ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ ನಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದರು. ಈ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಪ್ರಧಾನಿ, ಮೇಕ್ ಇನ್ ಇಂಡಿಯಾ ಪಯಣಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಗಿದೆ. ಭಾರತದಲ್ಲಿ ನಿರ್ಮಾಣವಾಗಿರುವ ವಿದ್ಯುತ್ ಚಾಲಿತ ವಾಹನಗಳು 100 ದೇಶಗಳಿಗೆ ರಫ್ತಾಗಲಿವೆ. ಜಾಗತಿಕ ಮಾರುಕಟ್ಟೆಗೆ ಭಾರತದ ವಾಹನಗಳು ಪ್ರವೇಶಿಸಲಿದ್ದು, ಹಸಿರು ಇಂಧನ ವಲಯಕ್ಕೆ ಮಹತ್ವದ ಕೊಡುಗೆ ನೀಡಲಿವೆ ಎಂದು ಹೇಳಿದರು. ಭಾರತ , ಜಪಾನ್ ನಡುವಿನ ವ್ಯಾಪಾರ, ಸದೃಢವಾಗಿದ್ದು, ಈ ಸ್ನೇಹ ಸಂಬಂಧಕ್ಕೆ ಹೊಸ ಆಯಾಮ ದೊರೆತಿದೆ. ಭಾರತದ ಬಳಿ ಪ್ರಜಾಪ್ರಭುತ್ವದ ಶಕ್ತಿ , ಭೌಗೋಳಿಕ ಅನುಕೂಲ, ಕೌಶಲ್ಯಯುತ ಕಾರ್ಮಿಕರ ಸಂಪನ್ಮೂಲವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವುದು ಆಶಯವಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಭಾರತ ಶುದ್ಧ ಇಂಧನ ಹಾಗೂ ಶುದ್ಧ ಸಂಚಾರದ ವಿಶ್ವಾಸಾರ್ಹ ಕೇಂದ್ರವಾಗಲಿದೆ . ಮೇಕ್ ಇನ್ ಇಂಡಿಯಾ ಅಭಿಯಾನದ ಮೂಲಕ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಕೈಗಾರಿಕಾ ಕಾರಿಡಾರ್ ಹಾಗೂ ಉತ್ಪಾದನಾ ಪಾರ್ಕ್ ಗಳನ್ನು ನಿರ್ಮಿಸಲಾಗುತ್ತಿದೆ. ಹಲವು ವಲಯಗಳಿಗೆ ಉತ್ಪಾದನಾ ಆಧಾರಿತ ಸಹಾಯಧನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪ್ರಸಕ್ತ ದಶಕದಲ್ಲಿ ದೇಶದ ಎಲೆಕ್ಟ್ರಾನಿಕ್ಸ್ ವಲಯದ ಉತ್ಪಾದನೆ ಶೇಕಡ 500ರಷ್ಟು ಹೆಚ್ಚಳವಾಗಿದೆ. ಮೊಬೈಲ್ ಫೋನ್ ಗಳ ಉತ್ಪಾದನೆ ಶೇಕಡ 2,700ರಷ್ಟು ಹಾಗೂ ರಕ್ಷಣಾ ವಲಯದ ಉತ್ಪಾದನೆ ಶೇಕಡ 200ಕ್ಕಿಂತ ಏರಿಕೆಯಾಗಿದೆ ಎಂದು ತಿಳಿಸಿದರು. ಉತ್ಪಾದನೆ ಸಂಬಂಧಿಸಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಸುಧಾರಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದ್ದು, ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ಪರಿಣಾಮವಾಗಿ ದೇಶಕ್ಕೆ ಲಾಭವಾಗುತ್ತಿದೆ. ಆಡಳಿತಾತ್ಮಕ ಹಾಗೂ ನೀತಿಗಳಲ್ಲಿ ಸುಧಾರಣೆ ಕೈಗೊಂಡಾಗ ಹೂಡಿಕೆದಾರರ ವಿಶ್ವಾಸ ಹೆಚ್ಚಳವಾಗುತ್ತದೆ. ಭವಿಷ್ಯದ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ದೇಶದ ಮುಂದಿನ ಆದ್ಯತೆಯಾಗಿದೆ. ದೇಶದಲ್ಲೇ ಉತ್ಪಾದನೆಯಾಗುವ ವಸ್ತುಗಳನ್ನು ಬಳಕೆ ಮಾಡುವುದು ನಮ್ಮ ಜೀವನದ ಧ್ಯೇಯವಾಗಬೇಕು ಎಂದು ಕರೆ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….

