ರಾಷ್ಟ್ರೀಯ ವಿಮಾನ ನಿಲ್ದಾಣಗಳ(Airport) ಪೈಕಿ ನಮ್ಮ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ(Kempegowda International Airport Bengaluru) ಅದರದ್ದೇ ಆದ ಶಕ್ತಿ ಇದೆ. ದೇಶ ಮಾತ್ರವಲ್ಲದೇ ವಿದೇಶಗಳಿಗೂ ಸಂಪರ್ಕವನ್ನು ಕಲ್ಪಿಸುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದು. ದಿನದಿಂದ ದಿನಕ್ಕೆ ಪ್ರಯಾಣಿಕರ(Passengers) ಸಂಖ್ಯೆಯನ್ನು ಹೆಚ್ಚಿಸುತ್ತಾ ಸಾಗಿರುವ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಈಗ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗುವ ಸಾಧ್ಯತೆ ನಿಚ್ಛಳವಾಗಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಪ್ರಮುಖ ವಾಯುಯಾನ ಕೇಂದ್ರ(Aviation Hub) ಆಗಿ ಅಭಿವೃದ್ಧಿಪಡಿಸುವುದಾಗಿ ಏರ್ ಇಂಡಿಯಾ(AIR India) ಘೋಷಿಸಿದೆ.
ಈ ಸಂಬಂಧ ಏರ್ ಇಂಡಿಯಾ ಜೊತೆ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಸ್ತುತ, ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂಡಿಗೋ ಮತ್ತು ಏರ್ ಇಂಡಿಯಾದಂತಹ ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಕೇಂದ್ರವಾಗಿದೆ. ಆ ಸಾಲಿಗೆ ಬೆಂಗಳೂರು ಏರ್ಪೋರ್ಟ್ ಸೇರಿಸುವ ಪ್ರಯತ್ನ ನಡೆದಿದೆ. ಅಷ್ಟಕ್ಕೂ ಏನಿದು ಏವಿಯೇಷನ್ ಹಬ್? ಭಾರತದಲ್ಲಿ ಈಗ ಎಷ್ಟು ವಾಯುಯಾನ ಕೇಂದ್ರಗಳಿವೆ? ಏವಿಯೇಷನ್ ಹಬ್ನಿಂದ ಪ್ರಯೋಜನವೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಏವಿಯೇಷನ್ ಹಬ್ : ಪ್ರಯಾಣಿಕರ ದಟ್ಟಣೆ ಮತ್ತು ವಿಮಾನ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಲು ಒಂದು ಅಥವಾ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಬಳಸುವ ವಿಮಾನ ನಿಲ್ದಾಣವೇ ಏವಿಯೇಷನ್ ಹಬ್. ಇದನ್ನ ಏರ್ಲೈನ್ ಹಬ್ ಅಥವಾ ಹಬ್ ವಿಮಾನ ನಿಲ್ದಾಣ ಅಂತಲೂ ಕರೆಯಲಾಗುತ್ತದೆ. ಪ್ರಯಾಣಿಕರು ತಾವು ಹೋಗಬಯಸುವ ವಿಶ್ವದ ವಿವಿಧ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಹಬ್ ಮತ್ತು ಸ್ಪೋಕ್ ವ್ಯವಸ್ಥೆಯ ಭಾಗವಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ನಗರಗಳ ನಡುವೆ ನೇರ ಸಂಪರ್ಕವನ್ನು ಒದಗಿಸುವ ಒಂದು ಅಥವಾ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಈ ಹಬ್ಗಳನ್ನು ಗುರುತಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ದಕ್ಷ ಹಾಗೂ ಸುರಕ್ಷಿತ ಕಾರ್ಯಾಚರಣೆ ನಡೆಸುವುದು ಇದರ ಮುಖ್ಯ ಉದ್ದೇಶ. ಆಗ ಗ್ರಾಹಕರಿಗೆ ಉತ್ತಮ ಅನುಭವ ಸಿಗುತ್ತದೆ. ಈ ಉದ್ದೇಶದಿಂದ ಭಾರತದಲ್ಲಿ ವಾಯು ಸಂಪರ್ಕ ವಿಸ್ತರಿಸಲು ಏರ್ ಇಂಡಿಯಾ ಮುಂದಾಗಿದೆ. ವಿಮಾನಯಾನ ಸಂಶೋಧನಾ ಸಂಸ್ಥೆಯಾದ ಒಎಜಿ, ಲಂಡನ್ ಹೀಥ್ರೂವನ್ನು (2023 ಕ್ಕೆ) ವಿಶ್ವದ ಅತ್ಯಂತ ಹೆಚ್ಚು ಸಂಪರ್ಕಿತ ವಿಮಾನ ನಿಲ್ದಾಣವೆಂದು ಗುರುತಿಸಿದೆ. ಇದರ ಜೊತೆಗೆ ನ್ಯೂಯಾರ್ಕ್ನ ಜೆಎಫ್ಕೆ ವಿಮಾನ ನಿಲ್ದಾಣ, ನೆದರ್ಲ್ಯಾಂಡ್ನ ಆಮ್ಸ್ಟರ್ಡ್ಯಾಮ್ ವಿಮಾನ ನಿಲ್ದಾಣ, ಮಲೇಷ್ಯಾದ ಕೌಲಾಲಂಪುರ್ ವಿಮಾನ ನಿಲ್ದಾಣ ಮತ್ತು ಟೋಕಿಯೊದ ಹನೇಡಾ ವಿಮಾನ ನಿಲ್ದಾಣವನ್ನೂ ಗುರುತಿಸಲಾಗಿದೆ.
ಹಬ್ ಅನ್ನು ಸ್ಥಾಪಿಸುವ ಪ್ರಮುಖ ಅಂಶವೆಂದರೆ, ಕನಿಷ್ಠ ಒಂದು ಏರ್ಲೈನ್ನ ಪ್ರಾಬಲ್ಯವನ್ನು ಹೊಂದಿರುವುದು. ಉದಾಹರಣೆಗೆ: ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲಂಡನ್ ಹೀಥ್ರೂನಿಂದ ಕಾರ್ಯನಿರ್ವಹಿಸುವ ಒಟ್ಟು ವಿಮಾನಗಳ ಸಂಖ್ಯೆಯಲ್ಲಿ ಬ್ರಿಟಿಷ್ ಏರ್ವೇಸ್ 50% ಪಾಲನ್ನು ಹೊಂದಿದೆ. ಜೆಕೆಎಫ್ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ಲೈನ್ 34% ಪಾಲನ್ನು ಹೊಂದಿದೆ. ಕೆಎಲ್ಎಂ-ರಾಯಲ್ ಏರ್ಲೈನ್, ಆಮ್ಸ್ಟರ್ಡ್ಯಾಮ್ ಶಿಪೋಲ್ ವಿಮಾನ ನಿಲ್ದಾಣದಲ್ಲಿ 53% ಪಾಲನ್ನು ಹೊಂದಿದೆ. ಕೌಲಾಲಂಪುರದಿಂದ ವಿಮಾನಗಳಲ್ಲಿ ಏರ್ ಏಷ್ಯಾ 34% ಪಾಲನ್ನು ಹೊಂದಿದೆ.
ವಿಮಾನ ನಿಲ್ದಾಣ ಕೇಂದ್ರವು ಅಂತಾರಾಷ್ಟ್ರೀಯ-ಅಂತಾರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ-ದೇಶೀಯ ಸಂಪರ್ಕಕ್ಕೆ (2 ಮಾರ್ಗಗಳ ನಡುವೆ) ಕನಿಷ್ಠ ಸಾರಿಗೆ ಸಮಯ ಒದಗಿಸಬೇಕು. ಪ್ರತಿ ವರ್ಷ 90% ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 50 ಗೇಟ್ಗಳನ್ನು ಹೊಂದಿರುವ ಮೂರು ಪ್ರಮುಖ ಟರ್ಮಿನಲ್ಗಳನ್ನು ಹೊಂದಿದೆ. ಪ್ರತಿಯೊಂದು ಟರ್ಮಿನಲ್ಗಳ ನಡುವೆ 30 ನಿಮಿಷಗಳ ವರೆಗೆ ಟ್ರಾನ್ಸ್ಫರ್ ಸಮಯವನ್ನು ಸುಗಮಗೊಳಿಸುತ್ತದೆ.
ದಕ್ಷಿಣ ಭಾರತದಲ್ಲಿ ಏವಿಯೇಷನ್ ಹಬ್ ಯಾಕೆ? : ದಕ್ಷಿಣ ಭಾರತದಿಂದ ನೇರ ದೀರ್ಘ ಪ್ರಯಾಣದ ಮಾರ್ಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಪೂರೈಸಲು ಏರ್ ಇಂಡಿಯಾ ಉದ್ದೇಶಿಸಿದೆ. ಈ ಪಾಲುದಾರಿಕೆಯು ಎಂಆರ್ಓ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲಿದೆ. ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ.
ಬೆಂಗಳೂರು ಏರ್ಪೋರ್ಟ್ಗೆ ಒಲಿದ ಅವಕಾಶ : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಈ ಒಪ್ಪಂದದೊಂದಿಗೆ ವಿಶ್ವದ ದೊಡ್ಡ ದೊಡ್ಡ ನಗರಗಳಿಗೆ ನೇರ ವಿಮಾನ ಸಂಪರ್ಕ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ, ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಕೂಡ ದೊರೆಯಲಿದೆ.
1,200 ಹೊಸ ಉದ್ಯೋಗ ಸೃಷ್ಟಿ : ಈ ಕಾರಣದಿಂದಾಗಿ ಏರ್ ಇಂಡಿಯಾವು ಕರ್ನಾಟಕ ಸರ್ಕಾರದೊಂದಿಗೆ ಸಹಿ ಹಾಕಿದೆ. ವಿಮಾನ ನಿಲ್ದಾಣದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಉತ್ತಮ ಸೌಲಭ್ಯ ಒದಗಿಸುವ ಕೆಲಸ ಮಾಡಲಿದೆ. ಈ ಒಪ್ಪಂದದಿಂದಾಗಿ ರಾಜ್ಯದಲ್ಲಿ ಹೆಚ್ಚು ನುರಿತ ವ್ಯಕ್ತಿಗಳಿಗೆ 1,200 ಹೊಸ ಉದ್ಯೋಗಾವಕಾಶಗಳನ್ನೂ ಒದಗಿಸಲು ಸಾಧ್ಯವಾಗಲಿದೆ. 2023 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 3.72 ಕೋಟಿ ಪ್ರಯಾಣಿಕರನ್ನು ಹೊಂದಿತ್ತು.
ಭಾರತದಲ್ಲಿ ಹಬ್ : ಭಾರತದ ಮೂಲಕ ವಿದೇಶಗಳ ವಿವಿಧ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರವು ದೇಶದಲ್ಲಿ ಏವಿಯೇಷನ್ ಹಬ್ಗಳನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಂಡಿದೆ. ಭಾರತದ ಅತಿ ದೊಡ್ಡ ಮತ್ತು ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿರುವ ದೆಹಲಿಯಲ್ಲಿ ಈ ಯೋಜನೆ ಜಾರಿಯಲ್ಲಿದೆ. 2022-23 (ಏಪ್ರಿಲ್-ಮಾರ್ಚ್) 4,29,964 ವಿಮಾನಗಳ ಕಾರ್ಯಾಚರಣೆ ಮತ್ತು 6.52 ಕೋಟಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಿದೆ.
ಕೇಂದ್ರದ ರಾಷ್ಟ್ರೀಯ ವಿಮಾನಯಾನ ಹಬ್ ನೀತಿಯ ಪ್ರಕಾರ, ದುಬೈ ಮತ್ತು ದೋಹಾ ವಿಮಾನ ನಿಲ್ದಾಣಗಳಿಗೆ ಅನುಗುಣವಾಗಿ ದೆಹಲಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಕೇಂದ್ರವಾಗಿಸಲು ಸರ್ಕಾರವು ಸಮಿತಿಯನ್ನು ರಚಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ನಡುವೆ ತಡೆರಹಿತ ಸಂಪರ್ಕ ಸಾಧಿಸಲು, ಭದ್ರತಾ ತಪಾಸಣೆ ಹಾಗೂ ವಲಸೆಯ ಅಡಚಣೆಯಂತಹ ಸವಾಲುಗಳಿಗೆ ಈ ನೀತಿಯು ಪರಿಹಾರವಾಗಿದೆ.
- ಅಂತರ್ಜಾಲ ಮಾಹಿತಿ