ. ಮೌಲ್ಯದ ಅಕ್ರಮ ಬರ್ಮಾ ಅಡಿಕೆ ವಶಪಡಿಸಿಕೊಂಡಿದ್ದಾರೆ. ಮಿಜೋರಾಂನ ಮಮಿತ್ ಜಿಲ್ಲೆಯ ಕೌರ್ತಾಹ್ ಉಪವಿಭಾಗದ ಕಡೆಗೆ ಅಡಿಕೆ ರವಾನೆಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.ಅಡಿಕೆ ಸಾಗಿಸುತ್ತಿದ್ದ ಒಟ್ಟು ಆರು ವಾಹನಗಳನ್ನು ಮಿಜೋರಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಲ್ಲಿ ಒಟ್ಟು 187 ಚೀಲಗಳಲ್ಲಿ ಅಡಿಕೆ ಪತ್ತೆಯಾಗಿತ್ತು.
ಇದೇ ವೇಳೆ ಗುವಾಹಟಿ ರೈಲು ನಿಲ್ದಾಣದಲ್ಲಿ 50 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಬರ್ಮಾ ಅಡಿಕೆಯನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜಧಾನಿ ಎಕ್ಸ್‌ಪ್ರೆಸ್‌ನ ಒಂದು ಬೋಗಿಯಿಂದ ಒಟ್ಟು 40 ಗೋಣಿಚೀಲಗಳು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಅಡಿಕೆಯನ್ನು ದಿಮಾಪುರದಿಂದ ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಇದೆರಡು ದೊಡ್ಡ ಪ್ರಕರಣಗಳಾದರೆ, ಇನ್ನಷ್ಟು ಅಡಿಕೆ ಕಳ್ಳಸಾಗಾಣಿಕೆಯ ಪ್ರಯತ್ನಗಳು ನಡೆಯುತ್ತಲೇ ಇವೆ. ಇದೀಗ ಮತ್ತೆ ಗಡಿ ಭದ್ರತೆ ಹಾಗೂ ಪೊಲೀಸರು ಅಡಿಕೆ ಕಳ್ಳ ಸಾಗಾಣಿಕೆಯನ್ನು ತಡೆಯುತ್ತಿದ್ದಾರೆ. ಅಸ್ಸಾಂ, ಮಿಜೋರಾಂ ಮೂಲಕ ಅಡಿಕೆ ಕಳ್ಳಸಾಗಾಣಿಕೆಯಾಗಿ ಗುಜರಾತ್ ಕಡೆಗೆ ಅಡಿಕೆ ಸಾಗಾಣಿಕೆಯಾಗುತ್ತದೆ.