ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್‌ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನದ ಪ್ರಕಾರ ಅಪರಾಹ್ನ 3 ಗಂಟೆಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಸಮೀಪದ ಪೆಸಿಫಿಕ್ ಮಹಾಸಾಗರಕ್ಕೆ ಸುರಕ್ಷಿತವಾಗಿ ಬಂದಿಳಿಯಿತು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳನ್ನು ಕಳೆದ ನಂತರ ಭೂಮಿಗೆ ಮರಳಿದ ಗಗನಯಾತ್ರಿಗಳನ್ನು ಬಾಹ್ಯಾಕಾಶ ನೌಕೆಯಿಂದ ಸುರಕ್ಷಿತವಾಗಿ ಹೊರತರಲಾಗಿದ್ದು, ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಅವರನ್ನು 7 ದಿನಗಳ ಪುನರ್ವಸತಿಗೆ ಕಳುಹಿಸಲಾಯಿತು. ಈ ವೇಳೆ ಭಾರತದ ಶುಭಾಂಶು ಶುಕ್ಲಾ ತಮ್ಮ ಬಾಹ್ಯಾಕಾಶ ಉಡುಪಿನ ಮೇಲೆ ತ್ರಿವರ್ಣ ಧ್ವಜವನ್ನು ಧರಿಸಿದ್ದುದು ವಿಶೇಷವಾಗಿತ್ತು. ನಿನ್ನೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ್ದ ಗಗನಯಾತ್ರಿಗಳು ಸುಮಾರು 23 ಗಂಟೆಗಳ ಬಳಿಕ ಭೂಮಿಗೆ ತಲುಪಿದ್ದಾರೆ. ಶುಭಾಂಶು ಶುಕ್ಲಾ , ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮಿಷನ್ ಅನ್ನು ಆಕಾಶಗಂಗಾ ಎಂದು ಹೆಸರಿಸಲಾಗಿದ್ದು, ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ , ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಆಕ್ಸಿಯಮ್ ಸ್ಪೇಸ್ ಸಂಸ್ಥೆಯ ಸಹಯೋಗದಲ್ಲಿ ಕೈಗೊಳ್ಳಲಾಗಿತ್ತು.