ಅಡಿಕೆಗೆ ಕಳೆದ ಹಲವಾರು ಸಮಯಗಳಿಂದ ಕ್ಯಾನ್ಸರ್‌ಕಾರಕ ಎನ್ನುವ ಹಣೆಪಟ್ಟಿ ಈಗಲ್ಲ ಕಳೆದ ಸುಮಾರು 20 ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಎಲ್ಲಾ ಸಂದರ್ಭದಲ್ಲೂ WHO ವರದಿಯೇ ಅಂತಿವಾದ ಕಾರಣದಿಂದ ಇಂದು ಅಡಿಕೆಯ ಮೇಲಿನ ಬಿಗುವಿನ ಹಿಡಿತ ಹೆಚ್ಚಾಗುತ್ತಿದೆ. ಕೆಲವು ವರ್ಷಗಳಿಗೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಯ IARC ಕ್ಯಾನ್ಸರ್ ಸಂಬಂಧಿತವಾದ ಅಧ್ಯಯನ ನಡೆಸುತ್ತದೆ, ಅಡಿಕೆಯೂ ಕ್ಯಾನ್ಸರ್‌ಗೆ ಕಾರಣವೇ ಎಂದು ಪ್ರತಿಪಾದಿಸುತ್ತಾ ಬಂದಿದೆ. ಈಗಲೂ ಅದನ್ನೇ ಹೇಳಿದೆ. ಈಗ ಅಡಿಕೆ ಬೆಳೆಗಾರರು, ಬೆಳೆಗಾರರ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಏನು ಮಾಡಬಹುದು..?
ಕೆಲವು ವರ್ಷಗಳಿಗೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಯ IARC ಕ್ಯಾನ್ಸರ್ ಸಂಬಂಧಿತವಾದ ಅಧ್ಯಯನ ನಡೆಸುವಾಗ ಅಡಿಕೆಯನ್ನೇ ಟಾರ್ಗೆಟ್ ಮಾಡುತ್ತಿದೆ. ಅಡಿಕೆ ಮಾತ್ರವೇ ಅಧ್ಯಯನ ನಡೆಸುವುದಿಲ್ಲ, ಅಡಿಕೆಯ ಜೊತೆಗೆ ತಂಬಾಕು ಸಹಿತ ಇತರ ಉತ್ಪನ್ನಗಳೂ ಜೊತೆಯಾಗಿರುವ ಅಧ್ಯಯನ ನಡೆಯುತ್ತದೆ. ಹೀಗೆ ಮಾಡದಂತೆ ಒತ್ತಡ ಹೇರುವ ಕೆಲಸ ವರದಿ ಬಂದ ತಕ್ಷಣವೇ ನಡೆಯುತ್ತದೆ, ನಂತರ ಸುದ್ದಿ ಸದ್ದಿಲ್ಲದಾಗುತ್ತದೆ. WHO ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ಕ್ಯಾನ್ಸರ್ ಬಗ್ಗೆ ನೀಡುವ ಎಲ್ಲಾ ಹೇಳಿಕೆಗಳಲ್ಲೂ ಅಡಿಕೆಯನ್ನು ಉಲ್ಲೇಖಿಸುತ್ತದೆ.
ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಎಲೆ-ಅಡಿಕೆ-ಸುಣ್ಣವನ್ನು ಜಗಿಯುವ ಅನೇಕ ಮಂದಿ ಇದ್ದಾರೆ. ಅವರಿಗೆ ಎಲ್ಲರಿಗೂ ಕ್ಯಾನ್ಸರ್ ಬಂದಿಲ್ಲ, ಅಡಿಕೆಯೇ ತಿನ್ನದ ಮಂದಿಗೂ ಕ್ಯಾನ್ಸರ್ ಬಂದಿದೆ. ಹೀಗಾಗಿ ಅಡಿಕೆ ಬೆಳೆಯುವ ನಾಡಿನಲ್ಲಿ ಅಡಿಕೆ ತಿನ್ನುವ ವ್ಯಕ್ತಿಗಳ ಬಗ್ಗೆ ಅಧ್ಯಯನ ನಡೆಯಬೇಕು ಎನ್ನುವ ಒತ್ತಾಯ ಅಂದಿನಿಂದಲೂ ಇದೆ. ಆದರೆ ಅದಕ್ಕೆ ಮಾನ್ಯತೆಯೇ ಬರಲಿಲ್ಲ. ಏಕೆಂದರೆ ಅಡಿಕೆ ಬೆಳೆಗಾರರ ಲಾಬಿಯೂ ಅಷ್ಟೊಂದು ಕೆಲಸ ಮಾಡಲಿಲ್ಲ.
ಆರಂಭದಲ್ಲಿ WHO ವರದಿಯಲ್ಲಿ ಅಡಿಕೆ ಕ್ಯಾನ್ಸರ್ ಗೆ ಕಾರಣವಾಗಿರಬಹುದಾ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿ ಮುಂದಿನ ವರದಿಯಲ್ಲಿ ಅಡಿಕೆಯಿಂದ ಕ್ಯಾನ್ಸರ್ ಸಾಧ್ಯತೆ ಇದೆ ಎನ್ನುವುದನ್ನು ಹೇಳಿತು, ಮುಂದೆ ಅಡಿಕೆಯೂ ಕಾರಣ ಎನ್ನುವುದನ್ನು ಪ್ರತಿಪಾದಿಸುತ್ತಾ ಬಂದು 2013 ರ ವೇಳೆ ಅಡಿಕೆಯೇ ಕ್ಯಾನ್ಸರ್‌ಕಾರಕ ಎಂದು ಹೇಳಿತು. ಆದರೆ ಅಡಿಕೆಯೇ ಕಾರಣ ಅಥವಾ ಅಡಿಕೆಯನ್ನು ಮಾತ್ರವೇ ತಿನ್ನುವುದು ಹಾನಿಕಾರಕ ಎನ್ನುವ ಅಧ್ಯಯನ ವರದಿಯೂ WHO ದ ಬಳಿ ಇಲ್ಲ ಎನ್ನುವುದು ಅವರ ವರದಿಗಳಿಂದ ತಿಳಿಯುತ್ತದೆ.
ಅಡಿಕೆಯಲ್ಲಿ ಇರುವ ಅರೆಕೋಲಿನ್ ಸಮಸ್ಯೆ ಇರುವುದು ಹೌದು, ಆದರೆ ಅದು ಮಿತಿಯಲ್ಲಿ ಸೇವಿಸಿದರೆ ಯಾವುದೇ ಪರಿಣಾಮ ಇಲ್ಲ ಎನ್ನುವುದೂ ಇನ್ನೊಂದು ಅಧ್ಯಯನ. ಹಾಗಾಗಿ ಅಡಿಕೆ ಮಾತ್ರವೇ ತಿಂದರೆ ಹಾನಿಕಾರಕ ಎನ್ನುವದನ್ನು WHO ಪ್ರತಿಪಾದನೆ ಮಾಡುವ ಮೊದಲಾಗಿ ಅಡಿಕೆಯ ಉತ್ತಮ ಅಂಶಗಳ ಬಗ್ಗೆಯೂ ಅದೇ ಮಾದರಿಯ ವರದಿಗಳು ಕ್ಲಿನಿಕಲ್ ಟ್ರಯಲ್ ಮೂಲಕ ಉತ್ತರಿಸಬೇಕಾದ ಅನಿವಾರ್ಯತೆ ಇದೆ.ಈ ಟ್ರಯಲ್ ಅಡಿಕೆ ಬೆಳೆಗಾರರಿಗೆ ಸಾಧ್ಯವಿಲ್ಲ. ಅಡಿಕೆ ಬೆಳೆಗಾರರ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಸರ್ಕಾರಗಳು ಈ ನೆಲೆಯಲ್ಲಿ ಯೋಚನೆ ನಡೆಸಬೇಕಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಭಾಗವಾಗಿರುವ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಇದರ ಮೊನೊಗ್ರಾಫ್ಸ್ ವೈಜ್ಞಾನಿಕ ತಜ್ಞರ ಅಂತರರಾಷ್ಟ್ರೀಯ ತಂಡವು ಕ್ಯಾನ್ಸರ್ ಮತ್ತು ಅಡಿಕೆಗೆ ಸಂಬಂಧಿಸಿದ ಪ್ರಕಟಿತ ಅಧ್ಯಯನಗಳನ್ನು ಪ್ರಕಟಿಸುತ್ತಲೇ ಇದೆ.
1985 ರಲ್ಲಿ IARC ತಂಬಾಕಿನೊಂದಿಗೆ ಅಡಿಕೆಯನ್ನು ಜಗಿಯುವುದು ಮನುಷ್ಯರಿಗೆ ಕಾರ್ಸಿನೋಜೆನಿಕ್ ಎಂದು ಹೇಳಿತು. 2003 ರಲ್ಲಿ ತಂಬಾಕಿನೊಂದಿಗೆ ಅಡಿಕೆಯು ಬಾಯಿಯ ಕ್ಯಾನ್ಸರ್, ಗಂಟಲ ಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್ ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದರು. ಅಡಿಕೆ ಮಾತ್ರಾ ತಿನ್ನುವುದರಿಂದ ಬಾಯಿಹುಣ್ಣು ಆರಂಭವಾಗಿ ನಂತರ ಕ್ಯಾನ್ಸರ್ ಉಂಟಾಗುತ್ತದೆ ಎಂದು ಹೇಳಿತು. 2004 ಈ ಮಾನೋಗ್ರಾಫ್ ಅಡಿಕೆ ಜಗಿಯುವುದರ ಜೊತೆಗೆ ಕೆಲವು ಅಡಿಕೆ-ಉತ್ಪನ್ನ ನೈಟ್ರೋಸಮೈನ್‌ಗಳ ಕಾರ್ಸಿನೋಜೆನಿಸಿಟಿಯ ಪುರಾವೆಗಳನ್ನು ಹೇಳಿತು. ಈಗ ಅಡಿಕೆಯನ್ನು ಜಗಿಯುವುದು ಕೂಡಾ ಕ್ಯಾನ್ಸರ್ ಎಂದು ಅಭಿಪ್ರಾಯಪಟ್ಟಿತು. 2021 ರ IARC ಮೊನೊಗ್ರಾಫ್ಸ್ ಅರೆಕೋಲಿನ್ ಮನುಷ್ಯರಿಗೆ ಕ್ಯಾನ್ಸರ್ ಕಾರಕವಾಗಿದೆ ಎಂದು ತೀರ್ಮಾನಿಸಿತು. 2024 ಹೊಸ ಅಧ್ಯಯನವು ಜಾಗತಿಕವಾಗಿ ಬಾಯಿಯ ಕ್ಯಾನ್ಸರ್ ಪ್ರಕರಣದ ಮೂರರಲ್ಲಿ ಒಂದು ಪ್ರಕರಣವು ಹೊಗೆರಹಿತ ತಂಬಾಕು ಮತ್ತು ಅಡಿಕೆ ಸೇವನೆಯಿಂದ ಉಂಟಾಗುತ್ತದೆ ಎಂದು ಹೇಳಿತು.…..ಮುಂದೆ ಓದಿ….
ಅಡಿಕೆ ಬೆಳೆಗಾರರ ಲಾಬಿ ಹೆಚ್ಚಾಗಬೇಕು ನಿಜ. ಅದಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಇಂತಹ ಬೆಳವಣಿಗೆಗಳು ಬೆಳೆಗಾರರ ಅರಿವಿಗೆ ಬರಬೇಕು. ಇಂತಹ ವರದಿಗಳಿಂದ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಸದ್ಯ ಬೀರದು. ಏಕೆಂದರೆ ಅಡಿಕೆಯ ಕೊರತೆ ಮಾರುಕಟ್ಟೆಯಲ್ಲಿ ಇದೆ. ಅಡಿಕೆ ಬೆಳೆಯೇ ನಿಷೇಧವೂ ಆಗದು. ಇಂತಹ ವರದಿಗಳು ಬಂದಾಗ ಇದು ಮಾರುಕಟ್ಟೆ ಇಳಿಸುವ ತಂತ್ರ, ಅಡಿಕೆಗೆ ಮಾತ್ರೆ ಹಾಕುವುದೇ ಕಾರಣ, ಇದು ಉದ್ದೇಶಪೂರ್ವಕ, ಇದು ಸುಳ್ಳು ಎನ್ನುತ್ತಾ ಹೋದರೆ ತಾತ್ಕಾಲಿಕ ಶಮನವಾಗಬಹುದು, ಯಾರೋ ಮಾತನಾಡಿದವರ ಬಾಯಿಮುಚ್ಚಿಸಬಹುದು. ಆದರೆ ಸಮಸ್ಯೆ ಪರಿಹಾರ ಆಗದು. ಹೀಗಾಗಿಯೇ ಪ್ರತೀ 3-4 ವರ್ಷಗಳಿಗೊಮ್ಮೆ ಚರ್ಚೆಯಾಗುತ್ತದೆ, ಅಲ್ಲಿಗೇ ನಿಲ್ಲುತ್ತದೆ. ಹೀಗಾಗಿ ಅಡಿಕೆ ಭವಿಷ್ಯದ ದೃಷ್ಟಿಯಿಂದ ಯಾವುದೇ ರಾಜಕೀಯ, ವೈಯಕ್ತಿಕ ಟೀಕೆಗಳು ಇಲ್ಲದೆಯೇ ಈ ಬಾರಿ ಸರಿಯಾದ ನಿರ್ಧಾರಗಳು ಆಗಲಿ.
ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ನಡೆಯುತ್ತಿರುವ ಅಡಿಕೆಯ ಔಷಧೀಯ ಗುಣಗಳು, ರಾಸಾಯನಿಕ ಗುಣಗಳು, ಮತ್ತು ಕ್ಯಾನ್ಸರ್ ಕಾರಕವಲ್ಲ ಎನ್ನುವ ಸಂಶೋಧನಾ ವರದಿಗಳನ್ನು ಒಂದೆಡೆ ಕ್ರೋಢೀಕರಿಸಿ, ಈ ಸಂಶೋಧಕರ ಸಹಾಯದಿಂದ Pharmacology, Phytochemistry, Biochemistry, Economics, Social science, Ayurveda, Dentistry, Oncology, Statistics ಹೀಗೆ ಹಲವು ವಿಶ್ವ ಮಟ್ಟದ ವಿಷಯ ತಜ್ಞರನ್ನೊಳಗೊಂಡ ತಂಡವು clinical studies evidence, animal studies evidence ಮತ್ತು mechanistic evidence ಈ ವಿಭಾಗಗಳಲ್ಲಿ ಅಂಕಿ ಅಂಶಗಳು ಮತ್ತು ಫಲಿತಾಂಶಗಳನ್ನುಕ್ರೋಢೀಕರಿಸಿ ಗ್ರಂಥ ರಚಿಸಬೇಕಿದೆ. ಯಾವ ವಿಭಾಗಗಳಲ್ಲಿ ಅಂಕಿ ಅಂಶಗಳ ಕೊರತೆ ಇದೆಯೋ ಆ ವಿಭಾಗಗಳಲ್ಲಿ ಹೆಚ್ಚಿನ ಸಂಶೋಧನೆಯನ್ನೂ ಮಾಡಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ, ಕ್ಯಾನ್ಸರ್ ಕಾರಕವೂ ಅಲ್ಲ ಎನ್ನುವ ಷರಾ ಬರೆಯಬೇಕಾಗಿದೆ.
WHO ಅಂಗ ಸಂಸ್ಥೆಯಾದ IARC ಯಾವ ರೀತಿಯಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್ ಕಾರಕ ಎನ್ನುವ ಮಾನೋಗ್ರಾಫ್ ಸಿದ್ಧಪಡಿಸಿದೆಯೋ ಅದೇ ಮಾದರಿಯಲ್ಲಿ ನಾವು ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ, ಕ್ಯಾನ್ಸರ್ ಕಾರಕವೂ ಅಲ್ಲ ಎನ್ನುವ ಮಾನೋಗ್ರಾಫ್ ಸಿದ್ಧಪಡಿಸಬೇಕಾದ ಅನಿವಾರ್ಯತೆ ಬಂದಿದೆ.
For years, Arecanuts have been classified as carcinogens. Periodically, the World Health Organization’s International Agency for Research on Cancer (IARC) conducts studies on cancer, consistently suggesting that Arecanuts can contribute to the development of cancer. In light of this information, what steps can Arecanut growers, grower organizations, and research institutes take moving forward?
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel