ಗುಂಪೊಂದರಲ್ಲಿ ಪ್ರಶ್ನೆ? ತೋಟದ ತುಂಬಾ ಬಿದಿರು ಗಿಡಗಳು ಹುಟ್ಟಿಕೊಂಡಿದೆ. ಇವುಗಳ ನಿವಾರಣೆಗೆ ಸುಲಭ ದಾರಿ ಯಾವುದಾದರೂ ಇದೆಯಾ? ಬಂದ ಉತ್ತರ ಹಲವಾರು ಇದ್ದರೂ ನನ್ನ ಗಮನ ಸೆಳೆದದ್ದು ರೌಂಡಪ್ಪಿನ ಡಬಲ್ ಡೋಸ್ ಬಳಕೆ. ಆ ಕುರಿತು ಒಂದಷ್ಟು ಚಿಂತನ ಮಂಥನ ನಡೆಸಿದಾಗ ಕಂಡು ಬಂದ ಆಘಾತಕಾರಿ ವಿಷಯಗಳು ಮುಂದಿನಂತಿವೆ. ಬಳಸುವಿಕೆ ಅಗತ್ಯವೇ? ಅನಿವಾರ್ಯವೇ? ಅವರವರ ಭಾವಕ್ಕೆ ಬಿಟ್ಟದ್ದು.
ಅಮೆರಿಕಕ್ಕೂ ವಿಯೆಟ್ನಾಮಿಗೂ ಘನ ಘೋರ ಯುದ್ಧ. ಗೆರಿಲ್ಲ ಯುದ್ಧದಲ್ಲಿ ಪರಿಣತಿ ಹೊಂದಿದ ವಿಯೆಟ್ನಮ್ ಸೈನಿಕರನ್ನು ಮಣಿಸಲು ಕಾಡುಗಳ ಮೇಲೆ ಸುರಿಯಲು ತಯಾರಿಸಿದ ರಾಸಾಯನಿಕವೇ ಎಜೇಂಟ್ ಆರೆಂಜ್. ಸೈನಿಕರನ್ನೇನೋ ಮಣಿಸಿದರು. ಮಣಿದವರು ಮಣಿಸಿದವರು ಎಲ್ಲರೂ ಕ್ಯಾನ್ಸರ್ ರೋಗಕ್ಕೆ ತುತ್ತಾದದ್ದು ಇತಿಹಾಸ. ಆ ಕುರಿತು ಮೊನ್ಸೆಂಟೋ ಕಂಪನಿ ಪಶ್ಚಾತಾಪಗೊಂಡು ಕ್ಷಮಾಪಣೆ ಕೇಳಿತ್ತಂತೆ. ಮುಂದಿನ 10 ವರ್ಷಗಳಲ್ಲಿ ಇನ್ನಷ್ಟು ಸಂಶೋಧನೆ ನಡೆಸಿ ಕಳೆನಾಶಕವಾಗಿ ಬಳಸುವಂತಹ ಹೊಸತೊಂದು ರಾಸಾಯನಿಕವನ್ನು ಕಂಡುಹಿಡಿದರು. ಅದುವೇ ಈಗಿನ ರೌಂಡಪ್/ ಗ್ಲೈಪಾಸ್ಪೇಟ್. ಇದು ಯಾರಿಗೂ, ಯಾವುದೇ ಜೀವಕ್ಕೂ ಹಾನಿ ಮಾಡುವುದಿಲ್ಲ ಎಂಬುದು ಸಂಶೋಧಕರ ಹೇಳಿಕೆ.ಕಾರಣ ಯಾವುದೇ ಜೀವಿಯ ಜೀವಕೋಶಗಳ ಶಕ್ತಿಯನ್ನು ಉದ್ದೀಪನ ಗೊಳಿಸುವ ಅಂಗಗಳು ಕಿಣ್ವಗಳು. ಕಿಣ್ವಗಳನ್ನು ನಿಷ್ಕ್ರಿಯಗೊಳಿಸಿದರೆ ಆ ಜೀವಿ ಸಾಯುವುದಂತೆ. ಹಾಗಾಗಿ ಪತ್ರಹರಿತ್ತಿನ ಮೇಲೆ ಬಿದ್ದಲ್ಲಿ ಸಸ್ಯಗಳ ಜೀವಕೋಶಗಳನ್ನು ನಿಷ್ಕ್ರಿಯಗೊಳಿಸಿ ಅವುಗಳನ್ನು ನಾಶಪಡಿಸುವ ವಿಧಾನ.
ಇದು ವಿಷಮಾಪನದ ಮಾನ್ಯತೆ ಪಡೆದ ಮೂರನೇ ಹಂತದ ನೀಲಿ ಬಣ್ಣದಲ್ಲಿದೆ. ಹಾಗಾಗಿ ವಿಷದ ತೀವ್ರತೆ ಕಡಿಮೆ ಎಂಬುದು ಉಲ್ಲೇಖ.
ಮನುಷ್ಯನೊಬ್ಬನಿಗೆ ಇದು ಮಾರಕವಾಗಬೇಕಾದರೆ ದಿನವೊಂದಕ್ಕೆ 1.75 ಎಂಜಿ /ಕೆಜಿ ಗಿಂತ ಜಾಸ್ತಿ ಶರೀರವನ್ನು ಹೊಕ್ಕಿದ್ದರೆ ಮಾತ್ರ. ಹೀಗೆಂದು ಕಂಪನಿ ಮತ್ತು ಅದರ ಬಳಕೆಯನ್ನು ಪ್ರೋತ್ಸಾಹಿಸುವ ಇಲಾಖೆಗಳ ಹೇಳಿಕೆ. ಗಾತ್ರಕ್ಕನುಗುಣವಾಗಿ ಸಣ್ಣಜೀವಿಗಳಿಗೆ ಇದು ಬಲು ಸೂಕ್ಷ್ಮ ಪ್ರಮಾಣದಲ್ಲಿ ಹೊಕ್ಕರೂ ಮಾರಕವಾಗಬಲ್ಲುದು. ಮೊನ್ಸೆಂಟೊ ಕಂಪನಿಯು ಗೋಧಿ, ಜೋಳ, ಸೋಯಾ ಮುಂತಾದವುಗಳಲ್ಲಿ ರೌಂಡಪ್ ನಿರೋಧಕ ತಳಿಗಳನ್ನು ಸೃಷ್ಟಿಸಿ ಮಾರಾಟ ಮಾಡಿ ಗಂಟು ಮಾಡಿಕೊಂಡದ್ದು ಹಳೆಯ ಕಥೆ. ಅಮೆರಿಕದಲ್ಲಿ ಇದನ್ನು ವ್ಯಾಪಕವಾಗಿ ಬಳಸಿದ ಪರಿಣಾಮವಾಗಿ ಅನೇಕ ಜಲಚರಗಳು ನಾಶವಾಗಿದೆಯಂತೆ. ಚಿಟ್ಟೆ,ದುಂಬಿ, ಜೇನು, ಇರುವೆ ಇಂತಹ ಸೂಕ್ಷ್ಮ ಕೀಟಗಳು ನಾಶವಾದುದರ ಪರಿಣಾಮವಾಗಿ ಹೊಸ ಹೊಸ ದುಷ್ಟ ಕೀಟಗಳು ವೃದ್ಧಿಯಾಗಿದೆಯಂತೆ. ಗಿಡಗಳು ತಮ್ಮ ಸ್ವಾಭಾವಿಕ ರೋಗ ನಿಯಂತ್ರಣ ಶಕ್ತಿಯನ್ನು ಕಳೆದುಕೊಂಡಿದ್ದಾವಂತೆ.
ಈಗ ಪ್ರಕೃತಿ ತನ್ನನ್ನು ಉಳಿಸಿಕೊಳ್ಳುವುದಕ್ಕಾಗಿ ರೌಂಡಪ್ಪು ನಿರೋಧಕ ಹೊಸ ಕಳೆಗಳನ್ನು ಸೃಷ್ಟಿ ಮಾಡಿಕೊಂಡಿದೆ.( ನಮ್ಮಲ್ಲಿ ಕೆಲವು ತೋಟಗಳಲ್ಲಿ ಬೆಳೆದ ಪಾಚಿ ಇದಕ್ಕೆ ಸಾಕ್ಷಿ ) ಆ ಭೂಮಿಯಲ್ಲಿ ಬೆಳೆದ ಜೋಳದ ಹುಲ್ಲನ್ನು ತಿಂದ ಜಾನುವಾರುಗಳಲ್ಲಿ( ದನ, ಆಡು, ಕುರಿ ಇತ್ಯಾದಿ ), ಕ್ಯಾನ್ಸರ್, ಚರ್ಮ ಕಾಯಿಲೆಗಳು ಮತ್ತು ಅನೇಕ ಮಾರಕ ರೋಗಗಳನ್ನು ಕೊಂಡುಕೊಂಡಿದ್ದಾರೆ. ಆರಂಭದಲ್ಲಿ ಆಹಾರ ವಸ್ತುಗಳಲ್ಲಿ ಕಾಣದಿದ್ದರೂ ನಿರಂತರ ಬಳಕೆಯಿಂದಾಗಿ ಇಂದು ಆಹಾರದಲ್ಲಿ ರೌಂಡ್ ಅಪ್ ಅಂಶಗಳು ಭಾರಿ ಪ್ರಮಾಣದಲ್ಲಿ ಕಾಣುತ್ತಿದೆಯಂತೆ. ಕ್ಯಾನ್ಸರ್ ಪೀಡಿತರು ಅನೇಕ ಮಂದಿ ಕೋರ್ಟಿಗೆ ಹೋದರೂ ಈ ಕಾರಣದಿಂದ ಕ್ಯಾನ್ಸರ್ ಬಂದಿದೆ ಎಂಬುದನ್ನು ರುಜುವಾತು ಪಡಿಸಲು ಸೋತದ್ದರ ಪರಿಣಾಮವಾಗಿ ಸಂಶಯದ ಲಾಭದಲ್ಲಿ ಕಂಪನಿ ಗೆಲ್ಲುತ್ತಾ ಬಂದಿದೆ. ಹೋರಾಟಗಾರರ ನಿರಂತರ ಹೋರಾಟದಲ್ಲಿ ಇತ್ತೀಚೆಗೆ ಕ್ಯಾಲಿಫೋರ್ನಿಯ ನ್ಯಾಯಾಲಯ ಒಂದು ದಂಪತಿಗಳಿಗೆ ಕ್ಯಾನ್ಸರ್ ಬಂದದ್ದು ಗ್ಲೈ ಪಾಸ್ಪೇಟ್ ಕಾರಣದಿಂದ ಎಂದು ರುಜುವಾತು ಆಗಿ 86 ಮಿಲಿಯನ್ ಡಾಲರ್ ಪರಿಹಾರದ ಆದೇಶವಾಗಿದೆಯಂತೆ. ಇಷ್ಟೆಲ್ಲಾ ಭಯಂಕರ ಸತ್ಯಗಳು ಕಣ್ಣಮುಂದಿರುವಾಗ ಕುರುಡಾಗಿ ಕಳೆ ನಾಶಕದ ಬಳಕೆ ನಮಗೆ ಸಾಧುವೆ?
ಕೃಷಿಕರಾದ ನಾವು ನಮ್ಮ ಹಿತದೃಷ್ಟಿಯಿಂದ ಆಲೋಚಿಸಬಹುದಾದರೆ, ದಿನವೊಂದಕ್ಕೆ 1.75 ಎಂಜಿ/ ಕೆಜಿ ಶರೀರದ ಒಳಗೆ ಹೋದರೂ ಏನೂ ಆಗುವುದಿಲ್ಲ ಎಂದಿದ್ದರೂ ಏನೂ ಆಗಬಾರದು ಎಂದು ಇಲ್ಲವಲ್ಲ. ಧೂಮಪಾನಿಯೋ, ಮದ್ಯಪಾನಿಯೋ ತಮ್ಮ ದುಶ್ಚಟಗಳಿಂದ ಆರೋಗ್ಯಕ್ಕೆ ತೊಂದರೆ ಇಲ್ಲ ಎಂದು ಹೇಳಿದರೆ ಒಪ್ಪತಕ್ಕ ವಿಷಯವೇ? ನಿರಂತರ ಪ್ರಯೋಗಗಳ ಮುಖಾಂತರವಾಗಿ ಆರೋಗ್ಯ ರಕ್ಷಣೆಗಾಗಿ ಬಂದ ಅದೆಷ್ಟೋ ಮಾತ್ರೆಗಳು, ಆಂಟಿಬಯೋಟಿಕ್ ಗಳು ನಿಧಾನವಾಗಿ ಮನುಷ್ಯರ ದೇಹದಲ್ಲಿ ( ಎಲ್ಲರಿಗೂ ಅಲ್ಲದಿದ್ದರೂ ಒಂದಷ್ಟು ಜನರಿಗೆ) ಅಡ್ಡ ಪರಿಣಾಮವನ್ನು ಉಂಟುಮಾಡಿದ್ದನ್ನು ಕಂಡಿದ್ದೇವೆ ಮತ್ತು ಮಾರುಕಟ್ಟೆಯಿಂದ ಹಿಂತೆಗೆದುಕೊಂಡದ್ದನ್ನು ನೋಡಿದ್ದೇವೆ. ಹಾಗಿರುವಾಗ ಭಕ್ಷಣೆಗಾಗಿಯೇ ಬಂದ ವಿಷವೊಂದು ಆರೋಗ್ಯದಲ್ಲಿ ಪರಿಣಾಮ ಬೀರಲಾರದು ಎಂಬುದು ನಂಬಿಕೆಗೆ ಅರ್ಹವೇ?
ಈಚೆಗೆ ಪ್ರಚಾರಕ್ಕೆ ಬಂದಿರುವ ಪೆಂತಿ ಕೀಟಗಳು ತಮ್ಮ ಸಹಜ ಆಹಾರದ ಕೊರತೆಯಿಂದಾಗಿ ಅಡಿಕೆಯ ಮೇಲೆ ಹಾವಳಿ ಮಾಡಿರುವುದು ಯಾಕಿರಬಾರದು? ಅನಿವಾರ್ಯವಾದರೆ ಮಾತ್ರ ರಾಸಾಯನಿಕ ಬಳಸಿ ಎಂಬ ವಿಜ್ಞಾನಿಗಳ ಮಾತು ಕೇಳುವಷ್ಟು ತಾಳ್ಮೆ ಯಾರಿಗಿದೆ? ಅಡಿಕೆ ಸೋಗೆಯ ಚುಕ್ಕೆ ರೋಗ ವ್ಯಾಪಕವಾಗಿ ಹಬ್ಬುವುದು ತನ್ನ ಸ್ವನಿಯಂತ್ರಣ ವ್ಯವಸ್ಥೆಯನ್ನು ಕಳಕೊಂಡದ್ದರ ಪರಿಣಾಮ ಯಾಕಿರಬಾರದು?
ನಾವಿಂದು ಎದುರಿಸುತ್ತಿರುವುದು ಕೇವಲ ಕಳೆನಾಶಕವಲ್ಲ. ಅದರೊಂದಿಗೆ ಬಗೆ ಬಗೆಯ ಕೀಟನಾಶಕಗಳು, ಕ್ವಿಕ್ ಪಾಸ್ ಮಾತ್ರೆಗಳು, ರಾಡೋಮಿಲ್ಲು, ಕರಾಟೆಗಳ ಭರಾಟೆ ಎಲ್ಲವೂ ನಮ್ಮ ದೇಹವನ್ನು ಅಲ್ಪ ಅಲ್ಪ ಪ್ರಮಾಣದಲ್ಲಿ ಹೊಕ್ಕರೆ ನಮ್ಮ ಶರೀರಕ್ಕೆ ವಿಷಕಂಠನ ಸಾಮರ್ಥ್ಯ ಇರಬಹುದೇ? ಅರ್ಬುತನ ( ಕ್ಯಾನ್ಸರ್ )ಆರ್ಭಟ ನೆರೆ ಮನೆಯ ಬಾಗಿಲನ್ನು ತಟ್ಟಿದೆ ಮನೆ ಮನೆಯನ್ನು ಪ್ರವೇಶಿಸುವ ಮೊದಲು ಎಚ್ಚರಾಗೋಣ.
ರೌಂಡಪ್ ಎಂಬ ಮಾಯೆ ಕಳೆ ನಾಶದೊಂದಿಗೆ ನಮಗೆ ತಕ್ಷಣಕ್ಕೆ ಅಕ್ಕರೆಯಾಗಬಲ್ಲಳು. ಕಷ್ಟಗಳನ್ನು ನೀಗಿಸಿದಂತೆ ಕಂಡು ಬಂದಾಳು. ಮೈ ಮರೆತಾಗ ಪಾತಾಳಕ್ಕೆ ನೂಕುವ ಪ್ರೀತಿಯಿಂದ ವಿಷ ಹಾಲು ಉಣಿಸಿದ ಪೂತನಿ ಅವಳು ಎಂದು ಎಚ್ಚರಿಸುವ ಮಂಕುತಿಮ್ಮನ ಸದಾ ನೆನೆವೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…