ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಕ್ರಮಕ್ಕಾಗಿ 42,289 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಎಂ.ಟಿ. ಕೃಷ್ಣಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು, 7 ಸಾವಿರಕ್ಕೂ ಹೆಚ್ಚು ಅರ್ಜಿಗಳು 5 ಎಕರೆಗಿಂತ ಹೆಚ್ಚು ಜಮೀನು ಹೊಂದಿದವರಿಂದ ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಇತ್ಯರ್ಥ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಟಿ. ರಘುಮೂರ್ತಿ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, ತಾಲೂಕುಗಳ ರಚನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿ ಎಂ.ಬಿ. ಪ್ರಕಾಶ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ವೈಜ್ಞಾನಿಕ ಅಧ್ಯಯನದ ಮೂಲಕ ನೀಡಿದ್ದ ವರದಿಯನ್ನು ಈ ಹಿಂದಿನ ಸರ್ಕಾರಗಳು ಪರಿಗಣಿಸಿಲ್ಲ. ಅದರ ಹೊರತಾಗಿಯೂ ಕಾಲ ಕಾಲಕ್ಕೆ ತಾಲೂಕುಗಳ ರಚನೆ ಮಾಡಲಾಗುತ್ತಿದೆ ಎಂದು ಹೇಳಿದರು. ಮಂತರ್ ಗೌಡ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ, ಗುಡ್ಡಕುಸಿತದ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರೆ ದೂರಗಾಮಿ ಯೋಜನೆ ಕೈಗೊಳ್ಳಲು 500 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಮಲೆನಾಡು ಮತ್ತು ಕರಾವಳಿಯ 7 ಜಿಲ್ಲೆಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು.

