ರಾಜ್ಯ ರಾಜಕಾರಣದಲ್ಲಿ ಭಾನುವಾರ ಸಂಚಲನ. ಇಡೀ ರಾಜ್ಯದಲ್ಲಿ ಕುತೂಹಲ ಸೀಎಂ ಬಿ ಎಸ್ ಯಡಿಯೂರಪ್ಪ ಮುಂದುವರಿಯುತ್ತಾರಾ ? ರಾಜೀನಾಮೆ ನೀಡ್ತಾರಾ ? ಯಾರಾಗ್ತಾರೆ ಸೀಎಂ ? ಹೀಗೇ ಕುತೂಹಲಗಳು. ಹಾಗಿದ್ದರೆ ಬಿ ಎಸ್ ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡಲು ಸೂಚನೆ ಕೊಡುವವರು ಯಾರು ? ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಬಿ ಎಸ್ ವೈ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಈ ಹಿಂದೆ ರಾಜ್ಯದ ಬಿಜೆಪಿಯಲ್ಲಿನ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುತ್ತಿದ್ದ ಬಿ ಎಲ್ ಸಂತೋಷ್ ಅವರ ಹೆಸರು ಈಗ ಸೀಎಂ ಸ್ಥಾನದತ್ತ ಕೇಳಿಬರುತ್ತಿದೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರದು ಎಂದು ಹೇಳಲಾಗುವ ಆಡಿಯೋ ಕೂಡಾ ಚರ್ಚೆಯಾಗುತ್ತದೆ. ದೆಹಲಿಯಿಂದ ಬರುವ ಸೀಎಂ ವ್ಯಕ್ತಿ ಯಾರು ?
ಸೀಎಂ ಬದಲಾವಣೆಯ ಚರ್ಚೆ ನಡೆಯುತ್ತಿರುವ ವೇಳೆಯೇ, ರಾಜೀನಾಮೆ ಕುರಿತು ಹೈಕಮಾಂಡ್ ಸೂಚನೆ ಇನ್ನೂ ಬಂದಿಲ್ಲ. ರಾತ್ರಿವರೆಗೂ ಕಾಯುತ್ತೇನೆ. ನೀವು ನಾಳೆ ಬೆಳಿಗ್ಗೆವರೆಗೂ ಕಾಯಿರಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಪ್ರವಾಹ ಪೀಡಿತ ಉತ್ತರ ಕರ್ನಾಟಕದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಭಾನುವಾರ ಸಂಜೆ ಬೆಂಗಳೂರಿಗೆ ಮರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಡು ಅಂದರೆ ಕೊಡಲು ಸಿದ್ಧ ಎಂದರು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಮ್ಮ ಕಾರ್ಯವೈಖರಿಗೆ ಮೆಚ್ಚುಗೆ ಮಾತುಗಳನ್ನಾಡಿರುವುದಕ್ಕೂ ಹೈಕಮಾಂಡ್ ನಿಂದ ಬರುವ ಸಂದೇಶಕ್ಕೆ ಸಂಬಂಧವಿಲ್ಲ. ನಾಳೆ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇದರ ಜೊತೆಗೇ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಕೈಗೊಳ್ಳಲು ಬಿ ಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಮಧ್ಯಾಹ್ನದವರೆಗೂ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಬೆಳಗಾವಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿಯೇ ಅವರು ಸೋಮವಾರ ಕಾರವಾರ ಜಿಲ್ಲೆಯ ಭೇಟಿ ಬಗ್ಗೆ ಹೇಳಿದ್ದಾರೆ.
ಈ ನಡುವೆ ಜು.25 ರಂದು ರಾತ್ರಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಯುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈವರೆಗೂ ಸೀಎಂ ಆಗಿ ಬೇರೆ ಬೇರೆ ಹೆಸರುಗಳು ಕೇಳಿಬಂದರೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೆಸರು ಕೇಳಿಬರುತ್ತಿದೆ. ಭಾನುವಾರ ರಾತ್ರಿ ಬಿಜೆಪಿ ನಾಯಕ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಜೆಪಿ ನಡ್ಡಾ ಅವರು ಸಭೆ ನಡೆಸಲಿದ್ದು, ರಾತ್ರಿಯೇ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.