ನಾವು ಶವವಾಗುವ ಮುನ್ನ.. | ಇದು ನಿಮಗಾಗಿ, ನಿಮ್ಮ ಮಕ್ಕಳಿಗಾಗಿ | ಬೆಳ್ತಂಗಡಿಯ ಸೋಮು ಪೂಜಾರಿಯ ರೋಚಕ ಹೋರಾಟದ ಬದುಕಿನ ಪುಟಗಳಿಂದ

February 6, 2024
11:24 AM

ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು – ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು. ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅಂತ್ಯ ಕಂಡ ಹೋರಾಟಗಾರನ ಶವವದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾವಿನಕಟ್ಟೆಯ ಸೋಮು ಪೂಜಾರಿಯ ರೋಚಕ ಹೋರಾಟದ ಬದುಕಿನ ಪುಟಗಳಿಂದ……..

Advertisement
Advertisement

ಸೋಮು ಪೂಜಾರಿ ಅತ್ಯಂತ ಬಡ ಕುಟುಂಬದ ನಾರಾಯಣ ಪೂಜಾರಿಯ ಮಗ. ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡರೂ ತಂದೆಯ ಸಹಕಾರದಿಂದ ಸರ್ಕಾರಿ ಶಾಲೆಯಲ್ಲಿ ಓದಿದ. ಅತ್ಯಂತ ಪ್ರತಿಭಾವಂತನಾದ ಆತ ಶಾಲೆಯ ಸ್ಕಾಲರ್ಶಿಪ್ ನಿಂದಲೇ ಓದುತ್ತಾ ಎಸ್ಎಸ್ಎಲ್ಸಿ ನಂತರ ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ನಂತರ ಎಂಇ, ಎಂಟೆಕ್, ಮಾಡಿ ಅಲ್ಲಿಯೇ ಲೆಕ್ಚರರ್ ಆಗಿ ಉದ್ಯೋಗ ಮಾಡುತ್ತಿದ್ದ.

Advertisement

ಅಪ್ಪನ ಒತ್ತಾಯದ ಮೇರೆಗೆ ಅದೇ ಊರಿನ ಪಕ್ಕದಲ್ಲೇ ಇದ್ದ ಕಡು ಬಡತನದ ಅನಕ್ಷರಸ್ಥೆಯಾದ, ಅನಾಥೆಯಾದ ತನ್ನ ಸಂಬಂಧಿಗಳ ಮಗಳನ್ನೇ ಸರಳವಾಗಿ ಮದುವೆಯಾದ. ಇದು ಆತನ ಆದರ್ಶ ಬದುಕಿಗೆ ಒಂದು ನಿದರ್ಶನ. ತಂದೆಯ ಜೊತೆಯೇ ಆಕೆಯನ್ನು ಬಿಟ್ಟು ಮಂಗಳೂರಿನಲ್ಲಿ ಸಣ್ಣ ರೂಮು ಮಾಡಿಕೊಂಡು ವಾರಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದ. ಮುಂದೆ ತನ್ನ ಸಂಬಳದಲ್ಲಿ ಅಪ್ಪನಿಗೆ ಒಂದು ಎಕರೆಯಷ್ಟು ಜಾಗ ಕೊಡಿಸಿ ವ್ಯವಸಾಯಕ್ಕೆ ದಾರಿ ಮಾಡಿಕೊಟ್ಟಿದ್ದ.

ಹೀಗಿರಬೇಕಾದರೆ ಆತನ ಪತ್ನಿ ಗರ್ಭಿಣಿಯಾದಳು. ಎಲ್ಲಾ ಆರೈಕೆಗಳು ಊರಿನಲ್ಲೇ ಆಯಿತು. 8 ನೇ ತಿಂಗಳಿನಲ್ಲಿ ಇದ್ದಕ್ಕಿದ್ದಂತೆ ಆಕೆಯ ಆರೋಗ್ಯದಲ್ಲಿ ಏರುಪೇರಾಗಿ ಮಗುವನ್ನು ಸಿಝೇರಿಯನ್ ಮಾಡಿ ಹೊರ ತೆಗೆಯಲಾಯಿತು. ತಾಯಿ ಆರೋಗ್ಯವಾಗಿ ಇದ್ದರೂ ಮಗು ಸಂಪೂರ್ಣ ಅಂಗವೈಕಲ್ಯದೊಂದಿಗೆ ವಿಚಿತ್ರವಾಗಿ ಜನಿಸಿತು. ಈ ಅನಿರೀಕ್ಷಿತ ಘಟನೆಯಿಂದ ಸೋಮು ಪೂಜಾರಿ ದಿಗ್ಬ್ರಾಂತನಾದರೂ ಕೊನೆಗೆ ಸಾವರಿಸಿಕೊಂಡು ಪರಿಸ್ಥಿತಿಯನ್ನು ಸ್ವೀಕರಿಸಿ ಮಗುವಿನ ಪಾಲನೆ ಪೋಷಣೆಯಲ್ಲಿ ತೊಡಗಿದನು.

Advertisement

ಐದು ವರ್ಷಗಳು ಕಳೆದರೂ ಮಗುವಿನ ದೇಹ ವಿಚಿತ್ರವಾಗಿ ಕೈಕಾಲುಗಳು ಸ್ವಾಧೀನ ಇಲ್ಲದೆ ಬೆಳೆಯುತ್ತಿದ್ದವು. ಬುದ್ದಿ ಮಾತ್ರ ಒಂದು ವರ್ಷದ ಮಗುವಿನಷ್ಟು ಮಾತ್ರ ಬೆಳೆದಿತ್ತು. ಈ ನಡುವೆ ಅದು ಏನಾಯಿತೋ ಏನೋ ತನ್ನ ಮಗುವಿನ ಸಂಕಷ್ಟ ನೋಡಲಾಗದೆ ಅನಕ್ಷರಸ್ಥ ತಾಯಿ ಆತ್ಮಹತ್ಯೆಗೆ ಶರಣಾದಳು‌. ಮತ್ತೊಂದು ಬರಸಿಡಿಲಿನಂತ ಆಘಾತ ಸೋಮು ಪೂಜಾರಿ ತತ್ತರಿಸುವಂತೆ ಮಾಡಿತು. ಹೆಂಡತಿಯ ಅಂತ್ಯ ಸಂಸ್ಕಾರದ ನಂತರ ಮಗುವಿನ ಆರೈಕೆಯ ಜವಾಬ್ದಾರಿ ನಿರ್ವಹಿಸಲು ಲೆಕ್ಚರರ್ ಹುದ್ದೆಗೆ ರಾಜೀನಾಮೆ ನೀಡಿ ಮಾವಿನ ಕಟ್ಟೆಯಲ್ಲಿ ತಂದೆಯೊಂದಿಗೆ ಮತ್ತೊಮ್ಮೆ ವಾಸ ಪ್ರಾರಂಭಿಸಿದನು.

ಕೆಲ ದಿನಗಳಲ್ಲಿ ಆತನಿಗೆ ಊರ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಈ ರೀತಿಯ ಅಂಗವಿಕಲ ಮಕ್ಕಳು ಕೆಲ ವರ್ಷಗಳಿಂದ ಹುಟ್ಟಿರುವ ವಿಷಯ ತಿಳಿಯಿತು. ಆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಎಂಡೋಸಲ್ಫಾನ್ ಮತ್ತು ಇತರ ರಾಸಾಯನಿಕ ವಿಷಕಾರಕ ಔಷಧಿಗಳನ್ನು ಕೃಷಿ ಬಳಕೆಗೆ ಉಪಯೋಗಿಸಿದ್ದರಿಂದ ಅದು ಆಹಾರ ಗಾಳಿ ನೀರಿನ ಮೂಲಕ ಮನುಷ್ಯರ ದೇಹದಲ್ಲಿ ಸೇರಿ ಅತ್ಯಂತ ದುಷ್ಪರಿಣಾಮ ಬೀರಿದ್ದರಿಂದ ಈ ರೀತಿಯ ಮಕ್ಕಳು ಜನಿಸಿದರು ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿತು.

Advertisement
ಅಲ್ಲಿಂದ ಸೋಮು ಪೂಜಾರಿಯ ರೋಚಕ ಹೋರಾಟ ಪ್ರಾರಂಭವಾಯಿತು. ಒಂದು ಕಡೆ ವಯಸ್ಸಾದ ತಂದೆಯ ಅನಾರೋಗ್ಯ, ಇನ್ನೊಂದೆಡೆ ಸಂಪೂರ್ಣ ಅಂಗ ಮತ್ತು ಮನೋವೈಕಲ್ಯ ಮಗನ ಆರೈಕೆ, ಪತ್ನಿಯ ಅನವಶ್ಯಕ ಮತ್ತು ಅನಿರೀಕ್ಷಿತ ಆತ್ಮಹತ್ಯೆ, ಆರ್ಥಿಕ ಮುಗ್ಗಟ್ಟು, ವ್ಯವಸ್ಥೆಯ ವಿರುದ್ಧದ ಆಕ್ರೋಶ ಎಲ್ಲವನ್ನೂ ಎದುರಿಸುತ್ತಾ ಪ್ರಾರಂಭದಲ್ಲಿ ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟರ್ ಗಳಲ್ಲಿ ಅಪಾಯಕಾರಿ ರಾಸಾಯನಿಕಗಳ ಬಳಕೆ, ಅದರಿಂದ ವಿಷಪೂರಿತ ಹಣ್ಣು ತರಕಾರಿಗಳ ಸೃಷ್ಟಿ, ಅದರ ಸೇವನೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದನು.

ನಂತರದ ದಿನಗಳಲ್ಲಿ ಪತ್ರಿಕೆ, ಟಿವಿ, ವೆಬ್ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಚಾರ ಮಾಡಿದನು.
ಮುಂದೆ ಇರುವ ಸಮಯವನ್ನೇ ಉಪಯೋಗಿಸಿಕೊಂಡು ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಆಹಾರ ಮಂತ್ರಿ, ಕೃಷಿ ಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿ, ರಾಜ್ಯ ಕೃಷಿ ಮಂತ್ರಿ, ಆಹಾರ ಮಂತ್ರಿ, ಕೇಂದ್ರ ಮತ್ತು ರಾಜ್ಯದ ಆಹಾರ ಮತ್ತು ಕೃಷಿ ಇಲಾಖೆಯ ಪ್ರದಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಆಧ್ಯಕ್ಷರು, ಕೃಷಿ ಮತ್ತು ಆಹಾರ ಇಲಾಖೆಗೆ ಸಂಬಂಧಿಸಿದ ಎಲ್ಲಾ ಹಿರಿ ಕಿರಿಯ ಅಧಿಕಾರಿಗಳು ಸೇರಿ ಪ್ರತಿಯೊಬ್ಬರಿಗೂ ಪತ್ರ ಇಮೇಲ್ ಪೋನ್ ಇನ್ನೂ ಮುಂತಾದ ಸಾಧ್ಯವಿರುವ ಎಲ್ಲವನ್ನೂ ಉಪಯೋಗಿಸಿ ಅವರಿಗೆ ಮಾಹಿತಿ ನೀಡಿದನು.

ರಾಜ್ಯದ ಪ್ರಮುಖ ಪತ್ರಿಕಾ ಮತ್ತು ಟಿವಿ ಮಾಧ್ಯಮಗಳಲ್ಲಿ ಈ ಬಗ್ಗೆ ದೊಡ್ಡ ದೊಡ್ಡ ಕಾರ್ಯಕ್ರಮ ರೂಪಿಸಲು ಒತ್ತಡ ಹೇರಿದನು. ಇದಕ್ಕೆ ಸಂಬಂಧಿಸಿದ ಸಂಘಟನೆಗಳ ಅನೇಕ ಪ್ರಮುಖರಿಗೆ ದೀರ್ಘ ಪತ್ರ ಬರೆದು ಹೋರಾಟ ರೂಪಿಸಲು ಪರಿಪರಿಯಾಗಿ ಮನವಿ ಮಾಡಿಕೊಂಡನು. ಈ ಮಧ್ಯೆ ತಂದೆ ತೀರಿಕೊಂಡರು. ಒಬ್ಬನೇ ಇರುವ ಸಮಯದಲ್ಲಿ, ಇರುವ ಸ್ಥಳದಿಂದಲೇ ತನ್ನೆಲ್ಲಾ ಸಾಮರ್ಥ್ಯ ಬಳಸಿ ಜನರಲ್ಲಿ ಜಾಗೃತಿ ಮೂಡಿಸಿ ಆಡಳಿತದ ಮೇಲೆ ಒತ್ತಡ ಹೇರಿ ಬದಲಾವಣೆಗಾಗಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದನು.

ಹಗಲು ರಾತ್ರಿ ಒಂದು ಮಾಡಿ ಏನಾದರೂ ಸಾಧಿಸಲು ಯತ್ನಿಸಿದನು. ಊಹುಂ ಏನೂ ಆಗಲಿಲ್ಲ. ಯಾವ ಮಂತ್ರಿ ಅಧಿಕಾರಿಯೂ ಸ್ಪಂದಿಸಲಿಲ್ಲ. ಜನರೂ ಯಾವುದೇ ಉತ್ಸಾಹ ತೋರಲಿಲ್ಲ. ಮಾಧ್ಯಮಗಳು ಪತ್ರಿಕೆಗಳಲ್ಲಿ ದೊಡ್ಡದಾಗಿ ಬರೆದರು, ಟಿವಿಗಳು ಒಂದಷ್ಟು ಕಾರ್ಯಕ್ರಮ ಮಾಡಿದವು. ಆದರೂ ಈ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಬದಲಾಗಿ ಆಹಾರ ನೀರು ಗಾಳಿ ಇನ್ನಷ್ಟು ಮಲಿನವಾದವು. ಈ ರೀತಿಯ ದುರಂತಗಳು ದಿನನಿತ್ಯದ ಭಾಗಗಳಾದವು. ಹೀಗೆ ಹಲವು ವರ್ಷಗಳು ಕಳೆದವು. ಮಗುವಿಗೆ 15 ತುಂಬಿದ ಮಾರನೆಯ ದಿನ ಮಿಳ್ಳೆಯಲ್ಲಿ ಹಾಲು ಕುಡಿಸುತ್ತಿದ್ದಾಗ ಮಗು ತೊಡೆಯ ಮೇಲೆಯೇ ನಿಸ್ತೇಜಿತವಾಯಿತು. 15 ವರ್ಷಗಳ ಶ್ರಮ ನಿರರ್ಥಕವಾಯಿತು.

ಸೋಮು ಪೂಜಾರಿಯ ಮನಸ್ಸು ಕುಸಿದು ಹೋಯಿತು. ಇಡೀ ಕುಟುಂಬದ ಸರ್ವನಾಶ ಮತ್ತು ತನ್ನ ಬದುಕಿನ ವಿಫಲತೆಗಳು ಕಣ್ಣ ಮುಂದೆ ಬಂದವು. ಮನಸ್ಸಿನ ಹಿಡಿತ ಸಡಿಲವಾಯಿತು. ಇದ್ದಕ್ಕಿದ್ದಂತೆ ಎದ್ದು ಹೋಗಿ ಮನೆಯಲ್ಲಿ ಸಂಶೋಧನೆಗಾಗಿ ಇಟ್ಟಿದ್ದ ಕ್ರಿಮಿನಾಶಕವನ್ನು ಗಟಗಟನೆ ಕುಡಿದನು. ಹಾಸಿಗೆಯ ಮೇಲೆ ಅಂಗಾತ ಮಲಗಿ ಮಗುವನ್ನು ಎದೆಗವುಚಿಕೊಂಡು ಒಂದು ಪೆನ್ನು ಪೇಪರ್ ಹಿಡಿದು ಬರೆಯತೊಡಗಿದನು. ನಾಲ್ಕು ವಾಕ್ಯ ಮುಗಿಯುವಷ್ಟರಲ್ಲಿ ಕಣ್ಣು ಮಂಜಾಯಿತು, ಕೈ ಬಿದ್ದು ಹೋಯಿತು..........

ಅದೇ ಶರೀರ ಇಂದು, ಮಗ್ಗುಲು ಬದಲಿಸಿ, ನಲವತ್ತು ದಿನಗಳ ನಂತರ, ಅಂದು ಬರೆಯದೇ ಮುಗಿಸಿದ ವೇದನೆಯನ್ನು ಜೋರಾಗಿ ಚೀರತೊಡಗಿತು........
" ಕಿರಾತಕ ಆಡಳಿತಗಾರರೇ,
ಮುಠ್ಠಾಳ ಮಾಧ್ಯಮಗಳೇ
ಮೂರ್ಖ ಸಾರ್ವಜನಿಕರೇ,
ಈಗಲಾದರೂ ಎಚ್ಚೆತ್ತುಕೊಳ್ಳಿ, 
ನಿಮ್ಮ ದುರಾಸೆಯ ಫಲವಾಗಿ ನೀವು ತುಂಬಾ ತುಂಬಾ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದೀರಿ. ನಿಮ್ಮ ನಾಶಕ್ಕೆ ಯಾವ ಬಾಂಬು ಬಂದೂಕು ಯುದ್ದಗಳು ಬೇಡ. ನಿಮ್ಮ ಗಾಳಿ ನೀರು ಆಹಾರಗಳೇ ಸಾಕು ನಿಮ್ಮನ್ನು ನಿಧಾನವಾಗಿ ಕೊಲ್ಲಲು.

ಈಗಾಗಲೇ ನೀವು ಆ ವಿಷಚಕ್ರದೊಳಗೆ ಸಿಲುಕಿರಿವಿರಿ. ಗಾಳಿ ನೀರು ಆಹಾರ ಅಪಾಯದ ಮಟ್ಟವನ್ನು ತಲುಪಿ ಪ್ರತಿನಿತ್ಯ ನಿಮ್ಮ ದೇಹ ಸೇರುತ್ತಿದೆ. ನಿಮ್ಮ ಮಕ್ಕಳು ಹುಟ್ಟಿದ ತಕ್ಷಣದಿಂದ 5/10 ವರ್ಷಗಳ ವರೆಗೆ ನೀಡುತ್ತಿರುವ ಚುಚ್ಚುಮದ್ದುಗಳೇ ಹೇಳುತ್ತವೆ ಆ ಮಕ್ಕಳ ರೋಗ ನಿರೋಧಕ ಶಕ್ತಿಯ ದುರ್ಬಲತೆಯ ಬಗ್ಗೆ. 
ಧೈರ್ಯವಾಗಿ ಪ್ರಕೃತಿ ಸಹಜ ಹಣ್ಣು ತರಕಾರಿಗಳನ್ನೇ ತಿನ್ನದಷ್ಟು ಅನುಮಾನಕ್ಕೆ ಒಳಗಾಗಿದ್ದೀರಿ. ಪ್ರತಿ ಗಲ್ಲಿ ಗಲ್ಲಿಗಳಲ್ಲಿ ದೇಹ ಪರೀಕ್ಷೆಯ ಲ್ಯಾಬರೇಟರಿಗಳನ್ನು ಯಾರ್ಯಾರೋ ಸಾಲ ಮಾಡಿ ಪ್ರಾರಂಭಿಸಿ ಅಪಾರ ಹಣಗಳಿಸುತ್ತಿದ್ದಾರೆ. ಅದರ ಪರಿಣಾಮ ಆರೋಗ್ಯವಂತ ವ್ಯಕ್ತಿಗಳೇ ಇಲ್ಲವಾಗಿದ್ದಾರೆ‌, ಎಲ್ಲರ ದೇಹದಲ್ಲೂ ಏನಾದರೂ ಒಂದು ಕೊರತೆ ಪತ್ತೆ ಹಚ್ಚಲಾಗುತ್ತಿದೆ.

ಭಾರತದ 100 ಶ್ರೀಮಂತರಲ್ಲಿ ಕೆಲವು ಔಷದೀಯ ಕಂಪನಿಯ ಮುಖ್ಯಸ್ಥರು ಜಾಗ ಪಡೆದಿದ್ದಾರೆ ಎಂಬುದೇ ನಮ್ಮಗಳ ಆರೋಗ್ಯ ಗುಣಮಟ್ಟದ ಕುಸಿತಕ್ಕೆ ಬಹುದೊಡ್ಡ ಸಾಕ್ಷ್ಯವಾಗಿದೆ. ದೇಶದ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಅಧಿಕಾರದ ಕುರ್ಚಿಗಾಗಿ ರಣ ಹದ್ದುಗಳಂತೆ - ಬಕ ಪಕ್ಷಿಗಳಂತೆ ನನ್ನಂತವರ ಹೆಣಕ್ಕಾಗಿ ಕಾಯುತ್ತಿರುವಿರಿ. ನಿಮ್ಮ ಸ್ವಾರ್ಥದ ಮ್ಯಾಜಿಕ್ ನಂಬರ್ ಗಾಗಿ ತಿಂಗಳಾನುಗಟ್ಟಲೆ, ಕೋಟ್ಯಾಂತರ ಹಣ ಖರ್ಚು ಮಾಡಿ ಕುರ್ಚಿ ಬದಲಾಯಿಸಿಕೊಳ್ಳುವಿರಿ. ಮಾಧ್ಯಮಗಳಿಗೆ ಇದು ಹಬ್ಬ. ಸಾರ್ವಜನಿಕರಿಗೆ ಮನೋರಂಜನೆ, ನತದೃಷ್ಟರಿಗೆ ತಿಥಿ. 

ಇಷ್ಟೊಂದು ನಾಚಿಕೆಗೆಟ್ಟ - ಅನಾಗರಿಕ - ಅನಾರೋಗ್ಯಕಾರಿ - ನಪುಂಸಕ ವಾತಾವರಣದಲ್ಲಿ ಬದುಕುತ್ತಿದ್ದರೂ ಇನ್ನೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿರುವಿರಿ. ಅಯ್ಯೋ ನಿಮ್ಮ ಬಗ್ಗೆ ಮರುಕ ಉಂಟಾಗುತ್ತದೆ. ನನ್ನ ಬದುಕು ಮುಗಿದಿದೆ. ನನಗೆ ಆಗಬಹುದಾದದ್ದು ಏನೂ ಇಲ್ಲ. ಆದರೆ ಕನಿಷ್ಠ ನಿಮ್ಮ ಮಕ್ಕಳಿಗೆ ಒಳ್ಳೆಯ ಪ್ರಕೃತಿ ಸಹಜ ಸಂಪನ್ಮೂಲಗಳನ್ನು ಉಳಿಸಿಕೊಡಿ.
ಒಬ್ಬೊಬ್ಬ ಪ್ರಜೆಯೂ ಪ್ರಕೃತಿ ಉಳಿಸುವ ಸೈನಿಕರಾಗಿ. ಈ ಕಪಟ ಆಡಳಿತಗಾರರ ಮುಖವಾಡವನ್ನು ಕಳಚಿ ಹಾಕಿ. ಟೈಂಪಾಸ್ ಹೇಳಿಕೆಗಳು, ಕಾಲ ಕೊಲ್ಲುವ ಯೋಜನೆಗಳು, ದುಡ್ಡಿನ ಸಾಮ್ರಾಜ್ಯ ಕಟ್ಟಲು ಪ್ರಕೃತಿಯ ಮೇಲೆಯೇ ಅತ್ಯಾಚಾರ ಮಾಡುವ ಕಾರ್ಪೊರೇಟ್ ಕುಳಗಳು ಮುಂತಾದ ಎಲ್ಲರ ಮೇಲೂ ಯುದ್ದೋಪಾದಿಯಲ್ಲಿ ತಿರುಗಿ ಬೀಳಿ. ಸರ್ಕಾರ ಎಂಬುದು ಹಣ ದೋಚುವ ಖಜಾನೆಯಲ್ಲ. ಅದೊಂದು ನಮ್ಮನ್ನೆಲ್ಲಾ ರಕ್ಷಿಸುವ ಬೃಹತ್ ಶಕ್ತಿ. ಅದರ ಜೊತೆ ಆಟವಾಡಲು ಯಾರಿಗೂ ಬಿಡಬೇಡಿ. ಹಣಕ್ಕಾಗಿ ವಿಷ ಉಣಿಸುವ ಕಂಪನಿಗಳ ಮೇಲೆ ದಾಳಿ ಮಾಡಿ ನಾಶಪಡಿಸಿ.

ಇದು ನಿಮಗಾಗಿ, ನಿಮ್ಮ ಮಕ್ಕಳಿಗಾಗಿ " ಶವದ ಆರ್ತನಾದ ಸ್ಮಶಾನದ ಮೂಲೆ ಮೂಲೆಗೂ ಪಸರಿಸಿತು. ನೂರು ಸಾವಿರ ಲಕ್ಷಗಟ್ಟಲೆ ಶವಗಳು ಎಚ್ಚರವಾದವು. ಎಲ್ಲವೂ ಕೂಗುತ್ತಿವೆ. " ನೀವು ಶವಗಳಾಗುವ ಮುನ್ನ ಎಚ್ಚೆತ್ತುಕೊಳ್ಳಿ. ಸಾವಿಗೆ ಭಯ ಪಡಬೇಡಿ. ಜೀವಂತ ಬದುಕಿಗಿಂತ ಶವಗಳ ಸ್ಥಿತಿಯೇ ಉತ್ತಮ ಮತ್ತು ನೆಮ್ಮದಿಯಾಗಿದೆ. ಇದೇ ಮೋಕ್ಷ - ಇದೇ ಅಂತಿಮ ಸತ್ಯ, "

- 
ಬರಹ :
ವಿವೇಕಾನಂದ. ಎಚ್.ಕೆ
. 9844013068........
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror