Advertisement
ಬದುಕು ಪುರಾಣ

ಬದುಕು ಪುರಾಣ | ‘ಅವನೇನು.. ಹರಿಶ್ಚಂದ್ರನೋ!’

Share
ಸತ್ಯಕ್ಕಾಗಿ ಸತಿ, ಸುತರನ್ನು ಮಾರಿ, ತಾನೂ ಕಾರ್ಮಿಕನ ಹಾಗೆ ದುಡಿದು ಸತ್ಯವನ್ನು ಎತ್ತಿಹಿಡಿದ ಹರಿಶ್ಚಂದ್ರನ ಕತೆಯನ್ನು ಶಾಲಾ ಪಾಠಗಳಲ್ಲಿ ಓದಿದ್ದೇವೆ. ನಾಟಕ, ಯಕ್ಷಗಾನಗಳ ಮೂಲಕ ಮನ ತುಂಬಿಕೊಂಡಿದ್ದೇವೆ. ನಮ್ಮ ಪ್ರಾಥಮಿಕ/ಪ್ರೌಢಶಾಲೆಯ ಕನ್ನಡ ಅಧ್ಯಾಪಕರು ‘ಹರಿಶ್ಚಂದ್ರ ಕಾವ್ಯ’ದಿಂದಾದ ಕಥೆಯ ಪಾಠವನ್ನು, ಅದರಲ್ಲೂ ಚಂದ್ರಮತಿ ವಿಲಾಪದ ದೃಶ್ಯವನ್ನು ಓದುವಾಗ/ಹಾಡುವಾಗ ಅಧ್ಯಾಪಕರೊಂದಿಗೆ ನಾವೂ ಕಣ್ಣೀರು ಹಾಕಿದ ದಿವಸಗಳು ನೆನಪಾಗುತ್ತಿದೆಯೇ?
ಪುರಾಣ ಕಥೆಯಾದರೂ, ನಮ್ಮ ನಡುವೆಯೇ ನಡೆದಂತೆ ಭಾಸವಾಗುವ ಸಹಜ ಚಿತ್ರಣಗಳು ಹರಿಶ್ಚಂದ್ರ ಕಾವ್ಯದ ಹೆಚ್ಚುಗಾರಿಕೆ. ಅನೃತವನ್ನಾಡದೆ ಸತ್ಯಸಂಧರಾಗಿ ಬದುಕಿ ತೋರಿಸಿದ ಹರಿಶ್ಚಂದ್ರನ ಬದುಕಿನ ಯಾನವು ವರ್ತಮಾನಕ್ಕೆ ಮಾದರಿ. ಅದು ಬದುಕಿನ ಕೈತಾಂಗು ಎಂದು ನಮಗಾರಿಗೂ ಅರಿಯಲೇ ಇಲ್ಲ. ಅಥವಾ ಬುದ್ಧಿಪೂರ್ವಕವಾಗಿ ‘ಅದು ನಮಗೆ ಸಂಬಂಧಿಸಿದ್ದಲ್ಲ’ ಎಂದು ಕುರುಡಾಗಿದ್ದೇವೆಯೇ? ಮಾತುಕತೆಗಳಲ್ಲಿ ಮಾತ್ರ ಹರಿಶ್ಚಂದ್ರನ ಉಲ್ಲೇಖವನ್ನು ಮಾಡಿ ವಿಷಯಗಳನ್ನು ಸಮರ್ಥಿಸಿಕೊಳ್ಳುತ್ತೇವೆ.
ಯಾವುದೋ ಒಂದು ಸಿದ್ಧಾಂತಕ್ಕೆ ಒಳಗಾಗಿ ನಮ್ಮ ನೆರೆಮನೆಯಲ್ಲಿ ಒಬ್ಬರಿದ್ದಾರೆ ಎಂದಿಟ್ಟುಕೊಳ್ಳೋಣ. ಅವರು ಸುಳ್ಳು ಹೇಳದೆ, ಪರದೂಷಣೆ ಮಾಡದೆ, ಹಗುರ ಮಾತನಾಡದೆ, ನಕಾರಾತ್ಮಕವಾಗಿ ಯೋಚಿಸುತ್ತಿದ್ದಾರೆ. ನಮ್ಮ ಮನಃಸ್ಥಿತಿಗೂ ಅವರ ಮನಃಸ್ಥಿತಿಗೂ ವ್ಯತ್ಯಾಸವಿದೆ. ಅವರನ್ನು ಒಪ್ಪಿಕೊಳ್ಳಲು ನಮ್ಮೊಳಗಿನ ‘ಅಹಮಿಕೆ’ ಅಡ್ಡಿಪಡಿಸುತ್ತಿದೆ. ಒಳ್ಳೆಯ ಗುಣಗಳನ್ನು ಹತ್ತಾರು ಮಂದಿ ಶ್ಲಾಘಿಸುತ್ತಿದ್ದರೂ ನಾವೇನನ್ನುತ್ತೇವೆ? ‘ಆತನೇನು ಮಹಾ.. ಹರಿಶ್ಚಂದ್ರನೋ?’ ಎಂದು ಗಂಟಲ ಮೇಲಿನ ಢಾಳು ಪ್ರತಿಕ್ರಿಯೆ ನೀಡುತ್ತೇವೆ. ಅವರನ್ನು ಹಗುರ ಮಾಡಲು ಹೋಗಿ ನಾವೇ ಹಗುರವಾಗಿ ಬಿಡುತ್ತೇವೆ.
ಹಿಂದೊಮ್ಮೆ ಸಚಿವರೊಬ್ಬರು ಯಾವುದೋ ಒಂದು ವಿಚಾರದಲ್ಲಿ ಮಾತನಾಡುತ್ತಾ, “ಎಲ್ಲಾ ಸಚಿವರು, ಶಾಸಕರ ತನಿಖೆಯಾಗಲಿ. ಎಲ್ಲಾ ಅಕ್ರಮ ಸಂಬಂಧಗಳು ಹೊರಬರಲಿ” ಎನ್ನುತ್ತಾ, “ಯಾರ್ಯಾರೆಲ್ಲಾ ಹರಿಶ್ಚಂದ್ರರು ಎಂದು ಗೊತ್ತಿದೆ, ತನಿಖೆಯಾಗಲಿ.” ಎಂದುಬಿಟ್ಟರು. ನೋಡಿ, ಇಲ್ಲಿ ಹರಿಶ್ಚಂದ್ರ ಪದ ಬಳಕೆಯಾದುದು ರಾಜಕೀಯದ ರಾಡಿಯಲ್ಲಿ! ಎಲ್ಲರೂ ಸುಳ್ಳರೆಂದು ಗೊತ್ತಿದ್ದೂ ಇಂತಹ ಸವಾಲುಗಳು ರಿಂಗಣ ಹಾಕುವಾಗ ನಾಗರಿಕರು ನಕ್ಕದ್ದೇ ನಕ್ಕದ್ದು! ಬಹುಶಃ ‘ಒಳ್ಳೆಯವರು ಯಾರಿದ್ದಾರೆ’ ಎನ್ನುವ ಪ್ರಶ್ನಾರ್ಥಕ ನೋಟದಲ್ಲಿ ಹರಿಶ್ಚಂದ್ರನ ಹೆಸರನ್ನು ಎಳೆದು ತಂದಿರಬೇಕು.
ಒಂದು ವಿಪರ್ಯಾಸ ಗಮನಿಸಿ. ಸತ್ಯದ ಲೋಕದಲ್ಲಿ ಹರಿಶ್ಚಂದ್ರನಿಗೆ ಗೌರವದ ಸ್ಥಾನ. ಆದರೆ ವರ್ತಮಾನದಲ್ಲಿ ಸುಳ್ಳಿನ ಲೋಕದಲ್ಲೂ ಹರಿಶ್ಚಂದ್ರನನ್ನು ಎಳೆದು ತರುತ್ತಿದ್ದಾರೆ! ಹರಿಶ್ಚಂದ್ರನ ಸತ್ಯಸಂಧತೆಯನ್ನು ಓದಿ ತಿಳಿದುಕೊಂಡ ಬುದ್ಧಿವಂತರೇ ‘ಅನೃತವಾದಿ’ಗಳಾಗಿರುವುದು ಶೈಕ್ಷಣಿಕ ಪಕ್ವತೆಗಳ ದುರಂತ.
ಅಪರೂಪಕ್ಕೊಮ್ಮೆ ನಾಡಿನ ದೊರೆಗಳು ಗಂಟಲ ಮೇಲಿನ ಮಾತಿನಿಂದ ‘ಉತ್ತಮ ಮಾತಿಗೆ’ ದನಿಯಾಗುತ್ತಾರೆ. “ಪ್ರಪಂಚದಲ್ಲಿ ಸತ್ಯಕ್ಕೆ ಬೆಲೆ ಇರುವಲ್ಲಿಯ ತನಕ ಹರಿಶ್ಚಂದ್ರನ ಕತೆ ಇರುತ್ತದೆ.” ಎಂದರು. ನಿಜಕ್ಕೂ ಸತ್ಯ ಇರುವುದೆಲ್ಲಿ? ನಂನಮ್ಮ ಆಚರಣೆಯಲ್ಲಿ. ನಂನಮ್ಮ ಚಾರಿತ್ರ್ಯದಲ್ಲಿ. ನಂನಮ್ಮ ಶೀಲದಲ್ಲಿ. ಇದನ್ನು ಹೇಳುತ್ತಿರುವುದು ಯಾರು? ಓರ್ವ ರಾಜಕಾರಣಿ. ಈ ಮೂಲಕವಾದರೂ ಸತ್ಯಕ್ಕೂ ಬೆಲೆಯಿದೆ ಎಂದು ತೋರಿಸಿಕೊಟ್ಟರಲ್ಲಾ.. ಸಂತೋಷ.
ನಮ್ಮ ನಡುವೆ ಅನೇಕ ಮಂದಿಯನ್ನು ನೋಡುತ್ತೇವೆ. ‘ನಾನು ಸತ್ಯವನ್ನೇ ಹೇಳುವುದು, ಪ್ರಾಮಾಣಿಕವಾಗಿ ಹೇಳುತ್ತೇನೆ’ ಎಂದು ಮಾತಿಗೆ ಶುರು ಮಾಡುತ್ತಾರೆ. ಪ್ರತಿ ಬಾರಿಯೂ ಈ ಪದಗಳು ಉಲ್ಲೇಖವಾದಾಗ ಅವರಲ್ಲಿನ ಸತ್ಯ ಪ್ರಶ್ನಿಸುತ್ತದೆ, ‘ಇದು ಸತ್ಯವೇ’! ನಾಲ್ಕು ಮಂದಿಯ ಮಧ್ಯೆ ಸುಭಗರಾಗುವ ಮನಃಸ್ಥಿತಿಯುಳ್ಳವರಲ್ಲಿ ಸತ್ಯ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ.
ತಾಳಮದ್ದಳೆಯಲ್ಲಿ ಕೇಳಿದ ಮಾತುಗಳು. ‘ಸತ್ಯದ ಲೋಕದಲ್ಲಿ ನಾವಿದ್ದೇವೆ. ಆದರೆ ಕಾಣುವ ಲೋಕದಲ್ಲಿ ಸತ್ಯವಿಲ್ಲ’. ಹೌದಲ್ಲಾ ಮೇಲ್ನೋಟಕ್ಕೆ ಎಲ್ಲರೂ ಸತ್ಯವಂತರೇ. ವ್ಯವಹಾರ ರಂಗಕ್ಕೆ ಇಳಿದಾಗ ಬಣ್ಣ ಬದಲಾಗುತ್ತದೆ, ಬಯಲಾಗುತ್ತದೆ. ಸತ್ಯದ ತಲೆಗೆ ಹೊಡೆದಂತೆ ಸುಳ್ಳಿನ ರಿಂಗಣಗಳು. ನೆನಪಿಟ್ಟುಕೊಳ್ಳೋಣ, ಸತ್ಯವಂತರು ಎಂದೂ ತಮ್ಮನ್ನು ತಾವು ಪ್ರಶಂಸಿಸಿಕೊಳ್ಳಲಾರರು. ಅವರಿಗದು ಮುಜುಗರದ ವಿದ್ಯಮಾನ.
ನಂನಮ್ಮ ಶಾಲಾ ಜೀವನದ ‘ಸ್ಕೂಲ್ ಡೇ’ಯನ್ನು ಜ್ಞಾಪಿಸಿಕೊಳ್ಳಿ. ‘ಸತ್ಯ ಹರಿಶ್ಚಂದ್ರ, ನಳ ದಮಯಂತಿ, ಶಬರಿಮಲೆ ಅಯ್ಯಪ್ಪ’ ಕಥಾವಸ್ತುಗಳನ್ನೊಳಗೊಂಡ ನಾಟಕಗಳು ಪ್ರದರ್ಶನವಾಗುತ್ತಿದ್ದುವು. ಆಗೆಲ್ಲಾ ಸ್ಕೂಲ್ ಡೇ ಸಂಜೆ ಶುರುವಾದರೆ ರಾತ್ರಿಯಿಡೀ ನಡೆಯುತ್ತಿತ್ತು. ವಿದ್ಯಾರ್ಥಿಗಳು, ಹೆತ್ತವರು ನಾಟಕ ನೋಡುತ್ತಿದ್ದರು. ನೋಡಿದ ನಾಟಕವನ್ನು ಆಧರಿಸಿ ಪ್ರಬಂಧ ಬರೆಯಬೇಕಿತ್ತು. “ಇಂತಹ ನಾಟಕಗಳು ಉತ್ತಮ ಸಂದೇಶಗಳನ್ನು ನೀಡುತ್ತವೆ. ವೈಚಾರಿಕವಾಗಿ ಮಕ್ಕಳ ಮನಸು ಅರಳುತ್ತದೆ. ಶಾಲೆಗಳಲ್ಲಿ ಪೌರಾಣಿಕ, ಇತಿಹಾಸ ಹೂರಣದ ನಾಟಕಗಳು ನಡೆಯುತ್ತಿದ್ದರೆ ಮಕ್ಕಳಿಗದು ಪರೋಕ್ಷ ಪಾಠ.” ಎಂದು ಗುರುಗಳಾದ ಕೃಷ್ಣಪ್ಪ ಮಾಸ್ತರರು ಹೇಳಿದ ಮಾತು ನೆನಪಾಗುತ್ತದೆ.
ಕೃಷ್ಣಪ್ಪ ಮಾಸ್ತರ್ ಅವರ ಮಾತು ಬಂದಾಗ ನನ್ನ ಪ್ರಾಥಮಿಕ ತರಗತಿಯ ಘಟನೆಯನ್ನು ಹೇಳಲೇಬೇಕು. ನನ್ನ ತಂದೆಯವರು ದೇವಳದ ಅರ್ಚಕರು. ಅಷ್ಟಿಷ್ಟು ಪುಡಿಗಾಸಿನ ಆದಾಯ. ಮನೆಯ ಚಿಕ್ಕ ಬಾಗಿಲಿಲ್ಲದ ಮರದ ಕಪಾಟಿನಲ್ಲಿ ಬೌಲ್ ಒಂದರಲ್ಲಿ ಚಿಲ್ಲರೆಯನ್ನು ಹಾಕಿಡುತ್ತಿದ್ದರು. ಯಾವುದೋ ಕಾರಣಕ್ಕೆ ಒಂದೋ, ಎರಡೋ ರೂಪಾಯಿಯ ಅಗತ್ಯವಿತ್ತು. ಬಹುಶಃ ಐಸ್‍ಕ್ಯಾಂಡಿ ತಿನ್ನಲು ಇರಬೇಕು. ಅಪ್ಪನಲ್ಲಿ ಕೇಳದೆ ಚಿಲ್ಲರೆಯನ್ನು ಕಿಸೆಗೇರಿಸಿದ್ದೆ. ಅಪ್ಪ ನೇರವಾಗಿ ಶಾಲೆಗೆ ಬಂದವರೇ ಅಧ್ಯಾಪಕರಲ್ಲಿ ವಿಷಯ ತಿಳಿಸಿದರು. ಅಪ್ಪನನ್ನು ಸಮಾಧಾನಪಡಿಸಿ ಕಳುಹಿಸಿದ ಮೇಲೆ, ಬೆತ್ತದ ಏಟಿದ ರೌದ್ರಾವತಾರ! ಕೊರಳಿಗೆ ಕೆಂಪು ದಾಸವಾಳದ ಮಾಲೆಯನ್ನು ಇತರ ವಿದ್ಯಾರ್ಥಿಗಳಿಂದ ಮಾಡಿಸಿ, ಕೊರಳಿಗೆ ಹಾಕಿ ಶಾಲೆಗೆ ಹತ್ತು ಸುತ್ತು ಓಡುವ ಶಿಕ್ಷೆ. ಜತೆಗೆ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆ. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಕೇಳಿಸುವಂತೆ ಹೇಳಿದ್ದರು, “ಕಳ್ಳತನ ಮಾಡಿದರೆ ಏನು ಶಿಕ್ಷೆ ಎಂದು ಗೊತ್ತಾಯಿತಾ? ಜೀವನದಲ್ಲಿ ಎಂದೂ ಕಳ್ಳತನ ಮಾಡಬೇಡಿ. ಸುಳ್ಳು ಹೇಳಬಾರದು. ಸತ್ಯವನ್ನೇ ಆಡಬೇಕು.” ಎಂದು ಕಿವಿಮಾತು ಹೇಳಿದ್ದರು. ಅಂದಿನ ಘಟನೆ ಮತ್ತು ಘಟನೆಯ ಹಿನ್ನೆಲೆಯಲ್ಲಿ ಅಧ್ಯಾಪಕರ ಮಾತುಗಳು ನನ್ನ ಮುಂದಿನ ಬದುಕಿಗೆ ದೊಡ್ಡ ಸಂದೇಶವನ್ನು ನೀಡಿತ್ತು.
ಸಿನೆಮಾ ರಂಗಕ್ಕೆ ಬಂದರೆ, ವರನಟ ಡಾ.ರಾಜಕುಮಾರ್ ಅಭಿನಯದ ‘ಸತ್ಯಹರಿಶ್ಚಂದ್ರ’ ಸಿನಿಮಾ 1965 ಎಪ್ರಿಲ್ 12ರಂದು ತೆರೆ ಕಂಡಿತ್ತು. ವರುಷ ಅರುವತ್ತು ಕಳೆದರೂ ಅದರ ಜನಪ್ರಿಯತೆ ಮಾಸಿಲ್ಲ. ಅದು ಅಭಿನಯದ ತಾಕತ್ತು. ಕಥೆಯ ಹಿರಿಮೆ.
ಹರಿಶ್ಚಂದ್ರ : ಸ್ವರ್ಗದಲ್ಲಿ ದೇವೇಶನ ಸಭೆ. ಋಷಿಗಳು, ದೇವೇಂದ್ರಗಳು ಸಮಾಹಿತರಾಗಿದ್ದಾರೆ. ‘ಸೂರ್ಯವಂಶದ ಅರಸರಲ್ಲಿ ಸತ್ಯವಂತರು ಯಾರು?” ದೇವ ರಾಜನ ಚೋದ್ಯ. ಆಗ ವಸಿಷ್ಠರು ‘ಇಕ್ಷ್ವಾಕು ವಂಶದ ವಸುಧಾಧಿಪ ಹರಿಶ್ಚಂದ್ರನು ಸತ್ಯಸಂಧ’ ಎಂದಾಗ, ವಿಶ್ವಾಮಿತ್ರರು ಅಲ್ಲಗೆಳೆದರು. ಅವರಿಬ್ಬರೊಳಗೆ ವಾಗ್ವಾದವಾಯಿತು. ‘ಹರಿಶ್ಚಂದ್ರನ ಬದುಕಿನಲ್ಲಿ ಅನೃತವನ್ನು ತೋರಿಸುತ್ತೇನೆ’ ಎಂದು ಪ್ರತಿಜ್ಞೆ ಮಾಡಿದರು.
ಹರಿಶ್ಚಂದ್ರ ಸುವರ್ಣಯಾಗವನ್ನು ಕೈಗೊಂಡು ಋಷಿಗಳಿಗೆ ಅವರು ಅಪೇಕ್ಷಿಸಿದಂತೆ ದಾನಧರ್ಮಗಳನ್ನು ಮಾಡುತ್ತಿದ್ದ. “ದೊಡ್ಡ ಆನೆಯ ಮೇಲೆ ನಿಂತು ಕವಡೆಯನ್ನು ಚಿಮ್ಮಿಸಿದಾಗ ಅದು ಎಷ್ಟು ಎತ್ತರಕ್ಕೆ ಹೋಗುವುದೋ ಅದರ ಸಮಾನವಾಗಿ ಹೊನ್ನುಗಳನ್ನು ನೀಡು,” ವಿಶ್ವಾಮಿತ್ರರ ಬೇಡಿಕೆ. ರಾಜನು ಸಂತೋಷದಿಂದ ನೀಡಲುದ್ಯುಕ್ತನಾದಾಗ “ಈಗ ಬೇಡ. ನಿನ್ನಲ್ಲಿ ಇರಲಿ, ಬೇಕಾದಾಗ ಪಡೆಯುವೆ’ ಎಂದು ತೆರಳಿದನು.
ಪ್ರಜೆಗಳು ರಾಜನ ಮೇಲಿಟ್ಟಿರುವ ಅಭಿಮಾನ, ಪ್ರೀತಿ, ಆದರಗಳಿಂದ ಜನಾನುರಾಗಿಯಾಗುವುದು ವಿಶ್ವಾಮಿತ್ರನಿಗೆ ಸಹಿಸಲು ಆಗಿಲ್ಲ. ತನ್ನ ಪ್ರತಿಜ್ಞೆಯನ್ನು ಜ್ಞಾಪಿಸಿಕೊಳ್ಳುತ್ತಾ ಮೃಗಸಮೂಹವನ್ನು ಸೃಷ್ಟಿ ಮಾಡುತ್ತಾನೆ. ವನಪಾಲಕರ ದೂರಿನಂತೆ ರಾಜನು ಬೇಟೆಗೆ ಹೊರಡುತ್ತಾನೆ. ವನ್ಯಮೃಗಗಳನ್ನು ಬೇಟೆಯಾಡುತ್ತಾ ಒಂದೆಡೆ ವಿಶ್ರಮಿಸಿಕೊಳ್ಳುತ್ತಿರುವಾಗ ವಿಶ್ವಾಮಿತ್ರನ ಮಾನಸ ಸೃಷ್ಟಿಗಳಾದ ಇಬ್ಬರು ಕನ್ಯೆಯರು ಬಂದು ‘ಶ್ವೇತಚ್ಛತ್ರ’ವನ್ನು ಅಪೇಕ್ಷಿಸಿದರು. ಅದಿಲ್ಲವೆಂದಾದರೆ, ‘ನಮ್ಮನ್ನು ವಿವಾಹವಾಗು’ ಎನ್ನುವ ಬೇಡಿಕೆಯನ್ನು ಮುಂದಿಟ್ಟರು. ಹರಿಶ್ಚಂದ್ರನಿಂದ ತಿರಸ್ಕಾರ. ಆಕ್ಷೇಪಿಸಿದ ವಿಶ್ವಾಮಿತ್ರರಿಗೆ ಧರ್ಮಸಮ್ಮತವಾದ ಉತ್ತರ.
‘ನಿನ್ನ ಬೇಟೆಯಿಂದ ತನ್ನ ತಪಸ್ಸಿಗೆ ಭಗ್ನವಾಯಿತೆಂದು ವಿಶ್ವಾಮಿತ್ರರು ಹರಿಶ್ಚಂದ್ರನಲ್ಲಿ ಅಸಹನೆಯನ್ನು ಹೊರಹಾಕಿದರು. ‘ನೀವು ಅಪೇಕ್ಷಿಸಿದುದನ್ನು ಕೊಡುತ್ತೇನೆ. ಶಾಂತರಾಗಿ’ ಎಂದಾಗ, “ನಿನ್ನ ರಾಜ್ಯ, ಕೋಶ, ಅಧಿಕಾರಗಳನ್ನು ನೀಡು.” ಎಂದ. ಹರಿಶ್ಚಂದ್ರ ಧಾರಾಪೂರ್ವಕವಾಗಿ ದಾನವಾಗಿ ನೀಡುತ್ತಾನೆ. ರಾಜ್ಯದ ಅಧಿಕಾರ ಮತ್ತು ವಾಸಿಸುವ ಹಕ್ಕು ಕಳೆದುಕೊಂಡದ್ದರಿಂದ ಪತ್ನಿ ಚಂದ್ರಮತಿ, ಮಗ ರೋಹಿತಾಶ್ವರರೊಂದಿಗೆ ಕಾಡಿಗೆ ತೆರಳುತ್ತಾನೆ. ಆಗ ವಿಶ್ವಾಮಿತ್ರ ‘ಅಂದು ನಿನ್ನಲ್ಲಿ ನ್ಯಾಸಭೂತವಾಗಿ ಇರಲೆಂದ ಹೊನ್ನುಗಳು ನೀಡಿ ಹೊರಡಬಹುದು’ ಎಂದ. “ನಲವತ್ತೆಂಟು ದಿವಸಗಳಲ್ಲಿ ನಿಮಗೆ ಸಲ್ಲಬೇಕಾದ ಹೊನ್ನನ್ನು ನೀಡುವೆ” ಎನ್ನುವ ಆಶ್ವಾಸನೆ ನೀಡಿದ ಹರಿಶ್ಚಂದ್ರ ಕಾಡಾಡಿಯಾಗುತ್ತಾನೆ.
ಅಷ್ಟು ದೊಡ್ಡ ಮೊತ್ತದ ಹೊನ್ನನ್ನು ಸಕಾಲಕ್ಕೆ ಸಂಗ್ರಹಿಸಲು ಕಾಶಿ ದೇಶಕ್ಕೆ ಪ್ರವೇಶ ಮಾಡುತ್ತಾನೆ. ಧನಿಕ ಬ್ರಾಹ್ಮಣನೋರ್ವರಲ್ಲಿ ಮಡದಿ, ಮಗನನ್ನು ವಿಕ್ರಯಿಸುತ್ತಾನೆ. ತಾನು ಸ್ಮಶಾನದ ಮುಖ್ಯಸ್ಥ ವೀರಬಾಹುವಿನ ಕೈಕೆಳಗೆ ಕಾವಲುಗಾರನಾಗಿ ಕೆಲಸ ಮಾಡುತ್ತಾನೆ. ವಿಷದ ಹಾವು ಕಡಿದುದರಿಂದ ರೋಹಿತಾಶ್ವ ಮೃತಪಟ್ಟಿದ್ದು, ದಹನಕ್ಕಾಗಿ ಸ್ಮಶಾನಕ್ಕೆ ಬಂದಾಗ ಪತಿಯನ್ನು ನೋಡಿ ದುಃಖಿಸುತ್ತಾಳೆ. ಯಾವುದೋ ಅಪವಾದ ಬಂದುದರಿಂದ ಮಡದಿಯ ತಲೆಯನ್ನು ಕಡಿಯಬೇಕಾದ ಸನ್ನಿವೇಶ ಪ್ರಾಪ್ತವಾಗುತ್ತದೆ. ಕತ್ತಿಯನ್ನು ಎತ್ತಿ ಇನ್ನೇನು ಕಡಿಯಲು ಮುಂದಾದಾಗ ಶಿವನು ಪ್ರತ್ಯಕ್ಷನಾಗುತ್ತಾನೆ.
ವಿಶ್ವಾಮಿತ್ರರು ಸೋಲೊಪ್ಪಿಕೊಳ್ಳುತ್ತಾರೆ. ‘ನಿನ್ನಿಂದ ಪ್ರಾಪ್ತವಾದ ರಾಜ್ಯವನ್ನಲ್ಲದೆ ನನ್ನ ತಪಸ್ಸಿನ ಶಕ್ತಿಯನ್ನು ಧಾರೆ ಎರೆಯುತ್ತೇನೆ’ ಹರಸಿದರು. ಆಡಿದ ಮಾತಿನಂತೆ ಸತ್ಯವನ್ನು ತ್ರಿಕರಣಪೂರ್ವಕವಾಗಿ ಅನುಷ್ಠಾನ ಮಾಡಿದ ಸತ್ಯಹರಿಶ್ಚಂದ್ರನ ಕತೆ ಆದರ್ಶ.
ರಾಘವಾಂಕ ಕವಿಯ ‘ಹರಿಶ್ಚಂದ್ರ ಕಾವ್ಯ’ ಕೃತಿಯು ಕಾವ್ಯ ಪ್ರಪಂಚದ ಮಹತ್ವದ ಕೃತಿಗಳಲ್ಲೊಂದು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!

ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…

4 hours ago

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ

ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್‌ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…

18 hours ago

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ

ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…

18 hours ago

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …

19 hours ago

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ

ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…

19 hours ago

ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…

19 hours ago