ಹೊರಗಡೆಯಿಂದ ನೋಡ್ತಿದ್ರೆ ಅದ್ಯಾವುದೋ ಮದ್ವೆ ಸಭಾಂಗಣದಂತಹ ನೋಟ. ಒಳಗಡೆ ಹೋಗ್ತಿದ್ರೆ ವಿದ್ಯಾ ದೇಗುಲದ ಅನುಭವ. ಹೀಗೆ ಕಚೇರಿಯ ಒಂದೊಂದು ಕೊಠಡಿಯೂ ಒಂದೊಂದು ಬಗೆಯ ಕುತೂಹಲ.. 24 ಗಂಟೆ ಕಾಲ ನಿರಂತರ ತೆರೆದೇ ಇರುವ ಈ ಕಟ್ಟಡವೇ ಭಾರೀ ವಿಶೇಷ. ಒಂದೇ ಸೂರಿನಡಿ ಎಲ್ಲನೂ ಹೊಂದಿರೋ ಈ ಕಟ್ಟಡವಾದ್ರೂ ಯಾವುದು ಅಂತೀರ? ಈ ಸ್ಟೋರಿ ನೋಡಿ.
ಗ್ರಾಮ ಪಂಚಾಯತ್ ಕಟ್ಟಡ
ಹೀಗೊಂದು ಅತ್ಯಾಕರ್ಷಕವಾಗಿರೋ ಈ ಕಟ್ಟಡ ಗ್ರಾಮ ಪಂಚಾಯತ್ ಕಟ್ಟಡ ಅಂದ್ರೆ ನೀವ್ ನಂಬ್ಲೇಬೇಕು. ಸಾಮಾನ್ಯವಾಗಿ ಗ್ರಾ.ಪಂ ಕಟ್ಟಡಗಳು ಅಂದರೆ ಒಂದು ಕಟ್ಟಡ ಅದರಲ್ಲಿ ಒಂದೆರಡು ಕೋಣೆಗಳು ಇರುತ್ತವೆ. ಒಂದು ಇದ್ದರೆ ಮತ್ತೊಂದು ಇಲ್ಲದ ಸಲಕರಣೆಗಳು. ಹೀಗಾಗಿ ಪಂಚಾಯತ್ ಅಂದ್ರೆ ಇಲ್ಲಗಳ ಸರಮಾಲೆ ಅನ್ನೋದು ಸಾಮಾನ್ಯ ಭಾವನೆ. ಆದ್ರೆ ಇದೆಲ್ಲಕ್ಕೂ ವ್ಯತಿರಿಕ್ತವಾಗಿದೆ ನೋಡಿ ಬಾಗಲಕೋಟೆಯ ಮುಧೋಳ ತಾಲೂಕಿನ ಮಂಟೂರು ಗ್ರಾಮ ಪಂಚಾಯತ್ ಕಟ್ಟಡ.
ಸ್ವರಾಜ್ ಸೌಧ
ಮಿನಿ ವಿಧಾನಸೌಧದ ಮಾದರಿಯಲ್ಲಿ ತಲೆ ಎತ್ತಿ ನಿಂತಿರುವ ಈ ಗ್ರಾಮ ಸ್ವರಾಜ್ ಸೌಧ, ಸರಕಾರದ ವಿವಿಧ ಇಲಾಖೆಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒಂದೇ ಸೂರಿನಡಿಯಲ್ಲಿ ಒದಗಿಸುವ ಕಲ್ಪನೆಯೊಂದಿಗೆ ತಲೆ ಎತ್ತಿದೆ. ಅಂಚೆ ಕಚೇರಿ, ಕೃಷಿ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸಕಾಲ, ಕೆಇಬಿ, ಟ್ಯಾಕ್ಸ್ ಆಫೀಸ್, ಡಿಜಿಟಲ್ ಲೈಬ್ರರಿ, ಮಹಿಳಾ ಸಂಘದ ಸಂಜೀವಿನಿ ಶೆಡ್, ಸಭಾಭವನ, ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ ಹೀಗೆ ಹಲವು ಇಲಾಖೆಗಳು ಒಂದೇ ಸೂರಿನಡಿಯಲ್ಲಿದೆ.
ಗಾಂಧಿ ಪ್ರತಿಮೆ
ಇಷ್ಟೇ ಅಲ್ಲದೇ, ಪುಟ್ಬಾತ್, ಕುಡಿಯುವ ನೀರು, ಹೈಟೆಕ್ ಶೌಚಾಲಯ, ಪ್ರೊಜೆಕ್ಟರ್, ಎಲ್ಇಡಿ ಟಿವಿ, ಎಟಿಎಂ ಸೇವೆ, ಜೆರಾಕ್ಸ್, ಸಹಾಯವಾಣಿ, ದೂರು ಕೌಂಟರ್, ರೆಕಾರ್ಡ್ ರೂಮ್, ತರಬೇತಿ ಕೇಂದ್ರಗಳು ಇದರಲ್ಲಿವೆ. ಗ್ರಾಮೀಣ ಅಭಿವೃದ್ಧಿ ಇಲಾಖೆ ನಡೆದುಬಂದ ಚಿತ್ರ ಗ್ಯಾಲರಿ, ಗಾಂಧೀಜಿ ಪ್ರತಿಮೆ, ವಾಟರ್ ಪಂಟೇನ್, ಹಿರಿಯ ನಾಗರಿಕರ ವಿಶ್ರಾಂತಿ ತಾಣ, ಚಿಕ್ಕಮಕ್ಕಳಿಗೆ ಉದ್ಯಾನವನ, ಗ್ರಾಮಸಭೆ ಕಟ್ಟೆ, ಗೋದಾಮು , ಮಳೆ ನೀರು ಕೊಯ್ಲು, ವೈಫೈ, ಸಿಸಿಟಿವಿ ಕಣ್ಗಾವಲು, ಕರ್ನಾಟಕ ಸರ್ಕಾರದ ಲಾಂಛನದ ಪ್ರತಿಮೆ, ಉದ್ಯಾನವನ ನಿರ್ಮಾಣ, ಹೀಗೆ ಹತ್ತು ಹಲವು ಕಣ್ಮನ ಸೆಳೆಯುವ ವಿಷಯಗಳು ಇಲ್ಲಿವೆ.
24 ಗಂಟೆ ಓಪನ್
ಇನ್ನೊಂದು ವಿಶೇಷ ಅಂದ್ರೆ, ಬೇರೆ ಸರ್ಕಾರಿ ಕಚೇರಿಯಂತೆ ಸಾಯಂಕಾಲ ಬಂದ್ ಆಗಲ್ಲ! ಸತತ 24 ಗಂಟೆಗಳ ಕಾಲವೂ ಈ ಕಟ್ಟಡ ಕಾರ್ಯನಿರ್ವಹಿಸುತ್ತವೆ. ಹೌದು, ಇದೇ ಕಟ್ಟಡದಲ್ಲಿರುವ ಡಿಜಿಟಲ್ ಗ್ರಂಥಾಲಯವು 24 ಗಂಟೆಗಳ ಕಾಲ ಓದುಗರಿಗೆ ಪುಸ್ತಕ ನೀಡುವ ವ್ಯವಸ್ಥೆಯನ್ನ ಹೊಂದಿವೆ. ಹಾಗಾಗಿ ಈ ಕಟ್ಟಡವು ವಿಶ್ರಾಂತಿ ಪಡೆಯದೇ ದಿನದ 24 ಗಂಟೆಯೂ ಜನರನ್ನು ಸ್ವಾಗತಿಸುತ್ತವೆ.
2 ಕೋಟಿ ವೆಚ್ಚದಲ್ಲಿ ನಿರ್ಮಾಣ
ವಿವಿಧ ಇಲಾಖೆಗಳ ಅನುದಾನಗಳ ಒಗ್ಗೂಡಿಸುವಿಕೆ ಮೂಲಕ ಒಂದು ಎಕರೆ ಜಾಗದಲ್ಲಿ 2 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಇನ್ನು ಈಗಾಗಲೇ ಮಂಟೂರು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಹೆಸರಾಗಿದ್ದು, ಮೂರು ಬಾರಿ ಗಾಂಧಿ ಗ್ರಾಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದೀಗ ಆ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.
ಒಟ್ಟಿನಲ್ಲಿ ಗ್ರಾಮ ಪಂಚಾಯತ್ ಕಚೇರಿ ಕಟ್ಟಡವೊಂದು ಮಿನಿ ವಿಧಾನಸೌಧದ ಮಟ್ಟಿಗೆ ನಿರ್ಮಾಣವಾಗಿದ್ದು, ಗ್ರಾಮದ ಜನರಿಗೆಲ್ಲ ಒಂದೇ ಸೂರಿನಡಿ ವಿವಿಧ ಸೇವೆ ಸಿಗುವಂತಿರುವುದು ನಿಜಕ್ಕೂ ಖುಷಿಯ ಸಂಗತಿಯೇ ಸರಿ.