ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಪತ್ತೆ ಮಾಡಿದೆ. 10.84 ಕೋಟಿ ಮೌಲ್ಯದ 958 ಚೀಲಗಳ ಅಕ್ರಮವಾಗಿ ಸಾಗಿಸುತ್ತಿದ್ದ ಅಡಿಕೆಯನ್ನು ವಶಪಡಿಸಿಕೊಂಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕಳೆದ ಕೆಲವು ಸಮಯಗಳಿಂದ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿದೆ. ಮ್ಯಾನ್ಮಾರ್ ಅಡಿಕೆಯನ್ನು ಮಣಿಪುರ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಇದೀಗ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಅಸ್ಸಾಂ ರೈಫಲ್ಸ್ ಪಡೆ ಕಾಮ್‌ಜಾಂಗ್ ಜಿಲ್ಲೆಯ ಇಂಡೋ-ಮ್ಯಾನ್ಮಾರ್ ಅಂತರಾಷ್ಟ್ರೀಯ ಗಡಿಯ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾಗ ಸುಮಾರು 17 ವಾಹನಗಳಲ್ಲಿ ಪತ್ತೆಯಾಗಿತ್ತು. ಮಣಿಪುರ ಮತ್ತು ಮ್ಯಾನ್ಮಾರ್ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಟ್ರಕ್‌ಗಳ ಮೂಲಕ ಸಾಗಾಟ ಮಾಡಲಾಗುತ್ತಿತ್ತು.ಅಕ್ರಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದೆ.
ಈ ವರ್ಷದ ಆಗಸ್ಟ್‌ನಲ್ಲಿ, ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಸುಮಾರು 4.84 ಕೋಟಿ ರೂ.ಗೂ ಹೆಚ್ಚು ಬರ್ಮಾ ಅಡಿಕೆಗಳನ್ನು ವಶಪಡಿಸಿಕೊಂಡಿದ್ದರು. ಕಳ್ಳಸಾಗಣೆ ಮಾಡಲಾದ ಅಡಿಕೆಗಳನ್ನು ಮೊದಲು ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ಟ್ರಕ್‌ಗಳಲ್ಲಿ ತರಲಾಗುತ್ತದೆ. ನಂತರ ನಾಗಾಲ್ಯಾಂಡ್‌ನ ದಿಮಾಪುರ್ ಅಥವಾ ಅಸ್ಸಾಂಗೆ ಸಾಗಿಸಲಾಗುತ್ತದೆ. ಬಳಿಕ ದೇಶದ ಇತರ ಭಾಗಗಳಿಗೆ ರವಾನೆಯಾಗುತ್ತದೆ.