ಅಡಿಕೆ ಹಳದಿ ಎಲೆರೋಗ | ರೋಗ ವಿಸ್ತರಣೆ ತಡೆಗೆ ಪ್ಲಾಸ್ಟಿಕ್‌ ಹೊದಿಕೆ | ಮರ್ಕಂಜದಲ್ಲಿ ವಿಜ್ಞಾನಿಗಳಿಂದ ಅಧ್ಯಯನ |

September 29, 2021
8:51 PM

ಅಡಿಕೆ ಹಳದಿ ಎಲೆ ರೋಗ ವಿಸ್ತರಣೆ ತಡೆಗೆ ಪ್ಲಾಸ್ಟಿಕ್‌ ಹೊದಿಕೆಯಿಂದ ತಡೆಯಾಗಬಹುದೇ? ಹೀಗೊಂದು ಪ್ರಶ್ನೆ ಹಲವು ಸಮಯಗಳಿಂದ ಕಾಡುತ್ತಿತ್ತು. ಈ ಬಗ್ಗೆ ಈಚೆಗೆ ಸಿಪಿಸಿಆರ್‌ಐ ಮಾಜಿ ನಿರ್ದೇಶಕ ಡಾ.ಚೌಡಪ್ಪ ಅವರು ಹೇಳಿಕೆಯನ್ನೂ ನೀಡಿದ್ದರು. ಇದೀಗ ಪ್ಲಾಸ್ಟಿಕ್‌ ಹೊದಿಕೆ ಹಾಕಿರುವ ಈ ತೋಟದಲ್ಲಿ ವಿಸ್ತರಣೆ ತಡೆಯಾಗಿದೆ ಎಂದು ಕೃಷಿಕ ರಾಘವ ಹೇಳುತ್ತಾರೆ. ಆದರೆ ಆ ಪ್ಲಾಸ್ಟಿಕ್‌ ವಿಲೇವಾರಿ, ತ್ಯಾಜ್ಯ ನಿರ್ವಹಣೆ ಭವಿಷ್ಯದಲ್ಲಿ ಬಹುದೊಡ್ಡ ಸಮಸ್ಯೆಯಾಗಬಹುದು ಎನ್ನುವ ಅಭಿಪ್ರಾಯ ಇದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಮರ್ಕಂಜ ಪ್ರದೇಶದಲ್ಲಿ ಕಂಡುಬಂದಿದ್ದ ಅಡಿಕೆ ಹಳದಿ ಎಲೆ ರೋಗ ಈಗ ಹಲವು ಕಡೆಗಳಲ್ಲಿ ಕಂಡುಬಂದಿದೆ. ಇದಕ್ಕಾಗಿ ಹಲವು ವರ್ಷಗಳಿಂದ ವಿವಿಧ ಅಧ್ಯಯನ, ಸಂಶೋಧನೆ ನಡೆಯುತ್ತಲೇ ಇದೆ. ಖಚಿತವಾದ ಪರಿಹಾರ ಇದುವರೆಗೂ ಸಾಧ್ಯವಾಗಿಲ್ಲ. ಆದರೆ ಹಲವು ಮಾದರಿಗಳ ಬಗ್ಗೆ ವಿಜ್ಞಾನಿಗಳು ಹೇಳಿದ್ದಾರೆ. ಈ ನೆಲೆಯಲ್ಲಿ ಸಂಶೋಧನೆಗಳಿಗೆ ಸಾಕಷ್ಟು ಅನುದಾನಗಳು, ಸರಕಾರದ ಸಹಾಯವೂ ಬೇಕಾಗಿದೆ. ಈ ನಡುವೆಯೇ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಕಳೆದ 5 ವರ್ಷದ ಹಿಂದೆ ಪ್ರಾಯೋಗಿಕವಾದ ಕೆಲವು ಅಧ್ಯಯನ ನಡೆಸಿತ್ತು. ಅದರಲ್ಲಿ ಅಡಿಕೆ ಹಳದಿ ಎಲೆ ರೋಗದ ತೋಟದಲ್ಲಿ ಪ್ಲಾಸ್ಟಿಕ್‌ ಹೊದಿಕೆ ಹಾಕುವುದು ಒಂದು ವಿಧಾನ. ಹಳದಿ ಎಲೆ ರೋಗ ಪ್ರಾರಂಭಿಕ ಹಂತದಲ್ಲಿದ್ದರೆ ಪ್ಲಾಸ್ಟಿಕ್‌ ಹೊದಿಕೆಯ ವಿಧಾನ ಹೆಚ್ಚು ಪರಿಣಾಮಕಾರಿಯಾಗಿದೆ.

ಮಳೆಗಾಲದ ಅವಧಿಗೆ ಅಂದರೆ ಜೂನ್‌ ತಿಂಗಳಲ್ಲಿ ಮಣ್ಣಿಗೆ ನೀರು ಹರಿಯದಂತೆ ಇಡೀ ತೋಟಕ್ಕೆ ಪ್ಲಾಸ್ಟಿಕ್‌ ಹಾಕುವುದು, ಆ ಬಳಿಕ ಮಳೆಗಾಲದ ನಂತರ ಪ್ಲಾಸ್ಟಿಕ್‌ ತೆಗೆಯುವುದು. ಪ್ರಾಯೋಗಿಕವಾಗಿ ಹಾಗೂ ಅಧ್ಯಯನದ ನೆಲೆಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಡಿಕೆ ಹಳದಿ ಎಲೆ ರೋಗ ಇರುವ ಕಡೆಗಳಲ್ಲಿ ಎರಡು ತೋಟಗಳಲ್ಲಿ ಈ ಬಗ್ಗೆ ಕಳೆದ ಐದು ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದಾರೆ. ಈ ಬಗ್ಗೆ ಈಚೆಗೆ ಸಿಪಿಸಿಆರ್‌ಐ ಮಾಜಿ ನಿರ್ದೇಶಕ ಡಾ.ಚೌಡಪ್ಪ ಅವರು ಹೇಳಿಕೆಯನ್ನೂ ನೀಡಿದ್ದರು. ಒಟ್ಟು 5 ತೋಟಗಳಲ್ಲಿ ಈ ಪ್ರಯೋಗ ನಡೆದಿದೆ. ಸುಳ್ಯ ತಾಲೂಕಿನ ಮರ್ಕಂಜದಲ್ಲಿ 2 ತೋಟ ಹಾಗೂ ಕಲ್ಮಕಾರಿನಲ್ಲಿ ಒಂದು ತೋಟ ಮತ್ತು ಶೃಂಗೇರಿಯಲ್ಲಿ 2 ತೋಟದಲ್ಲಿ ಈ ಪ್ರಯೋಗ ಮಾಡಲಾಗಿದೆ.

ರಾಘವ, ಹರ್ಲಡ್ಕ

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಹರ್ಲಡ್ಕ ರಾಘವ ಹಾಗೂ ಇನ್ನೊಂದು ತೋಟದಲ್ಲಿನ ಹಳದಿ ಎಲೆ ರೋಗದ ತೀವ್ರತೆಯನ್ನು ಸರ್ವೆ ಮೂಲಕ ಪತ್ತೆ ಮಾಡಿದ್ದರು. ಹೀಗಾಗಿ ಆ ತೋಟದ ಮಧ್ಯ ಭಾಗದಲ್ಲಿ 60 ಅಡಿಕೆ ಮರದ ಸುತ್ತ ಪ್ಲಾಸ್ಟಿಕ್‌ ಹೊದಿಕೆ ಹಾಕಿದ್ದರು. ಐದು ವರ್ಷಗಳ ಕಾಲ ನಿರ್ವಹಣೆ ಮಾಡಿ ಇದೀಗ ಆ ತೋಟದಲ್ಲಿ ಅಡಿಕೆ ಹಳದಿ ಎಲೆ ರೋಗ ವಿಸ್ತರಣೆಯ ಪ್ರಮಾಣ ಕಡಿಮೆ ಇದೆ ಎಂದು ಕೃಷಿಕ ರಾಘವ ಅವರು ಹೇಳುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಖಚಿತವಾದ ದಾಖಲೆ ಹಾಗೂ ಅಂಕಿ ಅಂಶಗಳ ಮೂಲಕ ವರದಿಯನ್ನು ಬಹಿರಂಗಪಡಿಸಬೇಕಿದೆ. ಅದರಲ್ಲಿ  ಮಣ್ಣಿನ ಪೋಷಕಾಂಶ ಸಹಿತ ಇತರ ಅಧ್ಯಯನ ನಡೆಯುತ್ತಿದೆ. ಆದರೆ ಮೇಲ್ನೋಟಕ್ಕೆ ಅಡಿಕೆ ಹಳದಿ ಎಲೆ ರೋಗ ವಿಸ್ತರಣೆಯಲ್ಲಿ  ತಡೆಯಾಗಿದೆ ಎಂಬುದು  ಕೃಷಿಕ ರಾಘವ ಅವರು ಅನುಭವ.

ಕಳೆದ ಹಲವಾರು ವರ್ಷಗಳಿಂದ ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು ಹಾಗೂ ಈಚೆಗೆ ಮರ್ಕಂಜ ಪ್ರದೇಶದಲ್ಲೂ ಅಡಿಕೆ ಹಳದಿ ಎಲೆ ರೋಗ ವ್ಯಾಪಕವಾಗಿದೆ. ಹೀಗಾಗಿ ಕೆಲವು ವರ್ಷಗಳ ಹಿಂದೆ ಇಲಾಖೆಗಳು ಸರ್ವೆ ಕಾರ್ಯ ನಡೆಸಿದ್ದರು. ಆ ಬಳಿಕ ನಮ್ಮ ಊರಿನಲ್ಲಿ ಪ್ರಾಯೋಗಿಕವಾಗಿ ಹಾಗೂ ಅಧ್ಯಯನದ ನೆಲೆಯಲ್ಲಿ ತೋಟಕ್ಕೆ ಪ್ಲಾಸ್ಟಿಕ್‌ ಹೊದಿಕೆ ಅಳವಡಿಕೆ ಮಾಡುವ ಬಗ್ಗೆ ಅಂದು ಸಿಪಿಸಿಆರ್‌ ಐ ವಿಜ್ಞಾನಿಗಳು  ಹೇಳಿದ್ದರು. ಇದೀಗ ಸುಮಾರು  5  ವರ್ಷಗಳ ಬಳಿಕ ಈ ತೋಟದಲ್ಲಿ  ಹಳದಿ ರೋಗ ವಿಸ್ತರಣೆ ಕಡಿಮೆ ಕಾಣುತ್ತಿದೆ. ಆದರೆ ಬೆಳೆಗಾರರಿಗೆ ಬೇಕಾದ್ದು ರೋಗ ನಿಯಂತ್ರಣ ಮಾತ್ರವಲ್ಲ, ರೋಗವೇ ಕಡಿಮೆ ಆಗುವ ತಂತ್ರಜ್ಞಾನ ಎಂದು  ಹೇಳುತ್ತಾರೆ ಮರ್ಕಂಜದ ನಿವಾಸಿ ಕೃಷಿಕ ರಮೇಶ್‌ ದೇಲಂಪಾಡಿ.

ಆದರೆ ಇಲ್ಲಿ ಸಮಸ್ಯೆಯಾಗುತ್ತಿರುವುದು ಪ್ಲಾಸ್ಟಿಕ್‌ ನಿರ್ವಹಣೆ. ಇಡೀ ತೋಟಕ್ಕೆ ಮಳೆಗಾಲದ ಮುನ್ನ ಪ್ಲಾಸ್ಟಿಕ್‌ ಹೊದಿಕೆ ಹಾಗೂ ಮಳೆಗಾಲದ  ನಂತರ ಪ್ಲಾಸ್ಟಿಕ್‌ ತೆಗೆಯುವುದು. ಆ ಪ್ಲಾಸ್ಟಿಕ್‌ ವಿಲೇವಾರಿ, ತ್ಯಾಜ್ಯ ನಿರ್ವಹಣೆ ಭವಿಷ್ಯದಲ್ಲಿ ಬಹುದೊಡ್ಡ ಸಮಸ್ಯೆಯಾಗಬಹುದು. ಒಂದು ಸಮಸ್ಯೆ ನಿವಾರಿಸಲು ಹೋಗಿ ಇನ್ನೊಂದು ಸಮಸ್ಯೆ ಎಳೆದಂತಾಗಬಹುದು. ಇಡೀ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಸಮಸ್ಯೆ ಕಾಡಬಹುದು ಎಂಬುದು  ಸದ್ಯದ ಅಭಿಪ್ರಾಯ.

ಈ ನಡುವೆಯೇ ಅಡಿಕೆ ಹಳದಿ ರೋಗ ಪರಿಹಾರ ಹಾಗೂ ನಿಯಂತ್ರಣದ ಬದಲಾಗಿ ರೋಗ ನಿರೋಧಕ ತಳಿ ಅಭಿವೃದ್ಧಿಯ ಸಾಧ್ಯತೆ ಈಗಿನ ಆಶಾವಾದದ ಬೆಳವಣಿಗೆ. ಎರಡು ದಿನಗಳ ಹಿಂದೆಯಷ್ಟೇ ಐಸಿಎಆರ್‌ ಈಚೆಗೆ ಅಭಿವೃದ್ಧಿ ಪಡಿಸಿದ ಸುಮಾರು 35 ರೋಗ ನಿರೋಧಕ ತಳಿಯನ್ನು ಬಿಡುಗಡೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಅಡಿಕೆ ಹಳದಿ ಎಲೆ ರೋಗದಲ್ಲೂ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವುದು  ಹಾಗೂ ಅದನ್ನು  ರೈತರು ಬೆಳೆದಲ್ಲಿ  ರೋಗ ನಿರೋಧಕ ಶಕ್ತಿಯುಳ್ಳ ಅಡಿಕೆ ಸಸಿಗಳನ್ನು ಪಡೆಯುವ ಸಾಧ್ಯತೆ ಹೆಚ್ಚು. ಈಗಾಗಲೇ ತೆಂಗಿನ ತಳಿ ಅಭಿವೃದ್ಧಿಯಲ್ಲಿ  ಈ ಕೆಲಸ ನಡೆಯುತ್ತಿದೆ. ಈ ಸಂಬಂಧ ಈ ಹಿಂದೆಯೇ ಅಧ್ಯಯನ ನಡೆದಿದ್ದರೂ ಅನುಷ್ಟಾನ ಮಾತ್ರಾ ಆಗಿರಲಿಲ್ಲ.

 


ಏನಿದು ಹೊಸ ವಿಧಾನ

ಸುಮಾರು  25 ವರ್ಷಕ್ಕಿಂತಲೂ ಹಳೆಯ, ಸಂಪೂರ್ಣವಾಗಿ ಅಡಿಕೆ ಹಳದಿ ಎಲೆ ರೋಗ ಬಾಧಿತ ಅಡಿಕೆ ತೋಟದಲ್ಲಿ ಈಗಲೂ ಹಸಿರಾಗಿರುವ ಅಡಿಕೆ ಮರಗಳನ್ನು ಆಯ್ಕೆ ಮಾಡಿ ಅದರಲ್ಲಿ ಕೃತಕವಾಗಿ ಪರಾಗಸ್ಪರ್ಶ ಮಾಡಿ ಅದರಲ್ಲಿ ಲಭ್ಯವಾಗುವ ಅಡಿಕೆಯನ್ನು ಗಿಡ ಮಾಡಿ ನಾಟಿ ಮಾಡಿದರೆ ರೋಗ ನಿರೋಧಕ ತಳಿಯಾಗಬಹುದು ಎಂಬುದು ಅಧ್ಯಯನ. ಹೀಗಾದರೆ 5  ವರ್ಷಗಳಲ್ಲಿ ಫಸಲು ಕೂಡಾ ಲಭ್ಯವಾಗುತ್ತದೆ. ಇಂತಹ ಅಡಿಕೆ ಗಿಡಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂಬುದು  ಈ ಅಧ್ಯಯನದ ಸಂಕ್ಷಿಪ್ತ ಅಭಿಪ್ರಾಯ. ಈ ನಿಟ್ಟಿನಲ್ಲಿ ಇದೀಗ ಚಿಂತನೆಗಳು ನಡೆಯಬೇಕಿದೆ. ವಿಜ್ಞಾನಿಗಳ ತಂಡ ಈ ನೆಲೆಯಲ್ಲಿ  ಯೋಚನೆ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರ ಹಾಗೂ ಸಂಸ್ಥೆಗಳ ಮತ್ತು  ಸರಕಾರದ ಸಹಾಯ ಈಗ ಬೇಕಾಗಿದೆ. ಸುಳ್ಯ ಸೇರಿದಂತೆ ವಿವಿದೆಡೆ ವೇಗವಾಗಿ ಹರಡುತ್ತಿರುವ ಅಡಿಕೆ ಹಳದಿ ಎಲೆ ರೋಗಕ್ಕೆ ಪರಿಹಾರ ಸಿಗಬೇಕಿದೆ.

 

 

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮುಂದಿನ ಒಂದು ವರ್ಷ ಕೆಲವು ರಾಶಿಗಳಿಗೆ ಗುರು ಪ್ರವೇಶದಿಂದ ಆಗುವ ತೊಂದರೆಗಳು ಏನು..?
May 15, 2025
7:45 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …
May 14, 2025
9:43 PM
by: ಪ್ರಬಂಧ ಅಂಬುತೀರ್ಥ
ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ
May 14, 2025
11:31 AM
by: ಸಾಯಿಶೇಖರ್ ಕರಿಕಳ
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ
May 14, 2025
11:20 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group