ಕರ್ನಾಟಕ ಹಾಗೂ ಕೇರಳದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕ್ಯಾಂಪ್ಕೋ ವತಿಯಿಂದ ಮೇ.11 ರಿಂದ ಮೇ.15 ರವರೆಗೆ ತಾತ್ಕಾಲಿಕವಾಗಿ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕುಡ್ಗಿ ತಿಳಿಸಿದ್ದಾರೆ. ಆದರೆ ಅಡಿಕೆ ಮಾರುಕಟ್ಟೆ ಯಾವುದೇ ಬೆಳೆಗಾರರು ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ ಹಾಗೂ ಕೇರಳದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿದ್ದು ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರಕಾರಗಳ ಕಠಿಣ ನಿಯಮ ಪಾಲನೆ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಸದಸ್ಯರ ಮತ್ತು ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ರೋಗ ಹರಡುವಿಕೆಯ ನಿಯಂತ್ರಣಕ್ಕಾಗಿ ಸರಕಾರಗಳ ಪ್ರಯತ್ನವನ್ನು ಬೆಂಬಲಿಸಿ ಮೇ.11 ರಿಂದ 15 ರ ವರೆಗೆ ಕೇರಳ ಹಾಗೂ ಕರ್ನಾಟಕದಲ್ಲಿ ಸಂಸ್ಥೆಯ ಯಾವುದೇ ಶಾಖೆಗಳಲ್ಲಿ ಸರಕು ಖರೀದಿ ಸಹಿತ ಯಾವುದೇ ವಹಿವಾಟುಗಳು ನಡೆಯುವುದಿಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕುಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಕೆಲವು ನಿಯಮಗಳೊಂದಿಗೆ ಖರೀದಿ ನಡೆಸುತ್ತಿತ್ತು. ಈಗಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಖರೀದಿ ಸಾಧ್ಯವಾಗುತ್ತಿಲ್ಲ. ಆದರೆ ಇದುವರೆಗಿನ ಅಧ್ಯಯನದ ಪ್ರಕಾರ ಅಡಿಕೆಗೆ ಬೇಡಿಕೆ ಹೆಚ್ಚುತ್ತಿದೆ. ಅಡಿಕೆ ಮಾರುಕಟ್ಟೆ ಯಾವುದೇ ಕಾರಣಕ್ಕೂ ಅಸ್ಥಿರವಾಗುವುದಿಲ್ಲ, ಅಸ್ಥಿರಗೊಳಿಸಲೂ ಬಿಡುವುದಿಲ್ಲ. ಬೆಳೆಗಾರರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿಕೊಂಡು ಸರಕಾರದ ನಡೆಗಳ ಅನುಸಾರ ಖರೀದಿ ಪ್ರಕ್ರಿಯೆಯನ್ನು ಪುನರಾರಂಭಿಸುವ ಎಲ್ಲ ಪ್ರಯತ್ನಗಳನ್ನು ಸಂಸ್ಥೆಯು ಮಾಡಲಿದೆ ಮತ್ತು ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಬಗ್ಗೆ ಸಂಸ್ಥೆಯ ಆಡಳಿತಮಂಡಳಿ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ ಎಂದು ಕಿಶೋರ್ ಕುಮಾರ್ ಕುಡ್ಗಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.