ಸಾಂಪ್ರದಾಯಿಕವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಕೊಯ್ಲು ನವಂಬರ್ ತಿಂಗಳ ಕೊನೆಗೆ ಆರಂಭವಾಗುತ್ತದೆ. ಮಳೆ ಕಡಿಮೆಯಾಗಿ ಚಳಿ ಆರಂಭವಾಗಿ ಬಿಸಿಲು ಏರುವ ಹೊತ್ತು. ಅಂತೆಯೇ ನಮ್ಮ ತೋಟದ ಕೊಯ್ಲು ನಿನ್ನೆ ಆಯಿತು. ಹಣ್ಣು ಗೊನೆಯನ್ನು ಬಡಿದು, ಅಡಿಕೆ ಕಳಚಿಕೊಂಡ ಕೊನೆಯನ್ನು ಮತ್ತೆ ತೋಟಕ್ಕೆ ಗೊಬ್ಬರವಾಗಿಸಲು ಸಾಗಿಸುವ ಹೊತ್ತು. ಬುಟ್ಟಿಗೆ ಖಾಲಿ ಗೊನೆಯನ್ನು ತುಂಬಿಸಿ ವಲಸೆ ಕಾರ್ಮಿಕಳೊಬ್ಬಳಿಗೆ ಎತ್ತಿ ಹೊರಿಸಿ ಜೀಪಿನೊಳಗೆ ತುಂಬಿಸಲು ಹೇಳಿದೆ. ಎರಡನೇ ಬಾರಿಗೆ ತುಂಬಾ ಭಾರವಾಗುತ್ತದೆ, ಕಮ್ಮಿ ತುಂಬಿಸಿ ಅಂತಂದಳು. ಅಬ್ಬಬ್ಬಾ ಅಂದರೂ 15 ಕೆಜಿ ಭಾರ! ಅನಿಸಿದರೆ ನಾವೆತ್ತ ಸಾಗುತ್ತಿದ್ದೇವೆ ಎಂದು ಮನಸ್ಸು ಖೇದಗೊಂಡಿತು. ಹಲವು ವರ್ಷದ ಹಿಂದಾಗಿದ್ದರೆ ನನ್ನ ಪ್ರತಿಕ್ರಿಯೆ ಬೇರೆಯೇ ಇರುತ್ತಿತ್ತು. ಅನುಭವ ಮತ್ತು ಅನಿವಾರ್ಯತೆಯಿಂದಾಗಿ ತಾಳ್ಮೆಯಲ್ಲಿ ಆಕೆಗೆ ಮತ್ತು ಸಹೋದ್ಯೋಗಿಗಳಿಗೆ ವಿವರಿಸಿದೆ.
40 ವರ್ಷಕ್ಕೆ ಹಿಂದೆ ನಮ್ಮಲ್ಲಿ ಹುಕ್ರಪ್ಪನೆಂಬ ಕೃಷಿ ಸಹಾಯಕನಿದ್ದ. ಮನೆಗೆ ಮಳೆಗಾಲದಲ್ಲಿ ಮಾರ್ಗ ಇಲ್ಲದ ಸಮಯ. ಎಳ್ಳಿಂಡಿ ಬರುತ್ತಿದ್ದುದೆ ಕ್ವಿಂಟಲ್ ಗೋಣಿಯಲ್ಲಿ. ಎತ್ತಿನ ಗಾಡಿಯಿಂದ ಇಳಿಸಿ ಮನೆಗೆ ತಲುಪಬೇಕಾದರೆ 50 ಮೀಟರ್ ಹೊರಲೇ ಬೇಕಾಗಿತ್ತು. ವಿಭಾಗಿಸಿ ಹೊರೋಣವೆಂದು ತಿಳಿಸಿದರೆ ಆತ ಸರ್ವಥಾ ಒಪ್ಪಲಾರ. ಇದನ್ನು ಹೊರದೆ ಇದ್ದರೆ ನಾನು ಊಟ ಮಾಡುವುದು ಯಾತಕ್ಕಾಗಿ? ಉಂಡ ಅನ್ನಕ್ಕೆ ಅಷ್ಟಾದರೂ ಮರ್ಯಾದೆ ಕೊಡಬೇಡವೇ? ಆತನ ಮರು ಪ್ರಶ್ನೆ. ಆತನ ಸಾಮರ್ಥ್ಯಕ್ಕೆ ಮತ್ತು ಸ್ವಾಭಿಮಾನಕ್ಕೆ ಮೂಕನಾಗಿ ಹೋಗಿದ್ದೆ. ಇದನ್ನು ಎಲ್ಲರಿಗೂ ತಿಳಿಸಿ, ಕೇವಲ 20 ಅಡಿ ದೂರಕ್ಕೆ 15 ಕೆಜಿ ಭಾರ ಎಂದು ಎನಿಸಿದರೆ ನೀನು ಉಣ್ಣುವ ರೊಟ್ಟಿಗಾದರೂ ಮರ್ಯಾದಿ ಬೇಡವೇ? ಅಂತ ಮರು ಪ್ರಶ್ನಿಸಿದೆ. ಮುಗುಳು ನಗುತ್ತಾ ಮಾತನಾಡದೆ ಪೂರ್ತಿಯಾಗಿ ಹೊತ್ತು ಮುಗಿಸಿದಳು.
ಇದು ಕೇವಲ ಒಂದು ಉದಾಹರಣೆ ಮಾತ್ರ. ಆಧುನಿಕ ಯುವ ಜನಾಂಗದ ಕೆಲಸ ಮಾಡುವ ಅಸಾಮರ್ಥ್ಯ, ದೈಹಿಕ ಶ್ರಮದ ಮೇಲಿನ ನಿರಾಸಕ್ತಿ, ಮಾಡುವ ಕೆಲಸದ ಮೇಲೆ ಪ್ರೀತಿ ಇಲ್ಲದೇ ಇರುವುದು, ಸೂಕ್ಷ್ಮ ಅವಲೋಕನದಲ್ಲಿ ಹಿಂದೇಟು, ಒಂದು ಕೆಲಸವಾಗುವಾಗ ಇನ್ನೊಂದು ಕೆಲಸ ಹಾಳಾಗದಂತ ಎಚ್ಚರಿಕೆ, ಸಮಯದ ಮೇಲೆ ನಿಗಾ ಇಲ್ಲದೆ ಇರುವುದು ಮತ್ತು ಯಾವುದೇ ಶಿಸ್ತಿಗೆ ಒಳಪಡದೆ ಇರುವುದು ಇತ್ತೀಚಿನ ವರ್ಷಗಳಲ್ಲಿ ಜಾಸ್ತಿ ಆಗುತ್ತಿದೆಯೇ ಎಂದು ಅನಿಸುತ್ತದೆ.
ಕೃಷಿ ಕ್ಷೇತ್ರದಲ್ಲಿ ಯಾವುದೇ ಶ್ರಮವಿಲ್ಲದೆ ಕೆಲವೊಂದು ಅಚ್ಚುಕಟ್ಟುತನವನ್ನು ಸಾಧಿಸಬಹುದು. ತೆಂಗಿನ ಮಡಲನ್ನು ಕಡಿದು ಬೆನ್ನು ಮೇಲಾಗಿಸಿ ಹೊಟ್ಟೆ ಕೆಳಗಾಗಿಸಿದಂತೆ ಇಟ್ಟರೆ ಅಚ್ಚುಕಟ್ಟಾಗಿ ನಿಲ್ಲುತ್ತದೆ. ಇದನ್ನು ತೋರಿಸಿಕೊಟ್ಟರೆ ಆ ದಿನಕ್ಕೆ ಅದು ಮುಗಿದು ಹೋಗಿರುತ್ತದೆ. ಮರುದಿನ ನೂತನ ದಿನವೇ ಆಗಿರುತ್ತದೆ. ಹಗ್ಗ ಹಿಡಿದು ಕೊಟ್ಟರೂ ತರಕಾರಿ ಸಾಲು ನೇರಬಾರದು. ಬಾಳೆ ಗಿಡವನ್ನು ಕಡಿಯುವುದೆಂದರೆ ಪಕ್ಕದ ಅಡಿಕೆ ಗಿಡದ ಮೇಲೆ ಬಿದ್ದರೂ ಗಮನಕ್ಕೆ ಬಾರದು. ಹೀಗೆ ಪಟ್ಟಿ ಮುಂದುವರೆಯಬಹುದು.
ಕಸ ಗುಡಿಸುವುದೂ ಒಂದು ಕಲೆ ಎಂಬ ಅನುಭವ ಇತ್ತೀಚೆಗೆ ನನಗೆ ಆಗುತ್ತಿದೆ. ಹಿಡಿಸೂಡಿಯನ್ನು ಸರಿಯಾಗಿ ಹಿಡಿಯಲೂ ಬಾರದು, ಉದುರಿದ ಕಡ್ಡಿಗಳನ್ನು ಪುನಃ ಸಿಕ್ಕಿಸಬೇಕು ಎಂಬುದು ಗೊತ್ತಾಗದು. ಕಡ್ಡಿಗಳು ಹಿಂದು ಮುಂದಾದರೆ ಆಗಾಗ ಹಿಂದಿನಿಂದ ಗುದ್ದಿ ಕೊಳ್ಳಬೇಕು ಎಂಬ ಅರಿವು ಬಾರದಿರುವುದು, ಧೂಳು ಗುಡಿಸುವುದು, ಕಸಗುಡಿಸುವುದು ಕ್ರಮಗಳು ಬೇರೆ ಬೇರೆ ಎಂಬ ಜ್ಞಾನ ಇಲ್ಲದೇ ಇರುವುದು ಬಹಳ ಆಶ್ಚರ್ಯ ತರುವ ಸಂಗತಿಗಳು. ಕಾಳು ಮೆಣಸು ಗುಡಿಸಿದರಂತೂ ಅಂಗಳದಿಂದ ಹೊರ ಹೋಗುವುದೇ ಜಾಸ್ತಿ.
ನೆಲ ಸಾರಿಸುದರತ್ತ ಗಮನಕೊಟ್ಟರೆ, ಸರಿಯಾಗಿ ಬಟ್ಟೆ ಹಿಡಿಯಲೂ ಬಾರದು. ಯಾವ ನೆಲಕ್ಕೆ ಬಟ್ಟೆ ಎಷ್ಟು ಒದ್ದೆಯಾಗಿರಬೇಕು? ಯಾವ ಹೊತ್ತಿಗೆ ಪುನಹ ಹಿಂಡಿಕೊಳ್ಳಬೇಕು? ಸಿಕ್ಕಿದ ಧೂಳು ಕಸವನ್ನು ಉಜ್ಜುತ್ತ ಎಳೆಯುತ್ತಾ ಹೋಗುವ ಕಲ್ಪನೆಯೇ ಆಧುನಿಕರಲ್ಲಿ ನಶಿಸುವುದನ್ನು ಕಾಣುತ್ತಿದ್ದೇವೆ.
ಪ್ಲೈವುಡ್ನಿಂದ ಮಾಡಿದ ವಾರ್ಡ್ ರೂಮು ಕೆಟ್ಟು ಹೋಗಿತ್ತು. ಹೊಸತಾಗಿ ನಿರ್ಮಿಸಲು ಕಾಂಕ್ ವುಡ್ ತಂತ್ರಜ್ಞಾನಿಗಳನ್ನು ಕರೆಸಿದೆ. ಆ ಕೆಲಸವನ್ನೇನೋ ಅಚ್ಚು ಕಟ್ಟಾಗಿ ಮಾಡಿದರೂ ಬಳಸಿದ ಬಳಸುವ ಸಾಮಾನುಗಳನ್ನು ನೆಲದ ಮೇಲೆ ಎಸೆಯುವಾಗ ನೆಲ ಹಾಳಾದೀತೆಂಬ ಮುಂಜಾಗ್ರತೆ ಬಾರದೇ ಇರುವುದು ನಮ್ಮಂತವರ ಕಲ್ಪನೆಗೆ ಮೀರಿದ್ದು! ಒಂದೆರಡು ವೆಲ್ಡಿನ ನಡುವೆ ಆಗಾಗ ಬರುವ ವಾಟ್ಸಾಪ್ ಮೆಸೇಜುಗಳಿಗೆ ಉತ್ತರಿಸುವುದು, ಕುಶಾಲಿನ ದೂರವಾಣಿ ಕರೆಗಳಲ್ಲಿ ಮಗ್ನರಾಗುವುದು ಬರುವುದು ಎಷ್ಟೇ ಹೊತ್ತಾಗಲಿ ( ಅಲ್ಲೆಲ್ಲಾ ಸಮಯದ ಮಿತಿ ಇಲ್ಲ ) ಕೆಲಸ ಮುಗಿಸಿ ನಾಲ್ಕುವರೆ ಗಂಟೆಗೆ ಹೋಗುವುದರಲ್ಲಿ ಶಿಸ್ತನ್ನು ಕಾಪಾಡಿಕೊಂಡದ್ದು ಗಮನಾರ್ಹ ಸಂಗತಿ .
ಮಂಗಳೂರಿನ ಬೊಂಡದ ಐಸ್ ಕ್ರೀಮಿನ ಕಾಮತರು ಸಭೆ ಒಂದರಲ್ಲಿ ಮಾತನಾಡುತ್ತಿದ್ದರು. ತರುಣ ಉತ್ಸಾಹಿಗಳಿಬ್ಬರು ಅವರಲ್ಲಿ ತಮ್ಮೂರಲ್ಲಿ ಅಂತಹದೇ ಉದ್ಯಮವನ್ನು ಆರಂಭಿಸುವ ಬಗ್ಗೆ ಸಲಹೆ ಕೇಳಿದರಂತೆ. ಕಾಮತರು ಕೊಟ್ಟ ಉತ್ತರ ಮಾರ್ಮಿಕ ಮತ್ತು ಸಾರ್ವಕಾಲಿಕ ಸತ್ಯ. ಬೊಂಡವನ್ನು ಕಡಿದು ಕೆತ್ತಿ ಐಸ್ ಕ್ರೀಮ್ ಕೊಟ್ಟಾದ ಮೇಲೆ, ಕೆತ್ತಿದ ಕಸವನ್ನೂ ಸಹಿತ ಅಚ್ಚುಕಟ್ಟಾಗಿ ತೆಗೆದು ಒತ್ತರೆ ಮಾಡುವ ಮನೋಭಾವ ಇದ್ದಲ್ಲಿ ಮಾತ್ರ ಈ ಕಾರ್ಯರಂಗಕ್ಕೆ ಕೈಯಿಕ್ಕಿ ಅಲ್ಲವಾದರೆ ಬೇಡ ಅಂದರಂತೆ. ಕೆಲಸದ ಮೇಲಿನ ಪ್ರೀತಿಗೆ, ಸಾಮರ್ಥ್ಯಕ್ಕೆ ಅಚ್ಚು ಕಟ್ಟು ತನಕ್ಕೆ ಕೊಡುವ ಬೆಲೆ ಆ ಹಿರಿಯರಲ್ಲಿ ಕಂಡು ನನಗಂತೂ ಅತೀವ ಸಂತೋಷವಾಗಿತ್ತು.
ಒಟ್ಟಿನಲ್ಲಿ ಬಡವ ಶ್ರೀಮಂತರಾದಿಯಾಗಿ ನಶಿಸುತ್ತಿರುವ ಸ್ವಂತ ದುಡಿಮೆಯ ಸಂಸ್ಕೃತಿ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸೀತು. ಮಾಡಿಸುವವನಿಗೆ ಕೆಲಸದ ಅರಿವಿಲ್ಲದಿದ್ದರೆ ಮಾಡುವವನಿಂದ ಕೆಲಸ ಮಾಡಿಸಿಕೊಳ್ಳಲು ಅಸಾಧ್ಯ.