1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದ್ದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳು ದೋಷ ಮುಕ್ತ ಎಂದು ಮಹತ್ವದ ತೀರ್ಪು ನೀಡಿದೆ.
ಲಖ್ನೋ ಸಿಬಿಐ ವಿಶೇಷ ನ್ಯಾಯಾಲಯ ಸುದೀರ್ಘ 28 ವರ್ಷಗಳ ಕಾಲ ವಿಚಾರಣೆ ನಡೆಸಿ ಅಂತಿಮ ತೀರ್ಪನ್ನು ಪ್ರಕಟಿಸಿದೆ. ವಿಶೇಷ ಕೋರ್ಟ್ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಾಪೀಠವು ತೀರ್ಪು ಪ್ರಕಟಿಸಿ ಬಾಬ್ರಿ ಮಸೀದಿ ಧ್ವಂಸ ಘಟನೆ ಪೂರ್ವ ನಿಯೋಜಿತ ಕೃತ್ಯ ಅಲ್ಲ, ಆಕಸ್ಮಿಕವಾಗಿ ನಡೆದಿರುವಂತದ್ದು, ಆರೋಪ ಸಾಬೀತು ಪಡಿಸಲು ಪ್ರಬಲ ಸಾಕ್ಷ್ಯಗಳು ಇಲ್ಲ. ಎಲ್ಲಾ ಆರೋಪಿಗಳು ನಿರ್ದೋಷಿಗಳು ಎಂದು ಆದೇಶ ಪ್ರಕಟಿಸಿದ್ದಾರೆ.
1992 ರ ಡಿಸೆಂಬರ್ 6 ರಂದು ಕರಸೇವಕರು ಬಾಬ್ರಿ ಮಸೀದಿಯನ್ನು ಕೆಡವಿದರು.ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತಿತರ 49 ಮಂದಿ ಆರೋಪ ಪಟ್ಟಿಯಲ್ಲಿದ್ದರು.
ಪ್ರಕರಣದಲ್ಲಿ ಆರೋಪಿತರಾದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಕೋರ್ಟ್ ಗೆ ಖುದ್ದು ಹಾಜರಾಗಿರಲಿಲ್ಲ.. ವಿಡಿಯೋ ಕಾನ್ಫರೆನ್ಸ್ ಮೂಲಕ ಇವರು ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದರು. 26 ಮಂದಿ ಕೋರ್ಟ್ ಮುಂದೆ ಹಾಜರಾಗಿದ್ದರು. ಈ ಪ್ರಕರಣದಲ್ಲಿ 49 ಮಂದಿ ಆರೋಪಿತರಿದ್ದು, ವಿಚಾರಣೆ ಹಂತದಲ್ಲಿ 17 ಮಂದಿ ಮೃತಪಟ್ಟಿದ್ದಾರೆ.