ಬದಿಯಡ್ಕದಲ್ಲಿ ಸುಮಾರು 30 ವರ್ಷಗಳಿಂದ ದಂತ ವೈದ್ಯರಾಗಿ ಜನಾನುರಾಗಿಯಾಗಿದ್ದ ಡಾ| ಕೃಷ್ಣಮೂರ್ತಿ ಸರ್ಪಂಗಳ (57) ಅವರು ನ. 8ರಂದು ನಾಪತ್ತೆಯಾಗಿ ನ.10 ರಂದು ಮೃತದೇಹ ಪತ್ತೆಯಾಗಿದೆ. ಇದೀಗ ತನಿಖೆ ಚುರುಕಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿಚಾರಣೆ ವಿಚಾರಣೆ ನಡೆಸಲಾಗಿದೆ. ಸದ್ಯ ಐದು ಮಂದಿಯನ್ನು ಬದಿಯಡ್ಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನ.8 ರಂದು ಬೆಳಗ್ಗೆ 9 ಸುಮಾರಿಗೆ ಡಾ| ಕೃಷ್ಣಮೂರ್ತಿ ಅವರು ಕ್ಲಿನಿಕ್ ಗೆ ಬಂದಿದ್ದರು. ಸುಮಾರು 11 ಗಂಟೆಯ ವೇಳೆಗೆ ದಂತ ತಪಾಸಣೆಗೆ ಬಂದ ಮುಸ್ಲಿಂ ಯುವತಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ತಕರಾರು ನಡೆದಿತ್ತು, ಇದೇ ವೇಳೆ ಗುಂಪು ಒಂದು ಬೆದರಿಕೆ ಹಾಗೂ ಹಲ್ಲೆಗೆ ಯತ್ನಿಸಿ ಹಣದ ಆಮಿಷ ಒಡ್ಡಿತ್ತು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕಡೆಯಿಂದ ದೂರು ದಾಖಲಾಗಿತ್ತು.ಘಟನೆಯಿಂದ ರೋಸಿ ಹೋಗಿದ್ದ ಡಾ.ಕೃಷ್ಣಮೂರ್ತಿ ಅವರು ಮಧ್ಯಾಹ್ನ ಊಟಕ್ಕೆಂದು ಹೋದವರು ಮೊಬೈಲನ್ನೂ ಕ್ಲಿನಿಕ್ ನಲ್ಲಿಯೇ ಬಿಟ್ಟು ಬೈಕ್‌ನಲ್ಲಿ ಹೋದವರು ನಾಪತ್ತೆಯಾಗಿದ್ದರು.
ನ.9 ರಂದು ಬೆಳಗ್ಗೆ ಕುಂದಾಪುರ ಬಳಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಅಪರಿಚಿತ ಮೃತದೇಹ ಪತ್ತೆಯಾದ ಬಗ್ಗೆ ಸುದ್ದಿ ತಿಳಿದ ಡಾ| ಕೃಷ್ಣಮೂರ್ತಿ ಅವರ ಮನೆಯವರು, ನ.10 ರಂದು ಮಧ್ಯಾಹ್ನದ ವೇಳೆಗೆ ಕುಂದಾಪುರಕ್ಕೆ ತೆರಳಿ ಮೃತದೇಹ ಗುರುತು ಪತ್ತೆ ಮಾಡಿದ್ದರು.
ಡಾ.ಕೃಷ್ಣಮೂರ್ತಿ ಅವರ ನಿಕಟವರ್ತಿಗಳು ಹಾಗೂ ಸಂಬಂಧಿಕರು ಹೇಳುವ ಪ್ರಕಾರ ಡಾ.ಕೃಷ್ಣಮೂರ್ತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವವರು ಅಲ್ಲ. ಸಮಸ್ಯೆಗಳನ್ನು ಎದುರಿಸಿ, ಧೈರ್ಯದಿಂದ ಇದ್ದವರೇ ಆಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಏನು ನಡೆದಿದೆ ಎನ್ನುವುದೇ ನಿಗೂಢವಾಗಿದೆ ಎನ್ನುತ್ತಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬದಿಯಡ್ಕದಲ್ಲಿ ಪ್ರತಿಭಟನೆ ನಡೆದಿತ್ತು, ಉಗ್ರ ಹೋರಾಟ ನಡೆಯುವ ಸಾಧ್ಯತೆಗಳು ಇವೆ. ಈ ನಡುವೆ ಪ್ರಕರಣದ ತನಿಖೆ ಚುರುಕಾಗಿದೆ. ಹಲವಾರು ಮಂದಿಯ ವಿಚಾರಣೆ ನಡೆದಿದೆ. ಸದ್ಯ ಐದು ಮಂದಿಯನ್ನು ಬದಿಯಡ್ಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಚುನಾಯಿತ ಪ್ರತಿನಿಧಿ ಸಹಿತ 5 ಜನರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ. ಈ ಆರೋಪಿಗಳು ಕ್ಲಿನಿಕ್‌ನಲ್ಲಿ ಕೊಲೆ ಬೆದರಿಕೆ ಹಾಕಿದ್ದರು ಹಾಗೂ ಬೆದರಿಸಿ ಹಣ ಪಡೆಯಲು ಯೋಜನೆ ಹಾಕಿದ್ದರು ಎಂದು ತಿಳಿದು ಬಂದಿದೆ. ಈ ನೆಲೆಯಲ್ಲಿ ತನಿಖೆ ಆರಂಭವಾಗಿದೆ.
ಡಾ.ಕೃಷ್ಣಮೂರ್ತಿ ನಾಪತ್ತೆ ಹಾಗೂ ಮೃತದೇಹ ಪತ್ತೆಯ ಹಿಂದೆ ಸಾಕಷ್ಟು ಅನುಮಾನಗಳು ಇವೆ. ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಕುಂದಾಪುರಕ್ಕೆ ತೆರಳಬೇಕಾಗಿರಲಿಲ್ಲ ಎನ್ನವ ವಾದಗಳೂ ಇವೆ. ಮೃತದೇಹ ಪತ್ತೆಯಾದ ಪ್ರದೇಶವೂ ಗ್ರಾಮೀಣ ಭಾಗವಾಗಿದ್ದು ಅಲ್ಲೂ ಅನುಮಾನಗಳು ಇವೆ. ಇದುವರೆಗೂ ಯಾವುದೇ ಕೆಟ್ಟ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಇಲ್ಲದ ವೈದ್ಯರ ಮೇಲೆ ಏಕಾಏಕಿ ಇಂತಹ ಆರೋಪ ಬರಲು ಏನು ಕಾರಣ ಎಂಬುದು ಬಲವಾದ ಸಂದೇಹವಾಗಿದ್ದು, ಆಸ್ತಿ ಮಾರಾಟಕ್ಕೆ ಸಂಬಂಧಿತ ವಿಚಾರಗಳು ಸೇರಿದಂತೆ ಹಲವಾರು ಅನುಮಾನಗಳನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಮಗ್ರ ತನಿಖೆಗೆ ಸಾರ್ವಜನಿಕರು ಹಾಗೂ ವೈದ್ಯರ ಹಿತೈಷಿಗಳು ಒತ್ತಾಯಿಸಿದ್ದಾರೆ.