ಅಡಕೆ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಮಾರುಕಟ್ಟೆ ಬೆಲೆ ಕುಸಿತದ ಆತಂಕ ಒಂದೆಡೆಯಾದರೆ, ಉತ್ಪನ್ನ ಸಾಗಣೆಗೆ ಅಡ್ಡಿ ಹಾಗೂ ಹೆಚ್ಚುವರಿ ವೆಚ್ಚದ ಹೊರೆ ಮತ್ತೊಂದೆಡೆ. ಅಸ್ಸಾಂನ ಬರಾಕ್ ಕಣಿವೆಯ ಕಚಾರ್ ಜಿಲ್ಲೆಯ ಕಟಿಗೋರಾ ಭಾಗದಲ್ಲಿ ಸ್ಥಳೀಯವಾಗಿ ಬೆಳೆದ ಅಡಿಕೆಯನ್ನು ಮೇಘಾಲಯಕ್ಕೆ ಸಾಗಿಸಲು ಹಣ ವಸೂಲಿ ಮಾಡುಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರು ಚಕ್ರಗಳ ಟ್ರಕ್ಗೆ ₹1 ಲಕ್ಷ ಹಾಗೂ ಸಣ್ಣ ವಾಹನಗಳಿಗೆ ₹50 ಸಾವಿರ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ ಎಂದು ಸ್ಥಳೀಯ ವ್ಯಾಪಾರಿಗಳು ಆರೋಪಿಸಿದ್ದಾರೆ.
ಮೇಘಾಲಯಕ್ಕೆ ಅಡಿಕೆ ಸಾಗಣೆಗೆ ಅಡ್ಡಿ : ಬರಾಕ್ ಕಣಿವೆಯ ಕಲೈನ್ ಮತ್ತು ಕಟಿಗೋರಾ ಪ್ರದೇಶದಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇಲ್ಲಿನ ಗ್ರಾಮೀಣ ಮಾರುಕಟ್ಟೆಗಳಿಂದ ವ್ಯಾಪಾರಿಗಳು ಅಡಿಕೆ ಖರೀದಿಸಿ ಮೇಘಾಲಯಕ್ಕೆ ಸಾಗಿಸಿ ಮಾರಾಟ ಮಾಡುತ್ತಾರೆ. ಮೇಘಾಲಯ ಈ ಭಾಗದ ಅಡಿಕೆಗೆ ಪ್ರಮುಖ ಮಾರುಕಟ್ಟೆಯಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಸಾಗುವ ಅಡಿಕೆ ತುಂಬಿದ ವಾಹನಗಳನ್ನು ಡಿಗ್ರಾಖಾಲ್ ಬಳಿ ತಡೆದು ವಾಪಸ್ ಕಳುಹಿಸಲಾಗುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಇದರಿಂದ ಮೇಘಾಲಯಕ್ಕೆ ನೇರವಾಗಿ ಅಡಿಕೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಚಾಲಕರಿಗೂ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳಿವೆ.
ಬದಲಿ ಮಾರ್ಗದಿಂದ ಸಾಗಣೆ ವೆಚ್ಚ ಹೆಚ್ಚಳ : ರಾಷ್ಟ್ರೀಯ ಹೆದ್ದಾರಿ-6ರ ಮೂಲಕ ಸಾಗಣೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಲ್ಚಾರ್-ಹಾಫ್ಲಾಂಗ್ ಮಾರ್ಗದಲ್ಲಿ ಅಡಿಕೆ ಸಾಗಿಸುವಂತೆ ವಾಹನಗಳನ್ನು ನಿರ್ದೇಶಿಸಲಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಈ ಮಾರ್ಗದಲ್ಲಿ ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ಅಡಕೆ ಬೆಲೆ ಕಳೆದ ವರ್ಷಕ್ಕಿಂತ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳ ಲಾಭದ ಪ್ರಮಾಣ ಮತ್ತಷ್ಟು ಕುಸಿಯುತ್ತಿದೆ.
ಒಂದು ಟ್ರಕ್ಗೆ ₹1 ಲಕ್ಷ, ಸಣ್ಣ ವಾಹನಕ್ಕೆ ₹50 ಸಾವಿರ! : ಮೂಲಗಳ ಪ್ರಕಾರ, ಸಿಲ್ಚಾರ್-ಹಾಫ್ಲಾಂಗ್ ಮಾರ್ಗದಲ್ಲಿ ಅಡಿಕೆ ಸಾಗಿಸುವ ಆರು ಚಕ್ರಗಳ ಟ್ರಕ್ಗೆ ₹1 ಲಕ್ಷ ಹಾಗೂ ಸಣ್ಣ ವಾಹನಗಳಿಗೆ ₹50 ಸಾವಿರ ಪಾವತಿಸಬೇಕೆಂದು ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಟೋಲ್ ಗೇಟ್ ದಾಟಲು ಈ ಹಣ ಪಾವತಿಸಿದ ಬಳಿಕವೇ ಅನುಮತಿ ನೀಡಲಾಗುತ್ತದೆ ಎಂಬ ಆರೋಪವೂ ಕೇಳಿಬಂದಿದೆ.
ಪ್ರತಿದಿನ 100ಕ್ಕೂ ಹೆಚ್ಚು ಟ್ರಕ್ಗಳ ಸಾಗಣೆ? : ಬರಾಕ್ ಕಣಿವೆಯ ಮೂರು ಜಿಲ್ಲೆಗಳಿಂದ ಪ್ರತಿದಿನ 100ಕ್ಕೂ ಹೆಚ್ಚು ಅಡಿಕೆ ತುಂಬಿದ ಟ್ರಕ್ಗಳು ಈ ವ್ಯವಸ್ಥೆಯ ಮೂಲಕ ಹೊರಹೋಗುತ್ತಿವೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ ಕಲೈನ್ನಲ್ಲಿ ಪ್ರತಿಭಟನೆ ನಡೆಸುವುದಾಗಿ ವ್ಯಾಪಾರಿಗಳು ಮತ್ತು ಬೆಳೆಗಾರರು ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯವಾಗಿ ಬೆಳೆದ ಅಡಿಕೆಯನ್ನು ಹೊತ್ತ ಸಣ್ಣ ವಾಹನಗಳೂ ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಸಂಚರಿಸಲು ಅವಕಾಶ ನೀಡಬೇಕು ಮತ್ತು ಸಾಗಣೆಗೆ ವಿಧಿಸಲಾಗುತ್ತಿರುವ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ಅಕ್ರಮ ಅಡಿಕೆ ಸಾಗಾಟವೇ ಸಂಕಷ್ಟ..?: ಕಳೆದ ಕೆಲವು ಸಮಯಗಳಿಂದ ಅಸ್ಸಾಂ ಮೂಲಕ ವಿದೇಶಿ ಅಡಿಕೆ ಅಕ್ರಮವಾಗಿ ಆಮದಾಗುತ್ತಿತ್ತು. ಹಲವು ಬಾರಿ ಅಕ್ರಮ ಅಡಿಕೆ ಪತ್ತೆಹಚ್ಚಲಾಗಿದೆ. ಇದೀಗ ಅಕ್ರಮ ಅಡಿಕೆ ಸಾಗಾಟವೇ ಸ್ಥಳೀಯ ಅಡಿಕೆ ಬೆಳೆಗಾರರಿಗೆ ಸಮಸ್ಯೆಯಾಗಿದೆ.


