ಸಣ್ಣಪ್ಪನಿಗೆ ಖುಷಿಯಾಗಿತ್ತು ,ಬ್ಯಾಂಕಿನವರು ನಿಮ್ಮ ಸಾಲ ಸಂಪೂರ್ಣ ಮುಗಿಯಿತು ಅಂದಾಗ.ಜೊತೆಗೆ ಕೃತಜ್ಞತಾ ಭಾವವೂ ಬಂತು.ತನ್ನ ಕಷ್ಟದ ಕಾಲದಲ್ಲಿ ಆರ್ಥಿಕ ಸಹಾಯ ಕೊಟ್ಟರು ಅಂತ.ಇದೀಗ ಸಣ್ಣಪ್ಪ ತೆಗೆದ ಸಾಲ ಸಂಪೂರ್ಣ ಮರುಪಾವತಿ ಆಗಿದ್ದರೂ ಆತನ ಜಮೀನಿನಲ್ಲಿ ಅಲಸಂಡೆ ಬೆಳೆ ಮುಗಿದಿರಲಿಲ್ಲ.
ಸಣ್ಣಪ್ಪ ನಿರ್ಧರಿಸಿದ್ದ. ಮುಂದಕ್ಕೆ ತನ್ನೆಲ್ಲಾ ಆದಾಯವನ್ಬೂ ಬ್ಯಾಂಕಿನ ತನ್ನ ಉಳಿತಾಯ ಖಾತೆಗೆ ಜಮಾ ಮಾಡುವುದು ಅಂತ.ತನ್ನ ಖರ್ಚಿಗೆ ಬೇಕಾದಾಗ ಬ್ಯಾಂಕಿನಿಂದಲೇ ಹಣ ಪಡೆದು ವ್ಯವಹರಿಸುವುದು ಅಂತ.
ಸಣ್ಣಪ್ಪನ ಜಮೀನಿನಲ್ಲಿ ಆ ಸಾಲಿನ ಅಲಸಂಡೆ ಬೆಳೆ ಮುಗಿದಾಗ ಆತ ಬ್ಯಾಂಕಿಗೆ ಕಟ್ಡಿದ್ದು ಭರ್ತಿ ಎಪ್ಪತ್ತು ಸಾವಿರ ರೂಪಾಯಿಗಳನ್ನು.ಪುನಹ ಅದೇ ಬ್ಯಾಂಕಿನಿಂದ ಸಣ್ಣಪ್ಪ ಬೆಳೆ ಸಾಲ ತೆಗೆದ.ಇನ್ನೊಂದು ಕೃಷಿ ಮಾಡಿದ.ಹೀಗೆಯೇ ಎರಡ್ಮೂರು ವರ್ಷ ಮುಂದುವರೆಯಿತು.
ಇದೀಗ ಸಣ್ಣಪ್ಪನ ಉಳಿತಾಯ ಖಾತೆಯಲ್ಲಿ ಒಂದಷ್ಟು ಹಣ ಉಳಿತಾಯದ ಲೆಕ್ಕದಲ್ಲೇ ಇದೆ.ಬ್ಯಾಂಕಿನವರು ಸಣ್ಣಪ್ಪನ ಅನುಕೂಲಕ್ಕೆ ಅಂತ ಒಂದು ಡೆಬಿಟ್ ಕಾರ್ಡ್ ಕೊಟ್ಟಿದ್ದಾರೆ.ಅದರ ಜೊತೆಗೆ ಆತ ಮೊಬೈಲ್ ಬಳಸಿ ಹಣ ಪಾವತಿಸುವುದನ್ನೂ ಅಭ್ಯಸಿಸಿದ್ದಾನೆ.ತನ್ನ ಎಲ್ಲ ಆದಾಯವನ್ನೂ ಬ್ಯಾಂಕಿಗೆ ಒಮ್ಮೆ ತುಂಬುವುದು ಮತ್ತೆ ತನ್ನ ಖರ್ಚಿಗೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಮೊಬೈಲ್ ಮುಖಾಂತರ ಪಾವತಿಸುವುದು ಆತನಿಗೆ ರೂಢಿಯಾಗಿ ಹೋಗಿದೆ.ತೀರಾ ಸಣ್ಣ ಪ್ರಮಾಣದ ನಗದು ಹಣವಷ್ಟೇ ಆತನ ಬಳಿ ಇದೀಗ ಇರುವುದು.
ಬ್ಯಾಂಕಿನವರಿಗೂ ಸಣ್ಣಪ್ಪನ ಮೇಲೆ ವಿಶ್ವಾಸ ಬಂದಿದೆ.ಇನ್ನೇನಾದರೂ ಕಾರಣಕ್ಕಾಗಿ ಸಾಲ ಬೇಕಿದ್ದರೆ ಕೊಡಬಹುದು ಅಂತ ಸಣ್ಣಪ್ಪನಿಗೆ ಹೇಳಿದ್ದಾರೆ.
ಇದನ್ನು ರೂಢಿಸಿಕೊಂಡರೆ ಹಲವು ಅನುಕೂಲಗಳು ಇವೆ.ನಮ್ಮ ರೈತರು ಸೋತು ಹೋಗುವುದು ಈ ಅಭ್ಯಾಸ ರೂಢಿಸಿಕೊಳ್ಳದೆಯೇ ಆಗಿದೆ.ಸಾಲ ತೆಗೆಯಲು ಮತ್ತು ಸಾಲ ಕಟ್ಟಲು ಮಾತ್ರ ಬ್ಯಾಂಕಿಗೆ ಹೋಗಬೇಕಾದ್ದಲ್ಲ.ಬ್ಯಾಂಕಿನೊಡನೆ ನಮ್ಮ ವ್ಯವಹಾರ ಅವರುಗಳಿಗೆ ನಮ್ಮ ಆದಾಯ ಎಷ್ಟಿದೆ ಎಂಬ ಪರಿಚಯ ಮಾಡಿಸುವಂತಿರ ಬೇಕು.
(ನನ್ನ ಬಗ್ಗೆ ಹೇಳುವುದಾದರೆ ನನ್ನ ತಾಳೆ ಹಣ್ಣಿನ ಮಾರಾಟದಿಂದ ಬರುವ ಹಣ ಸಂಪೂರ್ಣವಾಗಿ ನನ್ನ ಬ್ಯಾಂಕ್ ಅಕೌಂಟಿಗೆ ಬರುವುದು.ಮುಖ್ಯವಾಗಿ ಬೇಕಾದ್ದು ಏನು ಅಂದರೆ ನಿರಂತರವಾಗಿ,ನಿಯಮಿತವಾಗಿ ನಮ್ಮ ಖಾತೆಗೆ ಸುಮಾರಾಗಿ ನಿರ್ದಿಷ್ಟ ಹಣ ಜಮಾವಣೆಯಾಗುವುದು.ಐದಾರು ವರ್ಷ ಈ ರೀತಿ ಕಳೆದ ಬಳಿಕ ಬ್ಯಾಂಕಿನಿಂದ ನಿರಂತರವಾಗಿ ಫೋನು/ ಸಂದೇಶ ಬರುತ್ತಾ ಇದೆ.ಪ್ರತಿ ತಿಂಗಳೂ ನನ್ನ ಖಾತೆಗೆ ಎಷ್ಟು ಹಣ ಜಮಾವಣೆ ಸಾಮಾನ್ಯವಾಗಿ ಆಗುತ್ತದೆಯೋ ಅದರ ಹತ್ತು ಪಟ್ಟಿನಷ್ಟು ಹಣ ಸಾಲ ಪಡೆದುಕೊಳ್ಳಿ ಅಂತ.)
ನಿರಂತರವಾಗಿ ಪ್ರತಿ ತಿಂಗಳೂ ಹಣ ನಮ್ಮ ಖಾತೆಗೆ ಜಮಾವಣೆ ಆಗುತ್ತಿರ ಬೇಕು.ಅದರಿಂದ ಎಷ್ಟು ಖರ್ಚು ಆಯಿತು,ಎಷ್ಟು ಉಳಿದಿದೆ ಎಂಬ ಪ್ರಶ್ನೆ ಇಲ್ಲ.ಇದು ಬ್ಯಾಂಕಿನಲ್ಲಿನ ನಮ್ಮ credit ratingನ್ನು ಹೆಚ್ಚಿಸುತ್ತದೆ.ಮತ್ತು ಮುಂದಕ್ಕೆ ಬೇಕಿದ್ದಾಗ ಸಾಲ ಸುಲಲಿತವಾಗಿ ಸಿಗುವಲ್ಲಿ ಸಹಕಾರಿಯಾಗಲಿದೆ.
ಅಲ್ಪಾವಧಿ ಬೆಳೆ ಸಾಲ – ಹಾಗೆಂದರೇನು..? | ರೈತರಿಗೆ ಪ್ರಯೋಜನ ಏನು..?
Advertisement