ಇಡೀ ದೇಶದಲ್ಲಿ ಅಮೃತ ಮಹೋತ್ಸವದ ಸ್ವಾತಂತ್ರ್ಯ ಸಂಭ್ರಮ ಮುಗಿಯಿತು. ಇಡೀ ವರ್ಷ ಈ ಆಚರಣೆ ನಡೆಯುತ್ತದೆ. ವಿವಿಧ ಕಡೆ ಹೆಮ್ಮೆಯಿಂದ, ಸಡಗರದಿಂದ ಈ ಆಚರಣೆ ನಡೆಯಿತು. ಸುಳ್ಯದ ಸಂಪಾಜೆಯ ನಾಟೆಕಲ್ಲು ಗುಡ್ಡದ ಮೇಲೆಯೂ ರಾಷ್ಟ್ರಧ್ವಜ ಹಾರಾಡಿತು. ಸಮುದ್ರ ಮಟ್ಟದಿಂದ 2250 ಅಡಿ ಎತ್ತರ ಇರುವ ಈ ಬೆಟ್ಟದಲ್ಲಿ ಜನಗಣಮನ ಕೇಳಿತು.ಸುಂದರ ಪರಿಸರದಲ್ಲಿ ಕೇಳಿದ ರಾಷ್ಟ್ರಗೀತೆ ಎಲ್ಲೆಡೆಯೂ ಮಾರ್ಧನಿಸಿತು.
ಸುಳ್ಯದ ಸಂಪಾಜೆ ಬಳಿಯ ಲೈನ್ಕಜೆಯ ಹತ್ತಿರದ ನಾಟೆಕಲ್ಲು ಗುಡ್ಡದ ಮೇಲೆ ಅಂದರೆ ಸಮುದ್ರ ಮಟ್ಟದಿಂದ 2250 ಅಡಿ ಎತ್ತರದಲ್ಲಿ ಚಾರಣದ ಮೂಲಕ ತೆರಳಿದ ತಂಡ ಸ್ವಾತಂತ್ರೋತ್ಸವವನ್ನು ಆಚರಣೆ ಮಾಡಿತು. ಸುತ್ತಲೂ ಸುಂದರ ಪರಿಸರ, ಈ ಪರಿಸರದ ನಡುವೆ ರಾಷ್ಟ್ರಧ್ವಜ ಹಾರಾಡಿದ್ದು ಹೆಮ್ಮೆಯಾಗಿ ಕಂಡಿತು. ಈ ಸುಂದರ ಪರಿಸರದಲ್ಲಿ ಹಕ್ಕಿ ಕಲರವ, ಜೀರುಂಡೆಗಳ ಸದ್ದು, ಗಾಳಿಯ ಸದ್ದಿನ ನಡುವೆ ಕೇಳಿದ ರಾಷ್ಟ್ರಗೀತೆ ಬೆಟ್ಟಗಳ ನಡುವೆ ಮಾರ್ಧನಿಸಿತು.
ಸಂಪಾಜೆಯ ಲೈನ್ಕಜೆ ಮನೆಯವರು ಹಾಗೂ ಯುವಕರ ತಂಡ ಈ ಸಾಹಸ ಯಾತ್ರೆ ಮಾಡಿದೆ. ಸಂಪಾಜೆಯಿಂದ ಮುಂದೆ ಅತ್ಯಂತ ಪ್ರಸಿದ್ಧವಾ ಅರೆಕಲ್ಲು ಮೂಲಕವಾಗಿ ಈ ನಾಟೆಕಲ್ಲು ಬೆಟ್ಟಕ್ಕೆ ತೆರಳಬೇಕಾಗುತ್ತದೆ. ಹರಿದ್ವರ್ಣ ಕಾಡಿನ ನಡುವೆ ಈ ಜಾಗ ಇದೆ. ಅತ್ಯಂತ ಸುಂದರವಾದ ಜಾಗ ಇದಾಗಿದ್ದು ಬೆಟ್ಟ ಕೆಳಭಾಗ ಕೆಲವು ಮನೆಗಳೂ ಇದೆ. ಬೆಟ್ಟದಲ್ಲಿ ಕಡವೆ, ಕಾಡಕೋಣ, ಹುಲಿ, ಚಿರತೆ, ಆನೆಗಳು ಆಗಾಗ ಓಡಾಡುತ್ತವೆ. ಬೆಟ್ಟದ ಮೇಲ್ಭಾಗದಲ್ಲೂ ವರ್ಷದ ಎಲ್ಲಾ ದಿನವೂ ನೀರು ಇರುತ್ತದೆ. ಏರುವ ದಾರಿ ಅತ್ಯಂತ ಕಠಿಣವಾಗಿದೆ. ಜಿಗಣೆ ಕಾಟ ಇದೆ. ಬೆಟ್ಟ ಏರುವುದೇ ತ್ರಾಸದಾಯಕ. ಚಾರಣದ ಪ್ರದೇಶ ಇದು. ಲೈನ್ಕಜೆಯಿಂದ ಸುಮಾರು ಎರಡು ಗಂಟೆಯ ನಡಿಗೆ ಇದೆ. ಕಲ್ಲುಗಳು, ಮರಗಳ ನಡುವೆ ಏರುತ್ತಾ ಸಾಗಬೇಕಿದೆ. ಬೆಟ್ಟದ ತುದಿ ತಲುಪಿದ ಬಳಿಕ ಮನೋಹರವಾದ ಜಾಗ ಕಾಣುತ್ತದೆ. ಸುತ್ತಲೂ ಹಸಿರಿನಿಂದ ಕೂಡಿದ ಪ್ರದೇಶ. ಹೀಗಾಗಿ ಮನಸ್ಸು ಉಲ್ಲಾಸವಾಗುತ್ತದೆ. ಸುಂದರವಾದ ಈ ಬೆಟ್ಟಕ್ಕೆ ಪ್ರತೀ ಸಲ ಚಾರಣಕ್ಕೆ ಲೈನ್ಕಜೆ ರಾಮಚಂದ್ರ ಹಾಗೂ ಮನೆಯವರು ಹೋಗುತ್ತಾರೆ. ಲೈನ್ಕಜೆ ಮನೆಯವರು ಈ ಬಾರು ಬೆಟ್ಟ ಹತ್ತಿ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಈ ತಂಡದಲ್ಲಿ ಆದಿತ್ಯ ಲೈನ್ಕಜೆ, ಅರ್ಜುನ ಲೈನ್ಕಜೆ, ಅವಿನಾಶ್ ಲೈನ್ಕಜೆ, ರವಿ ಎಲಿಕ್ಕಳ, ಸಂದೀಪ್ ಎಲಿಕ್ಕಳ, ವಿಜೇತ ಪೆರುಂಬಾರು, ವಿಷ್ಣು ಕಾರ್ಮಾರು ಇದ್ದರು. ಲೈನ್ಕಜೆ ರಾಮಚಂದ್ರ ಅವರ ಪುತ್ರ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.