ಏರಿಕೆಯ ಹಾದಿಯಲ್ಲಿಯೇ ಸಾಗಿದ ಅಡಿಕೆ ಧಾರಣೆ 500 ರೂಪಾಯಿ ಬಳಿಕ ವಾರದಿಂದ ಸ್ಥಿರತೆ ಇದೆ. ಅಡಿಕೆ ಇತಿಹಾಸದಲ್ಲಿಯೇ ದಾಖಲೆಯ ಧಾರಣೆ ಬರೆದ ಅಡಿಕೆ ಮಾರುಕಟ್ಟೆಯ ಸದ್ಯದ ಸ್ಥಿತಿ ನೋಡಿದರೆ ಅಡಿಕೆ ಖಾಲಿ ಖಾಲಿ. ಹೀಗಾಗಿ ಧಾರಣೆ ಏರಿಕೆ ಇದೆ, ಆದರೆ ಎಷ್ಟು ಏನು ಎಂಬುದು ಬೇಡಿಕೆಯ ಮೇಲೆ ಸಾಗಲಿದೆ. ಸದ್ಯದ ಕೆಲವು ದಿನ ಅಡಿಕೆ ಧಾರಣೆ ಪಾಸಿಟಿವ್ ಬೆಳವಣಿಗೆಯನ್ನು ನಿರೀಕ್ಷೆ ಮಾಡಬಹುದು.
ಕಳೆದ ಒಂದು ವರ್ಷದಿಂದ ಅಡಿಕೆ ಮಾರುಕಟ್ಟೆ ಚೇತರಿಕೆಯಲ್ಲಿದೆ. ಕೊರೋನಾ ಲಾಕ್ಡೌನ್ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ನೀಡಿದರೆ ಅಡಿಕೆಗೆ ಮಾತ್ರಾ “ಪಾಸಿಟಿವ್” ಆಗಿದೆ. ಅದುವರೆಗೂ ವಿದೇಶದ ಅಡಿಕೆ ಕನಿಷ್ಟ ದರ 250 ರೂಪಾಯಿಗೆ ಅಧಿಕೃತವಾಗಿ ಆಮದು ಆಗುತ್ತಿತ್ತು. ಅದರ ಜೊತೆಗೆ ಕಳ್ಳ ದಾರಿಯ ಮೂಲಕವೂ ಆಮದು ಆಗುತ್ತಿತ್ತು. ವಿಶೇಷವಾಗಿ ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳ ಮೂಲಕ ಕಳಪೆ ಗುಣಮಟ್ಟದ ಅಡಿಕೆ ಭಾರತದೊಳಕ್ಕೆ ಆಗಮಿಸಿ ಇಲ್ಲಿನ ಅಡಿಕೆ ಜೊತೆ ಮಿಕ್ಸ್ ಮಾಡಿ ಮಾರಾಟ ಆಗುತ್ತಿತ್ತು.
ಎರಡು ವರ್ಷಗಳ ಹಿಂದೆ ಹೀಗೆ ಬಂದ ಅಡಿಕೆ ದ ಕ ಹಾಗೂ ಕೇರಳ ಗಡಿಭಾಗಗಳಲ್ಲಿ ಇಲ್ಲಿನ ಅಡಿಕೆ ಜೊತೆ ಸೇರಿಸಿ ಮಾರಾಟವಾಗುತ್ತಿದೆ ಎಂಬ ಸುದ್ದಿಯೂ ವ್ಯಾಪಕವಾಗಿತ್ತು. ಅಂದರೆ ಸುಮಾರು 3 ರಿಂದ 5 ಲಕ್ಷ ಮೆಟ್ರಿಕ್ ಟನ್ ಅಡಿಕೆ ವಿದೇಶದಿಂದ ಆಮದು ಆಗುತ್ತಿತ್ತು. ಇಷ್ಟು ಪ್ರಮಾಣದ ಅಡಿಕೆ ಭಾರತದೊಳಕ್ಕೆ ಆಗಮಿಸಿದರೆ ಸುಮಾರು 300 ರೂಪಾಯಿ ಧಾರಣೆ ಸ್ಥಿರವಾಗಿರುತ್ತಿತ್ತು. ಆದರೆ ಕೊರೋನಾ ಲಾಕ್ಡೌನ್ ಕಾರಣದಿಂದ ಎಲ್ಲಾ ಮಾರ್ಗಗಳ ಮೂಲಕ ಬರುತ್ತಿದ್ದ ಅಡಿಕೆ ಆಮದು ಸ್ಥಗಿತವಾಗಿತ್ತು. ಈ ಕಾರಣದಿಂದ ಅಡಿಕೆ ಬೇಡಿಕೆ ಹೆಚ್ಚಾಯಿತು. ಉತ್ತರ ಭಾರತದ ವ್ಯಾಪಾರಿಗಳಲ್ಲಿ ಇದ್ದ ಅಡಿಕೆ ದಾಸ್ತಾನು ಖಾಲಿಯಾಯಿತು. ಅಡಿಕೆ ಬೇಡಿಕೆ ಹೆಚ್ಚಾಯಿತು, ಧಾರಣೆ ಏರಿಕೆ ಕಂಡಿತು.
ವಿಪರೀತವಾಗಿ ಧಾರಣೆ ಏರಿಕೆ ಹಾಗೂ ಆಮದು ಬಹುತೇಕ ಸ್ಥಗಿತವಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಅಡಿಕೆ ದಾಸ್ತಾನು ಹಿಂದೇಟು ಹಾಕಿದರು. ಬಂದ ಅಡಿಕೆಯನ್ನು ನೇರವಾಗಿ ಮಾರಾಟ ಮಾಡುವ ಕೆಲಸ ಮಾಡಿದರು. ದಾಸ್ತಾನು ಬಹುಪಾಲು ನಿಲ್ಲಿಸಿದರು. ಒಂದು ವೇಳೆ ದಾಸ್ತಾನು ಮಾಡಿ ಅಡಿಕೆ ಆಮದು ಆರಂಭವಾದರೆ ವಿಪರೀತ ನಷ್ಟ ಅನುಭವಿಸಬೇಕಾಗಬಹುದು ಎಂಬ ಕಾರಣದಿಂದ ದಾಸ್ತಾನು ಕೂಡಾ ಇಲ್ಲವಾಯಿತು. ಅಡಿಕೆ ಬೇಡಿಕೆ ಕಳೆದ ಒಂದು ವರ್ಷದಿಂದ ಅದೇ ಪ್ರಮಾಣದಲ್ಲಿ ಇದೆ. ಹೀಗಾಗಿ ಧಾರಣೆ ಏರಿಕೆಯಾಗುತ್ತಲೇ ಸಾಗಿತು.
ಇಲ್ಲಿ ಬೆಳೆಗಾರರು ಕೂಡಾ ಜಾಗೃತಿಯ ಕಾರಣದಿಂದ ಅಡಿಕೆಯನ್ನು ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಬಿಡುತ್ತಿದ್ದಾರೆ. ಈ ಹಿಂದಿನ ಧಾರಣೆಗೆ ಹೋಲಿಸಿದರೆ ಒಂದು ಕ್ವಿಂಟಾಲ್ ಅಡಿಕೆ ನೀಡುವಲ್ಲಿ ಧಾರಣೆಯ ಕಾರಣದಿಂದ ಐವತ್ತು ಕೆಜಿ ಮಾತ್ರವೇ ನೀಡುವಂತಾಯಿತು. ಈ ಸಮಯದಲ್ಲಿ ಧಾರಣೆಯ ಏರಿಳಿತ ಆಟಗಳಿಗೆ ಕೂಡಾ ಬೆಳೆಗಾರರು ಭಯಗೊಳ್ಳಲಿಲ್ಲ, ಕ್ಯಾಂಪ್ಕೋದಂತಹ ಸಹಕಾರಿ ಸಂಸ್ಥೆಗಳೂ ಗಟ್ಟಿಯಾಗಿ ನಿಂತವು. ಹೀಗಾಗಿ ಮಾರುಕಟ್ಟೆ ದೃಢವಾಯಿತು, ಏರಿಕೆಯ ಹಾದಿಯಲ್ಲಿ ಸಾಗಿತು. ಈಗಂತೂ ಎಲ್ಲೂ ಅಡಿಕೆ ದಾಸ್ತಾನು ಇಲ್ಲವಾಗಿದೆ. ವ್ಯಾಪಾರಿಗಳೂ ಬಂದ ಅಡಿಕೆಯನ್ನು ತಕ್ಷಣವೇ ಖಾಲಿ ಮಾಡುತ್ತಿದ್ದಾರೆ, ಕಾರಣ ಧಾರಣೆಯ ಏರಿಕೆ, ಅದರಲ್ಲೂ ವಿಪರೀತ ಏರಿಕೆ, ಲಗಾಮು ಇಲ್ಲದ ಧಾರಣೆಯಿಂದ ವ್ಯಾಪಾರಿಗಳಿಗೂ ಆತಂಕ ಇದೆ.
ಧಾರಣೆ ಇಳಿಕೆಯಾದರೆ ವಿಪರೀತ ನಷ್ಟ ಸಾಧ್ಯತೆ ಇದೆ. ಬೆಳೆಗಾರರಿಗೆ ತಮ್ಮದೇ ಕೃಷಿ ವಸ್ತುವಾದ್ದರಿಂದ ನಷ್ಟದ ಸಂಗತಿ ಇಲ್ಲ. ಉತ್ತಮ ಧಾರಣೆ ಸಿಕ್ಕಿರುವುದು ಖುಷಿ ಹೌದು, ಆದರೆ ಧಾರಣೆ ಮಿತಿಗಿಂತ ಜಾಸ್ತಿ ಇಳಿದರೆ ನಷ್ಟವಿಲ್ಲ. ಆದರೆ ವ್ಯಾಪಾರಿಗಳಿಗೆ ಹಾಗಲ್ಲ, ಖರೀದಿ ಮಾಡಿದ ಅಡಿಕೆಗೆ ವಿಪರೀತ ಕುಸಿತವಾದರೆ ನಷ್ಟದ ಪ್ರಮಾಣ ಹೆಚ್ಚಾಗುತ್ತದೆ. ಹೀಗಾಗಿ ಅಡಿಕೆ ದಾಸ್ತಾನು ಇಡದೇ ಖರೀದಿ-ಮಾರಾಟ ಸಮವಾಗುತ್ತಿದೆ. ಸಹಕಾರಿ ಸಂಸ್ಥೆಗಳು ಮಾತ್ರಾ ಕೊಂಚ ಪ್ರಮಾಣದಲ್ಲಿ ದಾಸ್ತಾನು ಇಟ್ಟು ಧಾರಣೆ ಸ್ಥಿರತೆ ಕಡೆಗೆ ಗಮನಹರಿಸುತ್ತಿವೆ.
ಈಗಂತೂ ಉತ್ತರ ಭಾರತದಲ್ಲಿ ಕ್ವಿಂಟಾಲ್ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದ ಅಡಿಕೆಯನ್ನು ಕೆಜಿ ಲೆಕ್ಕದಲ್ಲಿ ಖರೀದಿ ಮಾಡಿ ಸಣ್ಣ ಸಣ್ಣ ಪಾನ್ ಬೀಡಾ ಅಂಗಡಿಯ ಮಾಲೀಕರು ಪಾನ್ ಕಟ್ಟುತ್ತಾರೆ. ಉಳಿದಂತೆ ಅಡಿಕೆಯನ್ನು ತಿನ್ನುವ ಮಂದಿಯೂ ಕೆಜಿ ಲೆಕ್ಕದಲ್ಲಿಯೇ ಈಗ ಖರೀದಿ ಮಾಡುತ್ತಿದ್ದಾರೆ. ಈ ಧಾರಣೆ ಎಷ್ಟು ದಿನ ಹೀಗೇ ಎಂದೂ ಪ್ರಶ್ನೆಗಳು ಬರುತ್ತಿವೆ. ಸದ್ಯ ಅಡಿಕೆ ಆಮದು ಇಲ್ಲವಾದ್ದರಿಂದ ಇಲ್ಲಿನ ಕೆಂಪಡಿಕೆ ಹಾಗೂ ಚಾಲೀ ಅಡಿಕೆಗೆ ಧಾರಣೆ ಕುಸಿತದ ಲಕ್ಷಣಗಳು ಇಲ್ಲವಾಗಿದೆ. ದಾಸ್ತಾನು ಕೂಡಾ ಕೊರತೆ ಇರುವುದರಿಂದ ಇನ್ನೂ ಕೆಲವು ದಿನ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ ಇಡಲಾಗಿದೆ.
ಆದರೆ ವಿಪರೀತ ಧಾರಣೆ ಏರಿಕೆಯಾದರೆ ಉತ್ತರ ಭಾರತದಲ್ಲಿ ಅಡಿಕೆ ಖರೀದಿ ಮಾಡುವ ಮಂದಿಯೂ ಖರೀದಿ ಕಡಿಮೆ ಮಾಡುವ ಕಾರಣದಿಂದ ಅಡಿಕೆಯ ಮಾರಾಟ ನಿಧಾನಗತಿಯಲ್ಲಿ ಸಾಗುವ ಕಾರಣ ಒಮ್ಮೆಲೇ ವಿಪರೀತ ಏರಿಕೆ ಕಾಣದು. ಮುಂದೆ ಮಾರುಕಟ್ಟೆ ಉಳಿಸುವ ತಂತ್ರಗಳೂ ಬೆಳೆಗಾರರಲ್ಲಿದೆ. ಹೀಗಾಗಿ ಮಾರುಕಟ್ಟೆ ಕಡೆಗೆ ಗಮನ ಹಾಗೂ ಎಚ್ಚರದ ನಡೆ ಅಗತ್ಯವಾಗಿದೆ. ಬೆಳೆಗಾರ ಹಾಗೂ ವ್ಯಾಪಾರಿ ಮತ್ತು ಸಹಕಾರಿ ಸಂಸ್ಥೆಗಳು ಸದೃಢವಾದರೆ ಅಡಿಕೆ ನಾಡಿನ ಆರ್ಥಿಕ ವಹಿವಾಟು ಕೂಡಾ ದೃಢವಾಗಿರುತ್ತದೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…