ಭಾರೀ ಮಳೆಗೆ ಅಸ್ಸಾಂ ತತ್ತರಿಸಿದೆ. ಇದುವರೆಗೆ 7 ಮಂದಿ ಪ್ರಾಣ ಕಳೆದುಕೊಂಡಿದ್ದು, 24 ಜಿಲ್ಲೆಗಳಲ್ಲಿ 2,00,000 ಕ್ಕೂ ಹೆಚ್ಚು ಜನರು ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು ಭೂಕುಸಿತದ ಕಾರಣದಿಂದ ರಸ್ತೆ, ರೈಲು ಸಂಪರ್ಕ ಹಲವು ಕಡೆ ಸ್ಥಗಿತಗೊಳಿಸುತ್ತದೆ.
ಭಾರೀ ಮಳೆಯ ಹೊಡೆತಕ್ಕೆ ಅಸ್ಸಾಂ ತತ್ತರಿಸಿದೆ. ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಕಳೆದ 24 ಗಂಟೆಯಲ್ಲಿ ಕ್ಯಾಚಾರ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ದಿಮಾ ಹಸಾವೋ ಜಿಲ್ಲೆಯಲ್ಲಿ 4, ಲಖಿಂಪುರ ಜಿಲ್ಲೆಯಲ್ಲಿಒಬ್ಬರು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.ಪ್ರವಾಹ, ಭೂಕುಸಿತದಿಂದ ಕ್ಯಾಚಾರ್ ಜಿಲ್ಲೆಯಲ್ಲಿ 6 ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನ ದಕ್ಷಿಣ ಭಾಗವನ್ನು ದೇಶದ ಇತರ ಭಾಗಗಳ ಜೊತೆ ಸಂಪರ್ಕಿಸಲು ಅಸ್ಸಾಂನ ಲುಮ್ಡಿಂಗ್-ಬದರ್ಪುರ್ ಮಾರ್ಗ ಪ್ರಮುಖವಾಗಿದ್ದು, ನಾಲ್ಕು ದಿನಗಳಿಂದ ರೈಲು ಸಂಪರ್ಕ ಕಡಿತಗೊಂಡಿದೆ.
ದಿಮಾ ಹಸಾವೊ ಜಿಲ್ಲೆಯ ಹಾಫ್ಲಾಂಗ್ ನಿಲ್ದಾಣ ಮಳೆ ಮತ್ತು ಭೂಕುಸಿತದ ಪರಿಣಾಣ ಸಂಪೂರ್ಣವಾಗಿ ಜಲಾವೃತಗೊಂಡಿದೆ. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ಮೇಘಾಲಯದ ಮೇಲೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.