ಕರ್ನಾಟಕದ ಆಯಾ ಜಿಲ್ಲೆಯ ಕೃಷಿಕರು ಹವಾಮಾನಕ್ಕೆ ಅನುಗುಣವಾಗಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಅಡಿಕೆ ಮುಖ್ಯ ಬೆಳೆಯಾದರೆ, ಕೋಲಾರದಲ್ಲಿ ಟೊಮೆಟೋ ಹಾಗೂ ಮಾವು ಕೃಷಿ. ಏಷ್ಯಾದಲ್ಲೆ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಕೋಲಾರ ಇದೀಗ ಅತೀ ದೊಡ್ಡ ಹಲಸಿನ ತೋಟವನ್ನೂ ಹೊಂದಿದೆ. ಪರ್ಯಾಯ ಕೃಷಿಯೂ ಈಗ ಗಮನ ಸೆಳೆಯುತ್ತಿದೆ.
1974 ರಲ್ಲಿ ಎಂ.ಹೆಚ್ ಮರೀಗೌಡ ಎಂಬುವರು ಕೋಲಾರ ನಗರದ ಟಮಕ ಬಳಿ ಹಲಸಿನ ಗಿಡಗಳನ್ನು ನೆಟ್ಟಿದ್ದರು. ಅದರಲ್ಲೂ ರಾಜ್ಯದ ವಿವಿಧ ಭಾಗದಿಂದ ತಳಿಗಳನ್ನು ತಂದು ಸುಮಾರು 1600 ಕ್ಕೂ ಹೆಚ್ಚು ಹಲಸಿನ ಗಿಡಗಳನ್ನು ಬೆಳೆಸಿದ್ದಾರೆ. ನಂತರ ಈ ತೋಟದಲ್ಲಿ 2009 ರಲ್ಲಿ ತೋಟಗಾರಿಕಾ ಮಹಾ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದೆ. ಸುಮಾರು 40 ಎಕರೆ ಪ್ರದೇಶದಲ್ಲಿ ಹಲಸಿನ ತೋಟವಿದೆ, 1600ಕ್ಕೂ ಹೆಚ್ಚು ಹಲಸು ಮರಗಳು ಇಲ್ಲಿವೆ.
ಹಲಸಿನ ಜಾಮ್, ಪಲ್ಪಿ ಜ್ಯೂಸ್, ಹಲಸಿನ ಹಲ್ವಾ, ಬಿರಿಯಾನಿ, ಕಬಾಬ್ ಸೇರಿದಂತೆ ತರಕಾರಿ ಮಾಂಸವಾಗಿ ಹಲವು ಖಾದ್ಯಗಳನ್ನು ತಯಾರು ಮಾಡುವ ಮೂಲಕ ಹಲಸಿನ ಮಹತ್ವವನ್ನು ಹೆಚ್ಚಿಸಲಾಗಿದೆ. ಹಲಸಿನ ಸಂಸ್ಕರಣ ಘಟಕ ಸ್ಥಾಪನೆ ಮಾಡಿ, ಹಲಸಿನ ವಿವಿಧ ಖಾದ್ಯಗಳನ್ನು, ವಿವಿಧ ಉತ್ಪನ್ನಗಳನ್ನು ಇಲ್ಲೇ ತಯಾರು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಕೃಷಿಕರು ಇದೇ ಮಾದರಿಯಲ್ಲಿ ಪ್ರಮುಖ ಕೃಷಿಯ ಜೊತೆಗೆ ಪರ್ಯಾಯ ಕೃಷಿಯತ್ತಲೂ ಅದರಲ್ಲೂ ಆಹಾರ ಬೆಳೆಯತ್ತಲೂ ಚಿಂತನೆ ನಡೆಸಲು ಈಗ ಸಕಾಲವಾಗಿದೆ.