ಬದುಕಿನಲ್ಲಿ ಎಲ್ಲವನ್ನೂ ಸಮತೋಲನದಲ್ಲಿಟ್ಟುಕೊಂಡಾಗ ಮೋಕ್ಷಕ್ಕೆ ದಾರಿ. ಧರ್ಮವನ್ನು ಅನುಸರಿಸಿಕೊಂಡು ಅರ್ಥ ಕಾಮಗಳು ಇರಬೇಕಾಗುತ್ತದೆ. ಉಪಾಸನೆಯೂ ಕೂಡ ಆಯುರ್ವೇದ ಚಿಕಿತ್ಸೆಯ ಒಂದು ಭಾಗ ಎಂದು ಆಯುರ್ವೇದದಲ್ಲಿ ಉಲ್ಲೇಖವಾಗಿದೆ ಎಂದು ಆರೋಗ್ಯ ಭಾರತಿಯ ಜಿಲ್ಲಾ ಉಪಾಧ್ಯಕ್ಷ, ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯ, ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹೇಳಿದರು.
ಅವರು ಪುತ್ತೂರು ಜಿಲ್ಲೆಯ ಆರೋಗ್ಯ ಭಾರತಿಯ ವತಿಯಿಂದ ಸುಳ್ಯ ತಾಲೂಕಿನ ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ನಡೆದ ಧನ್ವಂತರಿ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮನುಷ್ಯನ ಅಹಂ ತ್ಯಜಿಸುವುದರಿಂದ ದೇವರನ್ನು ತನ್ನೊಳಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾನು ಭಾರಿ ಸೇವೆ ಮಾಡಿದ್ದೇನೆ, ನಾನು ಭಾರಿ ಒಳ್ಳೆ ಜನ ಎನ್ನುವುದು ಕೂಡ ಒಂದು ರೀತಿಯ ಅಹಂಕಾರಗಳು. ಇದನ್ನು ಸುತ್ತಮುತ್ತಲಿನ ಪರಿಸರದಲ್ಲಿ ನಾವು ದಿನನಿತ್ಯ ಕಾಣುತ್ತಿರುತ್ತೇವೆ. ಆದರೆ ಈ ರೀತಿಯ ಮನೋಧರ್ಮಗಳು ನಮ್ಮ ನರಮಂಡಲಕ್ಕೆ ಹೊತ್ತುಕೊಳ್ಳುವುದಕ್ಕೆ ಭಾರ. ಭಗವಂತನ ಭಕ್ತಿಯ ಸ್ಪರ್ಶವಿಲ್ಲದ ಸೇವೆಯೂ ಕೂಡ ಕೇವಲ ಅಹಂಕಾರವನ್ನು ಪುಷ್ಟಿಗೊಳಿಸುವ ಸಂಗತಿ ಆಗುತ್ತದೆ, ನೀರಿನ ಸ್ಪರ್ಶವಿಲ್ಲದ ಸಾಬೂನಿನಂತೆ ನೊರೆಯು ಇಲ್ಲ, ಸುಗಂಧವು ಇಲ್ಲ.ಅಹಂಕಾರದಿಂದ ಕೋಪ ಪ್ರಕಟಗೊಳ್ಳುತ್ತದೆ ಮತ್ತು ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.
ತುಳಸಿಯ ನೀರನ್ನು ನಿತ್ಯವೂ ಸೇವಿಸುವುದರಿಂದ ಆರೋಗ್ಯದಿಂದಿರಬಹುದು ಮತ್ತು ಹೃದಯದ ರೋಗ ಬರದಂತೆ ತಡೆಗಟ್ಟಬಹುದು.ಜೀವನ ನಡೆಸುವ ಕ್ರಮದ ಬಗ್ಗೆ ಒತ್ತು ನೀಡಿದರು.
ವಳಲಂಬೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬೆಳ್ಯಪ್ಪಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಭಾರತೀಯ ಜಿಲ್ಲಾ ಕಾರ್ಯದರ್ಶಿ ಗಣೇಶ್ ಭಟ್ ಮುವ್ವಾರು ಆರೋಗ್ಯ ಭಾರತೀಯ ಕಾರ್ಯವೈಖರಿ ಹಾಗೂ ಉದ್ದೇಶ ವಿವರಿಸಿದರು. ಕಿಶೋರ್ ಕುಮಾರ್ ಪೈಕ ಸ್ವಾಗತಿಸಿ ವಂದಿಸಿದರು.