ಅಡಿಕೆ ಹಳದಿ ಎಲೆರೋಗ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಲೇ ಇದೆ. ಯಾವ ಔಷಧಿಗಳೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಸಂಶೋಧನೆಗಳೂ ನಡೆಯುತ್ತಲೇ ಇದೆ. ಇದೀಗ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪಡ, ಕಣಿಲೆಗುಂಡಿ, ನಾವೂರು ಮೊದಲಾದ ಕಡೆಗಳಲ್ಲಿ ಹಳದಿ ಎಲೆರೋಗ ವ್ಯಾಪಿಸುತ್ತಿದೆ, ಕಾಣಿಯೂರು ಸನಿಹದವರೆಗೂ ಹಳದಿ ಎಲೆರೋಗ ಬಾಧಿಸುತ್ತಿದೆ.…..ಮುಂದೆ ಓದಿ….
ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಮರ್ಕಂಜ, ಕಲ್ಮಕಾರು ಮಡಿಕೇರಿಯ ಚೆಂಬು ಹಾಗೂ ಶೃಂಗೇರಿ, ಕೊಪ್ಪ ಸೇರಿದಂತೆ ಅಡಿಕೆ ಬೆಳೆಯುವ ಹಲವು ಕಡೆಗಳಲ್ಲಿ ಅಡಿಕೆ ಹಳದಿ ಎಲೆರೋಗ ಬಾಧಿಸುತ್ತಿದೆ. ಹಲವಾರು ಕೃಷಿಕರು ಈ ರೋಗದಿಂದ ಕಂಗೆಟ್ಟಿದ್ದಾರೆ. ಪರ್ಯಾಯ ಬೆಳೆಯನ್ನೂ ಬೆಳೆಯಲಾಗದ ಸ್ಥಿತಿಯಲ್ಲಿದ್ದಾರೆ. ಇದೀಗ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮವೂ ಹಳದಿ ಎಲೆರೋಗದ ಭೀಕರತೆಗೆ ಸಾಕ್ಷಿಯಾಗುತ್ತಿದೆ. ಸುಮಾರು 100 ಅಡಿಕೆ ಬೆಳೆಗಾರರಿಗೆ ಹಳದಿ ಎಲೆರೋಗದ ಸಮಸ್ಯೆ ಕಾಡಲು ಆರಂಭವಾಗಿದೆ.
ಸುಮಾರು 50 ವರ್ಷಗಳ ಹಿಂದೆಯೇ ಕೊಡಿಯಾಲ ಗ್ರಾಮದ ಕಲ್ಪಡ ಎಂಬಲ್ಲಿ ಒಂದು ಸಣ್ಣ ಪ್ರದೇಶದಲ್ಲಿ ಅಡಿಕೆ ಮರ ಹಳದಿ ರೋಗದಲ್ಲಿ ಕಂಡುಬಂದಿತ್ತು. ಸುಮಾರು 25 ವರ್ಷಗಳಿಂದ ಹಳದಿ ಎಲೆರೋಗ ವಿಸ್ತರಣೆಯಾಗುತ್ತಾ ಬಂದಿದೆ. ಈಚೆಗೆ ಕೆಲವು ವರ್ಷಗಳಿಂದ ವೇಗ ಪಡೆದಿದೆ, ಕಾಣಿಯೂರುವರೆಗೂ ಅಡಿಕೆ ಹಳದಿ ಎಲೆರೋಗ ಕಾಣುತ್ತಿದೆ.
25 ವರ್ಷದ ಹಿಂದೆ ಎರಡು ಎಕ್ರೆಯಷ್ಟು ಪ್ರದೇಶದಲ್ಲಿ ಮಾತ್ರವೇ ಇದ್ದ ಹಳದಿ ಎಲೆರೋಗ ಈಗ ಸುಮಾರು 150 ಎಕ್ರೆ ಪ್ರದೇಶದಲ್ಲಿ ಕಂಡುಬಂದಿದೆ. ಕೊಡಿಯಾಲ ಗ್ರಾಮದ ಒಂದು ವಾರ್ಡ್ ಬಹುತೇಕ ಅಂದರೆ ಕಲ್ಪಡ ಬೈಲು ಬಹುಪಾಲು ತೋಟ ಹಳದಿ ಆಗಿದೆ.
ಇಲ್ಲಿ ಸಣ್ಣ ರೈತರೇ ಹೆಚ್ಚಾಗಿ ಇರುವುದರಿಂದ ಇಲ್ಲಿಯ ರೈತರ ಸಮಸ್ಯೆಗೆ ಧ್ವನಿಯಾದವರು ಕಡಿಮೆ. ಸಣ್ಣ ರೈತರ ಅಡಿಕೆ ತೋಟ ಹಳದಿಯಾಗಿದೆ, ಪರ್ಯಾಯ ಕೃಷಿಯನ್ನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕೃಷಿಯನ್ನು ನಂಬಿ ಇರುವ ಸ್ಥಿತಿ ಇಲ್ಲ. ಅನಿವಾರ್ಯವಾಗಿ ಇತರ ಉದ್ಯೋಗವೇ ಆದಾಯವಾಗಿದೆ. ಹಲವು ಕೃಷಿಕರ ಜೀವನ ಸಂಕಷ್ಟದಿಂದ ಕೂಡಿದೆ. ಕೆಲವು ಮಂದಿ ಕೃಷಿ ಮಾಡಲಾಗದೆ ಬೇಸರ ಪಡುತ್ತಾರೆ.
ಈ ಹಿಂದೆ ವಿಜ್ಞಾನಿಗಳ ಸಹಿತ ಎಲ್ಲರೂ ಇಲ್ಲಿಗೆ ಭೇಟಿ ನೀಡಿದ್ದಾರೆ, ಪರೀಕ್ಷೆಗಳನ್ನು ಮಾಡಿದ್ದಾರೆ. ಆದರೆ ಹಳದಿ ರೋಗಕ್ಕೆ ಯಾರಿಂದಲೂ ಏನೂ ಮಾಡಲಾಗದ ಪರಿಸ್ಥಿತಿ ಇರುವುದರಿಂದ ನಿರಾಶರಾಗಿದ್ದಾರೆ ಕೃಷಿಕರು. ಈ ನಡುವೆ ಹಲವಾರು ಗೊಬ್ಬರ ನೀಡುವ ಮಂದಿ ಕೃಷಿಕರಲ್ಲಿಗೆ ಭೇಟಿ ನೀಡಿ, ಹಳದಿ ಎಲೆರೋಗ ನಿವಾರಿಸುವ ಭರವಸೆ ನೀಡಿದ್ದಾರೆ, ಸಹಜವಾಗಿಯೇ ನಿರೀಕ್ಷೆಯಲ್ಲಿರುವ ರೈತರು ಗೊಬ್ಬರ ಖರೀದಿ ಮಾಡುತ್ತಾರೆ, ಪ್ರಯೋಜನ ಮಾತ್ರಾ ಶೂನ್ಯ. ಕೃಷಿಕರ ಸಂಕಷ್ಟದ ನಡುವೆ ತಮ್ಮ ಜೇಬು ತುಂಬಿಸುವ ಪ್ರಯತ್ನ ಮಾಡಿದ್ದಾರೆ ಎಂದು ವಿಷಾದಿಸುತ್ತಾರೆ ಕೃಷಿಕರು.ಗೊಬ್ಬರ ನೀಡುವ ಮಂದಿ ಹಳದಿ ಎಲೆರೋಗ ಪೀಡಿತ ಕೃಷಿಕರು ಕನಿಷ್ಟ 100 ಗಿಡವನ್ನು ಪ್ರಾಯೋಗಿಕವಾಗಿ ಪಡೆದುಕೊಂಡು ಎರಡು ವರ್ಷ ಉಚಿತವಾಗಿ ಗೊಬ್ಬರ ನೀಡಿ ರೋಗ ನಿವಾರಣೆಯಾದರೆ ಇಡೀ ಊರಿಗೆ ಊರೇ ಖರೀದಿ ಮಾಡುವ ಭರವಸೆಯನ್ನೂ ಕೃಷಿಕರು ನೀಡಿದ್ದಾರೆ. ಆದರೆ ಅದೂ ಫಲನೀಡಿಲ್ಲ, ನಂತರ ಯಾರೂ ಬರಲಿಲ್ಲ ಎನ್ನುತ್ತಾರೆ ಕೃಷಿಕರು.…..ಮುಂದೆ ಓದಿ….
ಈಗ ಹಳದಿ ಎಲೆರೋಗ ಬೈಲಿನಿಂದ ಬೈಲಿಗೆ ವಿಸ್ತರಣೆಯಾಗುತ್ತಿದೆ. ಕೊಡಿಯಾಲ ಗ್ರಾಮದ ಕಲ್ಪಡ ಮಲೆಯಿಂದ ಆ ಕಡೆಯೂ ಈಗ ಹಳದಿ ಎಲೆರೋಗ ವ್ಯಾಪಿಸಲು ಆರಂಭಿಸಿದೆ.ಕಾಣಿಯೂರು ಕಡೆಯೂ ಹಬ್ಬಿದೆ. ಪರ್ಯಾಯ ಕೃಷಿಯೂ ಮಾಡಲು ಸಾಧ್ಯವಾಗಿಲ್ಲ, ಗದ್ದೆಯ ನೀರು ಇರುವ ಕಡೆ ಇತರ ಬೆಳೆಯೂ ಆಗುತ್ತಿಲ್ಲ. ಹಾಗಾಗಿ ಕೃಷಿ ಕಷ್ಟವಾಗಿದೆ, ಹೊಸ ಮಣ್ಣು ಹಾಕಿದ ಕೂಡಲೇ ಹಳದಿ ಎಲೆರೋಗ ವೇಗ ಪಡೆಯುತ್ತದೆ. ಹೊಸ ಕೃಷಿಯನ್ನು ಯಾರೂ ಪ್ರಯತ್ನ ಮಾಡುತ್ತಿಲ್ಲ. ಈಗಾಗಲೇ ಇಲ್ಲಿ ಕೃಷಿ ಮಾಡಿ ಸೋತಿದ್ದಾರೆ.
ಈ ಗ್ರಾಮದ ಅಡಿಕೆ ಹಳದಿ ಎಲೆರೋಗ ಹೊರಜಗತ್ತಿನಲ್ಲಿ ಅಷ್ಟೊಂದು ಗಮನ ಸೆಳೆದಿಲ್ಲ. ಅಷ್ಟು ದೊಡ್ಡ ಪ್ರಚಾರವೂ ಸಿಕ್ಕಿಲ್ಲ. ಸಣ್ಣ ರೈತರು ತಮಗಾದ ಸಂಕಷ್ಟವನ್ನು ಹೇಳುತ್ತಿಲ್ಲ. ಸಂಘ ಸಂಸ್ಥೆಗಳು, ಇತರ ಕೆಲವರು ಹಲವು ಪ್ರಯತ್ನ ಮಾಡಿದ್ದಾರೆ. ಆದರೆ ಸರ್ಕಾರದಿಂದ ತೊಡಗಿ ಎಲ್ಲಾ ಕಡೆಯೂ ಇಲ್ಲಿನ ರೈತರ ಪಾಲಿಗೆ ಯಾವ ನ್ಯಾಯವೂ ಸಿಕ್ಕಿಲ್ಲ.
The problem of Arecanut yellow leaf disease is worsening year after year, with no effective treatment available. Research is ongoing to find a solution. Currently, the disease is spreading in areas such as Kalpada, Kanilegundi, and Navoor in Kodiyala village in Sullia taluk, as well as near Kaniyoor.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…