ಗಂಭೀರ ಸ್ವರೂಪ ಪಡೆಯುತ್ತಿರುವ ಅಡಿಕೆ ಹಳದಿ ರೋಗ | ಅಡಿಕೆ ತೋಟದ ವಿಸ್ತರಣೆಯ ಜೊತೆಯಲ್ಲಿಯೇ ಹಬ್ಬುತ್ತಿದೆ ಹಳದಿ ಎಲೆ ರೋಗ | ರೋಗ ನಿರೋಧಕ ತಳಿ ಅಭಿವೃದ್ಧಿ ಕಡೆಗೆ ಚಿಂತನೆ |

ಡಿಕೆ ಹಳದಿ ಎಲೆ ರೋಗ ವಿಸ್ತರಣೆಯಾಗುತ್ತಿರುವುದು  ಈಗ ಬೆಳೆಗಾರರಿಗೆ ಆತಂಕವಾಗುತ್ತಿದೆ. ರಾಜ್ಯದ ಶೃಂಗೇರಿ, ಕೊಪ್ಪ ಪ್ರದೇಶ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ, ಅರಂತೋಡು ಹಾಗೂ ಕೇರಳದ ಕೆಲವು ಪ್ರದೇಶಗಳಲ್ಲಿ ಕಂಡುಬಂದಿದ್ದ ಅಡಿಕೆ ಹಳದಿ ರೋಗ ಈಗ ವಿಸ್ತರಣೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ  ಈಗಾಗಲೇ ಹಳದಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಹೀಗಾಗಿ ಬೆಳೆಗಾರರಿಗೆ ಆತಂಕ ಹೆಚ್ಚಾಗುತ್ತಿದೆ.

Advertisement
Advertisement
ಅನೇಕ ವರ್ಷಗಳ ಈ ಸಮಸ್ಯೆಗೆ ಯಾವುದೇ ತಾಂತ್ರಿಕ ಪರಿಹಾರ ಲಭ್ಯವಾಗಿಲ್ಲ. ಆದರೆ ಈ ಹಿಂದೆ ಅಧ್ಯಯನದಲ್ಲಿದ್ದ ತಳಿಗಳ ಸಂಕರ ಮಾಡಿ ಹೊಸ ತಳಿಗಳ ಅಭಿವೃದ್ಧಿ ಪಡಿಸಿ ಅವುಗಳಿಗೆ ಹಳದಿ ರೋಗ ನಿರೋಧಕ ಗುಣಗಳನ್ನು ಅಭಿವೃದ್ಧಿ ಪಡಿಸುವ ತಂತ್ರಜ್ಞಾನವನ್ನು ಮತ್ತೆ ಅಭಿವೃದ್ಧಿ ಪಡಿಸುವ ಕಡೆಗೆ ಯೋಚನೆ ಹಾಗೂ ಯೋಜನೆ ನಡೆಯುತ್ತಿದೆ. ಈ ಹಿಂದೆ ಯಶಸ್ಸಿನ ಹಾದಿಯಲ್ಲಿದ್ದ ಈ ಯೋಜನೆ ದೀರ್ಘಾವಧಿ ಹಾಗೂ ಇತರ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು.

Advertisement
ಅಡಿಕೆ ತೋಟದಲ್ಲಿ ಹಳದಿ ಎಲೆ ರೋಗ ಮೊದಲು ಬೆಳಕಿಗೆ ಬಂದ್ದು ಕೇರಳದಲ್ಲಿ. 1914 ರಲ್ಲಿ ಈ ರೋಗ ಬೆಳಕಿಗೆ ಬಂದು ಅಧ್ಯಯನ, ಸಂಶೋಧನೆಗಳು ನಡೆಯುತ್ತಲೇ ಇದೆ. ಇಂದಿಗೂ ಶಾಶ್ವತವಾದ ಪರಿಹಾರ ಸಾಧ್ಯವಾಗಿಲ್ಲ. ಕಾರಣ ಇದು ದೀರ್ಘಾವಧಿಯ ಅಧ್ಯಯನ ಹಾಗೂ ಸಂಶೋಧನೆ. ಸುಮಾರು 60  ವರ್ಷಗಳ ಬಳಿಕ ಈ ರೋಗಕ್ಕೆ ಕಾರಣ ಫೈಟೋಪ್ಲಾಸ್ಮಾ ಎಂದು ಗುರುತಿಸಲಾಗಿತ್ತು. ಹಾಗಿದ್ದರೂ ಸಂಪೂರ್ಣವಾಗಿ ಅಧಿಕೃತವಾಗಿ ಇಂದಿಗೂ ಹೇಳಲಾಗುತ್ತಿಲ್ಲ. ಮೇಲ್ನೋಟಕ್ಕೆ ಫೈಟೋಪ್ಲಾಸ್ಮಾ ಕಾರಣ ಎಂದು ಹೇಳಲಾಗುತ್ತದೆ. ಆದರೆ ಈ ರೋಗ ಪ್ರಸರಣದ ವಾಹನ ಯಾವುದು  ಎಂಬ ಬಗ್ಗೆಯೂ ಖಚಿತವಾದ ಅಧ್ಯಯನ ನಡೆದರೂ ಅಧಿಕೃತ ವರದಿ ಇಲ್ಲ.

ಕೀಟ ಮಾತ್ರವೇ ಕಾರಣವೇ ಅಥವಾ ಮಣ್ಣು, ನೀರು, ಗಾಳಿ ಕಾರಣವೇ ಎಂಬುದೂ ಚರ್ಚೆಯ ವಿಷಯ. ಈ ಎಲ್ಲಾ ಸಂಗತಿಗಳ ನಡುವೆಯೂ ಅಡಿಕೆ ಸಂಶೋಧನಾ ಕೇಂದ್ರ ಸುಮಾರು 2000 ನೆಯ ಇಸವಿಯಲ್ಲಿ ಹಳದಿ ಎಲೆ ರೋಗ ನಿಯಂತ್ರಿಸಬೇಕಾದರೆ ರೋಗ ಪ್ರತಿರೋಧಕ ತಳಿ ಅಭಿವೃದ್ಧಿ ಕಾರ್ಯ ನಡೆಯಬೇಕು ಎಂದು ಅಭಿಪ್ರಾಯಪಟ್ಟು ಆ ನೆಲೆಯಲ್ಲಿ ಸಣ್ಣ ಪ್ರಯತ್ನವೂ ನಡೆದಿತ್ತು. ಆದರೆ ನಂತರ ಅಲ್ಲಿಗೇ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಅನೇಕ ಪಾಸಿಟಿವ್‌ ಬೆಳವಣಿಗೆ ಈ ಯೋಜನೆಯಲ್ಲಿ  ಕಂಡುಬಂದಿದ್ದರೂ ಮುಂದುವರಿಸುವ ಇಚ್ಛಾಶಕ್ತಿ ಕಾಣಿಸದೇ ಇರುವ ಕಾರಣದಿಂದ  ಆಗ  ರೋಗ ನಿರೋಧಕ ತಳಿ ಬದಲು ಪ್ಲಾಸ್ಟಿಕ್ ಮಲ್ಚಿಂಗ್ ಮುಖಾಂತರ ರೋಗ ಪ್ರಸರಣವನ್ನು ತಡೆಯಬಹುದು ಎಂಬ ಸಂಶೋಧನಾ ಫಲಿತಾಂಶವೂ ಕಂಡುಬಂದ ಕಾರಣದಿಂದ ಹಳದಿ ಎಲೆ ರೋಗ ತಡೆಯುವ ತಳಿ ಅಭಿವೃದ್ಧಿ ಯೋಜನೆಯ ಫಲಿತಾಂಶ ಹಾಗೂ ಅನುಷ್ಟಾನದ ವಿವರ ದಾಖಲಾಗಲಿಲ್ಲ. ಅದರ ಜೊತೆಗೇ ವಿವಿಧ ಪ್ರಯತ್ನಗಳು ನಡೆಯುತ್ತಲೇ ಇದೆ. ಅಡಿಕೆ ಬೆಳೆಗಾರರಿಗೆ ಯಾವುದೇ ಪರಿಹಾರವೂ ಲಭ್ಯವಾಗಿಲ್ಲ.

Advertisement
ಇದೀಗ  ಕೇರಳದಲ್ಲಿ ಕಾಣಿಸಿಕೊಂಡ ಅಡಿಕೆ ಹಳದಿ ಎಲೆ ರೋಗ ಕೇರಳದ ವಯನಾಡು ಪ್ರದೇಶ ದಾಟಿ ಕರ್ನಾಟಕದ ಸುಳ್ಯ, ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ಹಲವು ಕಡೆಗಳಲ್ಲಿ  ಹಲವು ವರ್ಷಗಳಿಂದ ಕಂಡುಬಂದಿತ್ತು. ಇದೀಗ ಸುಳ್ಯದ ಸಂಪಾಜೆ, ಅರಂತೋಡು ಕಡೆಗಳಲ್ಲಿ  ವ್ಯಾಪಕವಾಗಿದೆ, ಮರ್ಕಂಜ ಪ್ರದೇಶದಲ್ಲೂ ಕಂಡುಬಂದು ವ್ಯಾಪಿಸುತ್ತಿದೆ. ಗುತ್ತಿಗಾರು, ಕಡಬ, ಕಾಣಿಯೂರು, ಸವಣೂರು ಸೇರಿದಂತೆ ಹಲವು ಕಡೆಗಳಲ್ಲಿ  ಕಂಡುಬಂದಿದೆ. ಶೃಂಗೇರಿ, ಕೊಪ್ಪ ಪ್ರದೇಶದಲ್ಲೂ ಹೆಚ್ಚಾಗಿ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ,ಮರ್ಕಂಜದಿಂದ ತೊಡಗಿ ಬದನಾಜೆ, ಕೊಡಿಪ್ಪಾಡಿ, ಪೋಳ್ಯ, ಕೆದಿಲ, ಕೊಡಿಯಾಲ, ಕಾಣಿಯೂರು, ಪಂಜ, ಕುಕ್ಕುಜಡ್ಕ, ಹೀಗೆ ಹಲವು ಕಡೆಗಳಲ್ಲಿ ವಿಸ್ತರಿಸಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಆತಂಕವಾಗಿದೆ. ಅಡಿಕೆ ಕೃಷಿಯ ಭವಿಷ್ಯದ ಮೇಲೆ ಕರಿನೆರಳು ಬಿದ್ದಿದೆ.

ಶೃಂಗೇರಿ ಮುಂದಿನ ಪ್ರದೇಶದಲ್ಲಿ  ಕಣ್ಣು ಹಾಯಿಸಿದಷ್ಟು ದೂರಕ್ಕೆ ಅಡಿಕೆ ಮರ ಹಳದಿ ಬಣ್ಣಕ್ಕೆ ತಿರುಗಿ,  ಬೋಳಾಗಿ ಒಣಗಿ ನಿಂತ ಅಡಿಕೆ ತೋಟಗಳು ಕಾಣಿಸಸುತ್ತವೆ, ಹಸಿರು ತೋಟಗಳೇ ಇಲ್ಲ ಎಂಬಷ್ಟು ರೋಗಪೀಡಿತ ತೋಟಗಳು ಕಂಡುಬಂದಿದೆ. ಮಲೆನಾಡಿನ ಸಾಂಪ್ರದಾಯಿಕ ಕೃಷಿಯಾದ ಅಡಿಕೆಯ ಮೇಲೆ  ಭವಿಷ್ಯದಲ್ಲಿ ಹಾನಿ ಇರುವುದು  ನಿಶ್ಚಿತವಾಗಿದ್ದು ಅಡಿಕೆ ವಹಿವಾಟು ಇಡೀ ಕರಾವಳಿ ಮೇಲೆ ಪರಿಣಾಮ ಬೀರುವುದರಿಂದ ಆರ್ಥಿಕ ವಹಿವಾಟಿನ ಮೇಲೂ ಪರಿಣಾಮವಾಗಬಹುದು.

Advertisement
ಹೀಗಾಗಿ ಇದೀಗ ಅಡಿಕೆ ಹಳದಿ ರೋಗ ತಡೆಗೆ ಯಾವ ಕ್ರಮ ಎಂಬುದರ ಬಗ್ಗೆ ಮೊದಲ ಹೆಜ್ಜೆಯಾದರೆ ಅದರ ಜೊತೆಗೇ ಹಳದಿ ಎಲೆ ರೋಗ ನಿರೋಧಕ ತಳಿ ಅಭಿವೃದ್ಧಿಯ ಬಗ್ಗೆ ಮತ್ತೆ ಅಧ್ಯಯನ ನಡೆಸಲು ಅಗತ್ಯ ಕ್ರಮ ಆಗಬೇಕಿದೆ. ಇದಕ್ಕಾಗಿ ಸಮಾನ ಮನಸ್ಕ ಅಡಿಕೆ ಬೆಳೆಗಾರರ ತಂಡ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಈ ದಿಸೆಯಲ್ಲಿ  ವಿಜ್ಞಾನಿಗಳ ತಂಡದೊಂದಿಗೆ ಚರ್ಚೆ ನಡೆಸುತ್ತಿದೆ. ಇದಕ್ಕೆ ಅಧಿಕ ವೆಚ್ಚಗಳೂ ಆಗುವುದರಿಂದ ಸರಕಾರದ ಹಾಗೂ ಸಹಕಾರಿ ಸಂಸ್ಥೆಗಳ ಸಹಕಾರವೂ ಅಗತ್ಯವಿದೆ ಎಂದು ಅಡಿಕೆ ಬೆಳೆಗಾರರ ತಂಡದ ರಮೇಶ್‌ ದೇಲಂಪಾಡಿ ಹೇಳುತ್ತಾರೆ.

ಈ ಯೋಜನೆಯ ಪ್ರಕಾರ, ರೋಗ ನಿರೋಧಕ ತಳಿಗಳನ್ನು ಗುರುತಿಸುವುದು ಮತ್ತು‌ ಅಭಿವೃದ್ಧಿ ಪಡಿಸುವುದು ಮುಖ್ಯ ಉದ್ದೇಶವಾದರೆ, ಈಗ ಗುರುತಿಸಲಾದ ಅಡಿಕೆ ತಳಿಗಳಲ್ಲಿ ಟ್ರಯಾಂಡ್ರಾ ಅಡಿಕೆ ಹೊರತು ಪಡಿಸಿ ಇನ್ನುಳಿದವುಗಳು ರೋಗಕ್ಕೆ ಪ್ರತಿರೋಧ ಒಡ್ಡುವುದಿಲ್ಲ. ಟ್ರಯಾಂಡ್ರಾ ಅಡಿಕೆಯೊಂದಿಗೆ ಇತರ ತಳಿಗಳ ಸಂಕರ ಮಾಡಿ ಹೊಸ ತಳಿಗಳ ಅಭಿವೃದ್ಧಿ ಪಡಿಸಿ ಅವುಗಳಿಗೆ ರೋಗ ನಿರೋಧಕತ್ವ ವರ್ಗಾವಣೆಯಾಗುತ್ತದೆಯೇ ಎಂದು ಪರಿಶೀಲಿಸುವುದು.ಆ ರೀತಿ ರೋಗ ಪ್ರತಿರೋಧಕ ಗುಣವೂ ವರ್ಗಾವಣೆಯಾದ ಹೊಸ ತಳಿ ಸಿಕ್ಕಿದರೆ ಅದರ ಅಡಿಕೆಗೂ ಈ ಗುಣ ವರ್ಗಾವಣೆಯಾಗುತ್ತದೆಯೇ ಎಂದು ಗಮನಿಸ ಬೇಕಾಗುತ್ತದೆ.  ಹಳದಿ ಎಲೆ ರೋಗ ಪೀಡಿತ ಪ್ರದೇಶಗಳಲ್ಲಿ ರೋಗ ಪ್ರತಿರೋಧಕ ಗುಣ ಪ್ರದರ್ಶಿಸುತ್ತಿರುವ ಗಿಡಗಳನ್ನು ಗುರುತಿಸಿ ,ಅವುಗಳ ಒಳಗಡೆ ಕೃತಕ ಪರಾಗಸ್ಪರ್ಷದ ಮುಖಾಂತರ ಹೊಸ ಗಿಡಗಳನ್ನು ಪಡೆಯುವುದು.ಪರಾಗ ಸ್ಪರ್ಷಕ್ಕೆ ಬಳಸಿದ ಎರಡೂ ಗಿಡಗಳು ರೋಗ ಪ್ರತಿರೋಧಕ ಗುಣ ಪ್ರದರ್ಶಿಸುವುದೇ ಆಗಿರ ಬೇಕಾಗಿರುವುದರಿಂದ ಅದರಿಂದ ಪಡದ ಅಡಿಕೆಗೂ ಈ ಗುಣ ವರ್ಗಾವಣೆಯಾಗುವ ಸಾಧ್ಯತೆ ಸೈದ್ಧಾಂತಿಕವಾಗಿ ಅತಿ ಹೆಚ್ಚು ಎಂಬುದು  ಈ ಹಿಂದೆ ನಡೆದ ಅಧ್ಯಯನದ ವರದಿಯಲ್ಲಿ ಕಂಡುಬಂದಿದೆ ಎನ್ನುತ್ತಾರೆ ರಮೇಶ್‌ ದೇಲಂಪಾಡಿ.

Advertisement
ಈ ನಡುವೆ ಅಡಿಕೆ ಬೀಜಗಳ ಮೂಲಕವೂ ಹಳದಿ ಎಲೆ ರೋಗ ವಿಸ್ತರಣೆಯಾಗುತ್ತಿದೆಯೇ ಎಂಬುದೂ ಪ್ರಶ್ನೆಯಾಗಿದೆ. ಈಗಾಗಲೇ ಅಡಿಕೆ ಧಾರಣೆ ಉತ್ತಮವಾಗಿರುವ ಕಾರಣದಿಂದ ಗಿಡಗಳ ನಾಟಿಯಾಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದಲ್ಲೂ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಹಳದಿ ಎಲೆ ರೋಗ ಅಡಿಕೆಯ ಮೂಲಕವೂ ವಿಸ್ತರಣೆಯಾಗುವುದಾದರೆ ಎಲ್ಲೆಡೆಯೂ ಹಳದಿ ರೋಗ ವಿಸ್ತರಣೆಯ ಆತಂಕ ಇದೆ. ಈಗಾಗಲೇ ಸಿಪಿಸಿಆರ್‌ ಐ ಮೂಲಕವೇ 1.5 ಲಕ್ಷಕ್ಕೂ ಅಧಿಕ ಗಿಡಗಳು ಹಾಗೂ 2 ಲಕ್ಷಕ್ಕೂ ಅಧಿಕ ಅಡಿಕೆ ಬೀಜಗಳನ್ನು ರೈತರು ಖರೀದಿ ಮಾಡಿದ್ದರೆ ಖಾಸಗಿಯಾಗಿ ಲಕ್ಷಾಂತರ ಅಡಿಕೆ ಗಿಡಗಳು, ಬೀಜಗಳು ಬೆಳೆಗಾರರ ತೋಟಕ್ಕೆ ತಲುಪಿದೆ. ಹೀಗಾಗಿ ಹಳದಿ ರೋಗದ ವಿಸ್ತರಣೆ ಬಗ್ಗೆ ಆತಂಕ. ಇದಕ್ಕಾಗಿ ವಿಶೇಷ ತಳಿಯ ಬಗ್ಗೆ ಅಧ್ಯಯನ ಅಗತ್ಯವಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಗಂಭೀರ ಸ್ವರೂಪ ಪಡೆಯುತ್ತಿರುವ ಅಡಿಕೆ ಹಳದಿ ರೋಗ | ಅಡಿಕೆ ತೋಟದ ವಿಸ್ತರಣೆಯ ಜೊತೆಯಲ್ಲಿಯೇ ಹಬ್ಬುತ್ತಿದೆ ಹಳದಿ ಎಲೆ ರೋಗ | ರೋಗ ನಿರೋಧಕ ತಳಿ ಅಭಿವೃದ್ಧಿ ಕಡೆಗೆ ಚಿಂತನೆ |"

Leave a comment

Your email address will not be published.


*