ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಶೃಂಗೇರಿ, ಕೊಪ್ಪ ಪ್ರದೇಶಗಳಲ್ಲೂ ಅಡಿಕೆ ಹಳದಿ ಎಲೆ ರೋಗದ ಬಾಧೆ ಅಡಿಕೆ ಕೃಷಿಕರನ್ನು ಕಾಡುತ್ತಿದೆ. ಹಳದಿ ಎಲೆ ರೋಗವು ಫೈಟೋಪ್ಲಾಸ್ಮಾ ಎಂಬ ವೈರಸ್‌ನಿಂದ ಬರುತ್ತದೆ. ಆದರೆ ಈ ವೈರಸ್ ಹರಡುವ ವಾಹಕವಾಗಿ ಪ್ರೊಟಿಸ್ಟಾ ಮೋಯಿಸ್ಟಾ ಎಂಬ ಕೀಟ ಎಂದು ವಿಜ್ಞಾನಿಗಳು ಹೇಳುತ್ತಿದ್ದರು. ಇದೀಗ ಈ ಕೀಟವನ್ನು ಕೃಷಿಕ ರಮೇಶ್ ದೇಲಂಪಾಡಿ ಪರಿಚಯಿಸಿದ್ದಾರೆ. ಅವರ ತೋಟದಲ್ಲಿ ಕಂಡುಬಂದ ಕೀಟದ ಫೋಟೋ ತೆಗೆದಿದ್ದಾರೆ. ವಿಜ್ಞಾನಿಗಳೂ ಈ ಕೀಟದ ಬಗ್ಗೆ ಖಚಿತಪಡಿಸಿದ್ದಾರೆ.
ಅಡಿಕೆಯ ಹಳದಿ ಎಲೆ ರೋಗ ಫೈಟೋಪ್ಲಾಸ್ಮಾದಿಂದ ಬರುತ್ತದೆ ಹಾಗೂ ಈ ವೈರಸ್ ಹರಡುವುದು ಕೀಟ. ಈ ಕೀಟವು ಮಳೆಗಾಲದ ಹೊತ್ತಿಗೆ ಗುಂಪಾಗಿ ಇರುತ್ತದೆ. ಅಡಿಕೆ ಮರದ ಅಥವಾ ಗಿಡ ಸೋಗೆಯಲ್ಲಿ ಕುಳಿತು ರಸ ಹೀರುತ್ತವೆ. ಹೀಗೆ ರಸ ಹೀರಿವ ಕೀಟವು ಇನ್ನೊಂದು ಮರಕ್ಕೆ ಹಾರುತ್ತದೆ. ಆ ಮರದಲ್ಲೂ ರಸ ಹೀರುತ್ತವೆ. ಆದರೆ ಒಂದು ವೇಳೆ ಹಳದಿ ಎಲೆ ರೋಗ ಇರುವ ಅಡಿಕೆ ಮರದಲ್ಲಿ ರಸ ಹೀರಿದ್ದರೆ ವೈರಸ್ ಇನ್ನೊಂದು ಮರಕ್ಕೆ ವರ್ಗಾವಣೆಯಾಗುತ್ತದೆ. ಹೀಗೇ ಹಳದಿ ಎಲೆ ರೋಗ ಹರಡುತ್ತದೆ ಎಂದು ವಿಜ್ಞಾನಿಗಳು ಹಿಂದೆ ಹೇಳಿದ್ದರು. ಆದರೆ ಇದೀಗ ಈ ಕೀಟವು ತೋಟದಲ್ಲಿ ಪತ್ತೆಯಾಗಿದೆ. ಕೃಷಿಕ ರಮೇಶ್ ದೇಲಂಪಾಡಿ ಅವರು ತಮ್ಮ ತೋಟದಲ್ಲಿ ಗಮನಿಸಿದ ಈ ಕೀಟದ ಫೋಟೊ ತೆಗೆದು ವಿಜ್ಞಾನಿಗಳಿಗೆ ಕಳುಹಿಸಿದಾಗ ಖಚಿತ ಪಡಿಸಿದ್ದಾರೆ. ಇಂತಹ ಕೀಟಗಳೇ ವೈರಸ್ ವಾಹಕಗಳು ಎಂದಿದ್ದಾರೆ.
ಈ ಪ್ರೊಟಿಸ್ಟಾ ಮೋಯಿಸ್ಟಾ ಕೀಟದ ಗಾತ್ರ ಕೇವಲ ಸೊಳ್ಳೆಯಷ್ಟು ಅಥವಾ ಅದಕ್ಕಿಂತಲೂ ಸಣ್ಣ. ವಿಜ್ಞಾನದ ಪ್ರಕಾರ ಇದರ ಜೀವಿತಾವಧಿ ಕೇವಲ ಒಂದು ತಿಂಗಳು. ತೋಟದಲ್ಲಿ ಇದರ ಸಂಖ್ಯೆಯಲ್ಲಿ ಏರುಪೇರು ಆಗುತ್ತಿರುತ್ತದೆ.ಇದಕ್ಕೆ ಮುಖ್ಯ ಕಾರಣ ಇದರ ನೈಸರ್ಗಿಕ ಶತ್ರುಗಳು.ಈ ನೈಸರ್ಗಿಕ ಶತ್ರುಗಳ ಸಂಖ್ಯೆ ಮಳೆಗಾಲ ಆರಂಭವಾಗುತ್ತಿದ್ದಂತೇ ಕಡಿಮೆಯಾಗುತ್ತದೆ ಮತ್ತು ಮಳೆಗಾಲ ಮುಗಿಯುತ್ತಿದ್ದಂತೇ ಹೆಚ್ಚಾಗುತ್ತದೆ .
ತೋಟದಲ್ಲಿ ಈ ಬಗೆಯ ಕೀಟ ಕಂಡುಬಂತು ಅಂದಾಕ್ಷಣ ಹಳದಿ ಎಲೆ ರೋಗ ಬಂದೇ ಬಿಟ್ಟಿತು ಎನ್ನಲಾಗುವುದಿಲ್ಲ ಎಂದು ಕೃಷಿಕ ರಮೇಶ್ ದೇಲಂಪಾಡಿ ಹೇಳುತ್ತಾರೆ. ರೋಗ ಅಥವಾ ವೈರಸ್ ಈ ಕೀಟದಲ್ಲಿ ದೇಹದಲ್ಲಿ ಇದ್ದರೆ ಮಾತ್ರಾ ವರ್ಗಾವಣೆಯಾಗುತ್ತದೆ. ರೋಗ ಪಸರುಸುವಿಕೆ ಭಾರೀ ನಿಧಾನ ಎಂಬುದು ಈ ತನಕದ ಅಧ್ಯಯನ . ರೋಗ ಇದ್ದೆಡೆ ಇಂತಹ ಕೀಟಗಳು ಕಂಡುಬಂದರೆ ನಿಯಂತ್ರಣದ ಕಡೆಗೆ ಗಮನಿಸಿದರೆ ಹಳದಿ ಎಲೆ ರೋಗ ಹರಡುವಿಕೆಗೆ ಕಡಿವಾಣ ಹಾಕಬಹುದು.