ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

August 10, 2025
7:00 AM
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ ಮೋಹ ಅಂಟದಂತೆ, ಬದ್ಧತೆಗೊಂದು ರೂಪುನೀಡಿ, ಅದೇ ಜೀವವಾಗಿ, ಅದೇ ಜೀವನವಾಗಿ ತೊಡಗಿಸಿಕೊಳ್ಳುವ ಉಪಕ್ರಮ. ನಂನಮ್ಮ ಸಾಧನೆಗಳಿಗೆ ‘ಭೀಷ್ಮ’ನನ್ನು ಥಳಕು ಹಾಕಿಕೊಳ್ಳುವ ಮುನ್ನ ಇದನ್ನು ಯೋಚಿಸಬೇಕು. ಖುಷಿಬಂದಂತೆ ಹೊಸೆದುಬಿಟ್ಟರೆ ಅದು ಭೀಷ್ಮರಿಗೆ ಮಾಡುವ ಅವಮಾನ. 
ಭೀಷ್ಮ – ಜ್ಞಾನವಂತ. ಪರಾಕ್ರಮಶಾಲಿ. ತ್ಯಾಗಿಗಳಲ್ಲಿ ಶಿರೋಮಣಿ. ಯುದ್ಧದಲ್ಲಿ ವೀರಾಗ್ರಣಿ. ಬದ್ಧತೆಯ ಶಿಲ್ಪ. ಸಾಧಕ ಧರ್ಮಿಷ್ಠ. ಹಸ್ತಿನಾವತಿಯ ಸಿಂಹಾಸನದ ಸಂರಕ್ಷಕ. ಧರ್ಮಕ್ಕೆ ಹೆಗಲು ನೀಡಿದ ಧೀಮಂತ. ಕುಲಕ್ಕಾಗಿ, ಕುಲದ ಮರ್ಯಾದೆಗಾಗಿ ಹೆಣಗಾಡಿದ ವ್ಯಕ್ತಿತ್ವ. ಸಜ್ಜನನಾಗಿದ್ದು ದುರ್ಜನರ ಮಧ್ಯೆ ಬದುಕಿದ. ದುರ್ಜನರನ್ನು ಸಜ್ಜನರನ್ನಾಗಿ ಮಾಡುವಲ್ಲಿ ಅಸಮರ್ಥನಾದ. ಇದು ಭೀಷ್ಮನ ವ್ಯಕ್ತಿತ್ವದ ಒಂದು ಸೋಲು. ಮಹಾಭಾರತದ ಹತ್ತು ದಿವಸದ ಯುದ್ಧವು ‘ಭೀಷ್ಮ ಪರ್ವ’ವಾಗಿದೆ. ಪರಾಕ್ರಮದ ಮೇಲ್ಮೆಗೆ ಈ ಹತ್ತು ದಿವಸಗಳ ಕಾಣ್ಕೆಯು ಭೀಷ್ಮನ ಬಂಧುನಿಷ್ಠೆಯ ಹೆಗ್ಗುರುತು.
ಇಂತಹ ಪ್ರಭಾವಶಾಲಿ, ಪ್ರತಾಪಶಾಲಿ ‘ಭೀಷ್ಮ’ರನ್ನು ನಾವು ಕಾಣುವ, ಅವರನ್ನು ನಮ್ಮ ವ್ಯಕ್ತಿತ್ವಕ್ಕೆ ಥಳಕು ಹಾಕುವ ವಿದ್ಯಮಾನಗಳು ನಡೆಯುತ್ತಲೇ ಇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧಿಸಿದ್ದರು. ಅವರು ಗೆಲ್ಲಲಿಲ್ಲ. ಆ ಸಂದರ್ಭದ ಅವರ ಮಾತುಗಳಿವು : “ಚಕ್ರವ್ಯೂಹದಲ್ಲಿ ಸಿಲುಕಿ ಸೋತಿದ್ದೇನೆ. ಆದರೆ ಭೀಷ್ಮನಂತೆ ಸರಳಮಂಚವನ್ನು ಏರಲಾರೆ,” ಇಲ್ಲಿ ಚಕ್ರವ್ಯೂಹ ಮತ್ತು ಭೀಷ್ಮನ ಸರಳಮಂಚವನ್ನು ರಾಜಕೀಯ ವ್ಯವಸ್ಥೆಯ ಹಿನ್ನೆಲೆಯಲ್ಲಿ ಬಳಸಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ವ್ಯವಸ್ಥೆಯಲ್ಲಿ ಇದು ಅಂತಿಮವಲ್ಲ, ಸರಳಮಂಚವನ್ನು ಏರದೆ ಅಂದರೆ ವಿಶ್ರಾಂತಿ ಪಡೆಯದೆ ಮುಂದಕ್ಕೂ ಪ್ರಯತ್ನಿಸುತ್ತೇನೆ. ಒಳ್ಳೆಯ ದಿವಸಗಳು ಮುಂದಕ್ಕಿವೆ.
ರಾಜಕೀಯ ಕ್ಷೇತ್ರದಲ್ಲಿ ದೇವೇಗೌಡರು ಅನುಭವದಲ್ಲೂ, ವಯಸ್ಸಿನಲ್ಲೂ, ಕುಟುಂಬದ ಹಿರಿಯನಾಗಿ ‘ಭೀಷ್ಮ’ ಸದೃಶರು. ರಾಜಕೀಯ ಪೆಟ್ಟುಗಳಲ್ಲಿ ಪಳಗಿದವರು. ಗತಿಸಿದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿಯರು ರಾಜಕೀಯ ಭೀಷ್ಮರು. ತತ್ವಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆದವರು. ಒಂದು ಪಕ್ಷಕ್ಕೋ, ಒಂದು ವ್ಯವಸ್ಥೆಗೋ ಭೀಷ್ಮನಂತೆ ಗಟ್ಟಿಯಾಗಿ ನಿಂತವರು.
ಯಕ್ಷಗಾನದ ವಿಚಾರಕ್ಕೆ ಬಂದಾಗ ಈಗಿನ ತಲೆಮಾರು ನೆನಪು ಮಾಡುವಂತೆ – ಡಾ.ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗ, ಮಲ್ಪೆ ರಾಮದಾಸ ಸಾಮಗ, ಹೊಸ್ತೋಟ ಮಂಜುನಾಥ ಭಾಗವತರು, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ.. ಇವರೆಲ್ಲಾ ಯಕ್ಷಗಾನ ಕ್ಷೇತ್ರದ ‘ಭೀಷ್ಮ’ರೆಂದು ಮಾನಿಸಲ್ಪಟ್ಟವರು. ಈ ರಂಗದ ಬೆಳವಣಿಗೆಯಲ್ಲಿ ಅನೇಕ ಮಂದಿ ಭೀಷ್ಮನಂತೆ ತನುವನ್ನು ತೇದವರಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಪಾರಂಪರಿಕ ಕಲೆಯನ್ನು ದಾಟಿಸಿದ್ದಾರೆ. ವರ್ತಮಾನದ ರಂಗದ ವೃತ್ತಿ/ಹವ್ಯಾಸಿ ಕಲಾವಿದರಿಗೆ ‘ಮುಂದಿನ ತಲೆಮಾರಿಗೆ ಕಲೆಯನ್ನು ವಿಕಾರವಿಲ್ಲದೆ ದಾಟಿಸುವ ಹೊಣೆಯಿದೆ.’ ಆಗ ಮುಂದಿನ ತಲೆಮಾರಿನಲ್ಲಿ ಈಗಿನವರು ‘ಭೀಷ್ಮ’ರಾಗಲು ಅರ್ಹತೆ ಬರುತ್ತದೆ. ಇಷ್ಟಾಗಲು ಕನಿಷ್ಠ ಬದುಕಿನ ಅರ್ಧಾಯುಷ್ಯ ಸವೆಸಿರಬೇಕಾಗುತ್ತದೆ.
ಪುತ್ತೂರಿನ ಕೀರ್ತಿಶೇಷ ಧರ್ಣಪ್ಪ ಗೌಡ ಕುಂಟ್ಯಾನರು ತರಕಾರಿ ಕೃಷಿಯ ಭೀಷ್ಮನೆಂದೇ ಗುರುತಿಸಿಕೊಂಡಿದ್ದರು. ಕಳೆದರ್ಧ ಶತಮಾನದಿಂದ ತರಕಾರಿ ಕೃಷಿಯನ್ನು ಸ್ವತಃ ಬೆಳೆದು, ಮಾರುಕಟ್ಟೆಯನ್ನು ಸೃಜಿಸಿದ ಸಾಹಸಿ. ಕೃಷಿಗೆ ಬೇಕಾದ ನಿರ್ವಹಣೆಯ ಜಾಣ್ಮೆಯನ್ನು ಅನುಭವದಿಂದ ರೂಢಿಸಿಕೊಂಡಿದ್ದರು. ಇವರ ಕೃಷಿಕ್ರಮಗಳನ್ನು ಕೃಷಿಕರು ‘ಕುಂಟ್ಯಾನ ವಿಧಾನ’ವಾಗಿ ಅಂಗೀಕರಿಸಿದರು. ತರಕಾರಿ ಕೃಷಿಕರಿಗೆ ಐಕಾನ್ ಆಗಿ ಹೊರಹೊಮ್ಮಿದ್ದರು. ಸಾಹಸ, ಛಲದ ದುಡಿಮೆಯಿಂದ ಸಮಾಜದಲ್ಲಿ ಗೌರವ ಸ್ಥಾನ ಪಡೆದಿದ್ದಾರೆ. ದೊಡ್ಡ ಮಟ್ಟದಲ್ಲಿ ತರಕಾರಿ ಕೃಷಿಯು ಸುಲಭಸಾಧ್ಯವಲ್ಲದ ಕಾಲಘಟ್ಟದಲ್ಲಿ ‘ಕರಾವಳಿಯಲ್ಲಿ ಮಾರುಕಟ್ಟೆಗಾಗಿ ವೈವಿಧ್ಯ ತರಕಾರಿ ಬೆಳೆಯಲು ಸಾಧ್ಯ’ ಎಂದು ತೋರಿದರು.
ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಡಾ.ಬಿ.ಕೆ.ಎಸ್.ಅಯ್ಯಂಗಾರ್ ನಿಜಾರ್ಥದ ‘ಯೋಗ ಭೀಷ್ಮ’. ಅವರ ಪೂರ್ಣ ಹೆಸರು – ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್. ಭಾರತವು ಜಗತ್ತಿಗೆ ನೀಡಿದ ದೊಡ್ಡ ಕೊಡುಗೆಯೆಂದರೆ ‘ಯೋಗ’. ಅದು ಭಾರತೀಯ ಸಂಸ್ಕøತಿಯ ಭಾಗ. ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಿದವರು ಅಯ್ಯಂಗಾರರು. ‘ಯೋಗವೆನ್ನುವುದು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಆಧ್ಯಾತ್ಮಿಕ ಶಿಸ್ತು, ಆತ್ಮ ಸಾಕ್ಷಾತ್ಕಾರದ ಮಾಧ್ಯಮ’ – ಸ್ವಾನುಭವದಿಂದ ಕಂಡುಕೊಂಡಿದ್ದರು. ಯೋಗವೆಂದರೆ ಅಯ್ಯಂಗಾರ್, ಅಯ್ಯಂಗಾರ್ ಅಂದರೆ ಯೋಗ – ಹೀಗೆ ಹೆಸರುಗಳು ಪರಸ್ಪರ ಹೊಸೆದುಕೊಂಡಿದ್ದುವು. ಕನ್ನಡದಲ್ಲಿ ಅವರ ಜನಪ್ರಿಯ ಕೃತಿ ‘ಯೋಗ ದೀಪಿಕಾ’. ವಿದೇಶದಲ್ಲದು ‘ಯೋಗದ ಭಗವದ್ಗೀತೆ’.
ರಂಗಭೂಮಿಯ ಭೀಷ್ಮ ಬಿ.ವಿ.ಕಾರಂತ. ಇವರು ಕವಿ, ಸಾಹಿತಿ, ನಾಟಕಕಾರ, ರಂಗಕರ್ಮಿ, ಚಿತ್ರ ನಿರ್ದೇಶಕ. ಕನ್ನಡ ನಾಟಕಗಳನ್ನು ಹಿಂದಿಯಲ್ಲಿ ಪ್ರಯೋಗ ಮಾಡಿದ್ದರು. ಗಿರೀಶ್ ಕಾರ್ನಾಡರ ‘ಹಯವದನ, ತುಘಲಕ್, ಹಿಟ್ಟಿನ ಹುಂಜ,’ ಶ್ರೀರಂಗರ ‘ಕೇಳು ಜನಮೇಜಯ, ರಂಗಭಾರತ, ಕತ್ತಲೆ ಬೆಳಕು’ ಮತ್ತು ಡಾ.ಶಿವರಾಮ ಕಾರಂತರ ‘ಯಕ್ಷಗಾನ’ ಸೇರಿದಂತೆ ಹದಿನೈದು ಕೃತಿಗಳನ್ನು ಹಿಂದಿಗೆ ಅನುವಾದಿಸಿದರು. ವಿಶ್ವಶ್ರೇಷ್ಟ ನಾಟಕಕಾರರ ನಾಟಕಗಳನ್ನು ನಿರ್ದೇಶಿಸಿದ ಹಿರಿಮೆ. ಕಾರಂತರು ನೂರಕ್ಕೂ ಮಿಕ್ಕಿ ನಾಟಕಗಳನ್ನು ನಿರ್ದೇಶಿಸಿದ್ದರು. ಕನ್ನಡ ರಂಗಭೂಮಿ ಸದಾ ನೆನಪುಟ್ಟುಕೊಳ್ಳಬೇಕಾದ ‘ರಂಗಾಯಣ’ದ ನಿರ್ಮಾತೃ. ನಾಟಕದ ಜತೆಗೆ ಚಲನಚಿತ್ರ ರಂಗದಲ್ಲೂ ಕೃಷಿ ಮಾಡಿದರು. ಕಾರಂತರ ಬದುಕು ಪೂರ್ತಿ ರಂಗಭೂಮಿಗಾಗಿ ಸಮರ್ಪಿತ. ಹಾಗಾಗಿ ಅವರು ‘ರಂಗಭೀಷ್ಮ’.
ಸಹಕಾರ ಕ್ಷೇತ್ರದ ‘ಪಿತಾಮಹ’ನಾಗಿ, ‘ಭೀಷ್ಮ’ನಾಗಿ ಮೊಳಹಳ್ಳಿ ಶಿವರಾಯರ ತ್ಯಾಗವು ಜನಜನಿತ.  1914ರಲ್ಲಿ ಪುತ್ತೂರಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸ್ಥಾಪನೆಯ ರೂವಾರಿ. 1925ರಲ್ಲದು ಮಂಗಳೂರಿಗೆ ವರ್ಗಾವಣೆಗೊಂಡಿತು. 1919ರಲ್ಲಿ ಪುತ್ತೂರಿನಲ್ಲಿ ‘ಕೃಷಿಕರ ಸಹಕಾರಿ ಭಂಡಸಾಲೆ’ ಸಂಘವನ್ನು ಸ್ಥಾಪಿಸಿದ್ದರು. ಮುಂದೆ ಅದು ‘ದಕ್ಷಿಣ ಕನ್ನಡ ಕೃಷಿಕರ ಸಹಕಾರಿ ಮಾರಾಟ ಸಂಘ’ವಾಗಿ ಕಾರ್ಯ ನಿರ್ವಹಿಸಿತು. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುವಂತಾಯಿತು. 1936ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕಿನ ಸ್ಥಾಪನೆಗೆ ಕಾರಣರಾದರು. ಪುತ್ತೂರನ್ನು ಕೇಂದ್ರವಾಗಿಟ್ಟುಕೊಂಡು ಸಹಕಾರ ಆಂದೋಲನದ ನೇತೃತ್ವ.
ಅಡಿಕೆ ಕೃಷಿಕರು ಮರೆಯದ ವ್ಯಕ್ತಿ – ಕೀರ್ತಿಶೇಷ ವಾರಣಾಸಿ ಸುಬ್ರಾಯ ಭಟ್. ಪ್ರತಿಷ್ಠಿತ ಅಡಿಕೆ ಸಂಸ್ಥೆಯಾದ ‘ಕ್ಯಾಂಪ್ಕೋ’ ಸ್ಥಾಪಕ. ಕೃಷಿಕರನ್ನು ಸಂಘಟಿಸಿ, ಮನೆಮನೆಗೆ ಭೇಟಿಯಿತ್ತು ಸಂಸ್ಥೆಯನ್ನು ಕಟ್ಟಿದವರು. ಹಸ್ತಿನಾವತಿಯ ಸಿಂಹಾಸನದ ರಕ್ಷಣೆಗೆ ಭೀಷ್ಮನಿದ್ದಂತೆ, ಅಡಿಕೆ ಕೃಷಿಕರ ಬದುಕಿಗೆ ಸಂಸ್ಥೆಯೇ ಒಬ್ಬ ರಕ್ಷಕನಾಗುವಂತೆ ಬೆಳೆಸಿದರು. ಪುತ್ತೂರಿನಲ್ಲಿ ಬೃಹತ್ ಚಾಕೊಲೇಟ್ ಫ್ಯಾಕ್ಟರಿ ವಾರಣಾಸಿಯವರ ಕನಸು. ಅಡಿಕೆಯೊಂದಿಗೆ ಕೊಕ್ಕೋ ಕೃಷಿಯ ಇತಿಹಾಸವನ್ನು ನೆನಪಿಸುವಾಗ ಸುಬ್ರಾಯ ಭಟ್ಟರನ್ನು ಮರೆಯುವಂತಿಲ್ಲ. ಹಳ್ಳಿಯ ರೈತನೊಬ್ಬ ದೇಶ ಮಟ್ಟದಲ್ಲಿ ಮಾಡಿದ ಸಾಧನೆಯು ಅಲ್ಪಾಯುವಲ್ಲ, ದೀರ್ಘಾಯು.
ಹೀಗೆ ಒಂದೊಂದು ಕ್ಷೇತ್ರದಲ್ಲಿ ‘ಮರೀಚಿಕೆ’ಯಾಗಿ ಕಾಣಿಸಿಕೊಂಡು ಸಮಾಜದ ಒಳಿತಿಗಾಗಿ ‘ಹೊಣೆ’ಯನ್ನು ಹೆಗಲಿಗೇರಿಕೊಂಡ ಸಾಧಕರ ಸಂಖ್ಯೆ ಹೇಳುವಷ್ಟು ದೊಡ್ಡದಿಲ್ಲ. ಇಂದು ನಮ್ಮ ಮಧ್ಯೆ ಪ್ರತಿಷ್ಠಿತ ಸಂಸ್ಥೆಗಳು ಸಕ್ರಿಯವಾಗಿದ್ದರೆ ಅದಕ್ಕೆ ಹಿಂದಿನ ಹಿರಿಯರ ಶ್ರಮವೇ ಉಸಿರಾಗಿದೆ. ವೈಯಕ್ತಿಕ ಹಿತಾಸಕ್ತಿಗಳನ್ನು ಮರೆತು, ಸಮುದಾಯದ ಯೋಗ, ಕ್ಷೇಮದತ್ತ ದೂರದೃಷ್ಟಿ ಬೀರುವ ವ್ಯಕ್ತಿ, ಸಂಸ್ಥೆಗಳಿಗೆ ‘ಭೀಷ್ಮ’ನ ಹೆಸರನ್ನು ಹೊಸೆದರೆ ಗೌರವ ಹೆಚ್ಚು.
ವಯಸ್ಸಿನಲ್ಲಿ ಹಿರಿಯರಾಗಿದ್ದರು ಎನ್ನುವ ಕಾರಣಕ್ಕೆ ಭೀಷ್ಮತ್ವವನ್ನು ಆರೋಪಿಸಲಾಗದು. ಆ ಹಿರಿಯರಲ್ಲಿ ‘ಹಿರಿತನ’ವಿರಬೇಕು. ಬದುಕಿನ ಸಾಧನೆ, ಕೊಡುಗೆಗಳು ಹಿರಿತನಕ್ಕೆ ಮಾನದಂಡ. ಸಾಧನೆ ಇಲ್ಲದೆ ‘ಭೀಷ್ಮ’ನೆಂದು ಕರೆದುಕೊಳ್ಳುವುದು, ಕರೆಸಿಕೊಳ್ಳುವುದು ಮಹಾಭಾರತದ ಭೀಷ್ಮನಿಗೆ ಅಗೌರವ ಮಾಡಿದಂತೆ. ಕೆಲವು ಸಂಸ್ಥೆಗಳು ಸಂಮಾನ ಮಾಡುವಾಗ ಪ್ರದಾನಿಸುವ ಗುಣಕಥನ ಫಲಕದಲ್ಲಿ ಸಂಮಾನಿತನ ಹೆಸರಿನೊಂದಿಗೆ ‘ಭೀಷ್ಮ’ನನ್ನು ಹೊಸೆಯುತ್ತಾರೆ. ಸಂಮಾನ ಪಡೆದುಕೊಂಡವರನ್ನು ಸಂತೋಷ ಪಡಿಸುವ, ತೃಪ್ತಿ ಪಡಿಸುವ ಸಾಧನವಾಗಿ ‘ಭೀಷ್ಮ’ನನ್ನು ಶೋಷಿಸಲಾಗುತ್ತದೆ!
ಕೆಲವೊಮ್ಮೆ ಗೇಲಿಯಾಗಿ ಪದವನ್ನು ಬಳಸುವುದುಂಟು. ಕುಟುಂಬದಲ್ಲಿ, ಸಮಾಜದಲ್ಲಿ ವಯಸ್ಸಿನಲ್ಲಿ ಹಿರಿಯರಾದವರು ನಮಗೆ ಅಹಿತವನ್ನುಂಟು ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂದು ಊಹಿಸಿಕೊಳ್ಳಿ.  ಆಗ ನಾವು ಅವರ ಹೆಸರನ್ನು ಹೇಳಲು ಇಚ್ಚಿಸದೆ ‘ಆ ಭೀಷ್ಮನಿದ್ದಾನಲ್ವಾ…’ ಎಂದು ಹಲ್ಲು ಕಡಿಯುತ್ತೇವೆ. ಅಸಹನೆ ತೋರಿಸುತ್ತೇವೆ. ಕಳೆದ ಚುನಾವಣೆಯಲ್ಲಿ ವಿಜೇತರಾದ ಶಾಸಕರೋರ್ವರು, “ನಾನು ಯಾವುದೇ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರ ಸರಕಾರದಲ್ಲಿ ಸಚಿವನಾಗುವುದಿಲ್ಲ. ಇದು ನನ್ನ ಭೀಷ್ಮ ಪ್ರತಿಜ್ಞೆ” ಎಂದು ಘೋಷಿಸಿಕೊಂಡಿದ್ದರು. ಪಾಪ, ಇವರ ಸ್ವಾರ್ಥಕ್ಕಾಗಿ ಪುರಾಣ ಪುರುಷ ಭೀಷ್ಮನನ್ನು ಯಾಕೆ ಎಳೆದು ತಂದರೋ? ಇವರದ್ದೂ ಒಂದು ಪ್ರತಿಜ್ಞೆಯೋ? ಯಾವ ಸಂದರ್ಭದಲ್ಲಿ ಏನು ಮತ್ತು ಎಷ್ಟು ಮಾತನಾಡಬೇಕೆಂಬ ಎಚ್ಚರವೇ ‘ಜ್ಞಾನ’. ಅದಿಲ್ಲದಿರುವುದು ವರ್ತಮಾನದ ದುರಂತ.
ಉತ್ತಮ ಜ್ಞಾನವನ್ನು ಹೊಂದಿದವನು ‘ಭೀಷ್ಮ’. ಆತ ಜ್ಞಾನದ ಪ್ರತಿನಿಧಿ. ಮಹಾಭಾರತದ ಭೀಷ್ಮನು ‘ಧರ್ಮದ ಪ್ರತಿನಿಧಿತ್ವ’ವನ್ನು ವಹಿಸಿಕೊಂಡಿದ್ದ. ಎಷ್ಟು ಮಂದಿಗೆ ತಿಳಿದಿದೆ?
ಭೀಷ್ಮ : ಶಾಂತನು-ಗಂಗೆಯರ ಪುತ್ರ ‘ದೇವವ್ರತ’. ವಸಿಷ್ಠರಲ್ಲಿ ವೇದ-ವೇದಾಂಗ ಅಧ್ಯಯನ. ಅಸ್ತ್ರವಿದ್ಯೆಯಲ್ಲಿ ಪರಿಣತ. ರಾಜಧರ್ಮಗಳಲ್ಲಿ ನಿಷ್ಣಾತ. ಬೃಹಸ್ಪತಿ-ಶುಕ್ರರಿಗೆ ತಿಳಿದಿರುವ ಸಕಲ ವಿದ್ಯೆಗಳನ್ನು ಬಲ್ಲವನು. ಗಂಗೆಯು ದೇವವ್ರತನನ್ನು ವಿದ್ಯಾವಂತನನ್ನಾಗಿ ಕಡೆದು ಶಾಂತನುವಿಗೆ ಒಪ್ಪಿಸುತ್ತಾಳೆ.
ಕಾಲಾಂತರದಲ್ಲಿ ಶಾಂತನು ಕಾಳಿಂದಿ ನದಿಯ ಸರಹದ್ದಿನಲ್ಲಿ ಬೇಟೆಯನ್ನಾಡುತ್ತಾ ನದಿಯ ತಟಕ್ಕೆ ಬಂದಾಗ ‘ಪರಿಮಳ’ವೊಂದು ಸೆಳೆಯುತ್ತದೆ. ಅದರ ಜಾಡನ್ನರಿಸಿ ‘ಯೋಜನಗಂಧಿ’ಯನ್ನು ನೋಡಿ ಮೋಹಿತನಾಗುತ್ತಾನೆ.  ಯೋಜನಗಂಧಿಯ ತಂದೆ ದಾಶರಾಜನು ‘ನನ್ನ ಮಗಳಲ್ಲಿ ಹುಟ್ಟುವ ಮಗನಿಗೆ ಹಸ್ತಿನೆಯ ಪಟ್ಟ’ ಎಂಬ ಷರತ್ತನ್ನು ಮುಂದೊಡ್ಡಿದ್ದು ವಿಷಣ್ಣನಾಗಿ ಅರಮನೆಗೆ ತೆರಳುತ್ತಾನೆ.
ತಂದೆಯ ದುಃಖಕ್ಕೆ ಕಾರಣವನ್ನು ತಿಳಿದ ದೇವವ್ರತ ದಾಶರಾಜನನ್ನು ಭೇಟಿಯಾಗಿ ‘ತಂದೆಗಾಗಿ ಕನ್ಯಾದಾನ’ ಮಾಡಲು ವಿನಂತಿಸುತ್ತಾನೆ. ಶಾಂತನುವಿನಲ್ಲಾಡಿದ ವಚನವನ್ನೇ ಪುನರುಚ್ಚರಿಸುತ್ತಾನೆ. “ಇವಳ ಉದರದಲ್ಲಿ ಜನಿಸಿದವನೇ ಹಸ್ತಿನೆಯ ರಾಜನಾಗುತ್ತಾನೆ. ನಾನು ಆಜೀವ ಪರ್ಯಂತ ಬ್ರಹ್ಮಚಾರಿಯಾಗಿ ಉಳಿಯುತ್ತೇನೆ” – ಪ್ರತಿಜ್ಞೆ ಮಾಡಿ ಯೋಜನಗಂಧಿ ಯಾ ಸತ್ಯವತಿಯನ್ನು ತಂದೆಗೆ ವಿವಾಹ ಮಾಡಿಸುವಲ್ಲಿ ಸಫಲನಾದನು. ದೇವವ್ರತನ ಭೀಷಣ ಪ್ರತಿಜ್ಞೆಗೆ ದೇವರ್ಕಳರು ‘ಭೀಷ್ಮ’ನೆಂದು ಅಭಿದಾನ ಮಾಡಿದರು.
‘ಹಸ್ತಿನಾವತಿಯ ರಕ್ಷಕ’ನಾಗಿಯೇ ಕೊನೆ ತನಕ ಬಾಳಿದ ಭೀಷ್ಮಾಚಾರ್ಯರು ತಾನು ಉಣ್ಣುವ ಅನ್ನವು ಸುಯೋಧನನ ಅಧರ್ಮದ ಅನ್ನವೆಂದು ತಿಳಿದೂ, ಅಲ್ಲಿ ‘ಧರ್ಮ’ವನ್ನು ಕಾಣಲು ಹಾತೊರೆಯುತ್ತಿದ್ದ. ಅದು ಮರೀಚಿಕೆಯಾದಾಗ ಮಾನಸಿಕವಾಗಿ ಕುಸಿದ. ನಂಬಿದ ಮೌಲ್ಯಗಳ ಪಾಲನೆ, ನಿಷ್ಠೆಗೆ ಘಾಸಿ ಮಾಡದ, ಕುಲದ ಹಿರಿಮೆಗೆ ಕುಂದನ್ನುಂಟು ಮಾಡದ ಎಚ್ಚರದ ವ್ಯಕ್ತಿತ್ವ.
ತನ್ನ ತಂದೆಗೆ ವಿವಾಹ ಮಾಡಿಸುವಲ್ಲಿಂದ ತೊಡಗಿ, ಮಹಾಭಾರತದ ಯುದ್ಧದಲ್ಲಿ ಶರತಲ್ಪದಲ್ಲಿ ಮಲಗಿ, ಪ್ರಾಣ ತೊರೆಯುವ ತನಕವೂ ಮಾತಿಗೆ ಬದ್ಧನಾಗಿ, ಧರ್ಮವನ್ನು ಮೀರದೆ ಮಾಡಿದ ಕಾರ್ಯಗಳು ನೂರಾರು. ಕುಟುಂಬದ ಹಿರಿಯನಾಗಿ ತನ್ನದುರೇ ಬೆಳೆದ ಮಕ್ಕಳನ್ನು ತಿದ್ದಲಾಗದೆ ಒದ್ದಾಡಿದ ಹಿರಿಯ ಜೀವ.
ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ತಮ್ಮ ‘ಶ್ರೀ ಮಹಾಭಾರತ ಪಾತ್ರ ಪ್ರಪಂಚ’ ಕೃತಿಯಲ್ಲಿ ಭೀಷ್ಮರ ವ್ಯಕ್ತಿತ್ವವನ್ನು ಸೆರೆ ಹಿಡಿಯುತ್ತಾರೆ. “ಮಹಾಭಾರತ ಕಥೆಯ ಆದಿಯಿಂದ ಅಂತ್ಯದವರೆಗೆ ಕಥಾಸೂತ್ರವಾಗಿ ಬರುವ ಕೆಲವೇ ಪಾತ್ರಗಳಲ್ಲಿ ಭೀಷ್ಮನ ಸ್ಥಾನ ಬಹು ಮುಖ್ಯ. ಇವನಂತಹ ವೀರ ಇನ್ನೊಬ್ಬನಿಲ್ಲ. ಶಸ್ತ್ರ, ಶಾಸ್ತ್ರ ಎರಡರಲ್ಲಿ ಅಪ್ರತಿಮ ಪಂಡಿತ. ಶಸ್ತ್ರಕೌಶಲ ಪ್ರದರ್ಶನವೆಲ್ಲ ತೋರಿ ಮುಗಿದ ನಂತರ ಶಾಸ್ತ್ರ ಕೌಶಲವನ್ನೂ ತೋರಿಸುವ ಮಹಾನುಭಾವ.  ಬೇಕಾದಾಗ ಪ್ರಾಣ ಬಿಡುವ ಧೀರ ಪುರುಷ. ಹತ್ತಿರ ಬಂದ ಅರಸೊತ್ತಿಗೆಗೆ ಆಸೆ ಪಟ್ಟವನಲ್ಲ. ಪರಶುರಾಮರಿಂದ ಶಸ್ತ್ರ ಕಲಿಕೆ. ಬೃಹಸ್ಪತ್ಯಾಚಾರ್ಯರಿಂದ ವ್ಯವಹಾರ ಶಾಸ್ತ್ರ ಕಲಿಕೆ. ವಸಿಷ್ಠರಿಂದ ಆಧ್ಯಾತ್ಮಶಾಸ್ತ್ರ ಕಲಿಕೆ. ಶುಕ್ರ ನೀತಿಯೆಲ್ಲ ಹೃದ್ಗತ. ಧರ್ಮವನ್ನು ಬಿಟ್ಟು ಇವನ ಬುದ್ಧಿ ಅವಿಚಲಿತ; ಅದಕ್ಕೇ ಇವನು ಅನ್ವರ್ಥವಾಗಿ ದೇವವ್ರತ. ವೇದಗಳೆಲ್ಲ ಇವನಿಗೆ ಮುಖೋದ್ಗತ.”
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಅಡಿಕೆಯ ವೈಜ್ಞಾನಿಕ ವರ್ಗೀಕರಣ, ಸಂಶೋಧನಾ ಮಿತಿಗಳು ಮತ್ತು ಪುನರ್‌ಪರಿಶೀಲನೆಯ ಅಗತ್ಯ
January 7, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅರಿಶಿನ ಕೃಷಿಯಲ್ಲಿ ಯಶಸ್ಸು ಗಳಿಸಿದ ಮಹಿಳೆ – ಮಿಶ್ರ ಬೆಳೆಗೆ ಇವರು ಮಾದರಿ..!
January 7, 2026
6:53 AM
by: ರೂರಲ್‌ ಮಿರರ್ ಸುದ್ದಿಜಾಲ
ಕಡಲೆ ಬೀಜ ತಿನ್ನುವಾಗ ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ..!
January 6, 2026
10:41 PM
by: ರೂರಲ್‌ ಮಿರರ್ ಸುದ್ದಿಜಾಲ
ವಿಕಲಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು
January 6, 2026
10:12 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror