ಸ್ನೇಹಯಾನ

ಅಡಿಕೆಗೆ ಹಳದಿ ರೋಗ ಬಂದಿದೆ….! | ಕೃಷಿಕರು ಭೂಮಿಯನ್ನು ಯಾಕೆ ಮಾರುತ್ತಿದ್ದಾರೆ..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಸುಳ್ಯ ತಾಲೂಕಿನ ಸಂಪಾಜೆ ಕಲ್ಲುಗುಂಡಿಯಿಂದ ಆರಂಭಿಸಿ ಗೂನಡ್ಕ, ಕೂರ್ನಡ್ಕ, ತೊಡಿಕಾನ, ಮರ್ಕಂಜ ಮುಂತಾದೆಡೆಗಳಲ್ಲಿ ಸಾಂಕ್ರಾಮಿಕದಂತೆ ಹರಡುತ್ತಿರುವ ಹಳದಿ ರೋಗಕ್ಕೆ ಅಡಿಕೆ ತೋಟಗಳು ಪಕ್ಕಾಗಿವೆ. ಅಡಿಕೆ ಮರದ ತುದಿಯಲ್ಲಿ ಸೋಗೆಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುವುದನ್ನು ನಿಲ್ಲಿಸಲು ಕಳೆದ ಹತ್ತು ವರ್ಷಗಳಲ್ಲಿ ಸಾಧ್ಯವಾಗಿಲ್ಲ. ಕೃಷಿ ವಿಶ್ವವಿದ್ಯಾಲಯಗಳಿಂದ ಬಂದ ವಿಜ್ಞಾನಿಗಳು ಕಾರಣಗಳನ್ನು ಕಂಡುಕೊಳ್ಳಲಾಗದೆ ಪರಿಹಾರಗಳನ್ನು ಹೇಳಲಾಗದೆ ಕೈ ಚೆಲ್ಲಿದ್ದಾರೆ. ಸಂಪಾಜೆ ಕಲ್ಲುಗುಂಡಿಯ ತೋಟಗಳಲ್ಲಿ ಈ ಕಾಯಿಲೆ ಕಂಡು ಬಂದಾಗ “ನಮ್ಮಲ್ಲಿ ಇಲ್ಲ” ಎನ್ನುತ್ತಿದ್ದ ಗೂನಡ್ಕ, ಕೂರ್ನಡ್ಕ, ತೊಡಿಕಾನ, ಬಡ್ಡಡ್ಕ ಮುಂತಾದೆಡೆಯ ಕೃಷಿಕರು “ಈಗ ನಮ್ಮಲ್ಲೂ ಇದೆ” ಎನ್ನುತ್ತಿದ್ದಾರೆ. ವಿಸ್ತಾರವಾದ ಕಾಡಿನ ನಡುವೆ ಇರುವ ಮರ್ಕಂಜದಲ್ಲಿ ಈ ರೋಗ ವ್ಯಾಪಿಸಿರುವುದು ಅಚ್ಚರಿಯ ವಿದ್ಯಮಾನ. ಹಾಗಿದ್ದರೆ ಇನ್ನು ಅದು  ಎಲ್ಲೆಲ್ಲಿ ಹರಡಬಹುದೆಂದು ಹೇಳಲು ಸಾಧ್ಯವಿಲ್ಲ ಎಂಬ ಆತಂಕ ಕೃಷಿಕರಲ್ಲಿದೆ. “ಇದಕ್ಕೆ ಪರಿಹಾರವೇನು?” ಎಂಬ ಪ್ರಶ್ನೆಗೆ ಸಿಕ್ಕಿದ ಉತ್ತರ “ಕೃಷಿ ಭೂಮಿಯನ್ನು ಮಾರುವುದು, ಮತ್ತೆ ಇನ್ನೇನು ಮಾಡುವುದು?” ಎಂಬುದೊಂದೇ.
ಸದ್ಯ ದೊಡ್ಡ ಭೂಮಾಲಕರಲ್ಲಿ ನೀರಾವರಿ ಮಾಡಲಾಗದ ಗುಡ್ಡಗಳಲ್ಲಿ ರಬ್ಬರ್ ಬೆಳೆಸಿದವರು ಸ್ವಲ್ಪ ನಿರಾಳವಾಗಿದ್ದಾರೆ. ಏಕೆಂದರೆ ರಬ್ಬರ್‌ನ ಬೆಲೆ ಅಚ್ಚರಿ ತರುವಷ್ಟು ಮೇಲೇರಿದೆ. ಈ ವರ್ಷ ಉತ್ತಮವಾದ ಆದಾಯ ರಬ್ಬರ್‌ನಿಂದಾಗಿ ಕೈ ಸೇರಿದೆ. ಅಡಿಕೆಯಲ್ಲಾದ ನಷ್ಟ ನಷ್ಟವೇ. ಆದರೆ ಬದುಕಿನ ಸ್ಥಿರತೆಗೆ ರಬ್ಬರ್ ನೆರವಾಗಿದೆ. ಹಾಗಾಗಿ ಸುಭದ್ರವಾದ ಆಧುನಿಕ ಸೌಲಭ್ಯಗಳುಳ್ಳ ಮನೆಯನ್ನು ಕಟ್ಟಿಕೊಂಡಿರುವವರು ನೆಲ ಬಿಟ್ಟು ಕೃಷಿಕ ವೃತ್ತಿಯನ್ನೇ ಬಿಟ್ಟು ಹೋಗಲು ಇನ್ನೂ ಮನ ಮಾಡಿಲ್ಲ. ಆದರೆ ರಬ್ಬರ್ ಬೆಳೆಯದೆ ತಮ್ಮಲ್ಲಿದ್ದ ಆಸ್ತಿಯನ್ನೆಲ್ಲಾ ಅಡಿಕೆ ತೋಟ ಮಾಡಿ ಅದನ್ನಷ್ಟೇ ನಂಬಿಕೊಂಡಿರುವವರು ತಮ್ಮ ಬುಡ ಅಲ್ಲಾಡಿತೆಂದೇ ತಿಳಿದಿದ್ದಾರೆ. ಕ್ಯಾನ್ಸರಿನಂತೆ ಪರಿಹಾರವಿಲ್ಲದ ರೋಗವಾಗಿ ಕಾಡುವ ಹಳದಿರೋಗದಿಂದಾಗಿ ಬರಿಗಣ್ಣಿಗೆ ಕಾಣುವ ಅಡಿಕೆ ತೋಟಗಳ ರೋಗಿಷ್ಟ ಚಿತ್ರವು ಅವರನ್ನು ಕಂಗೆಡಿಸಿದೆ. ಇದನ್ನು ಮಾರಿ ಎಲ್ಲಿಯಾದರೂ ಹೋಗಿ ಏನಾದರೂ ಮಾಡಿ ಬದುಕುವ ನಿರ್ಧಾರ ಮಾಡಿದವರು ಹಲವರಿದ್ದಾರೆ. ಇಂಜಿನಿಯರಿಂಗ್, ಮೆಡಿಕಲ್, ಎಂ.ಎಸ್.ಡಬ್ಲ್ಯು, ಎಂ.ಬಿ.ಎ. ಅಥವಾ ಇತರ ಪದವಿಗಳನ್ನು ಪಡೆದು ನಗರಗಳಿಗೆ ಹೋಗಿ ನೆಲೆ ಕಂಡಿರುವ ಮಕ್ಕಳಿದ್ದವರಿಗೆ ಮುಂದಿನ ನಿಲ್ದಾಣ ನಗರಗಳೇ ಆಗಿವೆ.
ನಾನು ಈ ಲೇಖನ ಬರೆಯುತ್ತಿರುವುದರ ಹಿಂದೆ ಒಂದು ಅನುಭವ ಇದೆ. ನಮ್ಮ ಸ್ನೇಹ ಶಾಲೆಯನ್ನು ಹಸಿರುಶಾಲೆ ಎಂದರೆ Green School ಎಂಬುದಾಗಿ ಉನ್ನತೀಕರಿಸಬೇಕು ಎಂಬ ಯೋಜನೆಯೊಡನೆ ನಮ್ಮ ಸಂಸ್ಥೆಯ ಸಲಹಾಮಂಡಳಿಯ ಸದಸ್ಯ ಡಾ. ಅರುಣ್ ಕಶ್ಯಪ್ ರವರು ದೆಹಲಿಯಿಂದ ಬಂದಿಳಿದರು. ನಾವು ಕಳೆದ ಇಪ್ಪತ್ತೆಂಟು ವರ್ಷಗಳಿಂದ ಪರಿಸರ ಸಮೃದ್ಧವಾಗಿ ನಡೆಸುತ್ತಿರುವ ಈ ಶಾಲೆಯ ಉದ್ದೇಶ ಮತ್ತು ಯೋಜನೆ ಅವರಿಗೆ ಇಷ್ಟವಾಗಿತ್ತು. ಇದನ್ನು ಇಷ್ಟಕ್ಕೇ ನಿಲ್ಲಿಸದೆ ಅಂತಾರಾಷ್ಟ್ರೀಯ ಮಟ್ಟದ ಹಸಿರು ಶಾಲೆಯನ್ನಾಗಿ ಬೆಳೆಸಬೇಕೆಂಬ ಆಸಕ್ತಿ ಅವರಲ್ಲಿತ್ತು. ಪರಿಸರ ಸಂಶೋಧಕರಾಗಿ ವಿಶ್ವದ ಅನೇಕ ದೇಶಗಳ ಪರಿಸರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಲೇಖನಗಳನ್ನು ಬರೆದಿರುವ ಅವರು ಒಂದು ಉತ್ತಮ ಯೋಜನೆಯನ್ನು (Project) ತಯಾರಿಸುವ ಕೆಲಸ ಆರಂಭಿಸಿದರು. ಈ ಶಾಲೆಗೆ ಹೊಸತೊಂದು ಕೇಂಪಸ್ ರೂಪಿಸಬೇಕೆಂಬ ಪ್ರಶ್ನೆ ಬಂದಾಗ ಸುಳ್ಯದಲ್ಲಿ ಭೂಮಿಯ ಬೆಲೆ ಎಕ್ರೆಗೆ ಎಷ್ಟು ಎಂತ ಕೇಳಿದರು. ನನಗೆ ಸದ್ಯ ಭೂವ್ಯವಹಾರ ಮಾಡಿ ಗೊತ್ತಿಲ್ಲದ್ದರಿಂದ ಅಜ್ಞಾನ ಪ್ರದರ್ಶಿಸಿದೆ. ಆಮೇಲೆ 25 ರಿಂದ 50 ಎಕ್ರೆ ವಿಸ್ತಾರದ ಭೂಮಿ ಲಭ್ಯವಿದ್ದರೆ ವಿಚಾರಿಸೋಣ ಎಂದರು. ನಮ್ಮ ವಿದ್ಯಾರ್ಥಿಗಳ ಪೋಷಕರ ಗ್ರೂಪ್ ನಲ್ಲಿ ವಾಟ್ಸಾಪ್ ಮೆಸೇಜ್ ಹಾಕಿದೆ. ಹಾಗೆ ಭೂಮಿ ನೋಡಲು ಹೋದಾಗಲೇ ತಿಳಿದದ್ದು ಅಡಿಕೆ ತೋಟಕ್ಕೆ ಎಕ್ರೆಗೆ 25ರಿಂದ 35 ಲಕ್ಷ ರೂಪಾಯಿ ಬೆಲೆ ಇದೆಯೆಂದು. ಅದನ್ನು ಕೇಳಿ ಅರುಣ್ ಕಶ್ಯಪರಿಗೂ ಆಶ್ಚರ್ಯವಾಯಿತು. ಭಾರತದ ಬಹುತೇಕ ರಾಜ್ಯಗಳಲ್ಲಿ ಭೂಮಿಯ ಕ್ರಯದ ಬಗ್ಗೆ ತಿಳಿದಿರುವ ಅವರು ಸುಳ್ಯ ತಾಲೂಕಿನಲ್ಲಿರುವ ಭೂಮಿಯ ದರವೇ ಅತ್ಯಧಿಕ ಎಂದರು. ಅಂದರೆ ಹಳದಿರೋಗದ ಕಾರಣದಿಂದಾಗಿ ಆಸ್ತಿ ಮಾರುವವರೂ ತಮ್ಮ ಭೂಮಿಗೆ ಪಕ್ಕಾ ದರವನ್ನೇ ಬಯಸುತ್ತಾರೆ. ಅದರಲ್ಲೇನೂ ತಪ್ಪಿಲ್ಲ. ಕೊಳ್ಳುವವನಿಗಿಂತ ಮುಖ್ಯವಾಗಿ ಮಾರುವವನೇ ಬೆಲೆ ನಿರ್ಧರಿಸಬೇಕೆಂಬುದು ಸಾಮಾಜಿಕ ನ್ಯಾಯ. ಆದರೆ ನನಗೆ ಕಂಡು ಬಂದ ವಿದ್ಯಮಾನವೆಂದರೆ ನಾವು ಒಂದು ಜಾಗೆಯನ್ನು ನೋಡಲು ಹೋದರೆ ಹತ್ತಿರದ ನಾಲ್ಕೈದು ಜಾಗೆಯವರೂ ಬಂದು ತಮ್ಮದೂ ಮಾರಾಟಕ್ಕೆ ಇದೆ ಎನ್ನುತ್ತಿದ್ದರು. ಅವರೆಲ್ಲರದ್ದೂ ಚಿಂತನೆ ಒಂದೇ ಆಗಿತ್ತು. “ಈ ಹಳದಿ ರೋಗದಿಂದಾಗಿ ಬೆಳೆಯೇ ಇಲ್ಲದಿದ್ದ ಮೇಲೆ ಆಸ್ತಿ ಇಟ್ಟುಕೊಂಡು ಏನು ಮಾಡುವುದು? ಸರಿಯಾದ ಬೆಲೆ ಸಿಕ್ಕಿದರೆ ಮಾರಿಬಿಡುವುದು ಎಂತ ನಿರ್ಧರಿಸಿದ್ದೇವೆ”. ಅವರ ಈ ಚಿಂತನೆಯಲ್ಲಿ “ಸರಿಯಾದ ಬೆಲೆ ಸಿಕ್ಕಿದರೆ” ಎಂಬ ಒಂದು ಗುಣಾತ್ಮಕ ಅಂಶ ಇತ್ತು. ಆದರೆ ವಾಣಿಜ್ಯ ಆಸಕ್ತಿಯಿಂದ ಬಂಡವಾಳಶಾಹಿಗಳು ಬಂದು ಚರ್ಚೆಗೆ ಇಳಿದರೆ ಈ ನಿರ್ಧಾರ ಉಳಿದೀತೇ? ಎಂಬ ಪ್ರಶ್ನೆಯೂ ಇದೆ.
ಸುಮಾರು 8 ಕೋಟಿ ಬೆಲೆ ಕೊಟ್ಟು 25 ಎಕ್ರೆ ಭೂಮಿ ಖರೀದಿಸುವಷ್ಟು ಅನುದಾನ ನಮಗೆ ದೊರೆಯಲಿಕ್ಕಿಲ್ಲ. ಅಲ್ಲದೆ ನಮಗೆ ಬೇಕಾದಂತೆ ಭೂಮಿಯನ್ನು ಅನುವುಗೊಳಿಸಲು ಸದ್ಯ ಇರುವ ಮರಗಿಡಗಳನ್ನು ಕಡಿಯುವ ಮನಸ್ಸೂ ನಮಗಿಲ್ಲ. ಅಂದರೆ ಕಾಡು ಕಡಿದು ಖಾಲಿ ಬಿಟ್ಟ ಜಾಗ ನಮಗೆ ಬೇಕಾಗಿದೆ. ಈ ವಿಷಯವನ್ನು ಬದಿಗಿಟ್ಟರೂ ನನ್ನಲ್ಲಿ ಮೂಡುವ ಪ್ರಶ್ನೆ ಎಂದರೆ ಹಿಂದೆ ಕೃಷಿಕರು ಸ್ವತಃ ಕೆಲಸ ಮಾಡುತ್ತ ಆಳು ಲೆಕ್ಕದಲ್ಲಿ ಶ್ರಮ ವಿನಿಮಯ ಮಾಡುತ್ತ, ನೀರು ಮತ್ತು ಸೊಪ್ಪುಗಳನ್ನು ಹಂಚಿಕೊಂಡು ಸರ್ವೋದಯದ ಮಾದರಿಯಲ್ಲಿ ಭತ್ತ ಬೆಳೆಸುತ್ತಿದ್ದರು. ಈ ಆಹಾರದ ಧಾನ್ಯವನ್ನು ಬೆಳೆಯುವ ಪ್ರಕ್ರಿಯೆಗೆ ಅಡ್ಡಗಾಲಿಟ್ಟದ್ದು ಅಡಿಕೆ ಬೆಳೆ. ಗದ್ದೆಯಲ್ಲಿ ತೋಟ ಬೆಳೆಸಿದವನ ಆರ್ಥಿಕ ಆಢ್ಯತೆ ಹೆಚ್ಚುತ್ತಲೇ ಉಳಿದವರು ಅವನ ದಾರಿ ತುಳಿದರು. ಆಗ ಅವರು ತಮ್ಮ ಗದ್ದೆಗಳನ್ನು ಮಾರಲಿಲ್ಲ. ಅರ್ಥಾತ್ ಭೂಮಿಯನ್ನು ವಿಕ್ರಯಕ್ಕೆ ಇಡಲಿಲ್ಲ. ಭತ್ತ ಬೆಳೆಯುವುದನ್ನು ನಿಲ್ಲಿಸಿ ಅಡಿಕೆ ತೋಟ ಮಾಡಿದರು. ಈಗ ರೋಗ ಬಂದಿರುವುದು ಅಡಿಕೆಗೆ, ಭೂಮಿಗಲ್ಲ. ಇಷ್ಟರ ತನಕ ಜೀವನವನ್ನು ಒದಗಿಸಿದ ಭೂಮಿಯಲ್ಲಿ ಬೇರೇನಾದರೂ ಬೆಳೆ ತೆಗೆದು ಜೀವನಾಧಾರವನ್ನು ಕಂಡುಕೊಳ್ಳಲು ಸಾಧ್ಯವೇ ಎಂತ ಆಲೋಚಿಸಬಹುದು. ಆದರೆ ಅಡಿಕೆ ನಷ್ಟವಾಗಿ ಉಂಟಾದ ನಿರಾಶೆಯ ಗಾಢತೆ ಎಷ್ಟಿದೆ ಎಂದರೆ ಭೂಮಿಯೇ ಶತ್ರುವೇನೋ ಎನ್ನಿಸುತ್ತಿದೆ.
ಅದೆಷ್ಟೊ ವರ್ಷಗಳಿಂದ ಕೃಷಿಯಲ್ಲಿ ಸಮೃದ್ಧತೆಯನ್ನು ಕಂಡಿದ್ದ ಕೃಷಿಕರು ಭೂಮಿಗೆ ಕೃತಜ್ಞರಾಗಿ ಮಾರಾಟ ಮಾಡದೆ ಮತ್ತೆ ಭತ್ತ ಬೆಳೆಯುವತ್ತ ಮನಸ್ಸು ಮಾಡಿದರೂ ವಿಫಲತೆಯ ಭಯ ಉಂಟಾಗದು. ಅರುಣ್‍ರವರ ಪ್ರಕಾರ ಪ್ರತಿ ಎರಡು ಸಾಲು ಅಡಿಕೆ ಗಿಡಗಳ ಮಧ್ಯೆ ಬೇರೆ ಯಾವುದಾದರೂ ಫಲ ನೀಡುವ ಗಿಡಗಳನ್ನು ನೆಟ್ಟಿದ್ದರೆ ಹಳದಿರೋಗ ವ್ಯಾಪಿಸುತ್ತಿರಲಿಲ್ಲ. ಯಾವುದೇ ಏಕ ಜಾತಿಯ ಗಿಡಗಳ ಕೃಷಿ (monocultue) ಒಂದಲ್ಲ ಒಂದು ದಿನ ದುರ್ಬಲವಾಗುತ್ತದೆ. ಮಿಶ್ರ ಸಸ್ಯಗಳ ಕೃಷಿ ಮಾಡಿದ್ದರೆ ಕೀಟಾಣುಗಳಿಗೆ ಗೊಂದಲವಾಗಿ ಹಾನಿಯಾಗುವುದು ತಪ್ಪುತ್ತಿತ್ತು. ಅವರ ಈ ಸಲಹೆಯನ್ನು ಇದು ಹೇಳಿದಷ್ಟು ಸುಲಭವಿಲ್ಲ ಎಂದು ಯಾರಾದರೂ ಪ್ರತಿಕ್ರಯಿಸಬಹುದು. ಅಂತಹ ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ. ಏಕೆಂದರೆ ಕೃಷಿಗೆ ಸಂಬಂಧಿಸಿ ನಾನು ಕಲಿಯಬೇಕಾದ್ದು ಬಹಳಷ್ಟಿದೆ.
ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

19 hours ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

20 hours ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

20 hours ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

1 day ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

2 days ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

2 days ago