ಎಲ್ಲೂ ನೋಡಿದರಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನದ್ದೇ(mango) ಕಾರುಬಾರು. ಸದ್ಯ ಮಾವಿನ ಹಣ್ಣಿನ ಸೀಸನ್. ಮಾರಾಟ ಬಲು ಜೋರಾಗಿಯೇ ಇದೆ. ಎಲ್ಲೇ ನೋಡಿದರೂ ಬಗೆಬಗೆಯ ಮಾವಿನ ಹಣ್ಣುಗಳನ್ನು ಕಾಣಬಹುದು. ಮಾವು ಪ್ರಿಯರು ಬಹಳ ಆಸೆ ಪಟ್ಟು ಮಾವಿನ ಹಣ್ಣು ಖರೀದಿ ಮಾಡುತ್ತಾರೆ. ಆದರೆ ಮಾವು ಪ್ರಿಯರಿಗೆ(Mango lovers) ಕಹಿಸುದ್ದಿಯೊಂದು ಇದೆ. ನೀವು ಯಾಮಾರಿದ್ರೆ ಆರೋಗ್ಯಕ್ಕೆ(Health) ಕಂಟಕವಾಗುವ ಸನ್ನಿವೇಶ ಸೃಷ್ಟಿಯಾಗಬಹುದು. ಹೀಗಾಗಿ ಬಾಯಿ ಚಪ್ಪರಿಸುತ್ತ ಮಾವಿನ ಹಣ್ಣು ತಿನ್ನುವವರು ಎಚ್ಚರಿಕೆ ವಹಿಸಬೇಕಿದೆ. ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ಮಾರುಕಟ್ಟೆಯಲ್ಲಿ(Market) ಹಲವು ಬಗೆಯ ಮಾವಿನ ಹಣ್ಣುಗಳು ಲಭ್ಯವಿದ್ದು, ಚೌಸಾ, ಲಾಂಗ್ರಾ, ಅಲ್ಫೊನ್ಸೋ, ಹ್ಯಾಪುಸ್ ಸೇರಿದಂತೆ ಹಲವು ಬಗೆಯ ಮಾವಿನ ಹಣ್ಣುಗಳ ಮಾರಾಟ ನಡೆಯುತ್ತಿದೆ.
ಉತ್ತಮ ತಾಜಾ ಮತ್ತು ರುಚಿಕರವಾದ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಆತಂಕದ ಸಂಗತಿ ಎಂದರೆ ಮಾರುಕಟ್ಟೆಗೆ ರಾಸಾಯನಿಕಯುಕ್ತ ಕಲಬೆರಕೆ ಮಾವಿನ ಹಣ್ಣುಗಳೂ ಬರುತ್ತಿವೆ. ಆದರೆ ನೀವು ಖರೀದಿಸುವ ಮಾವು ಕಲಬೆರಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವೇ ಕಂಡುಹಿಡಿಯಬಹುದು.ಮಾರುಕಟ್ಟೆಯಲ್ಲಿ ಮಾವು ಕೊಳ್ಳುವಾಗ ಕಲಬೆರಕೆ ಇದೆಯೋ ಇಲ್ಲವೋ ಎಂಬುದನ್ನು ಮುಟ್ಟಿ ನೋಡಿಯೇ ತಿಳಿಯಬಹುದು. ಮಾವಿನ ಹಣ್ಣನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಿದರೆ, ನಿಮ್ಮ ಬೆರಳು ಮಾವಿನ ಹಣ್ಣಿನಲ್ಲಿ ಸಿಲುಕಿಕೊಂಡರೆ ಅದಕ್ಕೆ ರಾಸಾಯನಿಕ ಸಿಂಪಡಿಸಿದ್ದಾರೆ ಎಂದು ಅರ್ಥ. ಹೀಗಾಗಿ ಅದನ್ನು ನೀವು ಖರೀದಿಸಬೇಡಿ.
ಇದಲ್ಲದೇ ಮಾವಿನ ಹಣ್ಣು ಕೊಳ್ಳಲು ಹೋದಾಗ ಮಾವಿನ ಹಣ್ಣಿನ ಸಿಪ್ಪೆಯ ಬಗ್ಗೆಯೂ ಖಂಡಿತಾ ಗಮನ ಕೊಡಿ. ಸಿಪ್ಪೆಯ ಮೇಲೆ ಯಾವುದೇ ರೀತಿಯ ಕಲೆ ಗೋಚರಿಸಿದರೆ, ಅದರಲ್ಲಿ ರಾಸಾಯನಿಕಗಳನ್ನು ಬಳಸಿರುವ ಸಾಧ್ಯತೆ ಇರುತ್ತದೆ. ಹಣ್ಣನ್ನು ನೈಸರ್ಗಿಕವಾಗಿ ಹಣ್ಣು ಮಾಡಿದರೆ, ನೀವು ಅದರಲ್ಲಿ ಯಾವುದೇ ಕಲೆಗಳನ್ನು ಕಾಣುವುದಿಲ್ಲ. ಹೀಗಾಗಿ ಸಿಪ್ಪೆಯಿಂದಲೂ ನೀವು ಕಂಡುಹಿಡಿಯಬಹುದು. ಮಾವಿನಹಣ್ಣುಗಳನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡುವುದು ಭಾರತದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಹಿಂದಿನ ಸಂಪ್ರದಾಯವಾಗಿದೆ. ವರದಿಯೊಂದರ ಪ್ರಕಾರ, ಈ ಸಂಪ್ರದಾಯವನ್ನು ಶ್ಲಾಘಿಸಿದ ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ನ ಮುಖ್ಯ ಡಯೆಟಿಷಿಯನ್ ಸುಷ್ಮಾ ಪಿಎಸ್, ಮಾವಿನಹಣ್ಣನ್ನು ಕೇವಲ ಒಂದು ಗಂಟೆ ನೀರಿನಲ್ಲಿ ನೆನೆಸಿಡುವುದರಿಂದ ಅವುಗಳಲ್ಲಿನ ಫೈಟಿಕ್ ಆಮ್ಲದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ನೀವು ಮಾವಿನ ಹಣ್ಣುಗಳನ್ನು ಖರೀದಿಸುವಾಗ, ಅವುಗಳ ಮೇಲೆ ಯಾವುದೇ ಸುಕ್ಕುಗಳು ಅಥವಾ ಗೆರೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇಂತಹ ಮಾವಿನ ಹಣ್ಣಿನಲ್ಲಿ ಕಲಬೆರಕೆ ಇರುತ್ತದೆ. ಇದರೊಂದಿಗೆ ಜಿಗುಟಾದ ಮಾವಿನ ಹಣ್ಣುಗಳನ್ನು ಸಹ ಖರೀದಿಸಬಾರದು. ಕಳೆದ ತಿಂಗಳು ರಾಸಾಯನಿಕ ಬಳಸಿ ಕೃತಕವಾಗಿ ಮಾವಿನ ಕಾಯಿ ಹಣ್ಣು ಮಾಡುವ ಆರೋಪದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ತಪಾಸಣೆ ಅಧಿಕಾರಿಗಳ ಕಾರ್ಯಾಚರಣೆ ಮಾಡಿದ್ದು, ಮಾವಿನ ಹಣ್ಣು ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು.
- ಅಂತರ್ಜಾಲ ಮಾಹಿತಿ