ಬದುಕು ಪುರಾಣ | ವಾತ್ಸಲ್ಯಗಳು ತೂಕಡಿಸುತ್ತಿವೆ?

June 29, 2025
7:00 AM
ಒಂದೇ ತಾಯಿಯ ಗರ್ಭದಿಂದ ಸಂಜನಿಸಿದ ಸಹೋದರರ ಗುಣಗಳಲ್ಲಿ ವ್ಯತ್ಯಾಸಗಳಿವೆ. ವ್ಯಕ್ತಿತ್ವ ರೂಪೀಕರಣದಲ್ಲೂ ಭಿನ್ನ ಯೋಚನೆ, ಯೋಜನೆ. ಕೊನೆ ತನಕ ಉಳಿಯಬೇಕಾದ ಸಾಹೋದರ್ಯಕ್ಕೆ ಗ್ರಹಣ ಹಿಡಿಯಲು ನೂರಾರು ಕಾರಣಗಳು.  ಕೆಲವು ವೈಯಕ್ತಿಕ. ಕೆಲವು ಸಾಮಾಜಿಕ. ಸಂಬಂಧಪಡದ ವ್ಯಕ್ತಿಗಳ ಪ್ರವೇಶ, ನಕಾರಾತ್ಮಕ ಚಿಂತನೆಗಳು, ಅಹಮಿಕೆ, ದೂಷಣೆಗಳು, ಸ್ವ-ಚಿಂತನೆಗಳಿಲ್ಲದ ಮನಃಸ್ಥಿತಿಗಳು.. ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತವೆ.
ಒಂದು ಕುಟುಂಬದಲ್ಲಿ ಅವಳಿ ಅಣ್ಣ-ತಮ್ಮಂದಿರಿದ್ದಾರೆ. ಅವರ ವರ್ತನೆಗಳು, ಹವ್ಯಾಸಗಳು, ಯೋಚನೆಗಳು ಬಹುತೇಕ ಒಂದೇ ವಿಧವಾಗಿರುತ್ತದೆ. ನೋಡಿದಾಗಲೇ ಅವಳಿ ಮಕ್ಕಳೆಂದು ಗುರುತಿಸುವಷ್ಟು ಸಾಮ್ಯತೆ. ಇಂತಹವರನ್ನು ‘ರಾಮ-ಲಕ್ಷ್ಮಣರಂತೆ ಇದ್ದಾರೆ’ ಎನ್ನಲು ಹಿರಿಯರಿಗೆ ಅಭಿಮಾನ. ಒಬ್ಬನಿಗೆ ರಾಮನೆಂದೂ, ಇನ್ನೊಬ್ಬನಿಗೆ ಲಕ್ಷ್ಮಣನೆಂದೂ ಹೆಸರಿಡುತ್ತಾರೆ. ಶ್ರೀರಾಮನ ಪರಾಕ್ರಮ, ಆದರ್ಶ; ಲಕ್ಷ್ಮಣನ ಶರಣಾಗತಿ ಹಾಗೂ ಭ್ರಾತೃವಾತ್ಸಲ್ಯವು ಮಕ್ಕಳಲ್ಲಿ ಮೂಡಿ ಬರಲಿ ಎನ್ನುವ ಆಶಯ.
ಅಣ್ಣನ ಮಾತನ್ನು ಧಿಕ್ಕರಿಸದ, ಗೌರವ ಕೊಡುವ, ಮುನಿಸುಗೊಳ್ಳದ ತಮ್ಮನಿದ್ದಾನೆ. ಸಮಾಜವು ‘ಇದ್ದರೆ ಇರಬೇಕು.. ರಾಮಲಕ್ಷ್ಮಣನಂತಿರುವ ಅವರಂತೆ’ ಎಂದಾಡುತ್ತದೆ. ಕೊಂಡಾಡುತ್ತದೆ. ಅಣ್ಣನೆಂದರೆ ಪಂಚಪ್ರಾಣ. ಅಣ್ಣನ ಮಾತು ವೇದವಾಕ್ಯ. ಅಣ್ಣನು ತಂದೆಗೆ ಸಮಾನ. ಹೀಗಿರುವುದು ಪೂರ್ವಪುಣ್ಯ. ಸಮ್ಮನಸ್ಸಿನ ಸಾಕಾರ. ಮನೆತನದ ಬಳುವಳಿ.
ಅಣ್ಣ-ತಮ್ಮಂದಿರು ಹೇಗಿರಬೇಕು? ಇದು ಶಬ್ದಗಳಲ್ಲಿ ಹಿಡಿದಿಡಲಾಗದ ಅನುಭವ. ಅಪೂರ್ವ ಸಂಬಂಧ. ಕರುಳ ಬಳ್ಳಿಯ ಕುಡಿನೋಟ. ಆ ಸಂಬಂಧಗಳ ಗಾಢತೆ ಬೇರೊಬ್ಬರಿಗೆ ಅರ್ಥವಾಗದು. ರಾಮ-ಲಕ್ಷ್ಮಣ, ರಾಮ-ಭರತ, ಶತ್ರುಘ್ನ-ಭರತ.. ಪಾತ್ರಗಳು ರಾಮಾಯಣ ಕಾಲದ್ದಾದರೆ; ಧರ್ಮರಾಯನನ್ನು ಒಪ್ಪಿಕೊಂಡ, ಅಪ್ಪಿಕೊಂಡ ಭೀಮಸೇನ, ಅರ್ಜುನ, ನಕುಲ, ಸಹದೇವ. ಇವರೆಲ್ಲರ ಸಂಬಂಧವು ‘ಸಾಹೋದರ್ಯ’ದೊಳಗೆ  ಬಿಗಿ. ಕಾರಣ, ಕರ್ಮ ಸಂಬಂಧಿ ವಿಚಾರಗಳನ್ನು ಧರ್ಮದ ಆವರಣದೊಳಗೆ ಹಿಡಿದಿಟ್ಟು ಅನುಷ್ಠಾನ ಮಾಡಿರುವುದು.
ಮೇಲ್ನೋಟಕ್ಕೆ ಒಬ್ಬೊಬ್ಬರಲ್ಲಿ ಒಂದೊಂದು ಸ್ವಭಾವ. ಅನ್ಯೋನ್ಯತೆಯಲ್ಲಿ ಏಕಗುಣ. ಊಟದಲ್ಲಿ, ಪಾಠದಲ್ಲಿ, ಹವ್ಯಾಸದಲ್ಲಿ ಜತೆಜತೆಯಾದ ಹೆಜ್ಜೆ. ಅಣ್ಣನಿಗೆ ಅನಾರೋಗ್ಯವಾದರೆ ತಮ್ಮ ಮ್ಲಾನವದನನಾಗುತ್ತಾನೆ ತಮ್ಮನ ಆರೋಗ್ಯ ಹದಗೆಟ್ಟರೆ ಅಣ್ಣನಿಗೆ ಒತ್ತಡ. ಮನೆಯ ಸಮಾರಂಭಗಳಲ್ಲಿ ಜತೆಜತೆಯಲ್ಲಿ ಸುಧರಿಕೆ. ನೋಟಕರು ಮತ್ಸರ ಪಡುವಷ್ಟು!
ಶಾಲಾ ಕಲಿಕೆಯ ಒಂದು ಹಂತದ ತನಕ ಅಣ್ಣ-ತಮ್ಮ ಜತೆಜತೆಯಾಗಿ ಸಾಗುತ್ತಾರೆ. ನಂತರದ ಕಲಿಕೆಯಲ್ಲಿ ಇಬ್ಬರ ಆಯ್ಕೆ ಒಂದೇ ರೀತಿಯದ್ದಾದರೆ ಪೈಪೋಟಿ ಇರದು. ಒಬ್ಬ ಇಂಜಿನಿಯರಿಂಗ್, ಮತ್ತೊಬ್ಬ ವೈದ್ಯಕೀಯ ಎಂದಿಟ್ಟುಕೊಂಡರೆ ನಿಧಾನಕ್ಕೆ ಅವರ ಜೀವನ ಶೈಲಿ ಬದಲಾಗುತ್ತದೆ. ನಂತರದ ದಿನಗಳ ಬದುಕಿನಲ್ಲಿ ಭಿನ್ನ ಉದ್ಯೋಗ, ಹಾದಿಗಳಲ್ಲಿ ಸಾಗುತ್ತಾರೆ.  ಆದರೆ ಬಾಲ್ಯದಿಂದಲೇ ಆತುಕೊಂಡು ಬಂದ ಸಹೋದರ ಭಾವಗಳು ಉದ್ಯೋಗ ಕ್ಷೇತ್ರದತ್ತ ಇಣುಕುವುದಿಲ್ಲ. ಇಬ್ಬರೂ ಕುಟುಂಬಸ್ಥರಾದ ಬಳಿಕ ಒಂದೇ ಮನೆಯಲ್ಲಿದ್ದುಕೊಂಡು ಅಪ್ಪಾಮ್ಮನನ್ನು ನೋಡಿಕೊಳ್ಳುತ್ತಾ ಸಾಗಿಸುವ ಜೀವನ ನಿಜಕ್ಕೂ ‘ಪುಣ್ಯತಮ’. ಉನ್ನತ ವಿದ್ಯಾಭ್ಯಾಸ, ಉದ್ಯೋಗವನ್ನು ಪಡೆದರೂ ಮನೆಯ ಆಚಾರ-ವಿಚಾರಗಳನ್ನು, ಮೂಲ ನಂಬಿಕೆಗಳನ್ನು ಗೌರವಿಸುವ ಮನಸ್ಸುಗಳು ಲಕ್ಷಕ್ಕೊಂದು; ಅಲ್ಲ, ಕೋಟಿಗೊಂದು!
ಕೆಲವೊಂದು ಮನೆಗಳಲ್ಲಿ ವಿವಾಹ ತನಕ ಅಣ್ಣ-ತಮ್ಮಂದಿರು ‘ರಾಮ-ಲಕ್ಷ್ಮಣ’ರಂತೆ ಎರಕಭಾವದಿಂದ ಇರುತ್ತಾರೆ. ಅಣ್ಣನಿಗೆ ಮದುವೆಯಾದ ಬಳಿಕವೂ ಸಹೋದರರಲ್ಲಿ ಒಡಕು ಮೂಡದು. ಅಣ್ಣ, ಅತ್ತಿಗೆ ಎನ್ನುತ್ತಾ ಮನೆತುಂಬಾ ಓಡಾಡಿಕೊಂಡು ವ್ಯವಹಾರ ಮಾಡುತ್ತಿದ್ದ ತಮ್ಮನಿಗೆ ವಿವಾಹವಾಯಿತೆನ್ನಿ. ಆಗ ಮನೆಯೊಳಗಡೆ ನಿಧಾನಕ್ಕೆ ಗೊಣಗಾಟಗಳ ಗೆಜ್ಜೆಯ ಪಿಸುದನಿಗಳು ಕೇಳಲಾರಂಭಿಸುತ್ತವೆ. ಎಲ್ಲಿಯವರೆಗೆ ಅಂದರೆ ಏಕಭಾವದವರು ಅಪರಿಚಿತರಂತೆ ವರ್ತಿಸುತ್ತಾರೆ. ತಂತಮ್ಮ ಮಡದಿಯರ ಕೈಗೊಂಬೆಯಾಗಿ ನರ್ತಿಸುತ್ತಾರೆ. ‘ಈ ಮನೆ ಬೇಡ, ಬೇರೆ ಮನೆ ಮಾಡುವಾ, ನಗರಕ್ಕೆ ಹೋಗೋಣ,’ ಇಂತಹ ಮಾತುಗಳು ಎರಚುತ್ತವೆ. ಕೊನೆಗೆ ಇಬ್ಬರೂ ಮನೆಯಿಂದ ಹೊರಬಿದ್ದು ನಗರ ಸೇರುತ್ತಾರೆ. “ಮಕ್ಕಳು ಕಷ್ಟ ಪಡಬಾರದು, ತನ್ನ ಕೊನೆ ಬದುಕಿಗೆ ಆಸರೆಯಾಗಬೇಕು ಎಂದು ಸಲಹಿದ್ದ ಅಪ್ಪಾಮ್ಮ ಈಗ ಅನಾಥ! (ಎಲ್ಲರೂ ಈ ರೀತಿ ಇರುವುದಿಲ್ಲ.)
ಮನೆಗೆ ಸೊಸೆಯಂದಿರು ಬಂದಾಗ ತನ್ನ ಮಗಳೆಂದು ಸ್ವೀಕರಿಸಲು ಅತ್ತೆಯ ಮನಃಸ್ಥಿತಿ ಸಿದ್ಧವಾಗುವುದಿಲ್ಲವೋ? ತನ್ನ ಅಮ್ಮನನ್ನು ಪ್ರೀತಿಸುವ ಮನಸ್ಸು ಅತ್ತೆಯನ್ನು ಪ್ರೀತಿಸಲು ಯಾಕೆ ಹಿಂದೆ ಸರಿಯುತ್ತದೆ? ಒಂದೇ ತಿಂಗಳಿನಲ್ಲಿ ಬೇರೆಡೆ ವಾಸಿಸುವ ನಿರ್ಧಾರವೇ ತಂತಮ್ಮ ಬದುಕಿನ ಅಂತಿಮ ನಿಲ್ದಾಣ ಎಂದು ಯಾವ ನೆಲೆಗಟ್ಟಿನಲ್ಲಿ ನಿರ್ಧಾರ ಮಾಡಿರುತ್ತಾರೋ ಗೊತ್ತಿಲ್ಲ. ಒಂದು ಕಾಲಘಟ್ಟದಲ್ಲಿ ಊರಿನಲ್ಲಿ ಈ ಅಣ್ಣ ತಮ್ಮಂದಿರ ಅನ್ಯೋನ್ಯತೆ ಮನೆ ಮಾತಾಗಿರುತ್ತಿತ್ತು. ಈಗಲೂ ಮನೆ ಮಾತೇ! ಆದರೆ ಮೊದಲಿನಂತೆ ಅಲ್ಲ.
ಕೆಲವೆಡೆ ಎಸ್.ಎಸ್.ಎಲ್.ಸಿ. ತನಕ ಅಣ್ಣ-ತಮ್ಮಂದಿರು ಜತೆಯಾಗಿ ಓದಿರುತ್ತಾರೆ. ಬಳಿಕ ಅವರ ಆಸಕ್ತಿಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಒಬ್ಬ ರಾಜಕೀಯಕ್ಕೆ ಇಳಿದರೆ, ಮತ್ತೊಬ್ಬ ಧಾರ್ಮಿಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ತಂತಮ್ಮ ಆಸಕ್ತಿಯೇ ಕಾರಣವಾಗಿ ಚಿಕ್ಕ ಚಿಕ್ಕ ಕಾರಣಗಳಿಗೆ ಮನಸ್ತಾಪ, ದೂಷಣೆಗಳು ಆರಂಭವಾಗುತ್ತದೆ. ತಮ್ಮ ಸುಮ್ಮನಿದ್ದರೂ ರಾಜಕೀಯ ಕ್ಷೇತ್ರದ ಹೊಲಸಿನಲ್ಲಿ ಮಿಂದೆದ್ದ ಅಣ್ಣನಿಗೆ ಅದೇ ಪನ್ನೀರು! ಕೊನೆಗೆ ದ್ವೇಷಿಗಳಾಗಿ ಬದಲಾಗುತ್ತಾರೆ. ಉತ್ತಮ ಸುಸಂಸ್ಕೃತ ಮನೆಯಿಂದ ಬಂದವರು. ತಾವು ಆಯ್ದುಕೊಂಡ ಕ್ಷೇತ್ರಗಳ ಗುಣ-ದೋಷಗಳಿಂದಾಗಿ  ಪಲ್ಲಟಗೊಳ್ಳುತ್ತಾರೆ. ಹುಟ್ಟಿಕೊಂಡ ‘ಪ್ರತಿಷ್ಠೆ’ಯ ಮೇಲಾಟಗಳು ಎಂದೂ ಅವರನ್ನು ಒಂದು ಮಾಡುವುದಿಲ್ಲ. ಸಾಮಾಜಿಕವಾಗಿ ಶುರುವಾದ ಮೇಲಾಟಗಳು ಮನೆಯೊಳಗೂ ಪ್ರವೇಶ ಮಾಡಿ, ಕುಟುಂಬವನ್ನು ಹೋಳು ಮಾಡುತ್ತವೆ. ಈ ಹೊತ್ತಿನಲ್ಲಿ ಯಾವ ನಾಯಕರಾಗಲಿ, ಯಾವ ಪಕ್ಷವಾಗಲೀ, ಯಾವ ಸಂಘಟನೆಯಾಗಲಿ ಸಹಾಯಕ್ಕೆ ಬರುವುದಿಲ್ಲ.
ಇವರಿಬ್ಬರೂ ಬಾಲ್ಯದಲ್ಲಿ ರಾಮಾಯಣ ಓದಿದವರು. ರಾಮನ ಕಥೆಯನ್ನು ಬಿತ್ತರಿಸಿದವರು. ರಾಮ, ಲಕ್ಷ್ಣಣರ ಬದುಕನ್ನು ಅರ್ಥಮಾಡಿಕೊಂಡವರು. ಅವರ ಸಹೋದರ ವಾತ್ಸಲ್ಯವನ್ನು ಉಪನ್ಯಾಸಗಳ ಮೂಲಕ ಬಿತ್ತರಿಸಿದವರು. ಯಾವುದು ತಪ್ಪು, ಯಾವುದು ಸರಿ ಎಂದು ಗೊತ್ತಿದ್ದ ಪ್ರಜ್ಞಾವಂತರು, ‘ಇವೆಲ್ಲಾ ನನಗೆ ಸಂಬಂಧಿಸಿದ್ದಲ್ಲ’ ಎನ್ನುವ ರೀತಿ ಬದಲಾಗುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ವಾ. ಪುರಾಣಗಳು ಸಾರುವ ಬದುಕಿನ ಸತ್ಯವು ಗಂಟಲಮೇಲೆ ಉಳಿದುಬಿಡುತ್ತದೆ. ಸಮಯ, ಸಂದರ್ಭ ಬಂದಾಗ ಇಂತಹವರಿಗೆ ಅವೆಲ್ಲಾ ಢಾಳಾಗಿ ಕಾಣುತ್ತದೆ.
ಆಸ್ತಿಯ ವಿಚಾರವಾಗಿ ಉಂಟಾಗುವ ಮನಸ್ತಾಪಗಳು ಅಣ್ಣ-ತಮ್ಮಂದಿರೊಳಗೆ ವಿಷಬೀಜವನ್ನು ಸೃಷ್ಟಿ ಮಾಡುತ್ತವೆ. ಗಲಾಟೆ, ಕೊಲೆಗಳ ಮೂಲಕ ಪ್ರಕಟವಾಗುತ್ತವೆ. ಒಂದೇ ತಾಯಿಯ ಉದರದಿಂದ ಬಂದವರೆಂಬ ಭಾವವನ್ನು ಮರೆತು ವ್ಯವಹರಿಸುತ್ತಾರೆ. ನಿಧಾನಕ್ಕೆ ಸಮಾಜ ಕಂಟಕರಾಗಿ ಬೆಳೆದು ಬಿಡುತ್ತಾರೆ. ‘ಅಣ್ಣನಿಂದ ತಮ್ಮನ ಕೊಲೆ’ಯೆಂದೋ, ‘ತಮ್ಮನಿಂದ ಅಣ್ಣನ ಕೊಲೆ’ ಎನ್ನುವ ಶೀರ್ಷಿಕೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುವ, ವಾಹಿನಿಗಳಲ್ಲಿ ಬಿತ್ತರವಾಗುವ ಸುದ್ದಿಗಳು ಮನವನ್ನು ಕಲಕುತ್ತದೆ. ಅಣ್ಣ-ತಮ್ಮ ಸಂಬಂಧಗಳು ಉತ್ತಮ ಸಂದೇಶವನ್ನು ಸಾರುವ ಬದುಕಾಗಬೇಕಿತ್ತು. ಆದರೆ ಹಾಗಾಗುವುದಿಲ್ಲ, ಹಾಗಾಗುತ್ತಿಲ್ಲ.
ರಾಮಾಯಣದ ‘ವಾಲಿ ವಧೆ’ ಪ್ರಸಂಗದಲ್ಲಿ ಶ್ರೀರಾಮನ ಬಾಣ ಹತಿಗೆ ವಾಲಿಯು ನೆಲಕ್ಕೊರಗುತ್ತಾನೆ. ವಾಲಿಯು ರಾಮನನ್ನು ಜರೆಯುತ್ತಾನೆ. ಆತನ ಮಾತುಗಳಿಗೆ ಕಿವಿಯಾದ ರಾಮನು ಆಕ್ಷೇಪಗಳಿಗೆ ಉತ್ತರವನ್ನು ಕೊಡುತ್ತಾ, “ನಿನಗೆ ಬದುಕಬೇಕೆಂಬ ಆಸೆಯಿದೆಯೇ.. ಹೇಳು.. ಇದ್ದರೆ ನೀವಿಬ್ಬರು ಅಣ್ಣ ತಮ್ಮಂದಿರು ‘ನಮ್ಮಂತೆ’ ಬಾಳಿ ಬದುಕಬೇಕು.  ನಿನಗೆ ಹೂಡಿದ ಬಾಣ ನೋವಾಗದಂತೆ ಹಿಂದಕ್ಕೆ ತೆಗೆಯುವೆ.” ಎನ್ನುತ್ತಾನೆ. ರಾಮನು ನೀಡಿದ ಬದುಕಿನ ಆಯ್ಕೆಗೆ ವಾಲಿಯು ಸಮ್ಮತಿಸದೆ ಪ್ರಾಣವನ್ನು ಬಿಡುತ್ತಾನೆ. ಸಹೋದರತೆಗೆ ಆದರ್ಶಪ್ರಾಯವಾಗಿರುವ ‘ವಾಲಿ-ಸುಗ್ರೀವ’ರ ಮೊದಲಿನ ವಾತ್ಸಲ್ಯ, ಅನ್ಯೋನ್ಯತೆ ಮತ್ತೊಮ್ಮೆ ಕಿಷ್ಕಿಂದೆಯ ನೆಲದಲ್ಲಿ ಮೂಡಲಿ ಎನ್ನುವ ಉದ್ದೇಶ ರಾಮನದ್ದಾಗಿತ್ತು.
ಯಕ್ಷಗಾನದ ‘ವಾಲಿ ವಧೆ’ ಪ್ರಸಂಗದಲ್ಲಿ ಹಿರಿಯ ಅರ್ಥದಾರಿ ಕೀರ್ತಿಶೇಷ ಮಲ್ಪೆ ರಾಮದಾಸ ಸಾಮಗರು ‘ಶ್ರೀರಾಮ’ನಾಗಿ ವಾಲಿಯೊಂದಿಗೆ ಮಾತನಾಡುತ್ತಾ ಆಡಿದ ಮಾತು ಗಮನಿಸಿ. : “ನಾವು ರಾಮ-ಲಕ್ಷ್ಮಣರು ಜೊತೆಯಾಗಿದ್ದೇವೆ. “ಬೇರೆ ಅಣ್ಣ ತಮ್ಮಂದಿರು ಜೊತೆಯಾಗಿರುವುದನ್ನು ರಾಮ ಸಹಿಸುವುದಿಲ್ಲವೋ ಏನೋ? ಅದಕ್ಕಾಗಿ ವಾಲಿಯನ್ನು ಕೊಂದ”. ಹಾಗೆ ಹೇಳಬೇಡ, “ನಾನು ಮರಳಿ ಬರುವ ತನಕ ಸೀತೆ ಒಬ್ಬಳೇ ಉಳಿಯಬಾರದು. ಅವಳ ರಕ್ಷಣೆಗೆ ಶಕ್ತನಾದ ನೀನು ಇರಬೇಕು’ ಎಂದು ಲಕ್ಷ್ಮಣನಿಗೆ ಅಂದು (ಪಂಚವಟಿಯಲ್ಲಿ) ಆಜ್ಞೆ ಮಾಡಿದ್ದೆ. ಅವಳು ಚಿನ್ನದ ಬಣ್ಣದ ಮಿಗದಲ್ಲಿ ತನಗೆ ಬಯಕೆ ಅಂತ ಹೇಳಿದ ಮೇಲೆ, ಸೀತೆ ಒಬ್ಬಳನ್ನು ಬಿಟ್ಟು ಹೋದ. ಯಾಕೇಂತ ನಾನು ಕೇಳಲಿಲ್ಲ. ಅಣ್ಣ ತಮ್ಮಂದಿರು ಒಟ್ಟಾಗಿ ಇರಬಾರದು ಅಂತ ನನ್ನಲ್ಲಿದ್ದರೆ, ಲಕ್ಷ್ಮಣನನ್ನು ನಾನು ಒಪ್ಪುತ್ತಿದ್ದೆನೋ. ‘ಲಕ್ಷ್ಮಣಾ, ನನ್ನನ್ನು ಹುಡುಕುತ್ತಾ ಬಂದೆಯಲ್ಲಾ.. ಬಾ.. ನಮ್ಮಿಬ್ಬರ ಪ್ರಾರಬ್ಧವಶದಿಂದಾಗಿ ಹೀಗಾಯ್ತು. ಯೋಚಿಸಬೇಡ. ಕಣ್ಣೀರಿಡಬೇಡ, ಬಾ..’ ಎಂದು ತಮ್ಮನನ್ನು ಅಪ್ಪಿಕೊಂಡ, ಒಪ್ಪಿಕೊಂಡ ಹೃದಯವಿದು. ವಾಲಿ-ಸುಗ್ರೀವರಾದ ನೀವು ಒಂದಾಗಿ ಇರುತ್ತೀರಾದರೆ ಸಂತೋಷ. ಆದರೆ ಒಂದು ನಿರ್ಬಂಧವಿದೆ. ಅಣ್ಣನಿಗೆ ತಮ್ಮನಾಗಿ, ತಮ್ಮನಿಗೆ ಅಣ್ಣನಾಗಿ ನೀವು ಇರುತ್ತೀರಾದರೆ.. ನಾನು ಹೂಡಿದ ಬಾಣವನ್ನು ಹಿಂದಕ್ಕೆ ಪಡೆಯುತ್ತೇನೆ..”
ಇಂತಹ ಅನೇಕ ದೃಷ್ಟಾಂತಗಳು ಪುರಾಣಗಳಲ್ಲಿ ಸಿಗುತ್ತವೆ. ಬದುಕಿನಲ್ಲಿ ವಾತ್ಸಲ್ಯಗಳಿಗೆ ಮಹತ್ವ. ಬಂಧುತ್ವ ಗಟ್ಟಿಯಾಗುವುದೇ ವಾತ್ಸಲ್ಯವೆಂಬ ಪಾಶದ ಬಿಗಿಯಿಂದ. ಈಗ ಯಾಕೆ ವಾತ್ಸಲ್ಯಗಳು ತೂಕಡಿಸುತ್ತಿವೆ?
ರಾಮಾಯಣದ ಈ ಸಹೋದರರ ಹಿನ್ನೆಲೆ ನೋಡೋಣ : ರಾಮ, ಭರತ, ಶತ್ರುಘ್ನ, ಲಕ್ಷ್ಮಣ – ಅಯೋಧ್ಯೆಯ ರಾಜಕುವರರು. ರಾಮ ಮತ್ತು ಲಕ್ಷ್ಮಣ, ಶತ್ರುಘ್ನ ಮತ್ತು ಭರತ ಇವರದು ಅವಳಿ ಸಾಹೋದರ್ಯ. ಅಂದರೆ ಹೆತ್ತವ್ವೆ ಬೇರೆಯಾದರೂ ಅವಳಿ ಮಕ್ಕಳಂತೆ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಅನುಬಂಧ. ಒಬ್ಬನಲ್ಲಿ ಶರೀರವಿದ್ದರೆ, ಮತ್ತೊಬ್ಬನಲ್ಲಿ ಪ್ರಾಣ. ಜತೆಯಲ್ಲೇ ಊಟ, ನಿದ್ರೆ. ಜತೆಯಲ್ಲೇ ಬೇಟೆ. ಒಂದರ್ಥದಲ್ಲಿ ಗೋವಿನ ಪಾದದ ಗೊರಸುಗಳ ಹಾಗೆ!
ವಿಶ್ವಾಮಿತ್ರ ಮಹರ್ಷಿಗಳು ನಡೆಸುತ್ತಿದ್ದ ಯಜ್ಞಗಳಿಗೆ ಸುಬಾಹು, ಮಾರೀಚರು ಕಂಟಕಪ್ರಾಯರಾಗಿದ್ದರು. ಅವರ ನಿಗ್ರಹದಿಂದ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯ. ಹೀಗಾಗಿ ದಶರಥನಲ್ಲಿ ಯಜ್ಞರಕ್ಷಣೆಗಾಗಿ ಶ್ರೀರಾಮನನ್ನು ಅಪೇಕ್ಷಿಸುತ್ತಾರೆ. ಕೊನೆಗೆ ಲಕ್ಷ್ಮಣನೂ ಜತೆಯಾಗುತ್ತಾನೆ. ಎದುರಾದ ತಾಟಕಿ, ಸುಬಾಹು ತಾಮಸಿಗರನ್ನು ಸಂಹರಿಸುತ್ತಾನೆ. ಮಾರೀಚನನ್ನು ಬಾಣಮುಖದಿಂದ ಯೋಜನಾಂತರ ಶರಧಿಗೆ ಬಿಸುಡುತ್ತಾನೆ.ಈ ಸಂದರ್ಭದಲ್ಲಿ ವಿಶ್ವಾಮಿತ್ರರು ರಾಮ-ಲಕ್ಷ್ಮಣರಿಗೆ ಮಹಾನ್ ಅಸ್ತ್ರ, ಶಸ್ತ್ರಗಳ ಉಪದೇಶ ಮಾಡುತ್ತಾರೆ.
ಮುಂದೆ ಶ್ರೀರಾಮನು ತನ್ನ ಚಿಕ್ಕಮ್ಮ ಕೈಕೆಯಿಯ ವಚನದಂತೆ ವನಗಮನಕ್ಕೆ ಮುಂದಾದಾಗ ಸೀತೆ ನೆರಳಾದರೆ, ಲಕ್ಷ್ಮಣನು ರಕ್ಷಕನಾಗುತ್ತಾನೆ. ಗುಹನ ಮೂಲಕ ಸರಯೂ ನದಿಯನ್ನು ದಾಟುತ್ತಾರೆ. ಅನೇಕ ಋಷಿಗಳ ದರ್ಶನದ ಭಾಗ್ಯಕ್ಕೆ ಪಾತ್ರರಾಗುತ್ತಾರೆ. ರಾಮನ ದರ್ಶನಕ್ಕಾಗಿ ಚಿತ್ರಕೂಟಕ್ಕೆ ಭರತನು ಬಂದಾಗ ‘ಯುದ್ಧಕ್ಕೆ ಬಂದಿದ್ದಾನೆ’ ಎಂದು ಊಹಿಸಿದ ಲಕ್ಷ್ಮಣನು ಕೋಪೋದ್ರಿಕ್ತನಾಗುತ್ತಾನೆ. ಪಾದುಕಾ ಪ್ರದಾನದ ಬಳಿಕ ಚಿತ್ರಕೂಟದಿಂದ ನಿರ್ಗಮಿಸುತ್ತಾರೆ. ಇಲ್ಲಿ ಭರತನ ಮೇಲಿನ ಸಂಶಯಕ್ಕಿಂತಲೂ ರಾಮನ ಕುರಿತಾದ ಭಕ್ತಿ, ಶ್ರದ್ಧೆ ಗಮನಿಸಬಹುದು.
ಪಂಚವಟಿಯಲ್ಲಿ ಮಾಯಾಮೃಗವನ್ನು ಅಪೇಕ್ಷಿಸಿದ ಸೀತೆಯ ಕೋರಿಕೆಯನ್ನು ಈಡೇರಿಸಲು ಶ್ರೀರಾಮನು ಮುಂದಾಗುತ್ತಾನೆ. ಸಂನ್ಯಾಸಿ ರಾವಣನಿಂದ ಸೀತೆ ಅಪಹೃತಳಾಗುತ್ತಾಳೆ. ಬಂದುಕಿನ ಸಂಕಷ್ಟ ಹಾಗೂ ಸಂದಿಗ್ಧ ಕಾಲಘಟ್ಟದಲ್ಲಿ ‘ನೀನು ಸೀತೆ ಒಬ್ಬಳನ್ನೇ ಯಾಕೆ ಬಿಟ್ಟು ಬಂದೆ. ನೀನಲ್ಲಿರುತ್ತಿದ್ದರೆ ಸೀತೆ ರಾವಣನ ವಶವಾಗುತ್ತಿರಲಿಲ್ಲ’ ಎಂದು ಆಕ್ಷೇಪಿಸಲಿಲ್ಲ. ತಮ್ಮನನ್ನು ಹಾರ್ದಿಕವಾಗಿ ಸ್ವೀಕರಿಸಿದ. ಹೀಗೆ ರಾಮಾಯಣದುದ್ದಕ್ಕೂ ರಾಮ, ಲಕ್ಷ್ಮಣರ ಸಾಂಗತ್ಯದ ಮಿಳಿತವು ಆದರ್ಶವಾಗಿ ಬಿಂಬಿತವಾಗಿರುವುದನ್ನು ಕಾಣಬಹುದು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ
July 16, 2025
10:07 PM
by: The Rural Mirror ಸುದ್ದಿಜಾಲ
ಕಳಪೆ ಗೊಬ್ಬರ ಮಾರಿದ್ದ ಆರೋಪ | ರಾಣೆಬೆನ್ನೂರಿನಲ್ಲಿ ಕೇಸು ದಾಖಲು
July 16, 2025
8:52 PM
by: The Rural Mirror ಸುದ್ದಿಜಾಲ
ಒಬ್ಬರೇ ಕಲಿಯುವುದು ಮತ್ತು ತರಗತಿಯಲ್ಲಿ ಕಲಿಯುವುದು
July 16, 2025
8:34 PM
by: ಡಾ.ಚಂದ್ರಶೇಖರ ದಾಮ್ಲೆ
ಬೆಳೆಗೆ ಔಷಧಿ ಸಿಂಪಡಣೆಯ ವೇಳೆ ಬಳಸುವ ಸಿಲಿಕಾನ್ ಸ್ಪ್ರೆಡರ್ ಗುಣಧರ್ಮ ಏನು..?
July 16, 2025
7:38 AM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror

Join Our Group