ಅಡಿಕೆಗೆ ಬಾಧಿಸುವ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕೆ ರೋಗದ ಕುರಿತು ಅಧ್ಯಯನ ಮಾಡಲು ವೈಜ್ಞಾನಿಕ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಸದಸ್ಯರು ಸುಳ್ಯ ತಾಲೂಕಿನ ಮರ್ಕಂಜ ಮತ್ತು ರೆಂಜಾಳದ ಎಲೆಚುಕ್ಕೆ ಮತ್ತು ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳಿಗೆ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕೇಂದ್ರ ಮಟ್ಟದ ಸಮಿತಿಯು ಎಲೆ ಚುಕ್ಕೆ ರೋಗ ಮತ್ತು ಹಳದಿ ಎಲೆ ರೋಗ ಕುರಿತು ಮಾಹಿತಿ ಸಂಗ್ರಹಿಸಿ, ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ನಾಳೆ ಶೃಂಗೇರಿ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಲಿದೆ ಈ ತಂಡ.
ಭಾನುವಾರ ಮರ್ಕಂಜದ ಮಾಪಲತೋಟ , ಬಲ್ಕಾಡಿಮತ್ತು ದಾಸರ ಬೈಲು ಪ್ರದೇಶದ ಕೃಷಿಕರ ತೋಟಕ್ಕೆ ಭೇಟಿ ನೀಡಿದ ತಂಡವು ಅಡಿಕ ಸೋಗೆ, ಅಡಿಕೆ ಮರ ಹಾಗೂ ಅಡಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ.ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗ ಎರಡೂ ಒಂದೇ ತೋಟದಲ್ಲಿ ಇದ್ದಾಗ ಅವುಗಳನ್ನು ಪ್ರತ್ಯೇಕಿಸಿ ಗುರುತಿಸಲು ಕಷ್ಟವಾಗುವುದರ ಬಗ್ಗೆ ಕೃಷಿಕರೂ ಮಾಹಿತಿ ನೀಡಿದರು.
ಈ ಸಂದರ್ಭ ಸಿ. ಪಿ.ಸಿ ಆರ್.ಐ., ಕಾಸರಗೋಡಿನ ಪ್ರಭಾರ ನಿರ್ದೇಶಕ ಡಾ. ಮುರಳೀಧರನ್, ಕಲ್ಲಿಕೋಟೆಯ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಹೋಮಿ ಚೆರಿಯನ್, ಸಿ.ಪಿ.ಸಿ.ಆರ್.ಐ. ಕಾಸರಗೋಡಿನ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಹೆಗ್ಡೆ, ತೋಟಗಾರಿಕೆ ಉಪ ನಿರ್ದೇಶಕ ಡಾ. ಎಚ್. ಆರ್. ನಾಯ್ಕ್ ತಂಡದಲ್ಲಿದ್ದರು. ಸುಳ್ಯ ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳು, ಸಿ.ಪಿ.ಸಿ.ಆರ್.ಐ ವಿಟ್ಲದ ವಿಜ್ಞಾನಿಗಳು, ಮರ್ಕಂಜ ಸೊಸೈಟಿಯ ಮುಖ್ಯಸ್ಥರು ಮತ್ತು ಸ್ಥಳೀಯ ಕೃಷಿಕರು ಜೊತೆಗಿದ್ದರು.