ಅಸ್ಸಾಂ ಸೇರಿದಂತೆ ಆಸುಪಾಸಿನ ರಾಜ್ಯಗಳಲ್ಲಿ ಅಕ್ರಮವಾಗಿ ಬರ್ಮಾ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಒಟ್ಟು ಸುಮಾರು 10 ಸಾವಿರಕ್ಕೂ ಅಧಿಕ ಪ್ರಮಾಣದ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕ್ಯಾಚಾರ್ ಜಿಲ್ಲೆಯ ಧೋಲೈನಲ್ಲಿ ನಾಲ್ಕು ವಕಾರ್ಯಾಚರಣೆಗಳಲ್ಲಿ ಸುಮಾರು 1300 ಕೆಜಿ ಬರ್ಮಾ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧೋಲೈ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಬುಧವಾರ ಎರಡು ಟ್ರಕ್‌ಗಳು ಮತ್ತು ಕಾರುಗಳನ್ನು ತಡೆಹಿಡಿಯಲಾಗಿದ್ದು, ನಾಲ್ಕು ವಾಹನಗಳಿಂದ ಸುಮಾರು 1300 ಕೆಜಿ ಬರ್ಮಾ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಜಯಂತ್ ಸಾಹು (19), ಫಾರೂಕ್ ಅಹ್ಮದ್ ಬರ್ಭುಯಾ (19), ಆಜಾದ್ ಹುಸೇನ್ ಲಸ್ಕರ್ (24), ನಾಸಿರ್ ಉದ್ದೀನ್ ಲಸ್ಕರ್ (22), ಸರೀಮ್ ಉದ್ದೀನ್ ತಾಲೂಕ್ಡರ್ (21) ಮತ್ತು ಸುಬ್ರತಾ ದಾಸ್ ಎಂಬ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬರ್ಮಾ ಅಡಿಕೆಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಹೈಲಕಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಅಕ್ರಮವಾಗಿ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದೆ. ಇಲ್ಲಿ ಕೂಡಾ 5750 ಕೆಜಿ ಬರ್ಮಾ ಅಡಿಕೆ ವಶಕ್ಕೆ ಪಡೆಯಲಾಗಿದೆ. ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನೊಂದು ಪ್ರದೇಶದಲ್ಲಿ 4000 ಕೆಜಿ ಅಡಿಕೆ ವಶಕ್ಕೆ ಪಡೆಯಲಾಗಿದೆ.
ಈಗ ಮತ್ತೆ ಅಡಿಕೆ ಕಳ್ಳಸಾಗಾಣಿಕೆ ತಡೆಗೆ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಬರ್ಮಾ ಅಡಿಕೆ ಆಮದು ತಡೆಗೆ ಇನ್ನಿಲ್ಲದ ಪ್ರಯತ್ನ ಪೊಲೀಸರು ನಡೆಸುತ್ತಿದ್ದಾರೆ. ಹಾಗಿದ್ದರೂ ಇಲಾಖೆಗಳ ಕಣ್ಣುತಪ್ಪಿಸಿ ಅಡಿಕೆ ಆಮದಾಗುತ್ತಿದೆ.