ನಿವೃತ್ತ ಪೊಲೀಸ್ ಅಧಿಕಾರಿಗಳ ಆರೋಗ್ಯ ರಕ್ಷಣೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಆರೋಗ್ಯ ನಿಧಿಯನ್ನು 25 ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಬೆಂಗಳೂರು ಹಾಗೂ ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ನಡೆದ ಮಾನವೀಯ ಸೇವೆ ಹಾಗೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಐದು ಮಂದಿ ಪೊಲೀಸ್ ಸಿಬ್ಬಂದಿಯನ್ನು ಗೌರವಿಸಿ ಮಾತನಾಡಿದ ಅವರು, ನಿವೃತ್ತ ಪೊಲೀಸ್ ಅಧಿಕಾರಿಗಳ ಆರೋಗ್ಯ ರಕ್ಷಣೆಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಸಹ ಜೋಡಿಸಲಾಗಿದ್ದು, ಭವಿಷ್ಯದ ದಿನಗಳಲ್ಲಿ ಆರೋಗ್ಯ ರಕ್ಷಣೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ನಿವೃತ್ತ ಸಿಬ್ಬಂದಿ ಚಿಕಿತ್ಸೆ ಪಡೆದ ಬಿಲ್ ಗಳನ್ನು ಸಹ ಕಾಲ ಕಾಲಕ್ಕೆ ಕ್ಲಿಯರ್ ಮಾಡಲಾಗುತ್ತಿದೆ ಎಂದರು.
ಬೆಂಗಳೂರು ನಗರ ಪೊಲೀಸ್ ಮಹಾನಿರ್ದೇಶಕ ಸಿ.ಹೆಚ್.ಪ್ರತಾಪ್ ರೆಡ್ಡಿ ಮಾತನಾಡಿ, ಗೌರವಕ್ಕೆ ಪಾತ್ರರಾದ ಪೊಲೀಸ್ ಸಿಬ್ಬಂದಿ ತಮ್ಮ ಇತಿ ಮಿತಿ ಮೀರಿ ಕೆಲಸ ಮಾಡಿದ್ದಾರೆ. ಇವರ ಸೇವೆ ನಮಗೆ ಹೆಮ್ಮೆ ತರುತ್ತದೆ. ಪೊಲೀಸರು ಸದಾ ಕಾಲ ಕರ್ತವ್ಯ ಪ್ರಜ್ಞೆ ಹೊಂದಿರಬೇಕು ಎಂದು ಹೇಳಿದರು.
ಬೆಂಗಳೂರಿನ ರೈಲ್ವೆ ಪ್ರೊಟೆಕ್ಷನ್ ಪೋರ್ಸ್ ನಲ್ಲಿ 15 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾಗ “ನನ್ನೀ ಪರೀಷೆ” ಎಂಬ ಅಭಿಯಾನದಡಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತಿತರ ಪ್ರದೇಶಗಳಲ್ಲಿ 35 ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ರಕ್ಷಿಸಿ, 3 ಅಪಹರಣ ಪ್ರಕರಣದಲ್ಲಿ 15 ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜೀನಾ ಪಿಂಟೋ, ಹಾಲಿ ಉಡುಪಿಯ ಕೊಂಕಣ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದಾರೆ.
ಮಕ್ಕಳ ರಕ್ಷಣೆಗೆ ಮನೆಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಸೂಕ್ತ ಎಂದು ಅರಿವು ಮೂಡಿಸುತ್ತಿದ್ದಾರೆ. ಆಗ ತಾನೆ ಜನಸಿದ ಶಿಶುವನ್ನು ಯಾರೋ ಕಸದ ತೊಟ್ಟಿಯ ಬಳಿ ಬಿಟ್ಟು ಹೋದ ಸಂದರ್ಭದಲ್ಲಿ ಹೊಯ್ಸಳ ಸಿಬ್ಬಂದಿ ಮಗುವನ್ನು ರಕ್ಷಿಸಿದಾಗ ಸ್ವಯಂ ಪ್ರೇರಣೆಯಿಂದ ಧಾವಿಸಿ ಹಾಲುಡಿಸಿ ಮಾನವೀಯತೆ ಮೆರೆದ ಅರ್ಚನಾ ಡಿ.ಎಸ್.
ಜಿ.ಕೆ.ವಿ.ಕೆ ಕ್ಯಾಂಪಸ್ ನಲ್ಲಿ ಅನಾಥ ನವಜಾತ ಶಿಶುವಿಗೆ ಹಾಲುಣಿಸಿ ಮಾನವೀಯತೆ ಮರೆದ ಸಂಗೀತ ಎಚ್.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಆರೋಪಿಯೊಬ್ಬನನ್ನು ಬಂಧಿಸಲು ತೆರಳಿಗಾದ ತಪ್ಪಿಸಿಕೊಂಡು ಬಾವಿಗೆ ಜಿಗಿದು ಜೀವನ್ಮರಣದ ಜೊತೆ ಹೋರಾಟ ಮಾಡುತ್ತಿದ್ದ ಆರೋಪಿಯನ್ನು ಮೆಟ್ಟಿಲುಗಳಿಲ್ಲದ ಬಾವಿಗೆ ಇಳಿದು ಆರೋಪಿಯ ಜೀವ ರಕ್ಷಣೆ ಮಾಡಿ ಬಂಧಿಸಿದ ಮೂಲತಃ ರಾಯಚೂರಿನ, ಹಾಲಿ ಹಲಯಂಕ ಪೊಲೀಸ್ ಠಾಣೆಯ ಪೇದೆ ಶಿವಕುಮಾರ್ ರಾಥೋಡ್ .
ಕೋವಿಡ್ ಸಂದರ್ಭದಲ್ಲಿ ಅನಾಥ ಶವಗಳನ್ನು ಸ್ವಂತ ಖರ್ಚಿನಲ್ಲಿ ಅಂತ್ಯ ಸಂಸ್ಕಾರ ಮಾಡಿದ, ವಾರಸುದಾರರು ಪತ್ತೆಯಾಗದ ಅನಾಥ ಶವಗಳಿಗೆ ಮಾನವೀಯತೆಯಿಂದ ಮುಕ್ತಿ ಕಾಣಿಸುತ್ತಿರುವ ನಾಗರಾಜ್ ಎಂ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹೆಚ್ಚುವರಿ ಪೋಲಿಸ್ ಆಯುಕ್ತರು (ಅಪರಾಧ) ಸಂದೀಪ್ ಪಾಟೀಲ್, ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಕೆ.ಶಿವರಾಂ ಮತ್ತು ವೇಮಗಲ್ ನಾರಾಯಣಸ್ವಾಮಿ ಉಪಸ್ಥಿತರಿದ್ದರು.