ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು ಒಳಗೊಂಡ ಅಕ್ಸಿಯಂ-4 ಮಿಷನ್ ಕೆ ಭೂಮಿಗೆ ಮರು ಯಾನ ಆರಂಭಿಸಲಿದೆ. ಈ ಕುರಿತು ನಾಸಾ ಮಾಹಿತಿ ನೀಡಿದ್ದು, ಶುಭಾಂಶು ಶುಕ್ಲಾ ಹಾಗೂ ಉಳಿದ ಮೂವರು ಗಗನಯಾತ್ರಿಗಳು, ಸ್ಪೇಸ್ ಸೂಟ್ ಧರಿಸಿ, ಗಗನನೌಕೆಯನ್ನು ಏರಿದ್ದು, ಪ್ರಕ್ರಿಯೆ ಆರಂಭವಾಗಿದೆ.
ನಿಗದಿತ ಕಕ್ಷೆಯಲ್ಲಿ ಹಲವು ಸುತ್ತು ಹಾಕಿದ ನಂತರ ಭೂಮಿಯತ್ತ ಪ್ರಯಾಣ ಆರಂಭಿಸಲಿರುವ ಡ್ರ್ಯಾಗನ್ ನೌಕೆ ನಾಳೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಕ್ಯಾಲಿಫೋರ್ನಿಯಾದ ಕಡಲ ತೀರಕ್ಕೆ ಬಂದಿಳಿಯಲಿದೆ. ಗ್ರೂಪ್ ಕ್ಯಾಪ್ಟನ್ ಶುಕ್ಲಾ 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಪ್ರಥಮ ಭಾರತೀಯರಾಗಿದ್ದಾರೆ. ಭೂಮಿಗೆ ಮರುಪಯಣ ಆರಂಭಿಸುವ ಮುನ್ನ ಶುಭಾಂಶು ಶುಕ್ಲಾ ಸಂದೇಶ ರವಾನಿಸಿದ್ದು, ಇಂದಿನ ಭಾರತ ಬಾಹ್ಯಾಕಾಶ ವಲಯದಲ್ಲಿ ಮಹತ್ವಾಕಾಂಕ್ಷಿಯಾಗಿದೆ. ಇಂದಿನ ಭಾರತ ಹೆಚ್ಚು ಆತ್ಮವಿಶ್ವಾಸ ಹೊಂದಿದೆ, ಹೆಮ್ಮೆಯಿಂದ ಕೂಡಿದೆ. ಈ ಎಲ್ಲಾ ಕಾರಣಗಳಿಂದ ಮತ್ತೊಮ್ಮೆ ಭಾರತ “ಸಾರೇ ಜಹಾಸೇ ಅಚ್ಛಾ” ಎಂದು ಹೇಳಲು ಬಯಸುವುದಾಗಿ ತಿಳಿಸಿದ್ದಾರೆ. 1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಈ ಯಾನ ಭಾರತದ ಮಾನವ ಬಾಹ್ಯಾಕಾಶ ಯಾನ ’ಗಗನ್‌ಯಾನ’ ಯೋಜನೆಗೆ ಮೊದಲ ಪ್ರಮುಖ ಹಾಗೂ ದೃಢ ಹೆಜ್ಜೆಯಾಗಿದೆ.