ಉತ್ತರಾಖಂಡದ ಸ್ಥಳೀಯ ಬದ್ರಿ ಹಸು ಇಂದು ರೈತರ ಪಾಲಿಗೆ ಹೊಸ ಆದಾಯದ ಮೂಲವಾಗಿ ಪರಿಣಮಿಸಿದೆ. ಕಡಿಮೆ ಹಾಲು ಕೊಟ್ಟರೂ, ಈ ಹಸುವಿನ ತುಪ್ಪ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ ₹3500 ವರೆಗೆ ಮಾರಾಟವಾಗುತ್ತದೆ. ಇದರಿಂದಾಗಿ ಇದನ್ನು “ಸಣ್ಣ ರೈತರಿಗೆ ಎಟಿಎಂ” ಎಂದೇ ಕರೆದುಕೊಳ್ಳಲಾಗುತ್ತಿದೆ.
ಹಸು ಸಾಕಣೆ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ : ಇಂದು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಹಸು ಸಾಕಣೆ ಪದ್ಧತಿ ಹೆಚ್ಚಾಗುತ್ತಿದೆ. ಸರ್ಕಾರವೂ ಹಸು ಮತ್ತು ಎಮ್ಮೆ ಖರೀದಿಗೆ ಸಬ್ಸಿಡಿ ನೀಡುವ ಮೂಲಕ ಹೈನುಗಾರಿಕೆಯನ್ನು ಉತ್ತೇಜಿಸುತ್ತಿದೆ. ಆದರೆ “ಹಸುವಿನ ಹಾಲಿನಿಂದ ತುಪ್ಪ ಹೆಚ್ಚು ಸಿಗುವುದಿಲ್ಲ” ಎಂಬ ಕಾರಣಕ್ಕೆ ಅನೇಕ ರೈತರು ಹಸು ಸಾಕಣೆಗೆ ಹಿಂಜರಿಯುತ್ತಾರೆ. ಆದರೆ ಬದ್ರಿ ಹಸು ಈ ಕಲ್ಪನೆಯನ್ನು ಬದಲಾಯಿಸಿದೆ.
ಬದ್ರಿ ಹಸು ಉತ್ತರಾಖಂಡದ ಪರ್ವತ ಪ್ರದೇಶದ ಸ್ಥಳೀಯ ತಳಿಯಾಗಿದೆ. ಇದು ಸಾಮಾನ್ಯ ಹಸುಗಳಂತೆ ಹೆಚ್ಚಿನ ಹಾಲು ಕೊಡದೇ ಇದ್ದರೂ, ಅದರ ಹಾಲಿನ ಗುಣಮಟ್ಟ ಅತ್ಯುತ್ತಮವಾಗಿದೆ. ದಿನಕ್ಕೆ ಹಾಲು ಉತ್ಪಾದನೆ: 3–4 ಲೀಟರ್ ಮಾತ್ರ ಹಾಲು ಲಭಿಸುತ್ತದೆ. ಆದರೆ ತುಪ್ಪದ ಬೆಲೆ ಲೀಟರಿಗೆ 3,500 ರೂಪಾಯಿಗೆ ಮಾರಾಟವಾಗುತ್ತದೆ. ಇದರ ತುಪ್ಪ ಸಾಮಾನ್ಯ ಹಸುವಿನ ತುಪ್ಪಕ್ಕಿಂತ ಸುಮಾರು ಐದು ಪಟ್ಟು ಹೆಚ್ಚು ದುಬಾರಿ.
ಬದ್ರಿ ಹಸುವಿನ ಹಾಲಿನ ಪ್ರಮುಖ ವಿಶೇಷತೆ ಅದರ ಹೆಚ್ಚಿನ ಕೊಬ್ಬು ಪ್ರಮಾಣ. ಸಂಶೋಧನೆ ಪ್ರಕಾರ ಇದರಲ್ಲಿ ಕೊಬ್ಬು: 8.4%, ಒಟ್ಟು ಘನವಸ್ತುಗಳು: 9.02% ,ಕಚ್ಚಾ ಪ್ರೋಟೀನ್: 3.26% ಇದು ಇತರ ಹಸು ಮತ್ತು ಎಮ್ಮೆ ಹಾಲಿಗಿಂತಲೂ ಹೆಚ್ಚು.
ಬದ್ರಿ ಹಸುವಿನ ಹಾಲಿನಲ್ಲಿ A2 ಪ್ರೋಟೀನ್, ಹಲವು ಪೋಷಕಾಂಶಗಳು, ಶುದ್ಧತೆ ಮತ್ತು ಆರೋಗ್ಯಕರ ಗುಣ ಹೊಂದಿದೆ. ಇದರಿಂದಾಗಿ ಇದರ ಹಾಲಿನಿಂದ ತಯಾರಾದ ತುಪ್ಪ, ಬೆಣ್ಣೆ, ಮಜ್ಜಿಗೆ ಎಲ್ಲವೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ. ಈ ಹಸು ಹಿಮಾಲಯದ ನೈಸರ್ಗಿಕ ಹುಲ್ಲುಗಾವಲುಗಳಲ್ಲಿ ಮೇಯುತ್ತದೆ. ಅಲ್ಲಿನ ಪೋಷಕಾಂಶ ತುಂಬಿದ ಹುಲ್ಲು ಹಸುವಿನ ಹಾಲನ್ನು ಇನ್ನಷ್ಟು ಶುದ್ಧ ಮತ್ತು ಪೌಷ್ಟಿಕವಾಗಿಸುತ್ತದೆ ಎಂಬ ನಂಬಿಕೆ ಇದೆ. ಸ್ಥಳೀಯ ದೇವತೆಗಳಿಗೆ ಕೂಡ ಈ ಹಾಲನ್ನು ಅರ್ಪಿಸುವ ಸಂಪ್ರದಾಯವಿದೆ.
ಹೈನುಗಾರಿಕೆಯ ವಾಣಿಜ್ಯೀಕರಣದಿಂದ ಹೆಚ್ಚಿನ ಹಾಲು ಕೊಡುವ ತಳಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಬದ್ರಿ ಹಸುವಿನ ಸಂಖ್ಯೆಗಳು ಕೆಲವು ನೂರಕ್ಕೆ ಇಳಿದಿವೆ. ಆದರೆ ಈಗ, ಆನ್‌ಲೈನ್ ಕಂಪನಿಗಳು ತುಪ್ಪ ಮಾರಾಟದ ಮೂಲಕ ಸಂರಕ್ಷಣೆ, ಉತ್ತರಾಖಂಡ ಡೈರಿ ಇಲಾಖೆ, UKCDP ಸಂಸ್ಥೆ ಇವುಗಳು ಬದ್ರಿ ಹಸು ಸಂರಕ್ಷಣೆಯಲ್ಲಿ ತೊಡಗಿಕೊಂಡಿವೆ. ಕಡಿಮೆ ಹಾಲು ಕೊಟ್ಟರೂ, ಪ್ರೀಮಿಯಂ ತುಪ್ಪ ಉತ್ಪಾದನೆ ಮೂಲಕ ಬದ್ರಿ ಹಸು ಸಣ್ಣ ರೈತರಿಗೆ ಹೆಚ್ಚು ಲಾಭ ನೀಡುವ ತಳಿ ಆಗಿದೆ. ಹೀಗಾಗಿ ಬದ್ರಿ ಹಸು ಸಾಕಣೆ, ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯ ನೀಡುವ ಡೈರಿ ಮಾದರಿಯಾಗುತ್ತಿದೆ




