ಬರ್ಮಾದಿಂದ ಅಕ್ರಮವಾಗಿ ಅಡಿಕೆ ಸಾಗಾಟ ನಡೆಸುತ್ತಿದ್ದ ಪ್ರಕರಣದ ಪ್ರಮುಖ ಕಿಂಗ್ ಪಿಂಗ್ ಒಬ್ಬನನ್ನು ಅಸ್ಸಾಂ ರಾಜ್ಯದ ಕ್ಯಾಚರ್ ಜಿಲ್ಲೆಯ ಪೊಲೀಸರು ಬಂದಿಸಿದ್ದಾರೆ. ಈಗ ಬಹುರಾಜ್ಯದ ಸಂಪರ್ಕ ಹೊಂದಿದ್ದು, ಅಲ್ಲಿನ ಪ್ರಭಾವಿಗಳ ಸಂಪರ್ಕವನ್ನೂ ಹೊಂದಿದ್ದ ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ.
ಕಳೆದ ಅನೇಕ ಸಮಯಗಳಿಂದ ಬರ್ಮಾ ಅಡಿಕೆಯನ್ನು ಅಸ್ಸಾಂ ಮೂಲಕ ಭಾರತದೊಳಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಆಗಾಗ ಬೆಳಕಿಗೆ ಬರುತ್ತಿತ್ತು. ರೈಲು, ಲಾರಿ, ತಲೆಹೊರೆ ಮೂಲಕವೂ ಭಾರತದೊಳಕ್ಕೆ ಪ್ರವೇಶವಾಗುತ್ತಿತ್ತು. ಈಚೆಗೆ ಟ್ಯಾಂಕರ್ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದ ಬಳಿಕ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರು ಕಾನೂನುಬಾಹಿರ ಕಾರ್ಯಾಚರಣೆಗಳನ್ನು ನಡೆಸುತ್ತಿರುವ ಇಂತಹ ಸಂಬಂಧಗಳನ್ನು ಬೇರುಸಹಿತ ಕಿತ್ತುಹಾಕಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ತನಿಖೆ ನಡೆಯುತ್ತಿತ್ತು. ಈ ಸಂದರ್ಭ ಅಕ್ರಮ ಅಡಿಕೆ ಸಾಗಾಟದ ಕಿಂಗ್ ಪಿಂಗ್ ಮೂಸಾ ಅಹ್ಮದ್ ಸಿದ್ದಿಕಿ ಬಂಧಿಸಲಾಗಿದೆ. ಮಿಜೋರಾಂನಲ್ಲಿ ಈತ ಕಾರ್ಯನಿರ್ವಹಿಸುತ್ತಿದ್ದ. ಟ್ಯಾಂಕರ್ ಮೂಲಕ ಅಡಿಕೆ ಸಾಗಾಟ ಪ್ರಕರಣ ಬೆಳಕಿಗೆ ಬಂದ ಬಳಿಕ ತನಿಖೆ ಬಿಗಿಯಾಗುತ್ತಿದ್ದತೆಯೇ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಅಹ್ಮದ್‌ನನ್ನು ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದರು.
ಕ್ಯಾಚಾರ್ ಜಿಲ್ಲೆಯ ಎಸ್ಪಿ, ನುಮಲ್ ಮಹತ್ತಾ ಅವರ ಪ್ರಕಾರ, ಮೂಸಾ ಅಹ್ಮದ್ ಬಹುರಾಜ್ಯಗಳ ನಂಟು ಹೊಂದಿದ್ದು ಅಡಿಕೆ ಅಕ್ರಮ ಸಾಗಾಟದ ಕಿಂಗ್‌ಪಿನ್ ಆಗಿದ್ದ. ಬರ್ಮಾ ಅಡಿಕೆಯನ್ನು ದೇಶದ ವಿವಿಧ ಭಾಗಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ. ಅಲ್ಲಿನ ಪ್ರಭಾವಿಗಳ ಸಂಪರ್ಕ ಹೊಂದಿದ್ದ. ಇದೀಗ ಅಂತಹವರನ್ನೂ ಗಮನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ಒಂದು ವರ್ಷಗಳಿಂದ ಅಡಿಕೆ ಅಕ್ರಮ ಸಾಗಾಟದ ಬಗ್ಗೆ ನಿಗಾ ಇರಿಸಿದ್ದೆವು, ಇದೀಗ ಕಿಂಗ್ ಪಿನ್ ಸೆರೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಹಲವು ಸಮಯಗಳಿಂದ ಈ ಅಕ್ರಮ ತಡೆ ಹಾಗೂ ಆರೋಪಿ ಪತ್ತೆಗೆ ಕೆಲಸ ಮಾಡುತ್ತಿದ್ದರೂ ಈಶಾನ್ಯ ರಾಜ್ಯದಾದ್ಯಂತ ವಿವಿಧ ರಾಜ್ಯಗಳಲ್ಲಿ ಪ್ರಭಾವಿ ವ್ಯಕ್ತಿಗಳೊಂದಿಗೆ ಕೆಲಸ ಮಾಡುತ್ತಿದ್ದರಿಂದ ಅವರಿಗೆ ರಕ್ಷಣೆ ಸಿಕ್ಕಿತು ಎಂದು ಎಸ್ಪಿ, ನುಮಲ್ ಮಹತ್ತಾ ಮಾಹಿತಿ ನೀಡಿದ್ದರು.
ಜನವರಿ ನಂತರ ಮ್ಯಾನ್ಮಾರ್‌ನಿಂದ ಮಿಜೋರಾಂ ಮತ್ತು ಮಣಿಪುರಕ್ಕೆ ಅಡಿಕೆ ಕಳ್ಳಸಾಗಣೆ ಹೆಚ್ಚಳವಾಗಿತ್ತು. ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮೂರು ಜಿಲ್ಲೆಗಳನ್ನು ಅಡಿಕೆ ಕಳ್ಳಸಾಗಣೆ ಹಾಟ್‌ಸ್ಪಾಟ್ ಎಂದು ಪರಿಗಣಿಸಲಾಗಿತ್ತು.