ಪಾತ್ರೆಯನ್ನು ತೊಳೆಯಲು ನಮ್ಮ ಮನೆಯಲ್ಲಿ ಬಳಕೆ ಮಾಡುವುದು ನೊರೆಕಾಯಿ( ಅಂಟುವಾಳ ಕಾಯಿ). ಮಳೆಗಾಲ ಹೋದಂತೆ ಮೊದಲಾಗಿ ಹೂ ಬಿಡುವ ಮರ. ಆ ಮೂಲಕ ಜೇನುನೊಣಗಳಿಗೆ ಪೊಗದಸ್ತಾದ ಆಹಾರವನ್ನು ಕೊಡುವ ಮರವೂ ಹೌದು. ಜೇನುನೊಣಗಳಿಂದ ಪರಾಗಸ್ಪರ್ಶ ಗೊಂಡು ಗೊಂಚಲು ಗೊಂಚಲು ಕಾಯಿ ಕಟ್ಟಿ ಮಾರ್ಚ್ ತಿಂಗಳ ಅಂತ್ಯಕ್ಕೆ ಒಣಗಿ ಉದುರುತ್ತವೆ. ಹೆಕ್ಕಿದ ಕಾಯಿಗಳನ್ನು ಮತ್ತೆ ಬಿಸಿಲಲ್ಲಿ ಒಣಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಡಬ್ಬದಲ್ಲಿ ತುಂಬಿಸಿಟ್ಟರೆ ಇಡೀ ವರ್ಷಕ್ಕೆ ಪಾತ್ರೆ ತೊಳೆಯಲು ಅನುಕೂಲ.
ಕಳೆದ ವರ್ಷ ಬದಲಾದ ಋತುಮಾನಗಳಿಂದಾಗಿ ನೊರೆಕಾಯಿ ಮರ ಹೂ ಬಿಡಲಿಲ್ಲ. ಮಳೆಗಾಲ ಅರ್ಧವಾಗುವಾಗ ಹಿಂದಿನ ವರ್ಷದ ಸಂಗ್ರಹ ಮುಗಿದುಹೋಯಿತು. ಸಾವಯವಕ್ಕೆ ಸಮೀಪವಾದ ಗೋ ಉತ್ಪನ್ನಗಳಿಂದ ತಯಾರಾದ ಒಂದು ತೊಳೆಯುವ ಸಾಬೂನು ನೀರನ್ನು ಖರೀದಿಸಿ ತಂದೆ. ಈವರೆಗೆ ಇಂತಹ ಯಾವುದೇ ಸಾಬೂನುಗಳನ್ನು ತರದ ನನಗೆ 15 ದಿನಗಳೊಳಗೆ ಖಾಲಿಯಾಗುವ ಒಂದೊಂದು ಪ್ಲಾಸ್ಟಿಕ್ ಬಾಟಲಿಗಳನ್ನು ನೋಡಿಸ್ವಲ್ಪ ದಿಗಿಲಾಯಿತು. ನನ್ನ ಒಂದು ಮನೆಯಲ್ಲಿ ಹೀಗೆ ಸಂಗ್ರಹವಾಗಿದ್ದರೆ ಸಾವಿರಾರು ಮನೆಗಳಲ್ಲಿ ಆಗುವ ಪ್ಲಾಸ್ಟಿಕ್ ಸಂಗ್ರಹ ಎಸ್ಟಿರಬಹುದು? ನೊರೆಕಾಯಿ ಬಳಸುವಾಗ ಪಾತ್ರೆ ತೊಳೆಯಲು ನೀರಿನ ಖರ್ಚು ಕೂಡ ಬಹಳ ಕಡಿಮೆ. ಆಕಸ್ಮಾತ್ ನೊರೆಕಾಯಿ ನೊರೆ ಪಾತ್ರೆಯಲ್ಲಿ ಉಳಿದಿದ್ದರೂ ಆರೋಗ್ಯಕ್ಕೆ ಹಿತಕಾರಿ. ಧಾರಾಳವಾಗಿ ನೀರು ಬಳಸಿದರೂ ಹೋಗದ ಸಾಬೂನಿನ ಪಸೆ ಅಹಿತಕಾರಿ.
ಅನೇಕ ಕೃಷಿಕರು ಒಟ್ಟಾಗಿ ಸೇರಿದಾಗ ಬರುವ ಆಹಾರ ಸಮಸ್ಯೆಗಳ ಬಗ್ಗೆ ಕೆಲವು ಮಾತುಕತೆಗಳು ಇಂತಿವೆ.
ಕೆಲವು ಅಕ್ಕಿಗಳು ವಾಸನೆ ಇರುತ್ತವೆ. ಸರಿಯಾಗಿ ಬೇಯುವುದಿಲ್ಲ. ಕೆಂಪು ಬಣ್ಣಕ್ಕಾಗಿ ಬಣ್ಣದ ಹುಡಿಯನ್ನು ಬಳಸುತ್ತಾರೆ. ತೊಳೆದಾಗ ಅಕ್ಕಿ ಬಿಳಿಯಾಗಿ ಬಿಡುತ್ತದೆ. ತರಕಾರಿ ಯಬ್ಬೊ ಕ್ರಯವೆ…?!. ತೂಕಕ್ಕಾಗಿ ಬೆಳೆದದ್ದನ್ನೇ ಕುಯ್ಯುವುದು, ಹಣ್ಣಿಲ್ಲದ ತೊಂಡೆಕಾಯಿ ದುರ್ಲಭ, ನಾವು ಕಣ್ಣು ತಿರುಗಿಸ ಬೇಕಾದರೆ ನಾಲ್ಕಾದರೂ ಹಾಳನ್ನು ಹಾಕಿ ಬಿಡುತ್ತಾರೆ, ಹೀಗೆ ಅನೇಕ ಮಾತುಗಳು.
ಬಳಸುವ ತೆಂಗಿನ ಎಣ್ಣೆ ಎಲ್ಲರದ್ದು ಮಹಾ ಮೋಸ.ದೀರ್ಘ ಬಾಳಿಕೆಗಾಗಿ ಗಂಧಕ ಸೇರಿಸಿ ಒಣಗಿಸುವುದು.ಎಣ್ಣೆಗೆ ಪ್ಯಾರಾಫಿನ್ ಮಿಶ್ರಣ, ಒಂದು ತಿಂಗಳೊಳಗೆ ಅಡ್ಡ ವಾಸನೆ, ಪರಿಮಳವೇ ಇಲ್ಲ, ಚಳಿಗಾಲದಲ್ಲಿ ಎಣ್ಣೆ ಸಹಜವಾಗಿ ಗಟ್ಟಿಯಾಗಬೇಕಾದದ್ದು ಪೇಟೆಯಿಂದ ತಂದಾಗ ಗಟ್ಟಿ ಆಗುವುದೇ ಇಲ್ಲ.
ಹಾಲಿನಲ್ಲಿ ಬೆಣ್ಣೆ ಬರುವುದೇ ಇಲ್ಲ. ನೀರು ಸೇರಿಸದೆ ಮಾರಾಟ ಮಾಡಲು ತಿಳಿಯುವುದೇ ಇಲ್ಲ. ಒಂದೊಂದು ದಿನ ಒಂದೊಂದು ರುಚಿ ಏನು ಆಹಾರ ಹಾಕುತ್ತಾರೋ ಏನೋ?
ಉಪ್ಪಿನಕಾಯಿಗೆ ಏನು ಬಳಸುತ್ತಾರೋ ಏನೋ. ಹೇಗಿದ್ದರೂ ಹಾಳಾಗುವುದಿಲ್ಲ. ಹೋ ಇದರಲ್ಲಿ ಅರಸಿನ ಇಲ್ಲ,ಸಾಸಿವೆಯೂ ಇಲ್ಲ. ಮಾವಿನಕಾಯಿ ಹೋಳುಗಳು ಹುಡುಕಬೇಕಷ್ಟೆ. ಇಂತಹ ಮಾತುಗಳನ್ನು ನಾವು ಪ್ರತಿಯೊಬ್ಬರೂ ಕೇಳಿರುತ್ತೇವೆ. ಒಬ್ಬೊಬ್ಬರನ್ನು ದೂಷಿಸಿ ವ್ಯಂಗ್ಯ ಪೂರಿತ ಮಾತುಗಳಿಂದ ನಿಂದಿಸಿಯು ಇರುತ್ತೇವೆ.
ನಾವು ಕೃಷಿಕರು ಕಳೆದ ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳಿಗೆ ಮೊದಲು ಇಂತಹ ಮಾತುಗಳನ್ನು ಕೇಳಿದ್ದು ಬಲುಕಡಿಮೆ. ಆಗ ಹೆಚ್ಚಿನವರು ಸ್ವಾವಲಂಬಿಗಳಾಗಿದ್ದರು ಪ್ರತಿಯೊಂದು ಮನೆಯಲ್ಲಿಯೂ ವರ್ಷಕ್ಕಾಗುವಷ್ಟು ಅಕ್ಕಿ ಇತ್ತು. ಹಾಲಿಗೆ ಕೊರತೆಯಿರಲಿಲ್ಲ. ತರಕಾರಿಯ ಸಮೃದ್ಧಿ ಇತ್ತು. ಮನೆಯ ತೆಂಗಿನಕಾಯಿಯನ್ನು ಒಣಗಿಸಿ ಎಣ್ಣೆ ಮಾಡಿಸಿ ವರ್ಷಕ್ಕಾಗುವಷ್ಟು ಸಂಗ್ರಹಿಸಿ ಇಟ್ಟುಕೊಳ್ಳುವ ಅಭ್ಯಾಸ ಇತ್ತು. ವರ್ಷದ ಮೇಲಾದರೂ ಯಾವುದೇ ದುರ್ನಾತ ಬರುತ್ತಿರಲಿಲ್ಲ. ಉಪ್ಪಿನಕಾಯಿ ಹಾಕದ ಮನೆಯೇ ಇರಲಿಲ್ಲ.
ಅಗತ್ಯ ವಸ್ತು ಸಂಗ್ರಹದ ಸ್ವಭಾವವನ್ನು ಬಿಟ್ಟು,ಹಣದ ಸಂಗ್ರಹದಲ್ಲಿ ಎಲ್ಲವನ್ನು ಕೊಂಡುಕೊಳ್ಳಬಹುದು ಎಂಬ ಮನೋಭಾವವೇ ಈ ಮೇಲಿನ ಮಾತುಗಳಿಗೆ ಆಸ್ಪದವಾಯಿತು. ನಮ್ಮ ಸೋಮಾರಿತನವನ್ನು ಸರಿಯಾಗಿ ಬಳಸಿಕೊಳ್ಳುವ ಮತ್ತೊಂದು ವರ್ಗ ಹುಟ್ಟಿ ಕೊಂಡಿತು. ಸ್ವಾವಲಂಬನೆ ಬಿಟ್ಟು ಪರಾವಲಂಬನೆ ಕಡೆಗೆ ಹೋದುದರ ನೇರ ಪರಿಣಾಮವಿದು.
ಅಯ್ಯೋ ಒಬ್ಬನೇ ಏನೆಲ್ಲ ಮಾಡಬಹುದು ಎಂದು ಹೇಳುವುದರಲ್ಲಿಯೇ ತೃಪ್ತಿಪಟ್ಟುಕೊಂಡು, ಸ್ವಾವಲಂಬನೆ ಕಡೆಗೆ ಯೋಚಿಸದೇ ಇನ್ನೊಬ್ಬರನ್ನು ದೂಷಿಸುವುದರಲ್ಲಿ ಕಾಲಹರಣ ಕೃಷಿಕರಾದ ನಮಗೆ ಉಚಿತವೇ?
# ಎ.ಪಿ.ಸದಾಶಿವ ಮರಿಕೆ
(ಸಂಪರ್ಕ : 9449282892 – ಸಂಜೆ 7 ಗಂಟೆ ನಂತರ ಕರೆ ಮಾಡಿ )
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…