ನೀವು ಕೃಷಿಕರೇ….? ಹಾಗಿದ್ದರೆ ಇದನ್ನು ತಪ್ಪದೆ ಓದಿ | ಹಾಗೆ ಅನುಸರಿಸಿ…

March 5, 2024
12:38 PM
ಕೃಷಿಕರ ಬದುಕು ಹೇಗಿರಬೇಕು..? ಸಕಲೇಶಪುರದ ಬಾಗೆ ಊರಿನ  ವೈ ಸಿ ರುದ್ರಪ್ಪ ಅವರ ಮಾತುಗಳು ಕೃಷಿ ಅಭಿವೃದ್ಧಿ ಮೀಡಿಯಾದಲ್ಲಿ ಪ್ರಕಟವಾಗಿದೆ. ವಾಸ್ತವ ವಿಷಯಗಳಾಗಿವೆ ಇದೆ. ಕೃಷಿ ಅಭಿವೃದ್ಧಿಯ ಯಥಾವತ್ತಾರದ ಬರಹ ಇಲ್ಲಿದೆ....

ಒಬ್ಬ ಸರಕಾರಿ ನೌಕರನಿಗೆ(Govt Worker) ಸಾಯುವ ತನಕ ಸರಕಾರ ಜೀವನ ಭದ್ರತೆ(Pension) ಕೊಡುತ್ತದೆ. ಕೃಷಿಕ(Agriculturist) ತನ್ನ ಜೀವನಕ್ಕೆ ಭದ್ರ ಅಡಿಪಾಯವನ್ನು ತಾನೇ ಹಾಕಿಕೊಳ್ಳಬೇಕಾಗುತ್ತದೆ. ಪ್ರತೀಯೊಬ್ಬ ಕೃಷಿಕನೂ ತನ್ನ ದುಡಿಯುವ ವಯಸ್ಸು ಮೀರಿದ ನಂತರ ಏನು ಎಂದು ಎಂಬುದನ್ನು ದುಡಿಯುವ ವಯಸ್ಸು ಇರುವಾಗ ಯೋಚಿಸಬೇಕು. ಮತ್ತು ಅದಕ್ಕೆ ಬೇಕಾದ ಅಡಿಪಾಯವನ್ನು ಹಾಕಬೇಕು. ಸಾಮಾನ್ಯವಾಗಿ ಸಾಧಿಸುವುದೇನಾದರೂ ಇದ್ದರೆ ಅದನ್ನು 50 ವರ್ಷಗಳ ಒಳಗೇ ಸಾಧಿಸಿ ಮುಗಿಸಬೇಕು. ಆ ನಂತರ ಮಾಡಬಾರದೆಂದೇನೂ ಇಲ್ಲ. ಅದೆಲ್ಲವೂ ಪ್ಲಸ್. ಆದರೆ ಅದಕ್ಕಿಂತ ಮುಂಚೆ ಮಾಡಿದರೆ ಒಳ್ಳೆಯದು ಎಂದು ಹಿರಿಯರೂ ಹಾಗೂ ಉತ್ತಮ ಕೃಷಿಕರೂ ಆಗಿರುವ ಹಾಸನ ಜಿಲ್ಲೆ, ಸಕಲೇಶಪುರದ ಬಾಗೆ ಊರಿನ  ವೈ ಸಿ ರುದ್ರಪ್ಪ ಅವರು ಹೇಳುವ ಮಾತು.

ದುಡಿಯುವ ಶಕ್ತಿ ಇರುವಾಗ ಸಾಕಷ್ಟು ದುಡಿಯಬೇಕು. ಸಮಯವನ್ನು ಹಾಳು ಮಾಡಬಾರದು.
ಎಲ್ಲಾ ಸಂಪಾದನೆಯೂ ದುಡಿದು ಮಾಡಿದ್ದೇ ಆಗಿರಬೇಕು. ನೋಡುವವರಿಗೆ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಯಾವ ಖರ್ಚು ವೆಚ್ಚಗಳನ್ನೂ ಮಾಡಬೇಡಿ. ವಯಸ್ಸಿನ ಸಮಯದಲ್ಲಿ ನೀವು ನಿಮ್ಮವರಿಗೆ ಯಾವಾಗಲೂ ಬೇಕು ಎನ್ನಿಸುವಂತೆ ಇರಿ. ನಾವು ಹೇಳುವುದೆಲ್ಲವೂ ಅನುಭವದಲ್ಲಿ ಕಂಡುಕೊಂಡದ್ದು ಆಗಿರಬೇಕು.

ಹೀಗಿರಬೇಕು ಜೀವನ ಶೈಲಿ: ನಾವು ನಮ್ಮ ಕುಟುಂಬದ ಯಾವುದೇ ಸದಸ್ಯರಲ್ಲಿ ಅದು ಮಕ್ಕಳಿರಲಿ, ಮಡದಿಯೇ ಇರಲಿ. ಯಾವುದನ್ನೂ ಆಜ್ಞೆ ಮೂಲಕ ಮಾಡಿಸಬಾರದು. ನಮ್ಮ ಬಟ್ಟೆಯನ್ನು ನಾವೇ ಒಗೆದುಕೊಳ್ಳುವ ಅಭ್ಯಾಸವನ್ನು ಸಣ್ಣದರಿಂದಲೇ ಮಾಡಿಕೊಳ್ಳಬೇಕು. ನನಗೆ ಒಂದು ಲೋಟೆ ನೀರು ಬೇಕಾದರೆ ಅದನ್ನು ಯಾರನ್ನೂ ಅದು ಮಡದಿಯೇ ಆಗಿದ್ದರೂ ಕೂಗಿ ಕೇಳುವುದಲ್ಲ. ನಾವೇ ಹೋಗಿ ತರುವ ಅಭ್ಯಾಸ ಉತ್ತಮ. ಯಾರನ್ನೂ ನಮ್ಮ ಆಳು ಎಂದು ತಿಳಿದುಕೊಳ್ಳಬಾರದು. ಪ್ರತೀಯೊಬ್ಬನ ಸ್ವ ಗೌರವಕ್ಕೆ ಬೆಲೆ ಕೊಡಬೇಕು. ಸರಳತೆಯನ್ನು ನಾವು ಮೈಗೂಡಿಸಿಕೊಳ್ಳಬೇಕು. ನಡೆದು ಹೋಗುವಲ್ಲಿ ನಡೆದೇ ಹೋಗಬೇಕು. ಉಳಿತಾಯ ಮಾಡುವಲ್ಲಿ ಉಳಿತಾಯ ಅಗತ್ಯವಾಗಿ ಮಾಡಬೇಕು. ಶೋಕಿಗಾಗಿ ಖರ್ಚು ಮಾಡುವುದು ಸೂಕ್ತವಲ್ಲ.
ಜಿಪುಣ ಆಗಿರಬಾರದು.

ಆರೋಗ್ಯವನ್ನು ಉಳಿಸಿಕೊಳ್ಳುವುದಕ್ಕೆ ಪ್ರಥಮ ಆದ್ಯತೆ: ಪ್ರತೀಯೊಬ್ಬ ಕೃಷಿಕನೂ ಅವನವನ ಬಳಕೆಗೆ ಬೇಕಾಗುವ ತರಕಾರಿ, ಧವಸ ಧಾನ್ಯಗಳನ್ನು ತಾನೇ ಉತ್ಪಾದಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಆರೋಗ್ಯ ಕೆಟ್ಟರೆ ಯಾವುದೂ ಇಲ್ಲ. ಅದನ್ನು ಉಳಿಸಿಕೊಳ್ಳಲು ಪ್ರಥಮ ಆದ್ಯತೆ ಇರಬೇಕು. ನಮಗೆ ಬೇಕಾಗುವ ಹಾಲಿಗಾಗಿ ನಮ್ಮಲ್ಲೇ ದನ ಸಾಕಬೇಕು.
ದನಗಳಿಗೆ ಆರೋಗ್ಯಕರ ಆಹಾರವನ್ನು ಪೂರೈಕೆ ಮಾಡಬೇಕು. ವೈದ್ಯರಲ್ಲಿಗೆ ಹೋಗಿ ಆರೋಗ್ಯ ಸರಿಮಾಡಿಕೊಳ್ಳುವುದಲ್ಲ. ನಮ್ಮ ಆಹಾರಾಭ್ಯಾಸದಂತೆ ನಾವು ಸಾಕುವ ಹಸುಗಳಿಗೂ ಆಹಾರಾಭ್ಯಾಸ ಮಾಡಿದ್ದೇ ಆದರೆ ಅವುಗಳಿಗೂ ವೈದ್ಯರ ನೆರವು ಬೇಕಾಗುವುದಿಲ್ಲ. ಬದುಕನ್ನು ನಾವು ಕಾಲಕಾಲಕ್ಕೆ ಸರಿಯಾಗಿ ಅಪ್ಗ್ರೇಡ್ ಆಗುತ್ತಾ ಇರಬೇಕು.

ನಮ್ಮ ಹೊಲದಲ್ಲಿ ದುಡಿಯುವ ಆಳುಗಳನ್ನು ನಾವು ನಮ್ಮವರಂತೆ ನೋಡಿಕೊಂಡರೆ ಅವರೂ ನಮ್ಮಂತೆ ಎಂದು ಕಾಣಬೇಕು. ಕಾರ್ಮಿಕರಿಂದ ಕೃಷಿ ಹಾಳಾಗುವುದಿಲ್ಲ. ನಮ್ಮಿಂದ ಮಾತ್ರ ಕೃಷಿ ಹಾಳಾಗುತ್ತದೆ.ನಾವು ಬೆಳೆದ ಆಹಾರವನ್ನು ನಾವು ತಿನ್ನಬೇಕು. ಅದನ್ನು ಮಾರಾಟ ಮಾಡಿ ಅಂಗಡಿಯಿಂದ ಬೇರೆ ತರುವುದಲ್ಲ. ಮನೆಯಲ್ಲಿ ಯಾವಾಗಲೂ ಜಗಳ ಇರಬಾರದು. ಮನೆಯಲ್ಲಿ ಮಕ್ಕಳಿಗೆ ಮದುವೆಯಾದ ನಂತರ ಸೊಸೆಯರು ಬರುತ್ತಾರೆ. ಸೊಸೆಯಂದಿರು ನಮ್ಮ ಸೇವಕರಲ್ಲ. ಅವರನ್ನು ಗೌರವದಿಂದ ಕಾಣಬೇಕು.

ಮಕ್ಕಳಿಗೆ ಉತ್ತಮ ಶಿಕ್ಷಣ , ಸಂಸ್ಕ್ರಾರ ಕೊಡಬೇಕು. ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ. ಅದಕ್ಕಾಗಿ ನಾವು ಮಕ್ಕಳು ಎಳೆ ವಯಸ್ಸಿನಲ್ಲಿರುವಾಗಲೇ ನಮ್ಮ ನಡವಳಿಕೆಯನ್ನು ಬದಲಿಸಿ ಅನುಕರಣೀಯವಾಗಿರಬೇಕು. ದನ ಬೇಡ ಎಂದರೆ ಆರೋಗ್ಯ ಎಲ್ಲಿಂದ. ಹೇಳುವುದೆಲ್ಲವನ್ನೂ ಮಾಡಿ ತೋರಿಸಬೇಕು. ಕೃಷಿ ದುರಾಸೆಯನ್ನು ಪೂರೈಸದು. ಆಸೆಯನ್ನು ಪೂರೈಸುತ್ತದೆ. ಕೃಷಿಯಲ್ಲಿ ನಾವು ನಮ್ಮನ್ನು 100 % ತೊಡಗಿಸಿಕೊಂಡರೆ ಮಾತ್ರ ಅದು ಒಲಿಯುತ್ತದೆ. ಮನೆಯಲ್ಲಿ, ಅಥವಾ ಕುಟುಂಬದಲ್ಲಿ ಅಣ್ಣ ತಮ್ಮ ಜಗಳ, ಹೊಡೆದಾಟ ಮಾಡಬಾರದು. ತಂದೆ ಮಕ್ಕಳು ಹೊಡೆದಾಡುವುದು, ಜಗಳ ಆಡುವುದು ಇದೆಲ್ಲಾವೂ ಮನೆ ಮನೆತನದ ಅಧಪಥನಕ್ಕೆ ಕಾರಣ. ಸಾತ್ವಿಕ ಆಹಾರ ಸೇವನೆಯಿಂದ ಮಾತ್ರ ಸಾತ್ವಿಕ ಮನೋಸ್ಥಿತಿ ಬರುತ್ತದೆ.

ವಯಸ್ಸಾದ ಮೇಲೆ ಸುಖವಾಗಿರಬೇಕಾದರೆ : ಆರೋಗ್ಯ ದ ಬಗ್ಗೆ 100% ಗಮನ ಇರಲಿ. ಆರೋಗ್ಯ ಕೆಟ್ಟರೆ ನಮ್ಮ ಆ ತನಕದ ಎಲ್ಲಾ ಒಳ್ಳೆತನ ಫೇಲ್ ಆದಂತೆ. ಯಾವುದೇ ಆಹಾರ ಅಭ್ಯಾಸ ದುರಭ್ಯಾಸಗಳನ್ನು ಹೊಂದಿದ್ದರೆ 50 ವರ್ಷ ದಾಟಿದ ನಂತರ ಬಿಟ್ಟೇ ಬಿಡಿ. ಆರೋಗ್ಯವೇ ಭಾಗ್ಯ. ಅದಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಾ ಇರಬೇಕು. ಆರೋಗ್ಯ ಕೆಟ್ಟರೆ ಹೆಂಡತಿಗೂ ಬೇಜಾರು ಬಂದು ಬಿಡುತ್ತದೆ. ಯಾವುದೇ ಖಾಯಿಲೆಗೂ ನಮಲ್ಲೇ ಔಷಧಿ ಇದೆ. ವರ್ಷಾನುಗಟ್ಟಲೆ ಹಾಸಿಗೆ ಹಿಡಿದವರೂ ಇದ್ದಾರೆ. ಕೆಲವರು ಒಂದಷ್ಟು ಹಣ ಕೂಡಿಟ್ಟುಕೊಂಡಿರುತ್ತಾರೆ. ಆದರೆ ಆರೋಗ್ಯ ಕಾಳಜಿ ಹೊದಿರುವುದಿಲ್ಲ. ಎಲ್ಲಾ ಕೂಡಿಟ್ಟ ಹಣ ಆಸ್ಪತ್ರೆಗೆ ಖರ್ಚಾದರೆ ಫಲ ಏನು?

ಊಟ ಮಾಡಿದ ನಂತರ ಮತ್ತೆ ಊಟ ಮಾಡೋಣ ಎನ್ನಿಸುವಷ್ಟು ಮಾತ್ರ ಊಟ ಮಾಡಬೇಕು. ಅಲ್ಲಿಗೆ ತಿನ್ನುವುದು ನಿಲ್ಲಿಸಬೇಕು. ಹೊಟ್ಟೆ ಬಿರಿಯುವಂತೆ ಉಂಡರೆ ಆರೋಗ್ಯ ಸಮಸ್ಯೆ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ಮಿತ ಆಹಾರದಿಂದ ಆರೋಗ್ಯ ಉತ್ತಮವಾಗಿರುತ್ತದೆ. ಯಾವಾಗಲೂ ಕ್ರಿಯಾತ್ಮಕವಾಗಿರಿ. ಚಟುವಟಿಕೆ ಆರೋಗ್ಯವನ್ನು ಮೇಲ್ದರ್ಜೆಗೇರಿಸುವ ಮೆಟ್ಟಿಲು. ಎಷ್ಟು ಚುರುಕುತನ ಇರುತ್ತದೆಯೋ ಅಷ್ಟು ಆರೋಗ್ಯ ಇರುತ್ತದೆ. ನಿಮ್ಮೊಂದಿಗೆ ನಿಮ್ಮವರೂ ಇರುತ್ತಾರೆ. ಅದು ಇಲ್ಲವಾದರೆ ಮೂಲೆ ಗುಂಪಾಗುತ್ತೀರಿ. ವೃದ್ಧಾಶ್ರಮಕ್ಕೂ ಹೋಗಬೇಕಾಗಿ ಬರಬಹುದು. ಯಾರೂ ಶತ್ರುಗಳಿರಬಾರದು ಹೃದಯ ಶೀಮಂತಿಕೆ ಇರಬೇಕು.

ಜನ ಬೆಂಬಲ, ಭೂಮಿ, ಪ್ರಕೃತಿ ಎಲ್ಲರ ಸಹಕಾರದಿಂದ ಕೃಷಿ ಎಂಬ ಸೌಧ ಆಗಿರುತ್ತದೆ. ಇದು ನಮ್ಮದು ಎಂದು ಸ್ವಾರ್ಥ ಧೋರಣೆ ಅನುಸರಿಸದಿರಿ. ಕೊಡುವ ಸಾಮಾರ್ಥ್ಯ ಇರುವಾಗ ಕೊಡಬೇಕು. ವಯಸ್ಸಿನ ಸಮಯದಲ್ಲಿ ನಮ್ಮಲ್ಲಿ ಒಂದಷ್ಟು ಹಣ ನಮ್ಮಲ್ಲಿರಬೇಕು. ಇದು ನಮಗೆ ಧೈರ್ಯ ಕೊಡುತ್ತದೆ. ಹಣ ಏನೂ ಮಾಡುವುದಿಲ್ಲ.ಜನರನ್ನು ನಮ್ಮವರನ್ನು ಹತ್ತಿರ ಇಡುತ್ತದೆ. ನಾವು ಬೇಗ ಎದ್ದಾಗ ನಮ್ಮ ಮಕ್ಕಳು ಬೇಗ ಏಳುತ್ತಾರೆ.ಹಗಲು ಮಲಗಲು ಇರುವುದಲ್ಲ. ಹಗಲು ಕೆಲಸ ಮಾಡಲು ಇರುವುದು.

ವಿಶೇಷವಾಗಿ ಕೃಷಿಕರಿಗೆ ಎಲ್ಲರಿಗಿಂತ ಹೆಚ್ಚು, ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಅವಕಾಶ ಇರುತ್ತದೆ. ಕೃಷಿಕರಿಗೆ ಜೀವನ ನಡೆಸಲು ಕೃಷಿಯೇ ಆಸರೆ. ಅದನ್ನು ದೇವರಂತೆ ಕಾಣಬೇಕು. ನೆಮ್ಮದಿಯ ಬದುಕು ಮತ್ತು ಸ್ವಸ್ಥ ಬದುಕೇ ಕೃಷಿಕರ ಅಂತಿಮ ಗುರಿಯಾಗಿರಬೇಕು.

ಮೂಲ : Krushi abhivrudhi

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ
March 12, 2025
10:13 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |
March 12, 2025
10:03 PM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್
March 12, 2025
7:19 AM
by: The Rural Mirror ಸುದ್ದಿಜಾಲ
 ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ
March 12, 2025
7:13 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror