ಬಹಳ ಗಂಭೀರ ಪರಿಸರ ಚರ್ಚೆ ಗಾಡ್ಗೀಳ್(Gadgil), ಕಸ್ತೂರಿ ರಂಗನ್ ವರದಿಗಳು(Kasturi Rangan report) ಮಳೆಗಾಲದಲ್ಲಿ(Rain season) ಗುಡ್ಡ – ಭೂಕುಸಿತ(Land slide) ಆದ ತಕ್ಷಣ ಧುತ್ತೆಂದು ಎದ್ದು ಶುರುವಾಗುತ್ತದೆ. ಜನರ ಮನಸ್ಸನ್ನು ಪರಿಸರ(Environment) ಪರ ಮಾಡುವುದು ಹರ ಸಾಹಸದ ಕೆಲಸ. ಯಾರು ಆದರ್ಶರು… ಈ ದೃಷ್ಟಿಯಿಂದ ಮಾರ್ಗದರ್ಶಿಸಬಲ್ಲರು ಎಂಬ ಪಶ್ನೆಗೆ ಅನೇಕ ಸಲ ಉತ್ತರ ಸಿಗದು. ಅನುಷ್ಠಾನ-ಕಾನೂನು ಜಾರಿ – ನೀತಿ ರೂಪಿಸುವುದು ನಾವೆಲ್ಲರೂ ಒಪ್ಪಿಕೊಂಡ ರಾಜಕಾರಣದ ಮತ್ತು ಅಧಿಕಾರಿಗಳ ವ್ಯವಸ್ಥೆಯಡಿ ಇದೆ.
ಇವತ್ತು ಗ್ರಾಮಗಳಲ್ಲಿ ಜೆಸಿಬಿ(JCB), ದೊಡ್ಡ ಮರಳ ಲಾರಿ-ಟಿಪ್ಪರ್, ಬೋರೆವೆಲ್ ಯಂತ್ರ(Borewell) …ಯಾರ ಕೈಲಿದೆ ? ಇವಕ್ಕೆಲ್ಲ ಕೆಲಸಬೇಕು. ಸುಮ್ಮನೆ ಕೂರುವ ಸ್ವಭಾವ ಅವುಗಳಿಗಿಲ್ಲ ! ಗುಡ್ಡದ ನೆತ್ತಿ ಸವರುವುದೊ, ಗುಡ್ಡದ ಬುಡವನ್ನು ಕೆರೆಯುವುದೊ, ಆಳದ ಕೊಳವೆಬಾವಿ ಕೊರೆಯುವುದೊ ಏನಾದರೊಂದನ್ನು ದಿನನಿತ್ಯ ಮಾಡುತ್ತಿರುತ್ತವೆ.
ಗ್ರಾಮಮಟ್ಟದ ರಾಜಕಾರಣಿಗಳೆ ಬಹುತೇಕ ಇವುಗಳ ಒಡೆಯರು. ಹೆಚ್ಚಿನ ಕಡೆ ಗ್ರಾಮದ ಈ ಪುಟ್ಟ ಪುಡಾರಿಗಳೆ ಇಂದಿನ ಗ್ರಾಮ ಪಂಚಾಯತ್ ಸದಸ್ಯರುಗಳು. ಇವರುಗಳೆ ದೊಡ್ಡ ರಾಜಕಾರಣಿಗಳನ್ನು ಉಳಿಸುವ ಕವಲು ಬೇರುಗಳು. ಪರಸ್ಪರ ಇವರಲ್ಲಿ ಬಹಳ ಸ್ನೇಹ- ಸಂಬಂಧ. ಉಳಿಸುವವರ ದನಿ ಹಾರಾಡುವ ಈ ಪುಡಾರಿಗಳ – ಅಧಿಕಾರಿಗಳ ಮುಂದೆ ಕೇಳುವುದೆ ? ಗೋಮಾಳ, ಹುಲ್ಲುಬನ್ನಿ ಹರಾಜು, ಬ್ಯಾಣ, ಸೊಪ್ಪಿನ ಬೆಟ್ಟ …ಇದು ಆಗಾಗ ಕೇಳುವ ಪದಗಳು. ಕಾಣಲು ಎಲ್ಲಿದೆ ಅದು ? ಸಾತ್ವಿಕ ಜನ ಸಂಘಟನೆಯೊಂದೇ ಪರಿಹಾರ ತರಬಲ್ಲದು… ಉತ್ಸಾಹ ತುಂಬುವ ಭಾಷಣದ ಮಾತು… ಸಂಘಟಿಸುವ ಯುವ ಸಮುದಾಯ ಇಂದು ಗ್ರಾಮದಲ್ಲೆಲ್ಲಿದೆ. ಇದ್ದವರನ್ನು ಒಪ್ಪಿಕೊಳ್ಳುವ ಹಸಿರ ಸಂಗಾತಿ ಗೆಳತಿಯರು ಎಲ್ಲಿದ್ದಾರೆ ?
ಗ್ರಾಮದಲ್ಲಿ ಒಂದು ಕಾಲದಲ್ಲಿ ಸಹೋದರರಂತೆ ಇದ್ದ ವಿವಿಧ ಸಮುದಾಯಗಳ ಒಡೆದು ರಾಜಕಾರಣ ಮಾಡುವ ಪಕ್ಷಗಳಿಗೆ ಹಸಿರು – ಭೂಮಿ ರಾಜಕಾರಣದ, ಮತಗಳಿಕೆಯ ವಸ್ತು. ಗುಡ್ಡ ಕುಸಿದಾಗ – ಮಣ್ಣಿನೊಳಗೆ ಜೀವ ಸಿಕ್ಕಾಗ ಪಶ್ಚಿಮಘಟ್ಟ , ಪಶ್ಚಿಮಘಟ್ಟ ಸುದ್ದಿ ಮಾಧ್ಯಮಗಳ ಮುಖಪುಟದಲ್ಲಿ… ಕುಸಿದಿರುವುದು – ಕುಸಿಯುತ್ತಿರುವುದು ಗುಡ್ಡ – ಬೆಟ್ಟ -ಕಣಿವೆ ಅಲ್ಲ … ನಮ್ಮೆಲ್ಲರಲ್ಲಿದ್ದ ಜೀವಪ್ರಜ್ಞೆ – ಜೀವನ ಪ್ರಜ್ಞೆ ನಿತ್ಯ ಕುಸಿಯುತ್ತಿದೆ. ಯಾವ ಯಂತ್ರ – ಸೈನ್ಯ ಇದನ್ನು ತಡೆದೀತು ? ಸುಸ್ಥಿರ ಅಭಿವೃದ್ಧಿ ಅಂದರೆ ಹೀಗೆ ಅನ್ನುವ ಅಂಶಗಳನ್ನು ಸವಿವರವಾಗಿ ಪಟ್ಟಿಮಾಡಬೇಕು. ಸವಲತ್ತು ಮತ್ತು ಅವಶ್ಯಕತೆಗಳ ನಡುವೆ ಸಮನ್ವಯ ಸಾಧಿಸದಿದ್ದರೆ ಉಳಿವು ಮಾತು ಹಾಗೆಯೆ ಉಳಿದು ಬಿಡುತ್ತದೆ. ಆರಂಭದ ವಾಕ್ಯ ಮತ್ತೆ ನೆನಪಾಗುತ್ತೆ – ಮೇಲ್ಪಂಕ್ತಿ ಯಾರು?