ತಾಪಮಾನ ಏರಿಕೆಯಿಂದ ಉಂಟಾಗಿರುವ ಬಿಸಿಯನ್ನು ತಣ್ಣಗಾಗಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮಂಜುಗಡ್ಡೆ ಮಾದರಿಯ ಆಹಾರ ಪದಾರ್ಥಗಳನ್ನು ಪ್ರಾಣಿಗಳಿಗೆ ನೀಡಲಾಗುತ್ತಿದ್ದು, ತಂಪಾದ ವಾತಾವರಣ ಕಲ್ಪಿಸಲಾಗಿದೆ. ಇದೊಂದು ವಿನೂತನ ಪ್ರಯತ್ನವಾಗಿದ್ದು ಗಮನ ಸೆಳೆಯುತ್ತಿದೆ.
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ ಪ್ರಾಣಿಗಳಿಗೆ ತಂಪಾದ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ ತಂಪಾದ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ. ಮೃಗಾಲಯದಲ್ಲಿರುವ ಕರಡಿ, ಹಿಪ್ಪೊಪೋಟಮಸ್, ಆನೆ, ಜಿರಾಫೆ, ಜೀಬ್ರಾ, ಕೋತಿ ಸೇರಿದಂತೆ ಇತರೆ ಸಸ್ಯಾಹಾರಿ ಪ್ರಾಣಿಗಳಿಗೆ ವಿಶೇಷ ಆಹಾರ ತಿನಿಸುಗಳನ್ನು ನೀಡಲಾಗುತ್ತಿದೆ. ತಂಪಾದ ಆಹಾರ ಪದಾರ್ಥಗಳನ್ನು ತಿನ್ನುತ್ತಿರುವ ಪ್ರಾಣಿಗಳ ದೃಶ್ಯ ಸಹಸ್ರಾರು ಪ್ರಾಣಿ ಪ್ರಿಯರಿಗೆ ಮುದ ನೀಡುತ್ತಿದೆ. ಇನ್ನೂ ಕೆಲವು ಪ್ರಾಣಿಗಳು ತಂಗಿರುವ ಸ್ಥಳದಲ್ಲಿ ತಣ್ಣನೆಯ ನೀರನ್ನು ಸಿಂಪಡಣೆ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಆನೆ, ಹುಲಿ, ಚಿರತೆ, ಸಿಂಹ ಸೇರಿದಂತೆ ಇತರೆ ಪ್ರಾಣಿಗಳಿಗೆ ನೀರಿನ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ.
ಪ್ರಾಣಿಗಳು ಬೇಸಿಗೆಯ ತಾಪಮಾನಕ್ಕೆ ಹೈರಾಣರಾಗುತ್ತಿರುವ ಹಿನ್ನೆಲೆಯಲ್ಲಿ ಮಂಜುಗಡ್ಡೆ ಮಾದರಿಯ ಆಹಾರ ಹಾಗೂ ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯೂ ಜಿರಾಫೆ, ಆನೆಯಂತಹ ದೊಡ್ಡ ಪ್ರಾಣಿಗಳ ಮೇಲೆ ತಣ್ಣನೆಯ ನೀರನ್ನು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ಹೇಳುತ್ತಾರೆ.